ಎಷ್ಟು ಬರೆದರೂ ಸಾಲದು ನನ್ನವನ ಬಗ್ಗೆ
ಅವನನ್ನು ವರ್ಣಿಸಲು ಕುಳಿತರೆ ಕುಳಿತೇ ಇರುವೆನು ಹಾಗೆ

ನನ್ನವನೇನು ಅಪರಂಜಿಯಲ್ಲ
ಆದರೂ ಗುಲಗಂಜಿಯಷ್ಟೂ ಹೃದಯದಲ್ಲಿ ದೋಷವಿಲ್ಲ

ಮಾತಿಗೆ ನಿಂತರೆ ಬಂಡೆ ಕರಗಿಸುವ ಶಕ್ತಿ ಮೌನಕ್ಕೆ ವಹಿಸಿದರೆ ಎಲ್ಲರನ್ನು ಸೆಳೆಯುವ ಯುಕ್ತಿ

ಇವನಿಗೆ ಇಲ್ಲ ರಾಮ ರಹೀಮರಲ್ಲಿ ಭಕ್ತಿ ಕಾಯಕದಲ್ಲಿಯೇ ಕಾಣುವನು ದೇವರ ಬಗೆಗೆ ಭಕ್ತಿ

ಸಹಾಯಕ್ಕೆ ಕರೆದರೆ ಕರ್ಣನನ್ನೇ ಮೀರಿಸುವ ಕೈ ಯುದ್ಧಕ್ಕೆ ನಿಂತರೆ ಭೀಮನನ್ನು ಮೀರಿಸುವ ತೋಳು

ಎಷ್ಟೆಂದು ವರ್ಣಿಸಲಿ ಇವನನ್ನು ಹೊಗಳಿದಷ್ಟೂ ಹಿಗ್ಗುವನು ಗಾಳಿ ತುಂಬಿದ ಬಲೂನಿನಂತೆ

ಆಕಾಶದಷ್ಟು ವಿಶಾಲ ಹೃದಯಿ ಇವನು
ಭೂಮಿಯಷ್ಟು ಪ್ರೀತಿ ಕೊಡುವನು ನನ್ನ ಮನಕದ್ದ ಚಿತ್ತಚೋರನು

ಇವನ ಮನವಂತೂ ಸ್ವಚ್ಛ ವರ್ಣನೆಗೆ ಸಾಲದು ಪದಗಳ ಗುಚ್ಛ ತಾಳದೆ ಕವಿತೆ ಕಟ್ಟಿಸಿದೆ ಪ್ರೀತಿಯ ಹುಚ್ಚು

‌ 🔆🔆🔆

✍️ ಮಧುರಾ ಎಲ್ ಭಟ್ಟ. ಎಸ್.ಡಿ.ಎಂ.ಕಾಲೇಜು, ಉಜಿರೆ