ಜೀವನವಿದು ಸುಖ ದುಃಖಗಳ ಮಿಶ್ರಣ, ನೋವು ನಲಿವು ನೋವುಗಳ ಪರಿಭ್ರಮಣ, ಶೋಕ ಸಂತೋಷಗಳ ರಸಾಯನ. ಅವರ ಆಯ್ಕೆಗೇ ಬಿಟ್ಟರೆ ಸಂತೋಷವೇ ಬೇಕು ಸರ್ವರಿಗೂ. ಈ ಚಕ್ರದ ಸುತ್ತಾಟದಲ್ಲೇ ಸವೆಸಬೇಕು ಬಾಳು ಆದರೆ ಅದರ ಜೊತೆಗೆ ಸವಿಯನ್ನು ಸವಿಯುವುದೇ ಜೀವನದ ಅರ್ಥ ಗಮ್ಯ.

ಹಾಗಾದರೆ ಸುಖ ಎಂದರೇನು?ಯಾರೊಬ್ಬರ ಊಹೆಯ ಮಿತಿಯಲ್ಲಿರದ, ವ್ಯಕ್ತಿಯಿಂದ ವ್ಯಕ್ತಿಗೆ ಅಷ್ಟೇ ಏಕೆ ಒಬ್ಬನೇ ವ್ಯಕ್ತಿಯಲ್ಲೂ ಕಾಲದಿಂದ ಕಾಲಕ್ಕೆ ಸ್ಥಳ ದಿಂದ ಸ್ಥಳಕ್ಕೆ ಬದಲಾಗುವ ಚಂಚಲ ಭಾವವಿದು. ಜೀವನದಲ್ಲಿ ಕಷ್ಟಗಳೇ ಇರದ ಪರಿಪೂರ್ಣ ಸುಖಿ ಯಾರೊಬ್ಬರೂ ಇಲ್ಲ. ಕಡಿಮೆ ಕಷ್ಟದವರು ಸುಖಿಗಳು ಎನ್ನಬಹುದು ಬೇಕಾದರೆ. ದೈಹಿಕ ಶ್ರಮ ವಿಲ್ಲದ ಬದುಕು ಸುಖವೇ ? ಕಠಿಣ ಶ್ರಮ ದಿಂದ ಬದುಕು ದೂಡುವವನಿಗೆ ಹಾಗೆನಿಸ ಬಹುದು, ಶ್ರೀಮಂತ ಸುಖಿಯೆಂದು ಬಡವ ಭಾವಿಸಬಹುದು, ತಮಗೆ ಲಭ್ಯವಿರದ ಇನ್ನೊಂದನ್ನು ಹೊಂದಿರುವವನು ಸುಖಿ ಎಂದು ಅರ್ಥೈಸಬಹುದು. ಹೀಗಾಗಿ ಸುಖಕ್ಕೆ ಸರಿಯಾದ ಅರ್ಥ ವ್ಯಾಖ್ಯಾನ ಕೊಡಲು ಸಾಧ್ಯವಿಲ್ಲ . ಕಷ್ಟದ ನಂತರ ಬರುವ ಸುಖಕ್ಕೆ ಬೆಲೆ ಹೆಚ್ಚು ಅದನ್ನು ಸಂಸ್ಕೃತ ಸುಭಾಷಿತ ಹೀಗೆ ಹೇಳಿದೆ

