ಹಾಯ್ ನನ್ನ ಮನೆಯವರೇ..
ಎಲ್ಲರೂ ಹೇಗಿದ್ದೀರಾ? ಕ್ಷೇಮವಾಗಿರುವಿ ರೆಂದು ಭಾವಿಸುತ್ತೇನೆ.. ಬಹುಶಃ ನನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀರ ಲ್ಲವೇ… ಹೌದು ನಾನು ಮತ್ತೆ ನನ್ನ ತಮ್ಮ ಟೈಗರ್ ಕೂಡ ನಿಮ್ಮೆಲ್ಲರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ….ಮೊದಲ ಬಾರಿಗೆ ನಿಮ್ಮ ಮನೆಗೆ ಬಂದಾಗ ತುಂಬಾ ಭಯ ಆಗಿತ್ತು,ನೀವು ಹೇಗೆ ನಮ್ಮನ್ನು ನೋಡಿಕೊಳ್ತಿರೀ ಅಂತ…ಆದರೆ ಕ್ರಮೇಣ ಆ ಭಯ ಎಲ್ಲ ಮಾಯ ಆಗುತ್ತಾ ಬಂತು. ನಾವು ನಿಮ್ಮ ಮನೆಗೆ ಬಂದ ಸಂದರ್ಭದಲ್ಲಿ ನಿಮ್ಮೆಲ್ಲರ ಮುಖದಲ್ಲಿ ಕಂಡ ಸಂತೋಷ ಇನ್ನೂ ನನ್ನ ಮನಸ್ಸಲ್ಲಿ ಅಚ್ಚೋಡೆದಿದೆ,ಆ ಸಂಭ್ರಮವನ್ನು ನಾನು ನನ್ನ ತಮ್ಮ ಇಬ್ಬರೂ ಕಣ್ಣರಳಿಸಿ ನೋಡಿ ಆನಂದಿಸುತ್ತಿದ್ದೆವು. ನಿಮ್ಮ ಮನೆಯ ಊಟ ರುಚಿಸದಾಗ ನಮ್ಮನ್ನು ನಿಮ್ಮ ಮನೆಯ ಮಗುವಿನಂತೆ ನೋಡಿ ಬಾಯಿಗೆ ಕೊಟ್ಟು ಊಟ ಮಾಡಿಸಿದಿರಿ…ನೀವು ತಿನ್ನುವ ಬೆಳ್ಳಗಿನ ತಿಂಡಿಯಾಗಿರ್ಬೋದು..ಮಧ್ಯಾಹ್ನದ ಊಟ ಆಗಿರ್ಬೋದು…ಸಂಜೆಯ ಚಹಾ ಆಗಿರ್ಬೋದು …ರಾತ್ರಿಯ ಫಲಾಹಾರ ಆಗಿರ್ಬೋದು…. ಎಲ್ಲಾರದರಲ್ಲೂ ನಮಗೂ ಪಾಲು ಇಟ್ಟು ಊಟ ಮಾಡಿದ ನನ್ನ ಪ್ರೀತಿಯ ಕುಟುಂಬದವರು ನೀವು.

ಅಷ್ಟು ಮಾಡಿದ ನಿಮ್ಮನ್ನು ನಾನು ಇಷ್ಟು ಬೇಗ ಬಿಟ್ಟು ಹೋಗ್ಬಾರ್ದಿತ್ತು ಅಲ್ವಾ….
ಅಪ್ಪನ ಕಣ್ಣಲ್ಲಿ ನಮ್ಮ ಮೇಲೆ ನಂಬಿಕೆ ಇತ್ತು…ಅಮ್ಮನ ಕಣ್ಣಲ್ಲಿ ಪ್ರೀತಿ ಇತ್ತು..
ನಮ್ಮ ಅಕ್ಕಂದಿರೆಗೆಲ್ಲ ನಾವಿರ್ಬ್ರೂ ಪ್ರೀತಿಯ ತಮ್ಮಂದಿರಾಗಿದ್ವಿ….ನಿಮ್ಮ ಪ್ರೀತಿಯಿಂದ …ಆರೈಕೆಯಿಂದ ನಾವು ಇಬ್ಬರೂ ಇಷ್ಟು ಬೇಗ ವಂಚಿತರಾಗ ಬಾರದಿತ್ತು..ಎಲ್ಲವೂ ದೈವಲೀಲೆ..

