ದಟ್ಟವಾದ ಹಚ್ಚಹಸಿರಿನಿಂದ ಕೂಡಿದ ಒಂದು ಕಾಡು. ಆ ಕಾಡಿನ ಪಕ್ದಾಗ ಒಂದ್ ಸಣ್ಣ ಹಳ್ಳಿ ಇತ್ತು. ಆ ಹಳ್ಯಾಗ ಐವತ್ತರಿಂದ ಆರವತ್ತ ಕುಟುಂಬಗ್ಳು ವಾಸವಾಗಿದ್ವೂ. ಹಾಲು ಹೈನ ಅವರ ಪ್ರಮುಖ ಕಸ್ಬಾಗಿತ್ತು. ಜೊತೆಗ ರೈತಾಪೀನು ಮಾಡ್ತಿದ್ರು.ಮನ್ಯಾಗ ಏನಿಲ್ಲ ಅಂದ್ರು ಇಪ್ಪತ್ರಿಂದ ಮೂವತ್ತ ದನಕರುಗಳು ಇರ್ತಿದ್ವು.ಅವುಗಳಿಂದ ಕರ್ದಹಾಲ್ನ ಮಾರಾಕಂತ ಹಾಲಿನ ಕ್ಯಾನ್ ಹೊತ್ಕೊಂಡು,ನಡ್ಕೋಂಡ ದೂರದೂರ್ದ ಊರೂರಿಗ ಹೋಗಿ ಮಾರಬರ್ತ್ತಿದ್ರು.

ಹೀಗೆ ಹಾಲ್ನಮಾರಿ ಬರ್ತ್ತಿದ್ದವ್ರಲ್ಲಿ ‘ಶಿವಪ್ಪಜ್ದ’ನು ಒಬ್ಬ.ಬಡಕಲು ದೇಹದ ಶಿವಪ್ಪಜ್ಜ ‘ಕರಿಕೋಟು ಹಾಕ್ಕೊಂಡು ತಲಿ ಮ್ಯಾಲ್ ಹಾಲಿನ ಕ್ಯಾನ ಹೊತ್ಕೊಂಡ ಹೊಂಟ್ರ, ಎಲ್ರು ನಿಬ್ಬೆರಗಾಗಿ ನೋಡ್ತಾ, ” ನೋಡಾಕ ಕಡ್ಡಿ ಹಾಂಗ ಅದಾನ, ನಡ್ಯಾಕ್ ಹತ್ರ ಜಿಂಕಿ ಹಾಂಗ ಓಡ್ತಾನ,ಇನ್ನೂ ಏಟ ಶಕ್ತಿ ಇರ್ಬೇಕ ಇವ್ನ ಕಾಲಗ್” ಅಂತ ಎಲ್ರೂ ಆಡ್ಕೋಳ್ತಿದ್ರು.ಶಿವಪ್ಪಜ್ಜ ಹಾಲ್ಮಾರಾಕಂತ ಹೋಗ್ತಾ ಬರ್ತಾ ಇದ್ದ ದಾರಿ ಮ್ಯಾಗ್ ಒಂದ್’ ನೇರಳೆ’ ಮರವಿತ್ತು. ಶಿವಪಜ್ಜನ್ಗಿ ಆ ಮರವೆ ಬಸ್ ನಿಲ್ದಾಣಾಗಿ,ವಿಶ್ರಾಂತಿ ತಾಣ ಆಗಿತ್ತು .ಎಲೆ ಅಡ್ಕೆ ಹಾಕ್ಕೊಂಡು ,ಪಚಕ್ ಅಂತ ಉಗ್ದು ಮತ್ತೆ ತಲಿ ಮ್ಯಾಲ್ ಕ್ಯಾನ್ ಹೊತ್ಕೊಂಡು, ಕೈಯ್ಯಾಗ ಕೊಲ್ನ ಹಿಡ್ಕೋಂಡು ಹೊಂಟೆ ಬಿಡ್ತಿದ್ದ.

