ಮೈಸೂರಿನ ಅಗ್ರಹಾರದ ಬೀದಿಯಲ್ಲಿ ಶಂಕರಾಚಾರ್ಯರು ಮತ್ತು ಸುಲೋಚನಮ್ಮ ಎಂಬ ಬ್ರಾಹ್ಮಣ ದಂಪತಿಗಳು ನೆಲೆಸಿದ್ದರು. ಶಂಕರಾಚಾರ್ಯರು ಅಲ್ಲಿನ ದೇವಸ್ಥಾನವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಸುಲೋಚನಮ್ಮ ಮನೆಯಲ್ಲಿಯೇ ಇದ್ದುಕೊಂಡು ಮನೆಯ ಕೆಲಸವನ್ನೆಲ್ಲಾ ನೋಡಿಕೊಳ್ಳುತ್ತಿದ್ದರು. ಇವರಿಗೆ ಮದುವೆಯಾಗಿ ಹತ್ತು ವರ್ಷಗಳಾ ದರೂ ಮಕ್ಕಳೇ ಇರಲಿಲ್ಲ. ಇವರಿಬ್ಬರಿಗೂ ಮಕ್ಕಳಿಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು.ಹೀಗಿರುವಾಗ ಒಂದು ದಿನ ಸಂಜೆ ಶಂಕರಾಚಾರ್ಯರು ದೇವಸ್ಥಾನದ ಕೆಲಸಗಳನ್ನೆಲ್ಲಾ ಮುಗಿಸಿ ಗುಡಿಯ ಬಾಗಿಲನ್ನು ಹಾಕುವ ಸಮಯದಲ್ಲಿ ಪುಟ್ಟ ಮಗುವೊಂದು ಅಳುವ ಶಬ್ದ ಕೇಳಿ ಬರುತ್ತದೆ. ಆ ಅಳುವಿನ ಶಬ್ದ ಎಲ್ಲಿಂದ ಬರುತ್ತಿದೆ ಎಂದು ಅವರು ನೋಡ ಹೋದಾಗ, ದೇವಸ್ಥಾನದ ಕಲ್ಲಿನ ಪಡಸಾಲೆ ಮೇಲೆ ಮೂರು ತಿಂಗಳ ಹೆಣ್ಣು ಮಗು ವೊಂದು ಅಳುತ್ತಾ ಇರುತ್ತದೆ. ಈ ಮಗು ಯಾರದ್ದೆಂದು ನೋಡಲು ಹೋದಾಗ ದೇವಸ್ಥಾನದಲ್ಲಿ ಯಾರು ಕೂಡ ಇರಲಿಲ್ಲ. ಹಾಗಾಗಿ ಪೋಷಕರಿಲ್ಲದ ಎಳೆ ಕಂದಮ್ಮ ನನ್ನು ಶಂಕರಾಚಾರ್ಯರು ಮಕ್ಕಳಿಲ್ಲದ ತಮಗೆ ದೇವರೇ ಈ ಮಗುವನ್ನು ಕರುಣಿ ಸಿದ್ದಾನೆ ಎಂದು ಭಾವಿಸಿ ಮಗುವನ್ನು ಖುಷಿಯಿಂದ ತನ್ನ ಮನೆಗೆ ಎತ್ತಿಕೊಂಡು ಹೋಗುತ್ತಾರೆ. ಆಚಾರ್ಯರ ಕೈಯಲ್ಲಿ ಮಗುವನ್ನು ನೋಡಿದ ಸುಲೋಚನಮ್ಮನ ಖುಷಿಗೆ ಪಾರವೇ ಇರುವುದಿಲ್ಲ. ಇದು ಯಾರ ಮಗು ಏನು ಎತ್ತ ಎಂದು ವಿಚಾರಿಸಿದೆ ಮಗುವನ್ನು ಕೈಗೆತ್ತಿಕೊಂಡು ಮುದ್ದಾಡುತ್ತಾರೆ. ತದನಂತರ ಆಚಾರ್ಯರು ಈ ಮಗುವು ಅವರಿಗೆ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ವಿವರಿಸಿ ಹೇಳುತ್ತಾರೆ.
