ಲಕ್ಷ್ಮಿ ಎನ್ನುವ ಶಿಕ್ಷಕರೊಬ್ಬರು ಒಬ್ಬಂಟಿ ಯಾಗಿರುತ್ತಿದ್ದರು. ಆಗಾಗ ಬೇಸರವಾದಾಗ ಮಾತ್ರ ಅಕ್ಕ ಪಕ್ಕದ ಮನೆಯವರೊಂದಿಗೆ ಹರಟುತ್ತಿದ್ದರು. ಒಂದು ದಿನ ಮಾತ್ರ ಇದ್ದಕ್ಕಿದ್ದಂತೆ ಗಾಬರಿಯಾಗಿ ಮನೆಗೆ ಬಂದರು. ತುಂಬಾ ಆಯಾಸಗೊಂಡ ಅವರು ತುಂಬಾ ಬೆವತು ಕಣ್ಣೀರಿಡುತ್ತಿ ದ್ದರು. ಅಕ್ಕಪಕ್ಕದ ಮಂದಿಯೆಲ್ಲಾ ಕೇಳಿದರೂ ಅವರು ಕಾರಣ ಹೇಳಲು ತಯಾರಿಲ್ಲ. ಅದು ಅವರ ಮರ್ಯಾದೆಯ ಪ್ರಶ್ನೆ ಅವರ ಹಿಂದೆ ಯಾವನೋ ಕಾಮ ಪಿಶಾಚಿ ರಸ್ತೆಗುಂಟ ಹಿಂಬಾಲಿಸುತ್ತಾ ಬಂದಿದ್ದಾನೆ. ವಿಷಯ ಹೇಗೆ ತಾನೆ ಬಹಿರಂಗ ಪಡಿಸಲು ಸಾದ್ಯ. ಹೇಳಲಾಗದೆ ಕಣ್ಣೀರಿಟ್ಟಿದ್ದಾರೆ. “ನನಗೆ ಗೊತ್ತಿಲ್ಲ ಗೊತ್ತಿಲ್ಲ ಅಸಾಹಕತೆಯನ್ನು ಹೇಳಲಾಗದ ಸ್ಥಿತಿ ಅವರದು. ಲಕ್ಷ್ಮಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿದ್ದರು. ಆಸೆ ತೀರುವವರೆಗೆ ಇವಳೊಂದಿಗೆ ಇದ್ದ ಗಂಡ. ಕೆಲವೇ ದಿನ ಗಳಲ್ಲಿ ತಾನು ಮೊದಲು ಪ್ರೀತಿಸಿದವ ಳೊಂದಿಗೆ ಹೊರಟು ಹೋಗಿದ್ದಾನೆ. ಅತ್ತೆ ಮಾವ ಕೂಡ ಇವಳನ್ನೇ ದೂರಿದ್ದಾರೆ. ‘ಅವನು ಬೇರೆ ಜಾತಿಯವಳ ಬೆನ್ನು ಹತ್ತಿದ್ದ. ನೀನು ಮದುವೆಯಾಗಿ ಹದ್ದುಬಸ್ತಿನಲ್ಲಿ ಇಟ್ಟುಕೋತಿಯ ಅಂದ್ರೆ ಹಿಂಗ ಮಾಡಿ ಕುಂತಿಯಲ್ಲ ನೋಡು. ಮತ್ತ ಅವ ಆಕಿ ಸೆರಗ ಹಿಡದು ಹೋದ ಈಗ ನಿನ್ನ ಇಟ್ಟು ಕೊಂಡು ನಾವೇನು ಮಾಡುವುದು ಎಂದು ಅವಳ ಮನಸ್ಸಿಗೆ ನೋವಾಗುವ ರೀತಿ ಮಾತನಾಡಿದ್ದಾರೆ. ವಿಧಿ ಇಲ್ಲದೆ ಅವಳು ತಾಯಿ ಮನೆಗೆ ಬರುವ ವೇಳೆಗೆ ಕೈಲಿ ಒಂದು ಪುಟ್ಟ ಮಗು. ಹಾದಿಯಲ್ಲಿ ಬರುವಾಗ ಅವಳು ಮುಟ್ಟಾಗಿದ್ದಾಳೆ. ಮುಟ್ಟಿನಲ್ಲಿ ತೋಯ್ಧ ಸೀರೆ ಕೈಲಿ ಎದೆ ಹಾಲು ಕುಡಿಯುವ ಪುಟ್ಟ ಗಂಡು