ಹೀಗೆ ಶಿವಪ್ಪಜ್ಜನ ಹಾಲಿನ ವ್ಯಾಪಾರ ಎಂಬತ್ತರ ಇಳಿ ವಯಸ್ಸಿನವರೆಗೆ ಸಾಗ್ತಾ ಇತ್ತು .ಒಂದಿನ ಶಿವಪ್ಪಜ್ಜ ಹಾಲ್ಮಾರಿ ಬರ್ತಿದ್ದಾಗ ಆಯಾಸಗೊಂಡು” ವಯಸ್ಸ ಬೇರೆ ಆತು, ದಿನಾಲು ಇಪ್ಪತ್ತು ಮೂವತ್ತು ಲೀಟರ್ ಹಾಲ್ನ ಹೊತ್ಕೊಂಡ ಹೋಗಿ ಮಾರಿ ಬರ್ಬೇಕಾದ್ರ ಜೀವ ಸಾಕಾಗ್ಬಿಡ್ತದ ,ಕಾಲಾಗ ಮೊದ್ಲಂಗೆ ಶಕ್ತಿ ಬ್ಯಾರೆ ಇಲ್ಲ, ನೆತ್ತಿಮ್ಯಾಲ ಸುಡೊಬಿಸ್ಲಬ್ಯಾರೆ ,ಜೀವ ಸುಸ್ತಾಗಿ ಬಿಡ್ತದ. ಮನೆ ತುಂಬಾ ಮಕ್ಳು ಮೊಮ್ಮಕ್ಳಿದ್ರು ಉಪಯೊಗಿಲ್ಲ,ಬರೀ ಹಾಳಾದ ಮೊಬೈಲ್ ಹಿಂದ್ ಬಿದ್ದಿರ್ತಾರ ಏನ್ ಮಾಡೋದು? ಯಾರಿಗ ಹೇಳೋದು? ಕಾಲ ಕೆಟ್ಟು ಹೋಗ್ಯಾತಿ,ಎಂಥಾ ಕಾಲ್ಬಂತು ಅಂತೀನಿ. ಇರ್ಲಿ ಈ ಮರದ ಕೆಳಗ ಸ್ವಲ್ಪೊತ್ತ ಕುಂತು, ಬಿಸ್ಲ ಕಳ್ದ ಹೋದ್ರಾತು,ಅಂತ ಶಿವಪಜ್ಜ ತನ್ನ ಪಾಡಿಗ ತಾನ್ ಹೇಳ್ಕೋಂತ್ಬಂದು ತಲಿಮ್ಯಾಲಿನ ಕ್ಯಾನು,ರುಮಾಲು, ಕೋಲು ಉಷ್ ಪ್ಪ! ಅಂತ ಕೇಳ್ಗಿಟ್ಟು ಸ್ವಲ್ಪೋತ್ತು ಅಡ್ಬಿದ್ದ. ಕಣ್ಮುಚ್ತಿದ್ದಂಗ.”ಏನಯ್ಯಾ? ಮನುಷ್ಯ, ಬಾಳ ಸುಸ್ತಾದಂಗ ಕಾಣ್ತಿಲ್ಲ, ಬಾ ಮಲ್ಗು..ಮಲ್ಗು..ಚೆನ್ನಾಗಿ ಗಾಳಿ ಬೀಸ್ತಿನಿ, ಎದ್ಮೇಲೆ ತಿನ್ನಾಕ್ಕ ನಿನ್ಗ ಹಣ್ಣೂ ಕೊಡ್ತೀನಿ ಅಂತ ನೇರಳೆ ಮರ ವ್ಯಂಗ್ಯವಾಗಿ ಹೇಳ್ತು”. ಥಟ್ಟಂತ ಗಾಬರಿಯಿಂದ ಎದ್ದು ಶಿವಪ್ಪಜ್ದ ಸುತ್ಲೂ ನೋಡ್ದ ,ಯಾರೂ ಕಾಣ್ಲೇ ಇಲ್ಲ. ಯಾರೋ ಮಾತಾಡ್ದಾಂಗಿತ್ತಲ್,ಅಂತ ಅತ್ತಿತ್ತ ನೋಡ್ದ. ಯಾರೂ ಕಾಣ್ಸದಿದ್ದಾಗ ಕನ್ಸಿರಬೇಕೆಂದು ಮತ್ತೆ ಅಡ್ಬಿದ್ದ. ಮತ್ತೆ ಕಣ್ಮಚ್ತಿದ್ದಂಗ “ಏನಯ್ಯಾ? ಕನ್ಸೆಂದು ತಿಳ್ಕೊಂಡೆಯಾ ?ಏನ್ ನಿನ್ ಹೆಸರು? ಎನ್ನುವ ಧ್ವನಿ ಮತ್ತೆ ಶಿವಪ್ಪಜ್ಜನ ಕಿವಿಮ್ಯಾಲ್ಬಿತ್ತು.