ಸಾಧನೆಯೆಂಬುದು ಯಾರ ಸೊತ್ತು ಅಲ್ಲ. ಯಾರು ಪರಿ ಶ್ರಮಪಟ್ಟು ಮುಂದೆ ಸಾಗುವರೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.ಒಂದು ಅಳಿಲು ತಾನು ತಿಂದ ಹಣ್ಣಿನ ಬೀಜವನ್ನು ಯಾರಿಗೂ ಕಾಣದಂತೆ ಮಣ್ಣಿನಾಳದಲ್ಲಿ ಬಚ್ಚಿಡುತ್ತದೆ. ಮುಂದೊಂದು ದಿನ ಆ ಬೀಜಕ್ಕೆ ಜೀವ ಬಂದು ಚಿಗುರೊಡೆದು ಇನ್ನಾರಿಗೋ ಫಲನೀಡುವ ಮರವಾದಿತೆಂಬ ಭರವಸೆಯೊಂದಿಗೆ… ಆ ಸಮಯದಲ್ಲಿ ಅಳಿಲು ಇಲ್ಲವಾಗಲೂಬಹುದು.ಅದು ಪ್ರಕೃತಿ ಆರಾಧಕರ ಮೂಲಭೂತ ಕರ್ತವ್ಯ ವೆನ್ನಬಹುದು.

ಒಮ್ಮೆ ನಮ್ಮ ಶಾಲೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ವನಮಹೋತ್ಸವ ಕಾರ್ಯಕ್ರಮ ಮಾಡಲು ಬಂದಿದ್ದರು.ಅವರ ಕೈಚೀಲದಲ್ಲಿ ಲಡ್ಡುವಿನಾಕಾರದ ಮಣ್ಣಿನ ಉಂಡೆಗಳಿ ದ್ದವು ಮಕ್ಕಳಿಗೂ, ನನಗೂ ಎನಿರಬಹು ದೆಂಬ ಕುತೂಹಲ. ಅದೊಂದು ಸಸಿ ಬೆಳೆಸುವ ವಿಧಾನ.ಎಲ್ಲ ಮಕ್ಕಳ ಕೈಲಿ ಉಂಡೆ ನೀಡಿ ಅವುಗಳನ್ನು ತಮಗಿಷ್ಟವಾದ ಸ್ಥಳದಲ್ಲಿ ಮಣ್ಣಿನಲ್ಲಿ ಅಡಗಿಸಿಡಲು ಸೂಚಿಸಿದರು.ಕಾರಣ ಅದು ವಾತಾವರಣಕ್ಕೆ ಹೊಂದಿಕೊಂಡು ಸೂಕ್ತ ಕಾಲದಲ್ಲಿ ಚಿಗುರಲು ಅನುವಾಗುವ ಅಳಿಲು ಸೇವೆ.

ಹಾಗೆಯೇ ಪ್ರತಿಯೊಬ್ಬ ತಂದೆ-ತಾಯಿಗೂ ಜೀವನದಲ್ಲಿ ಇರುವ ಒಂದೇ ಒಂದು ಆಸೆ ತಮ್ಮ ಮಕ್ಕಳು ಸಮಾಜ ಗೌರವಿಸುವ ಮಾರ್ಗದಲ್ಲಿ ಮುನ್ನಡೆಯಬೇಕು.ಇಂತವರ ಮಕ್ಕಳು ಎಂಬ ಆತ್ಮಾಭಿಮಾನದಿಂದ ಬೀಗುವ ಕನಸು ಹೊತ್ತಿರುತ್ತಾರೆ.ಆ ಕನಸು ನೆರೆವೇರಲು ಪಡುವ ಪರಿಶ್ರಮ ಅವರಿಗಷ್ಟೇ ಗೊತ್ತಿರುತ್ತದೆ.ಮಕ್ಕಳಿಗೆ ಎಳ್ಳಷ್ಟು ಸುಳಿವು ಸಿಗದಂತೆ ಅವರನ್ನು ಸುಖ ಸಂತೋಷ ದಲ್ಲಿಡಲು ಹೆಣಗಾಡುತ್ತಿರುತ್ತಾರೆ.ತಾವೇ ಸೃಷ್ಟಿಸಿದ ಜಗತ್ತಿನಲ್ಲಿ ಬಂಧಿಯಾಗಿ ಬಳಲು ತ್ತಿರುತ್ತಾರೆ.ಮಣ್ಣಿನ ಉಂಡೆಯಲ್ಲಿ ಅಡಗಿದ ಬೀಜದಂತೆ…