ದಿನಗಳು ಕಳೆಯುತ್ತವೆ. ಮಕ್ಕಳೇ ಇಲ್ಲದ ಆಚಾರ್ಯರ ಮನೆಗೆ ಈ ಹೆಣ್ಣು ಮಗು ಬಂದನಂತರ ಸಂಭ್ರಮವೋ ಸಂಭ್ರಮ. ಸುಲೋಚನಮ್ಮ ಒಂದು ಕ್ಷಣವೂ ಈ ಮಗುವನ್ನು ಬಿಟ್ಟಿರುತ್ತಿರಲಿಲ್ಲ. ಈ ಮಗುವಿಗೆ ಅವರು ಅರ್ಚನಾ ಎಂದು ನಾಮಕರಣ ಮಾಡುತ್ತಾರೆ. ಗಂಡ-ಹೆಂಡತಿ ಯರಿಬ್ಬರೂ ಅರ್ಚನಾಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾರೆ. ಅವಳಿಗೆ ಯಾವುದೇ ಕುಂದುಕೊರತೆಗಳು ಆಗದಂತೆ ನೋಡಿ ಕೊಳ್ಳುತ್ತಾರೆ. ಅರ್ಚನಾ ಕೂಡ ತಂದೆ ತಾಯಿಯನ್ನು ಬಹಳವಾಗಿ ಪ್ರೀತಿಸುತ್ತಾಳೆ. ಅರ್ಚನಾ ದತ್ತು ಮಗಳು ಎಂಬುದನ್ನು ಅವಳಿಗೆ ಎಂದೂ ಕೂಡ ತಿಳಿಯದಂತೆ ಇವರು ಜಾಗ್ರತೆವಹಿಸಿ ಅವಳನ್ನು ಸಾಕುತ್ತಾರೆ.
ಅರ್ಚನಾ ಪ್ರಾರ್ಥಮಿಕ ಹಾಗೂ ಹೈಸ್ಕೂಲಿನ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೇ ಓದಿ ಮುಗಿಸುತ್ತಾಳೆ. ಶಂಕರಾಚಾರ್ಯರು ಮಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಕಳಿಸಬೇಕೆಂದು ಹೆಂಡತಿಯ ಬಳಿ ಹೇಳಿದಾಗ, ಸುಲೋಚನಮ್ಮ ಇದಕ್ಕೆ ಖಡಾಖಂಡಿತವಾಗಿ ಒಪ್ಪುವುದಿಲ್ಲ. ನನಗೆ ಮಗಳನ್ನು ಬಿಟ್ಟು ಒಂದು ಕ್ಷಣವೂ ಇರಲು ಸಾಧ್ಯವಿಲ್ಲ ಹಾಗಾಗಿ ಅವಳು ಇಲ್ಲಿಯೇ ಕಾಲೇಜು ವಿದ್ಯಾಭ್ಯಾಸ ಮಾಡಲಿ ಎಂದು ಗಂಡನ ಬಳಿ ಕೇಳಿಕೊಳ್ಳುತ್ತಾಳೆ. ನಂತರ ಅರ್ಚನಾ ಕೂಡ ನನಗೆ ನಿಮ್ಮಿಬ್ಬರನ್ನು ಬಿಟ್ಟು ಇರಲು ಸಾಧ್ಯವಿಲ್ಲ ನಾನು ನಿಮ್ಮೊಂದಿಗೆ ಇದ್ದು ಇಲ್ಲಿ ವಿದ್ಯಾಭ್ಯಾಸ ಮಾಡುತ್ತೇನೆ ಎಂದು ಹಠ ಹಿಡಿಯುತ್ತಾಳೆ. ಇದರಂತೆ ಅರ್ಚನಾ ತನ್ನ ಪಿಯುಸಿಯನ್ನು ಮೈಸೂರಿನಲ್ಲಿಯೇ ಓದಿ ಮುಗಿಸುತ್ತಾಳೆ. ಅರ್ಚನಾ ಎಂದೂ ತನ್ನ ತಂದೆ ತಾಯಿಯ ಮಾತಿಗೆ ಅಗೌರವ ತೋರಿದ ಮಗಳೇ ಅಲ್ಲ. ತಂದೆ-ತಾಯಿಯ ಹೇಳಿದೆ ಮಾತುಗಳೇ ಅವಳಿಗೆ ವೇದವಾಕ್ಯವಾಗಿರುತ್ತದೆ.