ಗಾಬರಿಯಿಂದ ಎದ್ದ ಶಿವಪ್ಪಜ್ಜಾ ಮರದ ಸುತ್ಲೂ ನೋಡ್ತಾ “ಯಾರದು? ಯಾರದು?ಮಾತಾಡ್ತಿರೋದು. ಧೈರ್ಯವಿದ್ರೇ ಮುಂದೆ ಬನ್ನಿ, ನಾನು ಯಾರೆಂದು ತಿಳ್ದಿರುವೆ ? ನಾನು ಶಿವಪ್ಪ ಅಂದ್ರೆ “ಶಿವಾ”ಇದ್ದಂಗ ನಾ ನಿನಗೇನು ಹೆದ್ರೋ ಮನುಷ್ಯ ಅಲ್ಲ ಹಾ..ತಿಳ್ಕೋ? ಎಂದು ಶಿವಪ್ಪಜ್ಜ ಸುತ್ಲೂ ನೋಡ್ತಾ ಜಂಬದಿಂದ ಹೇಳ್ದ. “ಶಿವಾ… ಹ..ಹ..ಶಿವಾ… ಹ..ಹ.. ನಿಮ್ಮ ಹೆಸರು ಮಾತ್ರ ಭಗವಂತನ್ದು,ಆದ್ರ ಮನ್ಸು ಮಾತ್ರ ಕಲ್ನಂತದ್ದು ,ಮನಸ್ಸೇ ಇಲ್ಲದ ಮನುಷ್ಯರು ನೀವು, ಏನೂ ತಪ್ಪೇ ಮಾಡ್ದನಮ್ಗೆ, ನಿಸ್ವಾರ್ಥಿಗಳಾಗಿ ಸೇವೆ ಮಾಡೊ ನಮ್ಗೆ ನಿಮ್ಮ ಸ್ವಾರ್ಥಕ್ಕಾಗಿ,ದಯೆ ಇಲ್ಲ್ದೆ ,ಕರುಣೆ ಇಲ್ಲ್ದೆ, ಕೊಲ್ಲೊಕಟುಕ್ರು ನೀವು ಎಂದು ವ್ಯಂಗ್ಯವಾಗಿ ಸಿಟ್ನಿಂದ ಮನ್ಸ್ಸಿಗ ಚುಚ್ಚುವ ಧ್ವನಿಯಿಂದ ಮತ್ತಷ್ಟು ಗಾಬರಿಯಾದ. ಗಾಬರಿಯಿಂದ ತಲೆ ಹಿಡ್ಕೋಂಡ ಶಿವಪ್ಪಜ್ಜ “ಯಾರು ?ಯಾರದು ?ಯಾಕೆ ಇಷ್ಟೊಂದು ಮನಸ್ಸಿಗೆ ಚುಚ್ಚುವಂತೆಮಾತಾಡ್ತೀರೊದು?” ಎಂದು ಶಿವಪ್ಪಜ್ಜ ಮತ್ತೆ ಕೇಳ್ದ.ನಾನು ಯಾರೆಂದು ಗೊತ್ತಾದ್ರೆ ಏನ್ಮಾಡುವೆ? ಎಂದು ಮರ ಮತ್ತೆ ತನ್ನ ಗುಟ್ಟನ್ನು ಬಿಚ್ಚದೆ ಶಿವಪ್ಪಜ್ಜನ್ಗಿ ಪ್ರಶ್ನೆ ಹಾಕ್ತು.

“ನಮ್ಮ ಮನುಕುಲ್ಕ್, ಈ ಜೀವಸಂಕುಲ್ಕೇನಾದ್ರು ನೀ ಶತ್ರುವಾಗಿದ್ರ,ನಿಂಜೊತೆ ಹೋರಾಡಿ ಇವುಗಳ್ನ ಉಳ್ಸತ್ತಿನಿ, ಒಂದ್ ವ್ಯಾಳೆ, ಇವುಗಳ್ಗೇನಾರ ನೀ ಉಪಕಾರಿ ಆಗಿದ್ರ ನೀ ಹೇಳ್ದಂಗ ಕೇಳಿ ನಿನ್ನ ಕುಲದ ಸೇವಾ ಮಡ್ತೀನಿ” ,ಈಗಲಾರ ಹೇಳು? ನೀ ಯಾರಂತ? ಎಂದು ಶಿವಪ್ಪಜ್ಜ ಮತ್ತೆ ಕೇಳ್ದ. ” ನೀ ಈಗ ಯಾರ ನೆರಳಾಗ ಕುಂತಿಯಲ್ಲಿ, ಆ ನೆರ್ಳು ಕೊಡ್ತಾ ಇರೋ ಮರ ನಾನು” ಎಂದು ಮರ ತನ್ನ ಗುಟ್ಟನ್ನು ಹೇಳ್ತು. “ಮರ..