ಮಕ್ಕಳ ಸುಖದ ಮುಂದೆ ಬೇರೆನೂ ಕಾಣದ ಬದುಕಿಗೆ ಮಕ್ಕಳು ಆಸರೆಯಾದರೆ ಅವರಿಗಾಗುವ ಆನಂದ ಬೇರೆ ಉಂಟೆ. ಶ್ರವಣ ಕುಮಾರನ ಕಥೆ ತಮಗೆಲ್ಲ ಗೊತ್ತು. ಕುರುಡು ತಂದೆಯ ತಾಯಿಯನ್ನು ಹೆಗಲಲ್ಲಿ ಹೊತ್ತು ಕ್ಷೇತ್ರದ ದರ್ಶನ ಮಾಡಿದ ಕೀರ್ತಿ ಎಲ್ಲರಿಗೂ ಮಾದರಿ. ಜನ್ಮ ನೀಡಿ ಸಲುಹಿದ ಅವರ ಋಣವನ್ನು ತೀರಿಸಲು ಸಾಧ್ಯವೇ ಹೇಳಿ ? “ಬಿತ್ತಿದ್ದನ್ನು ಬೆಳೆದುಕೋ” ಎಂಬಂತೆ ನಾವು ಯಾವ ರೀತಿಯ ಸಂಸ್ಕಾರ ನೀಡಿ ಮಕ್ಕಳನ್ನು ಬೆಳೆಸುತ್ತೆವೋ ಆ ರೀತಿ ಬೆಳೆಯುತ್ತಾರೆ.ಗುರು ಹಿರಿಯರಿಗೆ ಗೌರವ ನೀಡುವುದನ್ನು ನಾವೇ ಕಲಿಯದಿದ್ದರೆ ಅವರೆಲ್ಲಿಂದ ಕಲಿತಾರು?

ಶ್ರವಣ ಕುಮಾರ ನಮಗೆ ಒಬ್ಬ ಜವಾಬ್ದಾರಿಯುತ ಮಗ ಮಾತ್ರವಲ್ಲ, ಅವನ ಕಂಗಳಿಂದ ಹಿರಿಯಜೀವಗಳು ನೋಡಿದ ಬಗೆಯನ್ನು ಮರೆಯಲು ಅಸಾಧ್ಯ. ತಂದೆ-ತಾಯಿ ಎಂಬ ದೈವವನ್ನು ಪೂಜಿಸದ ಮಕ್ಕಳಿಗೆ ತಾವು ಪಾಲಕರಾದೆವೆಂಬ ಕಹಿ ಅನುಭವವನ್ನು ಉಂಡವರಿಗೇನು ಕಮ್ಮಿಯಿಲ್ಲ…ಇದು ಒಳ್ಳೆಯ ಬೆಳವಣಿಗೆಯು ಅಲ್ಲ.

ಸಾಧಿಸುವ ಮನಸ್ಸಿರುವವರಿಗೆ ಸಾಧನೆ ಕಠಿಣವಾಗಲಾರದು.ಹೀಮಾದಾಸ್ ಪುಟ್ಟಪೋರಿ ಅಥ್ಲೆಟಿಕ್ಸ್ ನಲ್ಲಿ ಚಿನ್ನದಪದಕ‌ ಪಡೆದು ಎಲ್ಲರ ಕಣ್ಣನ್ನು ತನ್ನತ್ತ ಸೆಳೆದ ಪೋರಿ. ಬಡತನವಿದ್ದರೂ ಹೆದರದೇ ತಾನು ಏನಾದರೂ ಸಾಧಿಸಬೇಕೆಂಬ ಅದಮ್ಯ ಉತ್ಸಾಹ ಹೊಂದಿರುವ ಫಲವಾಗಿ ತಂದೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರೆ, ಅವಳು ಹೊಲದ ಬದುಗಳನ್ನು ತನ್ನ ಓಟದ ಕ್ರೀಡಾಂಗಣವೆಂದು ಭಾವಿಸಿ ಶ್ರಮಿಸುವು ದನ್ನು ಕಂಡಾಗ ತಂದೆಗಾದ ನೋವು, ಹತಾಶೆ, ಬಡತನ, ಮಗಳಿಗಾಗಿ ಶಕ್ತಿಮೀರಿ ಎಲ್ಲವನ್ನೂ ಮಾಡಬೇಕೆಂಬ ದೃಢನಿರ್ಧಾರ ಸೂಕ್ತ ಸಂದರ್ಭದಲ್ಲಿ ಗಟ್ಟಿಯಾಗಿದ್ದರಿಂದಾ ಗಿಯೇ ಇಂದು ಇಡೀ ದೇಶ ಅವಳನ್ನು ಗೌರವಿಸುತ್ತಿದೆ. ಒಬ್ಬ ಹೆಮ್ಮಯ ಪೊಲೀಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದಾಗ ಆಗುವ ಹೆಮ್ಮೆ ಎಲ್ಲ ತಂದೆ ತಾಯಿಯರ ಕನಸು.

ಕೆಲವೊಂದು ಸಲ ಪಾಲಕರಾದ ನಮಗೆ ತಮ್ಮ ಮಕ್ಕಳ ಮನೋಬಲದ ಕುರಿತು ಸಂಪೂರ್ಣ ನಂಬಿಕೆಯಿರುವುದಿಲ್ಲ.ಹಾಗೂ ಒಂಟಿಯಾಗಿ ಕಾರ್ಯನಿರ್ವಹಿಸಲು ಬಿಡು ವುದಿಲ್ಲ.ತಾವೇ ಪರಿಪೂರ್ಣ ಎಂಬಂತೆ ಮುಂದಾಗುವಾಗ ಅವರಲ್ಲಿ ನಾವು ಹೇಗೆ ತಾನೆ ಆತ್ಮವಿಶ್ವಾಸ ಬೆಳೆಸಿದಂತಾಗುತ್ತದೆ? ಸಮಸ್ಯೆ ಎದುರಾದಲ್ಲಿ ಎದುರಿಸುವ ಸಾಮರ್ಥ್ಯವಿಲ್ಲದೆ ಖಿನ್ನತೆಗೆ ಒಳಾಗುವ ಮಕ್ಕಳ ಸಂಖ್ಯೆಗೇನೂ ಕಡಿಮೆಯಿಲ್ಲ. ಹಾಗಿದ್ದರೆ ತಪ್ಪು ಯಾರಿಂದ? ಹೇಗೆ? ಗೊತ್ತಿಲ್ಲದಂತೆ ಪರಿಣಾಮ ಬೀರುತ್ತದೆ ಎಂಬುದು ಮನಗಾಣಬೇಕು, ಅದು ಅನಿವಾರ್ಯ ಕೂಡ.

ರಾಮ ಭಕ್ತ ಹನುಮಂತ ವೀರ, ಧೀರ ನಾದರೂ ಅವನೊಳಗೆ ಅಡಗಿದ ಶಕ್ತಿಯನ್ನು ಜಾಗ್ರತಗೊಳಿಸುವವರು ಬೇಕಿತ್ತು.ನೀನು ಮಾಡುತ್ತಿ,ನಿನ್ನಲ್ಲಿ ಆ ಶಕ್ತಿ ಇದೆ ಎಂಬ ಹೊಗಳಿಕೆಗೆ ಹನುಮಂತ ತನ್ನಲ್ಲಿ ಸೂಪ್ತವಾಗಿ ಅಡಗಿರುವ ಅಮೂಲ್ಯ ಶಕ್ತಿಯಿಂದ ಸಮುದ್ರೋಲ್ಲಂಘನ ಮಾಡಿ ಸೀತೆಯನ್ನು ಹುಡುಕಿದ ಅಪ್ರತಿಮ ಸಾಧಕ.ಅವನಲ್ಲಿಯ ಏಕಾಗ್ರತೆ ಹಿಡಿದ ಕಾರ್ಯ ಸಾಧಿಸುವ ಛಲಗಾರ. ಸಂಕಷ್ಟಗಳಿಗೆ ಪರಿಹಾರ ನಮ್ಮಲ್ಲೆ ಅಡಗಿದೆ ಎಂಬುದನ್ನು ತಿಳಿಸಿಕೊಟ್ಟವನು.ಇವೆಲ್ಲವೂ ನಮಗೆ ಗೊತ್ತಿದ್ದರೂ ಮಕ್ಕಳಿಗೆ ನೀಡುವ ಮೌಲ್ಯಗಳಲ್ಲಿ ಸತ್ವಭರಿತ ಗಟ್ಟಿತನ ಉಳಿಸಲಾಗುತ್ತಿಲ್ಲ ಏಕೆ? ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಎದುರಾಗುವುದಂತೂ ದಿಟ..

        🔆🔆🔆

✍️ ಶ್ರೀಮತಿ.ಶಿವಲೀಲಾ ಹುಣಸಗಿ ಶಿಕ್ಷಕಿ, ಯಲ್ಲಾಪೂರ