ಪದವಿ ವಿದ್ಯಾಭ್ಯಾಸಕ್ಕಾಗಿ ಅರ್ಚನಾಳನ್ನು ಆಚಾರ್ಯರು ಬೆಂಗಳೂರು ಪಟ್ಟಣಕ್ಕೆ ಕಳುಹಿಸಬೇಕೆಂದು ತೀರ್ಮಾನಿಸುತ್ತಾರೆ. ಸುಲೋಚನಮ್ಮ ಶುರುವಿಗೆ ಇದಕ್ಕೆ ಒಪ್ಪಿಗೆ ನೀಡದಿದ್ದರೂ, ನಂತರ ಮಗಳ ವಿದ್ಯಾಭ್ಯಾಸದ ದೃಷ್ಟಿಯಿಂದ ಒಪ್ಪಿಕೊಳ್ಳ ಬೇಕಾಗುತ್ತದೆ. ಅರ್ಚನಾಳಿಗೆ ಬೆಂಗಳೂರು ಪಟ್ಟಣಕ್ಕೆ ಹೋಗಲು ಮನಸ್ಸಿರುವುದಿಲ್ಲ. ಅದಲ್ಲದೆ ಹಾಸ್ಟೆಲ್ನಲ್ಲಿ ತಂದೆ ತಾಯಿಯನ್ನು ಬಿಟ್ಟು ಒಬ್ಬಳೇ ಹೇಗೆ ಇರಬೇಕು ಎಂಬ ಚಿಂತೆ ಅವಳನ್ನು ಕಾಡುತ್ತದೆ. ಆದರೂ ತಂದೆಯ ಮಾತಿಗೆ ಇಲ್ಲ ಎನ್ನದೇ ಅರ್ಚನಾ ಬೆಂಗಳೂರಿಗೆ ಪದವಿ ವಿದ್ಯಾಭ್ಯಾಸಕ್ಕೆ ತೆರಳಲು ಸಿದ್ಧವಾಗುತ್ತಾಳೆ.
ಶಂಕರಾಚಾರ್ಯರು ಅರ್ಚನಾಳನ್ನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪದವಿ ವಿದ್ಯಾಭ್ಯಾಸಕ್ಕೆ ಸೇರಿಸುತ್ತಾರೆ. ಅದಲ್ಲದೆ ಕಾಲೇಜು ಹಾಸ್ಟೆಲ್ ನಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆ ಕೂಡ ಮಾಡುತ್ತಾರೆ. ಅರ್ಚನಾಳಿಗೆ ಮೊದಮೊದಲು ಹಾಸ್ಟೆಲ್ನಲ್ಲಿ ಹೊಂದಿ ಕೊಳ್ಳಲು ಆಗುವುದಿಲ್ಲ. ಮನೆಯ ಹಾಗೂ ತಂದೆ ತಾಯಿಯ ನೆನಪು ಕಾಡುತ್ತಿರುತ್ತದೆ. ಕಾಲಕ್ರಮೇಣ ಅವಳು ಹಾಸ್ಟೆಲ್ ವಾತಾವರಣಕ್ಕೆ ಹೊಂದಿಕೊಳ್ಳುತ್ತಾಳೆ.