ಹ…. ಓ! ಮರವೇ ?ನೀನು ಮಾತ್ನಾಡ್ತಿಯಾ? ನಿನ್ಗೆ ಜೀವವಿದೆಯಾ? ನಿನ್ನಿಂದ ನಮ್ಗೇನಾರು ಲಾಭವಿದೆಯಾ? “ಎಂದು ಶಿವಪ್ಪಜ್ಜ ಕೇಳ್ದ.. ಆಗ “ನಿನ್ಗ ಉಸಿರಾಡೋಕೆ ಶುದ್ಧ ಗಾಳಿ ,ನಿನ್ನ ಮನಿಒಳ್ಗ ನಡಿಯೋ ಎಲ್ಲಾ ಶುಭ ಕಾರ್ಯಗಳಿಗೂ,ನೀನ ಪೂಜೆ ಮಾಡೊ ದೇವ್ರಿಗೂ ಬೇಕಾದ ಹೂವು ಹಣ್ಣುಗಳ್ನ, ನಿನ್ನ ಹೊಲ್ದಲ್ಲಿರೊ ಬೆಳೆಗಳಿಗೂ, ನೀನ್ ಸಾಕ್ತಿರೊ ಪ್ರಾಣಿ ಪಕ್ಷಿಗಳಿಗೂ, ನೀರು ನೆರಳು ಕೊಡ್ತಿರೋದು ಯಾರು? ಪ್ರವಾಹದಿಂದ ನಿನ್ನ ಭೂಮಿ ಸವಕಳಿ ಯಾಗೋದನ್ನ ತಡಿತಿರೋರು ಯಾರು?ಅಷ್ಟ ಯಾಕ ನಿಮ್ ವಾಹನಗಳು, ಕಾರ್ಖಾನೆಗಳು ಬಿಡ್ತೀರೊ ಕಾರ್ಬನ್ ಡೈಯಾಕ್ಸೈಡ್, ಚಂಡಮರುತವನ್ನು, ತಡಿತಿರೋದು ಯಾರು? ನಾವಾ?ನೀವಾ?ನಮ್ಮಲ್ಲಿಯೂ ಸಾವಿರಾರು ಜಾತಿ ಉಪಜಾತಿಗಳಿವೆ, ನಿಮ್ಮ ಹಾಗೆ ನಮ್ಮಲ್ಲಿ ಕೆಲವರು ಬಲಿಷ್ಠರಿದ್ದಾರೆ, ಕೆಲವರು ದುರ್ಬಲರಿದ್ದಾರೆ ಆದ್ರೂ ನಾವೆಲ್ರೂ ಪರಸ್ಪರ ಪ್ರೀತಿಯಿಂದ ಕೂಡಿ ಬಾಳ್ತಿವಿ, ಒಬ್ರಿಗೊಬ್ರು ಹೆಗಲ್ಗೆ ಹೆಗಲು ಕೊಟ್ಟು ಬೆಳಿತೀವಿ, ಬೆಳ್ಸತ್ತೀವಿ,ಇದೆಲ್ಲಾ ನಿಮ್ಮಿಂದ ಸಾಧ್ಯನಾ? ಎಂದು ಮರ ವೇದನೆಯಿಂದ ಶಿವಪ್ಪಜ್ಜನ್ಗಿ ಪ್ರಶ್ನೆ ಮೇಲೆ ಪ್ರಶ್ನೆ ಹಾಕ್ತು . ಮರದ ವೇದನೆಯನ್ನು ಕೇಳಿ ಏನು ಉತ್ತರಿಸಲಾಗದ ಶಿವಪ್ಪಜ್ಜ ತಬ್ಬಿಬ್ಬಾಗಿ ನಿಂತ.

ಸ್ವಲ್ಪೋತ್ತಿನ ಮ್ಯಾಕ್” ಓ..ಮರವೇ, ನೀನು ಮನುಕುಲಕ್ಕಷ್ಟೆಅಲ್ಲ ,ಇಡಿ ಜೀವಸಂಕಲಕ್ಕ ಏಟ್ ಉಪಕಾರಿ ಅಂತ ತಿಳಿತು.ನಿನ್ಗಾಗಿ ನಾ ಏನ್ಮಾಡ್ಲಿ ಹೇಳು? ಅಂದಾಗ “ನೀ ನನ್ಗ ಪ್ರೀತಿ ಮಾಡ್ಬೇಕು” ಅಂತು ಮರ. “ಏನು? ನಾನು ನಿನ್ಗ ಪ್ರೀತಿ ಮಾಡ್ಬೇಕಾ? ಅದು ಹೇಗಸಾಧ್ಯ? ನೀನು ಮರ,ನಾನು ಮನುಷ್ಯ ನಾವಿಬ್ರೂ ಕೂಡಿ ಇರಾಕ ಸಾಧ್ಯನಾ?”