ಅಕ್ಕಂದಿರೆಲ್ಲ ಮಲಗಿರುವಾಗ ಮುಂಜಾನೆ ಸೂರ್ಯ ಏಳುವ ಹೊತ್ತಿಗೆ ಹೋಗಿ ಅವರು ಹೊದ್ದ ಕಂಬಳಿಗಳನ್ನು ಎಳೆದು ಎಬ್ಬಿಸುವಾಗ ಅವರಿಗೆಲ್ಲ ಕಿರಿಕಿರಿ ಆಗುತ್ತಿದ್ದರೂ… ಆ ನಮ್ಮ ಕಿರಿಕಿರಿಯನ್ನು ನೀವು ಇಷ್ಟ ಪಡುತ್ತಿರೀ ಅಂತ ನಂಗೆ ತಿಳಿದಿದೆ. ಇಂದು ನೀವುಗಳು ಅದನ್ನೆಲ್ಲ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀರಿ ಅಲ್ವಾ..

ಇಷ್ಟೆಲ್ಲಾ ಚೆನ್ನಾಗಿದ್ದ ನಮಗೆ ಅದು ಯಾರ ದೃಷ್ಟಿ ತಗುಲಿತೋ ಗೊತ್ತಿಲ್ಲ…ನನ್ನ ತಮ್ಮ ಟೈಗರ್ ಗೆ ಆರೋಗ್ಯ ಕೈ ಕೊಟ್ಟಿತು…ನೀವು ಎಷ್ಟೇ ಚಿಕತ್ಸೆ ಕೊಡಿಸಿದರೂ…ಎಲ್ಲ ವ್ಯರ್ಥ ವಾಯಿತು…ಕೊನೆಗೆ ನನ್ನ ಪ್ರೀತಿಯ ತಮ್ಮ ನಮ್ಮೆಲ್ಲರನ್ನೂ ಬಿಟ್ಟು ಹೋದ.

ನೀವೆಲ್ಲರೂ ಬೇಜಾರಲ್ಲಿರಬಾರದುಂತ ನಾನು ನನ್ನ ನೋವನ್ನ ಮರೆತು ನಿಮ್ಮೊಂದಿಗೆ ಕಾಲ ಕಳೆದೆ..ನೀವು ಅಷ್ಟೆ… ನನ್ನನ್ನು ಅವನ ಮೇಲಿನ ಪ್ರೀತಿಯನ್ನು ಧಾರೆ ಎರೆದು ಸಾಕಿದಿರಿ.ಆದರೆ ವಿಧಿಗೆ ನಾವು ಒಂದಾಗಿರುವದು ಇಷ್ಟ ಇರಲಿಲ್ಲವಲ್ಲ ನನ್ನ ಆರೋಗ್ಯವೂ ಕೈ ಕೊಟ್ಟಿತು…ಅಮ್ಮನ ಅಷ್ಟು ಚಂದದ ಕೈ ರುಚಿಯೂ ಹಿಡಿಸದಾಯಿತು.ನನ್ನ ಅಪ್ಪ ಈ ಸಲವೂ ಕೂಡ ಚಿಕಿತ್ಸೆ ಮಾಡಿದರು…. ಆದರೆ ಅದು ನನ್ನನ್ನು ಬದುಕಿಸಲ್ಲಿಲ್ಲ… ನನಗೆ ಅನ್ನ ನೀಡಿದ ಧನಿಗೆ ನಿಯತ್ತನ್ನು ತೋರಿಸಲಾಗ ಲಿಲ್ಲವಲ್ಲಾ ಎಂಬ ಕೊರಗಲ್ಲಿಯೇ ಪ್ರಾಣ ಬಿಟ್ಟೆ…

ನನ್ನ ಪ್ರೀತಿಯ ಕುಟುಂಬದವರೇ….ನಮ್ಮ ಅಗಲುವಿಕೆಯನ್ನ ನೆನೆದು ಕೊರಗಬೇಡಿ… ನಿಮ್ಮೊಂದಿಗೆ ಕಳೆದ ದಿನಗಳು ತುಂಬಾ ಕಡಿಮೆ ಆದರೆ ಅದರ ನೆನಪುಗಳು ಮಾತ್ರ ಯಾವತ್ತೂ ಶಾಶ್ವತ…. ಯಾವತ್ತೂ ನಿಮ್ಮ ನೆಲದ ಮಣ್ಣಿನಲ್ಲಿ ಜೀವಂತವಾಗಿರುತ್ತೇವೆ, ನಮ್ಮ ಮೇಲಿರುವ ನಿಮ್ಮ ಪ್ರೀತಿಗೆ ನಾವಿಬ್ಬರೂ ಯಾವತ್ತಿಗೂಚಿರಋಣಿಗಳು…
ಇಂತೀ ನಿಮ್ಮ ಪ್ರೀತಿಯ ಮಗ
ಸಿಂಗ….

           🔆🔆🔆

✍️ ವರಶ್ರೀ ಕೆ.
ತೃತೀಯ ವರ್ಷದ ಬಿಎಸ್ಸಿ
ವಿವೇಕಾನಂದ ಪದವಿ ಕಾಲೇಜು, ಪುತ್ತೂರು