ಅರ್ಚನಾ ಕಾಲೇಜಿನಲ್ಲಿ ಓದುವ ಎಲ್ಲಾ ಹೆಣ್ಣುಮಕ್ಕಳಿಗಿಂತ ಅತ್ಯಂತ ಸುಂದರಳು. ಕಲಿಕೆಯಲ್ಲಿಯೂ ಕೂಡ ಸದಾ ಮುಂದಿದ್ದಳು. ಅಲ್ಲದೆ ಇವಳಿಗೆ ಕರ್ನಾಟಿಕ್ ಮತ್ತು ಶಾಸ್ತ್ರೀಯ ಸಂಗೀತಗಳು ತಿಳಿದಿರುತ್ತದೆ. ನೃತ್ಯದಲ್ಲಿಯೂ ಕೂಡ ಅರ್ಚನಾಳದ್ದು ಎತ್ತಿದ ಕೈ. ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಮುಂದಿದ್ದ ಅರ್ಚನಾಳ ಮೇಲೆ ಅದೇ ಕಾಲೇಜಿನಲ್ಲಿ ಓದುತ್ತಿರುವ ಭಾಸ್ಕರನಿಗೆ ಪ್ರೀತಿ ಹುಟ್ಟುತ್ತದೆ. ಮೊದಲು ಅರ್ಚನಾಳ ಗೆಳೆತನ ಮಾಡಿಕೊಳ್ಳುವ ಭಾಸ್ಕರನು ಅವಳೊಂದಿಗೆ ಆತ್ಮೀಯ ರೀತಿಯಲ್ಲಿ ಬೆರೆಯಲು ಆರಂಭಿಸುತ್ತಾನೆ.
ಅರ್ಚನಾಳಿಗೆ ಭಾಸ್ಕರನ ಸ್ನೇಹ ತುಂಬಾ ಖುಷಿ ಕೊಡುತ್ತದೆ. ಹೀಗಿರುವಾಗ ಒಂದು ದಿನ ಭಾಸ್ಕರ ತನಗೆ ಅರ್ಚನಾಳ ಮೇಲಿದ್ದ ಪ್ರೀತಿಯನ್ನು ಅವಳ ಬಳಿ ಹೇಳುತ್ತಾನೆ. ಅರ್ಚನಾಳಿಗೂ ಕೂಡ ಭಾಸ್ಕರನ ಮೇಲೆ ಪ್ರೀತಿ ಇರುತ್ತದೆ. ಆದರೆ ಅವಳು ಅದನ್ನು ಅವನ ಬಳಿ ಹೇಳಿಕೊಂಡಿರುವುದಿಲ್ಲ. ಭಾಸ್ಕರ ತಾನಾಗಿಯೇ ಬಂದು ಅವಳ ಬಳಿ ಪ್ರೀತಿಯ ವಿಚಾರ ತೋರ್ಪಡಿಸಿದಾಗ, ಅರ್ಚನಾ ತುಂಬು ಹೃದಯದಿಂದ ಒಪ್ಪಿಕೊಳ್ಳುತ್ತಾಳೆ.
ಅರ್ಚನಾ ವಾರಕ್ಕೊಮ್ಮೆ ಮೈಸೂರಿನಲ್ಲಿ ರುವ ತನ್ನ ತಂದೆತಾಯಿಗಳಿಗೆ ಪತ್ರವನ್ನು ಬರೆದು ತನ್ನ ಯೋಗಕ್ಷೇಮ ಹಾಗೂ ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ವಿಷಯಗಳನ್ನು ಹೇಳಿಕೊಳ್ಳುತ್ತಿದ್ದಳು. ಆದರೆ ತಾನು ಬಾಸ್ಕರನನ್ನು ಪ್ರೀತಿಸುತ್ತಿ ರುವ ವಿಚಾರ ಮಾತ್ರ ಹೇಳಿಕೊಂಡಿರುವು ದಿಲ್ಲ.