ಎಂದು ಶಿವಪ್ಪಜ್ಜ ಕೇಳ್ತಿದ್ದಂಗ ತಡಾಕ್ ಇಲ್ದನೆ “ಯಾಕೆ? ನಾನು ಮರ ಆದ್ರ ಏನಾಯ್ತು ನಮ್ಗೂ ನಿಮ್ಮಂಗ ಜೀವ ಐತಿ, ನಿಮ್ಮಂಗ ಬದ್ಕೋ ಆಸೆ ಐತಿ, ನಮ್ಗು ಮಕ್ಳು ಮೊಮ್ಮಕ್ಳೊಂದಿಗ ಇರ್ಬೇಕಂತ ಕನ್ಸೈತಿ , ಯಾರ ತಂಟೆಗೂ ಹೋಗ್ದೆ ಅವಿಭಕ್ತ ಕುಟುಂಬದಲ್ಲಿ ಕೂಡಿ ಬಾಳ್ತಾ, ನಿಸ್ವಾರ್ಥ ಸೇವೆ ಮಾಡ್ತಾ,ನಗನಗ್ತಾ ಇರ್ತೀವಿ ,ನೀವೂ ನಮ್ಮನ್ ನೋಡಿ ಒಟ್ಟಾಗಿ ಬಾಳೋದನ್ ಕಲಿರಿ, ಕೂಡಿಬಾಳಿದ್ರ ಏಟ ಸುಖ ಸಿಗ್ತೈತಂತ ತಿಳಿತೈತಿ” ಅಂತ ಮರ ಶಿವಪ್ಪಜ್ಜನ್ಗಿ ಬುದ್ಧಿವಾದ ಹೇಳ್ತು. ಆಗ “ಓ..ಮರವೇ !ಇವತ್ತ ನಾ ನಿನ್ನಿಂದ ಬಾಳ ಪಾಠಾ ಕಲ್ತೆ,ನೀ ನನ್ ಕಣ್ ತೆರ್ಸ ಕೊಟ್ಟೆ, ಮಾತಿಗ ತಪ್ಪೋ ಮನುಷ್ಯ ನಾನಲ್ಲ, ನೀ ಹೇಳ್ದಂಗ, ನಿನ್ನ ಪ್ರೀತಿನೂ ಮಾಡ್ತೀನಿ ,ನಿನ್ನ ಕುಲದ ಸೇವಕನೂ, ರಕ್ಷಕನೂ ಆಗ್ತೀನಿ. ಹೇಳು ನನ್ನಿಂದೇನಾಗ್ಬೇಕು? ಅಂತ ಶಿವಪ್ಪಜ್ಜ ಹೇಳ್ದ”. ಹಾಂ ಹೇಳ್ತೀನಿ ಕೇಳು.”ನಿಮ್ಮ ಮನುಕುಲ್ದಿಂದ ನಮ್ಮ ವನ ಕುಲ್ದ ಮೇಲೆ ಆಗ್ತೀರೊ ಅತ್ಯಾಚಾರ, ಕೊಲೆ, ಸುಲಿಗೆ, ದಬ್ಬಾಳಿಕೆಗಳು ನಿಲ್ಬೇಕು.” ಮನೆಗೊಂದು ಮರ ಊರಿಗೊಂದು ವನ” ಅನ್ನೋ ಕಾಯ್ದೆ ತರ್ಬೇಕು,ನಮ್ನ ನೀವೂ ಪ್ರೀತಿಸ್ಬೇಕು, ನಾವೆಲ್ರೂ ಪರಸ್ಪರ ಕೂಡಿರ್ಬೇಕು, ನಮ್ನ ಉಳ್ಸಿದ್ರ ನೀವೂ ಉಳಿತಿರಿ,ನಮ್ನ ಸಾಯ್ಸಿದ್ರ ನೀವು ಸಾಯ್ತಿರಿ .ಅಂತ ಮರ ಶಿವಪ್ಪಜ್ಜನಿಗೆ ಹೇಳ್ತು. ಇದ್ನೇಲ್ಲ ಕೇಳ್ತಿದ್ದ ಮರದ ಮೇಲಿದ್ದ ಪಕ್ಷಿಗಳೆಲ್ಲವೂ “ಹೌದು..ಹೌದು..ನಾವೆಲ್ಲ ಪಕ್ಷಿಗಳು ಖುಷಿಯಿಂದ, ಸಂತೋಷದಿಂದ, ಬಾಳ್ಬೇಕಂದ್ರ ನೀವು ಹಾಗ ಮಾಡ್ಲೇಬೇಕು. ಇಲ್ಲಾಂದ್ರ ನಿಮ್ಮ ಮನುಕುಲಕ್ಕ ನಮ್ಮ ಧಿಕ್ಕಾರೈತಿ.