ಮಗು ಹಸಿವಿನಿಂದ ಚೀರುತ್ತಿತ್ತು. ತವರು ತಲುಪಲು ಬಸ್ ಚೇಂಜ್ ಮಾಡಬೇಕು. ಟಿಕೆಟ್ಗೂ ಹಣವಿಲ್ಲ ಕಂಡಕ್ಟರ್ ಪರಿಸ್ಥಿತಿ ತಿಳಿದು ಸುಮ್ಮಾನಾಗಿದ್ದಾನೆ. ಬಸ್ಸಿನಿಂದ ಇಳಿದು ಪುಟ್ಟ ಮಗುವನ್ನೆತ್ತಿಕೊಂಡ ಲಕ್ಷ್ಮಿ ಹತ್ತಿರದ ಗುಡಿಸಲೊಂದರಲ್ಲಿ ಸಾಹಯಕ್ಕೆ ಅಂಗಲಾಚಿದ್ದಾಳೆ. ಹೌದು ಅನಕ್ಷರಸ್ಥರಲ್ಲಿ, ಬಡವರಲ್ಲಿ, ಗುಡಿಸಲಿನಲ್ಲಿ ಮಾನವೀಯತೆ ಹೆಚ್ಚಾಗಿಯೆ ಇದೆ. ಗುಡಿಸಿಲಿನಲ್ಲಿನ ಮಹಿಳೆ ಲಕ್ಷ್ಮಿಯ ನೆರವಿಗೆ ನಿಂತಿದ್ದಾಳೆ. ಮಗುವಿಗೆ ಹಾಲು ಕುಡಿಸಲು ಒಳ ಕರೆದಿದ್ದಾಳೆ. ಹಾಲು ಕುಡಿದು ಮಗು ಮಲಗಿದಾಗ ಲಕ್ಷ್ಮಿಗೆ ಬಿಸಿ ನೀರು ನೀಡಿ ಸ್ನಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾಳೆ. ಲಕ್ಷ್ಮಿ ಸ್ನಾನ ಮಾಡಿ ಮುಟ್ಟಿನಲ್ಲಿ ಕೊಳೆಯಾದ ತನ್ನ ಬಟ್ಟೆ ಬದಲಾಯಿಸಿಕೊಂಡು ಗುಡಿಸಿಲಿನ ಶ್ರೀಮಂತ ಹೃದಯದ ಪಾರ್ವತಿಯನ್ನು ಅಪ್ಪಿ ಕಣ್ಣೀರಿಟ್ಟು ನಡೆಯುವಾಗ ಮತ್ತೆ ಪಾರ್ವತಿ ಅವಳಿಗೆ ಬಸ್ ಚಾರ್ಜಗೆ ಆಗುವಷ್ಟು ಹಣವನ್ನೂ ನೀಡಿ ಕುದ್ದು ಬಸ್ಸಿಗೆ ಹತ್ತಿಸಿ ವಿದಾಯ ಹೇಳಿದ್ದಾಳೆ. ಈಚೆಗೆ ತವರಿಗೆ ಬಂದ ಲಕ್ಷಿ ಮಾತ್ರ ಅತ್ತಿಗೆಯರ ಕೈಯಲ್ಲೂ ಸಣ್ಣಾಗಿ ಸೊರಗಿದ್ದಾಳೆ. ಮಾನಸೀಕ ಹಿಂಸೆ ಅವಳಿಂದ ತಡೆಯಲಾಗು ತ್ತಿಲ್ಲ. ತನ್ನ ಕಾಲ ಮೇಲೆ ತಾನು ನಿಂತು ಬದುಕುವ ನಿರ್ಧಾರಕ್ಕೆ ಬಂದು ಆಗ ತಾನೆ ಹೆಜ್ಜೆ ಹಾಕಲು ಕಲಿತ ಮಗುವನ್ನು ತಾಯಿ ತಂದೆಯರಿಗೊಪ್ಪಿಸಿ ಪಟ್ಟಣಕ್ಕೆ ಬಂದಿದ್ದಾಳೆ ಟಿ.ಸಿ.ಎಚ್. ಮುಗಿಸಿದ ಅವಳು ನೇಮಕಾತಿಗೆ ಅರ್ಜಿ ಹಾಕಲು ಹೋದಾಗ ಡಿ.ಡಿ.