ಅಂದು ಕಾಲೇಜಿನಲ್ಲಿ ಸಮಾರಂಭವೊಂದು ನಡೆಯುತ್ತಿರುತ್ತದೆ. ಆಗ ಅರ್ಚನಾ ಮತ್ತು ಭಾಸ್ಕರ ಸಲುಗೆಯಿಂದ ವರ್ತಿಸುವುದನ್ನು ಕಂಡ ಅರ್ಚನಾಳ ಗೆಳತಿ ವಸಂತಿ ಸಮಾರಂಭದ ಬಳಿಕ ಅರ್ಚನಾಳನ್ನು ಭೇಟಿ ಮಾಡಿ ಭಾಸ್ಕರನ ಬಗ್ಗೆ ಒಂದೆರಡು ಮಾತು ಗಳನ್ನು ಹೇಳುತ್ತಾಳೆ. ಭಾಸ್ಕರನು ಇದೇ ಕಾಲೇಜಿನಲ್ಲಿ ಒಂದು ವರ್ಷದ ಮೊದಲು ಒಂದು ಹುಡುಗಿಯನ್ನು ಪ್ರೀತಿಸಿ ಆಕೆಯನ್ನು ವಂಚಿಸಿರುವ ವಿಚಾರವನ್ನು ಅರ್ಚನಾಳ ಬಳಿ ಹೇಳಿದಾಗ, ಅರ್ಚನಾ ಗೆಳತಿಯ ಮಾತನ್ನು ಅಲ್ಲಗಳೆಯುತ್ತಾಳೆ. ಅಷ್ಟೇ ಅಲ್ಲದೆ ಭಾಸ್ಕರನ ಬಗ್ಗೆ ತನ್ನ ಬಳಿ ದೂರನ್ನು ಹೇಳಿದ ವಸಂತಿಯನ್ನು ತನ್ನಿಂದ ದೂರ ಇಡುತ್ತಾಳೆ.
ದಿನಗಳು ಕಳೆದಂತೆ ಭಾಸ್ಕರ ಮತ್ತು ಅರ್ಚನಾ ಯಾರಿಗೂ ತಿಳಿಯದಂತೆ ಜೋಡಿ ಹಕ್ಕಿಗಳಂತೆ ಸಿನಿಮಾ ಪಾರ್ಕ್ ಮುಂತಾದ ಕಡೆಗಳಿಗೆ ಹೋಗಲು ಶುರು ಮಾಡುತ್ತಾರೆ. ನಂತರದ ದಿನಗಳಲ್ಲಿ ಇವರಿಬ್ಬರೂ ತಮ್ಮ ಮಧ್ಯೆ ಇದ್ದ ಪ್ರೀತಿ ಎಂಬ ಬೇಲಿಯನ್ನು ಮುರಿದು ಸಲ್ಲಾಪದಿಂದ ತಮ್ಮತಮ್ಮಲ್ಲೇ ಮೈಮರೆಯುತ್ತಾರೆ. ಇದರ ಪರಿಣಾಮ ಅರ್ಚನಾಳಿಗೆ ಒಂದು ದಿನ ತಾನು ಭಾಸ್ಕರನಿಂದ ಗರ್ಭಿಣಿಯಾಗಿರುವುದು ತಿಳಿದುಬರುತ್ತದೆ. ಇದನ್ನು ತಿಳಿದ ಅರ್ಚನಾಳಿಗೆ ಏನು ಮಾಡಬೇಕೆಂಬುದು ತೋಚದಂತಾಗಿ, ಭಾಸ್ಕರನ ಬಳಿ ತನ್ನನ್ನು ಮದುವೆಯಾಗುವಂತೆ ಹೇಳುವುದೇ ಸೂಕ್ತ ಎನ್ನಿಸಿ,ಅವನನ್ನು ಹುಡುಕಿ ಹೊರಟ ಅವಳಿಗೆ ಉಸಿರೇ ನಿಂತಂತಾಗುತ್ತದೆ. ಯಾಕೆಂದರೆ ಇವಳು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಅದೇ ಭಾಸ್ಕರನು ಮತ್ತೊಂದು ಹುಡುಗಿ ಯೊಂದಿಗೆ ಸಲ್ಲಾಪದಿಂದಿರು ವುದನ್ನು ನೋಡುತ್ತಾಳೆ. ಅವಳು ಅವನ ಮೇಲಿಟ್ಟ ನಂಬಿಕೆಯ ಗುಡ್ಡ ಕುಸಿದು ಬೀಳುತ್ತದೆ. ಗೆಳತಿ ಭಾಸ್ಕರನ ಬಗ್ಗೆ ಹೇಳಿದಾಗಲೂ ಕೂಡ ಅವಳ ಮಾತಿಗೆ ಬೆಲೆ ಕೊಡದೆ ಅವನನ್ನು ನಂಬಿ ಕೆಟ್ಟುಹೋದೆ ನೆಂದು ತಿಳಿದು ಪಶ್ಚಾತಾಪ ಪಡುತ್ತಾಳೆ. ಇಂತವನಿಗೋಸ್ಕರ ಅನ್ಯಾಯವಾಗಿ ತನ್ನ ಗೆಳತಿಯನ್ನು ದೂರ ಮಾಡಿಕೊಂಡೆನಲ್ಲಾ ಎಂದು ನೊಂದು ಕೊಳ್ಳುತ್ತಾಳೆ.