ಅಂತ ಕೂಗ್ತೀದ್ದ ಪಕ್ಷಿಗಳ ಧ್ವನಿ ಕೇಳಿಸ್ಕೋಂಡು ದೂರ್ದಲ್ಲಿದ್ದ ಕಾಡಿನ ಪ್ರಾಣಿಗಳಾದ ಆನೆ, ಹುಲಿ, ಸಿಂಹ, ಕರಡಿ, ಚಿರತೆ,ಜಿಂಕೆ,ಮೊಲಗಳೆಲ್ಲವು ನೀವು ಹೀಗೆ ಕಾಡನ್ನು ನಾಶ ಮಾಡ್ತಾ ಹೋದ್ರೆ ನಮ್ಗೆ ಅನ್ನ,ಆಹಾರ ಸಿಗೋದಾದ್ರೂ ಹೇಗೆ ಎಂದು ಜಿಂಕೆ ಮೊಲ ನವಿಲ್ಗಳ ಗುಂಪು ಕೂಗಿದ್ರ, ನೀವು ಹಂಗೆ ಕಾಡ್ನ ಕಡ್ಕೋಂಡೋಗಿ ನಾಶ ಮಾಡ್ತಾಹೋದ್ರೆ ನಾವುಬದ್ಕೋದಹ್ಯಾಂಗ್? ನೀವು ಹಂಗ ಮಾಡ್ತಾ ಇದ್ರ ನಾವುಕಾಡ್ಬಿಟ್ಟು ನಾಡಿಗ ನುಗ್ತಿವಿ,ನಿಮ್ಮ ದನಕರ್ಗಳನ್ನ, ಹೊಲ್ಗದ್ದೆಗಳನ್ನ,ನಿಮ್ಮನ್ನೂ ನಾಶಮಾಡ್ತೀವಿ ಅಂತ ಎಲ್ಲಾ ಕಾಡು ಪ್ರಾಣಿಗಳು ಆಕ್ರೋಶ ವ್ಯಕ್ತಪಡಿಸಿ,ಎಚ್ಚರ್ಕೆ ಕೊಟ್ಟು.

ಮರದ ಮನಕಲ್ಕುವ ಮಾತು, ಪ್ರಾಣಿ ಪಕ್ಷಿಗಳು ಕೊಟ್ಟ ಎಚ್ಚರ್ಕೆ ಸಂದೇಶಗಳಿಂದ ಎಚ್ಚೆತ್ತ್ಕೊಂಡ ಶಿವಪ್ಪಜ್ಜ ಮತ್ತೆ ಎಲೆ ಅಡ್ಕೆ ಹಾಕ್ಕೊಂಡು, ಪಚಕ್ ಅಂತ ಉಗ್ದು “ಪ್ರಾಣಿ ಪಕ್ಷಿ ಗಿಡಮರಗಳ್ನ,ಕಾಡುಗಳನ್ನ ಉಳಸ್ತೀನಿ, ಬೆಳಸ್ತೀನಿ. ಮನಿಗೊಂದ ಮರ, ಊರಿಗೊಂದು ವನ ಮಾಡ್ತೇನಿ” ಅಂತ ಅವುಗಳಿ ಮಾತ ಕೊಟ್ಟು ಶಿವಪ್ಪಜ್ಜ ಊರಿಗ್ಬಂದ. ಊರಾಗೊಂದು ದೊಡ್ಡ ಸಭೆ ಮಾಡ್ದ, ಸಭೆ ಮಾಡಿ ಎಲ್ರಿಗೂ, ಗಿಡ- ಮರ ಕಾಡುಗಳಿಂದಾಗುವ ಉಪಯೋಗ ತಿಳ್ಸಿ ಅವುಗಳ ಮಹತ್ವ ಸಾರಿದ.ಕಾಡಿನ ಪ್ರಾಣಿ ಪಕ್ಷಿಗಳು ಕೊಟ್ಟ ಎಚ್ಚರ್ಕೆಯ ಸಂದೇಶವನ್ನು ಸಭೆಯಲ್ಲಿ ತಿಳ್ಸಿದ, ಜನರಲ್ಲಿ ಇವುಗಳ ಮಹತ್ವದ ಕುರಿತು ಜಾಗೃತಿ ಮೂಡ್ಸಿದ, ನಾವೆಲ್ಲ್ರು ಗಿಡ-ಮರಗಳನ್ನು, ಕಾಡನ್ನು ಕಡಿಯೋದು ನಿಲ್ಸೋಣ, ಅವುಗಳ್ನು ನಮ್ಮಂತೆಯೇಪ್ರೀತ್ಸೋಣ ,ಪ್ರಾಣಿ-ಪಕ್ಷಿ ಗಳನ್ನು ಉಳ್ಸೋಣ ಅಂತ ಜನ್ರಲ್ಲಿ ಜಾಗೃತಿ ಮೂಡ್ಸಾಕತ್ತಿದ್ದ. ಜನ್ರ ಮದ್ಯ ಕುಂತಿದ್ದ ಪುಟ್ಟ ಶಾಲಾ ಬಾಲಕಿ ‘ತನುಶ್ರೀ’ “ಅಜ್ಜ ಗಿಡ-ಮರಗಳಿಂದ,ಪ್ರಾಣಿ-ಪಕ್ಷಿಗಳಿಂದ , ಕಾಡಿನಿಂದ ಇಷ್ಟೊಂದು ಉಪಯೋಗ ಐತಿ ಅಂದ್ರ ,ನಾಳೇನ ನಮ್ಮ ಸಾಲಿ ಒಳ್ಗ ಒಂದ್ ದೊಡ್ಡವನ ಮಾಡೋಣ ನೋಡ್ರಿಅಂದ್ಬಿಟ್ಲು. ಪಕ್ಕಕ್ಕಿದ್ದ ಮತ್ತೊಬ್ಬ ಸಾಲಿ ಹುಡ್ಗ “ಶಶಿಧರ್ ಮತ್ತ ಅವ್ನ ಗೆಳೆಯರು” ಅಜ್ಜ ನಾಳಿಗ ನಮ್ಮ ಸರ್ಗಹೇಳಿ, ಫಾರೆಸ್ಟ್ ಸಾಹೇಬ್ರಿಂದ್ 101 ಸಸಿ ತರ್ಸೋಣ, ನೀವು ಹೇಳ್ದಂಗ್ ‘ಮನೆಗೊಂದ ಮರ’ ‘ಊರ್ಗೋಂದ ವನ’ ಮಾಡೋಣ” ಏನಂತಿ ಅಜ ?ಅಂದ. ” ಇದ್ಕೇಲ್ಲಾ ನೀವೇನಂತೀರಿ”?ಎಂದು ಸಭೆ ಒಳ್ಗಿದ್ದ ಹಿರಿಯರ್ನ್ನ ,ಯುವಕರ್ನ ಶಿವಪ್ಪಜ್ಜ ಕೇಳ್ದ.ಆಗ ಎಲ್ರೂ ” ತಡ ಮಾಡೋದ್ ಬ್ಯಾಡ್ರಿ ನಾಳಿನ ಸಾಲಿ ಮಾಸ್ತರ್ನ ಹೇಳಿ, ಗಿಡಗಳ್ನ ತರ್ಸಿ ಹಚ್ಬೀಡೋಣ ಅಂತ ಎಲ್ರೂ ಒಮ್ಮತದಿಂದ ಅಂದ್ರು”. ಮಾರನೇದಿನ ಗಿಡಗಳು ಬಂದ್ಬಿಟ್ಟ್ವು, ಎಲ್ರ ಮನಿಗೊಂದೊಂದ ಮರ ಕೊಟ್ಟು ಅವುಗಳ್ನ ಹಚ್ಚಿಸಲಾಯ್ತು. ಸಾಲಿ ಮಾಸ್ತರ ಮನಿಮುಂದ ಹಚ್ಚಿದ ಗಿಡಳ್ಗೆಲ್ಲಾ, ಅವ್ರ-ಅವ್ರ ಮನ್ಯಾಗೀರೊ ಸಣ್ಣ-ಸಣ್ಣ ಮಕ್ಳ ಹೆಸರ ಇಟ್ರು .”ಇನ್ಮೇಲಿಂದ ನೀವ್ಯಾರು ಗಿಡಗಳ್ನ ಕಡಿಯೋದಿಲ್ಲ ಅಂತ ಭಾಷೆ ಕೊಡ್ರಿ “ಅಂತ್ಹೇಳಿ ಎಲ್ಲ್ರ ಕಡೆಯಿಂದ ಭಾಷೆ ತಗೊಂಡ್ರು.ಆಮ್ಯಾಕ ಎಲ್ರೂ ಅವ್ರ-ಅವ್ರ ಮನೆಯಿಂದ ಸಲ್ಕಿ ,ಗುದ್ಲಿ , ಹಾರೆ, ಪಿಕಾಸೆ ತಗೊಂಡ್ಬಂದು ಸಾಲಿಒಳ್ಗ ಊರಿನ ದೊಡ್ಡ ವನ ನಿರ್ಮಾಣ ಮಾಡಿದ್ರು. ಎಲ್ರಸೇರಿ ಊರಿನ ವನ ಮಾಡೋದ ನೋಡಿದ ಶಿವಪ್ಪಜ್ದ “ಇವತ್ತ ನನ್ಗಂತೂ ಬಾಳ ಸಂತೋಷ ಆತು,ನೀವೆಲ್ರು ನನ್ನ ಮಾತ ಒಪ್ಪಿ ,ನನ್ನ ಆಸೆ ಈಡೇರ್ಸಿದ್ರಿ ನಿಮ್ಮೆಲ್ರ ಪ್ರೀತಿ ಸಹಕಾರದಿಂದ ನಮ್ಮೂರಾಗೋಂದ್ ದೊಡ್ಡವನಾ ಆತು, ನಾ ಕೊಟ್ಟ ಮಾತು, ಕಂಡ ಕನ್ಸು ನನ್ಸಾತು.. ಇನ್ನಮ್ಯಾಲಿಂದ ನಾವ್ಯಾರೂ ಗಿಡ-ಮರಗಳ್ನ ಕುಡಿಯೋದು, ನಾಶಮಾಡೋದು ಬ್ಯಾಡ. ನಿಮ್ಗೆಲ್ಲ ದೇವ್ರುಒಳ್ಳೆದ್ಮಾಡ್ಲಿ.