ಪಿ. ಆಫೀಸರ್ ರಮೇಶ್ ಇವಳ ಸೌಂದರ್ಯಕ್ಕೆ ಮಾರು ಹೋಗಿ ಇವಳ ವೃತ್ತಾಂತವನ್ನೆಲ್ಲಾ ಕೇಳಿ ನೌಕರಿಯ ಜೊತೆಗೆ ಬಾಳು ಕೊಡುವುದಾಗಿ ನಂಬಿಸಿ ದೇವಸ್ಥಾನವೊಂದರಲ್ಲಿ ಮದುವೆಯಾಗಿ ದ್ದಾನೆ. ಅವನಿಗೆ ಈಗಾಗಲೆ ಮದುವೆ ಆದ ಸಂಗತಿ ಲಕ್ಷ್ಮಿಯಿಂದ ಮುಚ್ಚಿಟ್ಟು ಲಕ್ಷ್ಮಿ ಎದುರು ಅವಳಿಗೆ ನೌಕರಿ, ಬದುಕು ಎರಡು ನೀಡಿದ ಮಾಹನ್ ಪುರುಷನ ಸೋಗು ಹಾಕಿಕೊಂಡೆ ತುಂಬ ದಿನ ಬದುಕಿದ್ದಾನೆ. ವಿಷಯ ರಮೇಶನ ಮೊದಲ ಹೆಂಡತಿಗೆ ಹೇಗೋ ತಿಳಿದು ಅವಳು ಸೀದಾ ಲಕ್ಷ್ಮಿಯನ್ನು ಹುಡುಕಿಕೊಂಡು ಬಂದಾಗಲೇ ತಿಳಿದಿದೆ. ಇಲ್ಲಿ ಮೋಸ ಮಾಡಿರುವುದು ತನ್ನ ಗಂಡ ಲಕ್ಷ್ಮಿಯ ಎದುರು ತನ್ನ ಮೊದಲ ಮದುವೆಯ ಸತ್ಯ ಮುಚ್ಚಿಟ್ಟದ್ದು. ಅವಳು ಲಕ್ಷ್ಮಿಯನ್ನು ತಕ್ಷಣ ಕ್ಷಮಿಸದಿದ್ದರೂ ಲಕ್ಷ್ಮಿ ಮಾತ್ರ ರಮೇಶನನ್ನು ಸಂಪೂರ್ಣವಾಗಿ ಮೊದಲ ಹೆಂಡತಿಗೆ ಬಿಟ್ಟು ಕೊಟ್ಟಿದ್ದಾಳೆ. ಆದರೆ ಮೋಸದ ಅತೀ ದೊಡ್ಡ ಆಘಾತ ನೀಡಿ ನಾಟಕವಾಡಿದ ರಮೇಶನ ಮೇಲೆ ತಿರಸ್ಕಾರ ಹೆಚ್ಚಾಗಿದೆ. ಆಘಾತ ತಡೆಯದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಅಕ್ಕ ಪಕ್ಕದ ಜನರ ನೆರವಿನಿಂದ ಬದುಕುಳಿದಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಬಂದ ಲಕ್ಷ್ಮಿಯ ತಾಯಿ ತಂದೆ ವಿಷಯದ ಪೂರ್ಣ ಮಾಹಿತಿ ತಿಳಿದು ಬಿಕ್ಕಳಿಸಿ ಅತ್ತಿದ್ದಾರೆ. ಆದರೇನು ಬಡತನ, ಅಸಹಾಯಕತೆ ಮನುಷ್ಯನನ್ನು ತುಂಬಾ ನಿಕೃಷ್ಟವಾಗಿ ನಡೆಸಿಕೊಳ್ಳುತ್ತದೆ. ಲಕ್ಷ್ಮಿ ಚೇತರಿಸಿಕೊಳ್ಳುವುದನ್ನೆ ಕಾಯುತ್ತಿದ್ದ ಲಕ್ಷ್ಮಿಯ ತಂದೆ ಅವಳ ಎತ್ತರಕ್ಕೆ ಬೆಳೆದು ನಿಂತ ಅವಳ ಮಗುವನ್ನು ಅವಳಿಗೆ ತೋರಿಸಿ. “ನೋಡು ಮಗ ಇದು ನೀನು ಹತ್ತು ವರ್ಷದ ಹಿಂದೆ ಬಿಟ್ಟು ಬಂದ ನಿನ್ನದೆ ಮಗು ಆಗಿನ್ನು ಇದು ನಡೆಯಲು ಕಲಿತಿರಲಿಲ್ಲ,ಈಗ ದೊಡ್ಡವನಾಗಿದ್ದಾನೆ. ನಡೆದದ್ದು ನಡೆದು ಹೋಯಿತು ಇನ್ನು ಮುಂದೆ ರೀತಿ ಆಗದಂತೆ ನಿನ್ನ ಮಗುವಿ ಗಾಗಿ ಬದುಕು ಎಂದು ಮಗುವನ್ನು ಅವಳ ಕೈಗೊಪ್ಪಿಸಿದ್ದಾರೆ. ಅವಳು ಮಗುವನ್ನು ಅಪ್ಪಿ ಬಿಕ್ಕಳಿಸಿದ್ದಾಳೆ. ತಂದೆ ತಡೆಯದ ಸಂಕಟದಲ್ಲೂ ರಮೇಶನ ಹತ್ತಿರ ಹೋಗಿನೀನು ಇಷ್ಟು ದಿನ ನನ್ನ ಮಗಳ ಅಮಾಕತೆಯನ್ನು ಬಳಸಿಕೊಂಡಿದ್ದೀಯ ನಿನ್ನನ್ನು ಕೊಚ್ಚಿ ಹಾಕುವ ಅಥವಾ ಸರ್ವನಾಶ ಮಾಡುವ ಯಾವ ಬಲವೂ ಇಲ್ಲದ ಅಸಹಾಯಕ ನಾನು. ಮೇಲಾಗಿ ನನ್ನ ಮಗಳ ಮಾನವೂ ನನಗೆ ಮುಖ್ಯ. ನಿನ್ನ ಹೆಂಡತಿಯೂ ನನ್ನ ಮಗಳಿದ್ದ ಹಾಗೆ. ನೀನು ಅವಳಿಗಾಗಿ ಈಗ ಸಣ್ಣದೊಂದು ಸಹಾಯ ಮಾಡಿಬಿಡು ಅವಳಿಗೆ ನಾವಿರುವ ಊರಿಗೆ ಟ್ರಾನ್ಸಪರ್ ಕೊಟ್ಟು ಬಿಡು. ಅವಳಿಗೆ ನೌಕರಿ ಇದೆ ಹೇಗೋ ಬದುಕಿಕೊಳ್ಳುತ್ತಾಳೆ ಪಾಪದ ಹುಡುಗಿ ಎಂದು ದಳದಳನೆ ಕಣ್ಣೀರು ಸುರಿಸಿದ್ದಾನೆ. ತಕ್ಷಣವೇ ರಮೇಶ್ ಅವಳಿಗೆ ಟ್ರಾನ್ಸಫರ್ ನೀಡಿ ಅವಳ ಭವಿಷತ್ತಿಗೆ ಕೊಂಚ ಹಣವನ್ನು ನೀಡಿ ಮಾನವೀಯತೆ ಮೆರೆಯುತ್ತಾನೆ. ತಾಯಿ ತಂದೆ ಮಗುವಿನ ಜೊತೆ ಊರು ಸೇರಿದ ಲಕ್ಷ್ಮೀಗೆ, ಲಕ್ಷ್ಮಿಯ ತಂದೆ ರಮೇಶ ನೀಡಿದ ಹಣದಲ್ಲಿ ಮನೆಯೊಂದನ್ನು ಕಟ್ಟಿಸಿಕೊಟ್ಟು ಹಣ ರಮೇಶನದು ಎನ್ನುವ ಸತ್ಯ ಮುಚ್ಚಿಡು ತ್ತಾನೆ. ಕೆಲ ದಿನಗಳಲ್ಲೇ ಲಕ್ಷ್ಮೀಯ ತಂದೆ ಕಾಯಿಲೆಗೆ ತುತ್ತಾಗಿ ಮರಣವನ್ನಪ್ಪುತ್ತಾನೆ. ಈಗ ಒಬ್ಬಂಟಿಯಾದ ತಾಯಿ ಲಕ್ಷ್ಮೀ ಹತ್ತಿರ ಬಂದಿದ್ದಾಳೆ. ಆಕಡೆ ಮಗು ಕಡೆ ತಾಯಿ ಈಗ ಲಕ್ಷ್ಮಿಗೆ ತುಸು ನೆಮ್ಮದಿ ದೊರೆತಿದೆ.

      🔆🔆🔆

✍️ಶ್ರೀಮತಿ.ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ.ಸಿದ್ದೇಶ್ವರ ಸಾಹಿತ್ಯ ವೇದಿಕೆ, ವಿಜಯಪುರ.