ಮೋಸದ ಪ್ರೀತಿಯ ಬಲೆಗೆ ಬಿದ್ದು ದೇವರಂತಿದ್ದ ಹೆತ್ತ ತಂದೆ ತಾಯಿಗಳು ತನ್ನ ಮೇಲೆ ಇಟ್ಟಿದ್ದದಂತಹ ನಂಬಿಕೆಗೆ ಮೋಸ ಮಾಡಿದ ದುಃಖ ಅವಳನ್ನು ಕಾಡಲು ಶುರು ಮಾಡುತ್ತದೆ. ಇನ್ನೂ ಯಾವ ಮುಖ ಇಟ್ಟು ಕೊಂಡು ಹೆತ್ತ ತಂದೆ ತಾಯಿಗಳನ್ನು ನೋಡಲಿ ಎಂದು ಹಣೆ ಚಚ್ಚಿಕೊಳ್ಳುತ್ತಾಳೆ. ಅವಳ ಕಣ್ಮುಂದೆ ಹೆತ್ತವರು ತನಗಾಗಿ ಮಾಡಿದ ಪ್ರೀತಿ ತ್ಯಾಗ ಎಲ್ಲವೂ ಎಳೆಎಳೆ ಯಾಗಿ ಬರಲಾರಂಭಿಸುತ್ತದೆ. ಆ ಕ್ಷಣ ಅಲ್ಲಿಂದ ತೆರಳಿದ ಅರ್ಚನಾ ತನ್ನ ಹಾಸ್ಟೆಲಿನ ಕೋಣೆಗೆ ಬಂದು ಕಣ್ಣೀರಿನಿಂದ ತಂದೆ ತಾಯಿಗೆ ಪತ್ರವೊಂದನ್ನು ಬರೆಯುತ್ತಾಳೆ.
“ ಪ್ರೀತಿಯ ಅಪ್ಪ ಮತ್ತು ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ,,ನೀವು ನನ್ನ ಮೇಲೆ ಇಟ್ಟ ನಂಬಿಕೆಗೆ ನಾನು ಅರ್ಹಳಲ್ಲ. ಮಗಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ನಿಮಗೆ ಇಂದು ನಾನು ತಲೆತಗ್ಗಿಸುವಂತಹ ಕೆಲಸ ಮಾಡಿದ್ದೇನೆ. ನಾನು ಮೋಸಗಾರನೊಬ್ಬನ ಪ್ರೀತಿಯ ಬಲೆಗೆ ಬಿದ್ದು ಅಪವಿತ್ರಳಾಗಿರುವೆ. ಈ ಕಳಂಕ ಹೊತ್ತುಕೊಂಡು ನಿಮ್ಮ ಮುಂದೆ ಬರಲು ನನಗೆ ಇಷ್ಟವಿಲ್ಲ. ಮುಂದೆಂದೂ ಜನ್ಮ ಎಂಬುದಿದ್ದರೆ ಮತ್ತೆ ನಿಮ್ಮ ಮಗಳಾಗಿ ಹುಟ್ಟಿ ನಿಮಗೆ ಶೋಭೆ ತರುವ ಕೆಲಸ ಮಾಡುತ್ತೇನೆ”.