ಹೇ..ರಾಮಣ್ಣ ಅಂದ್ಹಾಂಗ ಈ ವನ್ಕೊಂದ್ ಹೆಸರಿಟ್ಟ್ರ ಚೆನ್ನಾಗಿರ್ತಿತ್ತ ಅಲ್ವಾ ?ಎನಂತಿಡುವಾ? ಅಂತ ಶಿವಪ್ಪಜ್ಜ ಕೇಳ್ತಿದ್ದಂಗ್ನ , “ಹೇ …ಅದ್ಕೇನಂತೆ ಈ ವನ ಕ್ಕ ಇವತ್ತ್ನಿಂದ “ಶಿವಪ್ಪಜ್ಜನ ವನ” ಅಂತ ಹೆಸರಿಟ್ಟ್ರಾತು. ಇದ್ಕ ನಿವೇನಂತಿರ್ರಪ ?ಭಿಮ್ಮಣ್ಣ ಅಂತ ರಾಮಣ್ಣ ಎಲ್ರನ್ನಕೇಳ್ದ. ಆಗ ಎಲ್ಲ್ರೂ ‘ಹೌದು..ಹೌದು..ಇವತ್ನಿನಿಂದ ಈ ವನ “ಶಿವಪ್ಪಜ್ಜನ ವನ” ಎಂದೇ ಪ್ರಸಿದ್ಧಿ ಯಾಗಲಿ ಎಂದು ಹಾರೈಸಿದ್ರು. ಇವತ್ತ್ನಿಂದ ‘ನಾವೆಲ್ಲಾ ಕಾಡನ್ನು ಉಳ್ಸಿ-ಬೆಳ್ಸೋಣ , ಪ್ರಾಣಿ-ಪಕ್ಷಿಗಳನ್ನು ಉಳ್ಸೋಣ’, ಎಂದು ಎಲ್ರೂ ಪ್ರಮಾಣ ಮಾಡಿದ್ರು .ಸಾಲಿ ಮಾಸ್ತರ ಪ್ರಮಾಣ ವಚನ ಹೇಳ್ಕೊಟ್ಟ್ರು. ಆಮ್ಯಾಕ ಎಲ್ರೂ ಸಾಲಿಒಳ್ಗ ಮಾಡಿದ ಅವಲಕ್ಕಿ, ಮಂಡಕ್ಕಿಚೋಡಾತಿಂದು, ಚಹಾ ಕುಡ್ದು, ಎಲ್ರೂಖುಷಿಯಿಂದ ಶಿವಪ್ಪಜ್ಜನ ವನದ ಬಗ್ಗೆ ಮಾತಾಡ್ತಾ ಅವರವರ ಮನೆಗ ಹೋದ್ರು .ಇದ್ನೇಲ್ಲಾ ನೋಡ್ತಿದ್ದ ಪ್ರಾಣಿ ಪಕ್ಷಿಗಳು ಸಂತೋಷದಲ್ಲಿ ಕುಣಿದ್ವು, ಗಿಡಮರಗಳೆಲ್ಲವು ಸಂತೋಷ ಗೊಂಡು ತಂಪಾದ ಗಾಳಿ ಬೀಸ್ತಾ, ಹೂ ಹಣ್ಣಿನಿಂದ ಸಿಂಗಾರ ಮಾಡ್ಕೋಂಡು ಹಾಡ ಹೇಳ್ಕೋಂತಾ ತಮ್ಮತಮ್ಮ ಪಾಡಿಗ ನಿತ್ಯದ ಕೆಲ್ಸಾಮಾಡ್ತಾ ,ನಮ್ಗೇಲ್ಲ ನೀತಿ ಪಾಠ ಹೆಳ್ತಾ, ಮೌನವಾಗಿ ಮುಗುಳ್ನಗ್ತ ನಿಂತ್ವು

         🔆🔆🔆

ಗಂಗಾಧರ ಎಸ್ ಎಲ್ ಶಿಕ್ಷಕರು ಕಿರವತ್ತಿ ಯಲ್ಲಾಪುರ. ಶಿರಸಿ ಶೈಕ್ಷಣಿಕ ಜಿಲ್ಲೆ ಮೊಬೈಲ್ ನಂ:9902893532

.