ಇನ್ನಿಲ್ಲವಾಯಿತು ಗ್ರೀಷ್ಮನ ವಿಷಾದತೆ
ಮರೆಯಾಯಿತು ಹೇಮಂತನ ನೀರವತೆ
ಮಾರ್ದನಿಸಿದೆ ಕಾನನದ ಮೂಲೆ ಮೂಲೆ
ಯುಗಾದಿಯ ಕರೆದಿದೆ ಮಾಮರದ ಕೋಗಿಲೆ
ಋತು ವಸಂತನ ಆಗಮನದ ಕರೆಯೋಲೆ
ಇಂಚರದ ಸಿಂಚನಗೈಯುತ ಮಮತೆಯಲೆ
ಚೈತ್ರನ ಸಂಭ್ರಮದ ಸವಿ ಹಂಚುತಲೆ
ಯುಗಾದಿಯ ಕರೆದಿದೆ ಮಾಮರದ ಕೋಗಿಲೆ
ಹಳೆಯ ದುಃಖ ದುಮ್ಮಾನಗಳು ಮರೆಯಲಿ
ಹೊಸ ಭರವಸೆ ಸಂತಸಗಳು ಮೆರೆಯಲಿ
ಎಂಬ ಸದಾಶಯದ ರಾಗವ ಹಾಡುತಲಿ
ಯುಗಾದಿಯ ಕರೆದಿದೆ ಮಾಮರದ ಕೋಗಿಲೆ
ಪ್ಲವ ನಾಮ ಸಂವತ್ಸರವು ಬರುತಲಿದೆ
ಮನದ ವಿಕಾರಗಳನ್ನೆಲ್ಲ ತೊಡೆಯುತಿದೆ
ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯುತಲೆ ಯುಗಾದಿಯ ಕರೆದಿದೆ ಮಾಮರದ ಕೋಗಿಲೆ
ನವ ಪಲ್ಲವಗಳ ಮರೆಯಲಿ ಅಡಗುತಲೆ
ಮಿಡಿಕಾಯಿಯ ಒಗರನು ಸವಿಯುತಲೆ
ಮಾಧುರ್ಯದ ಸವಿ ಸಂಗೀತವ ಹಾಡುತಲೆ ಯುಗಾದಿಯ ಕರೆದಿದೆ ಮಾಮರದ ಕೋಗಿಲೆ
ಬೇವು ಬೆಲ್ಲ ಸುಖ ದುಃಖ ಜೀವನದ ತಳಿಗೆಯಲಿ
ಅವನು ಸಮನಾಗಿ ನೋಡಬೇಕು ಬಾಳಿನಲಿ
ಎಂಬ ಪಾಠ ಮನುಜರಿಗೆ ಕಲಿಸುತಲೆ
ಯುಗಾದಿಯನು ಕರೆದಿದೆ ಮಾಮರದ ಕೋಗಿಲೆ
🔆🔆🔆
✍️ಶ್ರೀಮತಿ ಸುಜಾತ ರವೀಶ್ ಮೈಸೂರ್