– ಇಂತಿ ನಿಮ್ಮ ನತದೃಷ್ಟ ಮಗಳು
ಅರ್ಚನಾ.
ಎಂದು ಪತ್ರದಲ್ಲಿ ಬರೆದಿರುತ್ತಾಳೆ.
ಇತ್ತ ಮೈಸೂರಿನಲ್ಲಿ ಮಗಳ ಪತ್ರದ ನಿರೀಕ್ಷೆಯಲ್ಲಿದ್ದ ತಂದೆ-ತಾಯಿಗಳಿಗೆ ಅರ್ಚನಾಳ ಪತ್ರ ಸಿಕ್ಕುತ್ತದೆ.
ಸುಲೋಚನಮ್ಮ ಸಂಜೆ ಕೆಲಸ ಮುಗಿಸಿ ಬಂದ ಪತಿಯೊಂದಿಗೆ ಕುಳಿತು ಮಗಳು ತಮಗಾಗಿ ಕಳುಹಿಸಿರುವ ಪತ್ರವನ್ನು ಓದಲು ಮುಂದಾಗುತ್ತಾಳೆ.
ಪತ್ರವನ್ನು ತೆರೆದ ತಾಯಿಗೆ ದೊಡ್ಡ ಆಘಾತವೊಂದು ಕಾದಿರುತ್ತದೆ. ಎಂದಿನಂತೆ ಮಗಳ ಪ್ರೀತಿಯ ಮಾತುಗಳನ್ನು ನಿರೀಕ್ಷಿಸಿದ್ದ ತಂದೆ ತಾಯಿಗೆ ಅರ್ಚನಾಳ ಪತ್ರವನ್ನು ಓದಿ ಹೃದಯ ನುಚ್ಚುನೂರಾ ಗುತ್ತದೆ. ಪತ್ರ ಓದಿದ ಮರುಕ್ಷಣವೇ ಇವರಿಗೆ ಬೆಂಗಳೂರಿನ ಅರ್ಚನಾಳ ಹಾಸ್ಟೆಲ್ನಿಂದ ದೂರವಾಣಿ ಕರೆ ಬರುತ್ತದೆ. ಗಾಯದ ಮೇಲೆ ಬರೆ ಎಳೆದಂತೆ ಹೆತ್ತವರಿಗೆ ಅರ್ಚನಾಳ ಸಾವಿನ ಸುದ್ದಿ ತಿಳಿಯುತ್ತದೆ. ಸುದ್ದಿ ಕೇಳಿದೊಡನೆ ಸುಲೋಚನಮ್ಮ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ.
ಎಂತಹ ಘನಘೋರ ದುರ್ವಿಧಿ ಇವರ ಬಾಳಲ್ಲಿ ಆಟ ಆಡಿತೆಂದರೆ ಅತ್ತ ಮಗಳನ್ನು ಇತ್ತ ಹೆಂಡತಿಯನ್ನು ಕಳೆದುಕೊಂಡ ಶಂಕರಾಚಾರ್ಯರು ಇದೇ ಕೊರಗಿನಿಂದ ಹಾಸಿಗೆ ಹಿಡಿಯುತ್ತಾರೆ.
🔆🔆🔆
✍️ ಜ್ಯೋತಿ. ಭಟ್ ಎಸ್.ಡಿ.ಎಂ.ಕಾಲೇಜು ಉಜಿರೆ
Share this: ಶ್ರಾವಣ (ಜೀವಭಾವಗಳ ಸಮ್ಮಿಲನ)ಬ್ಲಾಗ್
- Click to share on Facebook (Opens in new window) Facebook
- Click to share on Telegram (Opens in new window) Telegram
- Click to share on WhatsApp (Opens in new window) WhatsApp
- Click to email a link to a friend (Opens in new window) Email
- Click to print (Opens in new window) Print
- Click to share on LinkedIn (Opens in new window) LinkedIn
- Click to share on X (Opens in new window) X
- Click to share on Pinterest (Opens in new window) Pinterest