ಯದೇವೋಪನತಃ ದುಃಖಾತ್ ಸುಖಮ್ ತದ್ರಸವತ್ತರಮ್
ನಿರ್ವಾಣಾಯ ತರುಚ್ಛಾಯಾ ತಪ್ತಸ್ಯ ಹಿ ವಿಶೇಷತಃ

ಸುಖಗಳು ಭೌತಿಕ, ಮಾನಸಿಕ, ಆಧ್ಯಾತ್ಮಿಕ ಯಾವ ಬಗೆಯದಾದರೂ ಆಗಬಹುದು. ಭೌತಿಕ ವಸ್ತುಗಳು ತಂದುಕೊಡುವ ಅನುಕೂಲತೆಗಳು, ಪ್ರೀತಿಪಾತ್ರರಿಂದ ಕುಟುಂಬ ಸ್ನೇಹಿತ ಸಮಾಜದಿಂದ ಸಿಗುವ ಪ್ರೇಮ ಆದರ ಮನ್ನಣೆಗಳು, ತನ್ನೊಳಗೆ ಆತ್ಮ ಸಂತೋಷ ಪಡುವ ಆಧ್ಯಾತ್ಮಿಕ ಸುಖವಾಗಿರಬಹುದು ಎಲ್ಲವೂ ಸುಖದ ವಿವಿಧ ಮಜಲುಗಳು. ಎಲ್ಲವೂ ಅನಿವಾರ್ಯವೇ ಆಶಿತವೇ ಅಪೇಕ್ಷಿತವೇ. ಜೀವನದ ಒಂದೊಂದು ಸಮಯದಲ್ಲಿ ಒಂದೊಂದರ ಅವಶ್ಯಕತೆ ಮನಸ್ಸಿಗೆ ಹೆಚ್ಚು. ಹಾಗೆಂದು ಯಾವುದೋ ಕನಿಷ್ಟವೂ ಅಲ್ಲ ಗರಿಷ್ಠವೂ ಅಲ್ಲ . ಬರೀ ತ್ಯಾಗವೇ ತುಂಬಿರುವ ಬಾಳು ಸಹನೀಯವಲ್ಲ ,ಬರಿ ಭೋಗ ವ್ಯಕ್ತಿಗೆ ಶೋಭೆಯಲ್ಲ.ತ್ಯಾಗ ಭೋಗ ಗಳ ಹಿತಮಿತ ಸಂಗಮದ ಸಮನ್ವಯದ ಬದುಕು ವ್ಯಕ್ತಿ ಹಾಗೂ ಸಮಾಜದ ಆರೋಗ್ಯಕರ ಸುಸ್ಥಿತಿಗೆ ಸಹಾಯಕ. ನಮಗೂ ಅಷ್ಟೆ ತಾನೆ ಬಾಲ್ಯದಲ್ಲಿ ಭೌತಿಕ ಸುಖದ ಹಂಬಲ, ಯೌವ್ವನ ನಡುಹರೆಯ ಗಳಲ್ಲಿ ಪ್ರೀತಿವಾತ್ಸಲ್ಯಗಳ ಮೇಲೆ ಅವಲಂಬನೆ, ಬದುಕಿನ ಮುಸ್ಸಂಜೆಯ ದಿನಗಳಲ್ಲಿ ಆಧ್ಯಾತ್ಮಿಕ ಸುಖದ ಹುಡುಕಾಟ . ಇದು ಮಾನವ ಬದುಕಿನ ನೇರ ಸರಳ ಆಯಾಮ ನಿಯಮ. ಕೆಲವೊಮ್ಮೆ ಒಂದೊಂದು ಸಾರಿ ಈ ಸುಖಗಳ ಅನುಕ್ರಮಣಿಕೆ ಹಿಂಚು ಮುಂಚು ಆಗಬಹುದು.

ಇನ್ನು ಕವಿ ಕಾವ್ಯದಲ್ಲಿ ಸುಖದ ಪರಿಕಲ್ಪನೆಯ ಬಗ್ಗೆ ಕೊಂಚ ಗಮನ ಹರಿಸೋಣ ಸರ್ವಜ್ಞನ ಮಾತುಗಳಲ್ಲಿ ಹೇಳುವುದಾದರೆ:

ಬೆಚ್ಚನೆಯ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿವ ಸತಿಯಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ

ಮುಂದೆ ನಮ್ಮ ಜಿ ಪಿ ರಾಜರತ್ನಂ ಅವರು ಹೇಳೋದನ್ನ ಕೇಳೋಣ ಬನ್ನಿ,

ಹೇಳ್ಕೊಳೋಕೊಂದೂರು ತಲೆಮ್ಯಾಗೆ ಒಂದ್ಸೂರು ಮಲಗಾಕೆ ಭೂಮ್ತಾಯಿ ಮಂಚ
ಕೈಹಿಡಿದೋಳ್ ಪುಟ್ನಂಜಿ ನಗ್ ನಗ್ತಾ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ

ಇಲ್ಲಿ ಭೌತಿಕ ಸುಖಗಳು ಕಡಿಮೆಯಾದರೂ ಚಿಂತೆಯಿಲ್ಲ ಮಾನಸಿಕವಾಗಿ ಶ್ರೀಮಂತ ರಾಗಿರಬೇಕು ಎಂಬ ಭಾವ ಒಡಮೂಡಿವೆ. ಸರ್ವಜ್ಞನಾಗಲಿ ರಾಜರತ್ನಂ ಅವರಾಗಲಿ ದಾಂಪತ್ಯದ ಸಾಮರಸ್ಯ ಭಾವಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ಇಂದಿನ ಸಮಾಜ ಭೌತಿಕವಾಗಿ ಹಣಗಳಿಸುವ ಓಟದ ಸ್ಪರ್ಧೆಗೆ ಬಿದ್ದು ಈ ಮೂಲಭೂತ ಅವಶ್ಯಕತೆಯನ್ನೇ ಮರೆಯುತ್ತಿದ್ದಾರೆ ಅಂತ ಸಹಜವಾಗಿಯೇ ಅನ್ನಿಸುತ್ತಿದೆ .

ಹೀಗೆ ಸುಖದ ಪರಿಕಲ್ಪನೆಗಳನ್ನುವೀಕ್ಷಿಸುತ್ತಾ ನಡೆದರೆ “ಸಾಕು ಎಂದರೆ ಶ್ರೀಮಂತ ಬೇಕು ಎನ್ನುವವ ಬಡವ” ಎಂಬ ಮಾತು ನೆನಪಿಗೆ ಬರುತ್ತದೆ. ಇರುವಷ್ಟಕ್ಕೇ ತೃಪ್ತಿ ಪಡುವ ಮನೋಭಾವವಿದ್ದು ಅತಿಯಾದ ಬಯಕೆಗಳ ಗುಲಾಮರಾಗದೆ ಹೋದರೆ ಅದುವೇ ಸುಖ. ಇಷ್ಟು ದೊರಕಿದರೆ ಮತ್ತಷ್ಟರಾಸೆ ಎಂದು ಕಾಮನೆಗಳ ಪಟ್ಟಿ ಬೆಳೆಸುತ್ತಾ ಹೋದರೆ, ನಿನ್ನೆಯ ಘಟನೆಗಳ ನೆನೆದು ಕೊರಗುತ್ತಾ ಕುಳಿತರೆ, ಮುಂದೆಂದೋ ನಡೆಯುವುದರ ಬಗ್ಗೆ ಹೆದರಿ ಚಿಂತಿಸಿದರೆ ಸುಖ ಖಂಡಿತಾ ಇರದು. ಸಾಕು ಎನ್ನುವ ಸಂತೃಪ್ತಿ ಒಂದಿದ್ದರೆ ಅವನೇ ಪರಮಸುಖಿ. ಕಷ್ಟ ನೋವು ಇದ್ದರೇನೇ ಬಾಳಿನಲ್ಲಿ ಮಾಗಲು ಸಾಧ್ಯ ಅನುಭವದಲ್ಲಿ ಹಣ್ಣಾಗಲು ಅದುವೇ ಮಾರ್ಗ. ಅದಕ್ಕೆ ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ಹೇಳುತ್ತಾರೆ:

ವಹಿಸು ಕೆಲಭಾರಗಳ ಸಹಿಸು ಕೆಲ ನೋವುಗಳ;
ಪ್ರಹರಿಸರಿಗಳನನಿತು ಯುಕ್ತಗಳನರಿತು
ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು
ವಿಹರಿಸಾತ್ಮಾಲಯದಿ ಮಂಕುತಿಮ್ಮ

ಹೀಗಾಗಿ ಸುಖವೆಂದರೆ ವಸ್ತುಗಳ ಸಂಗ್ರಹ ಅನುಭವವಲ್ಲ ಮನದ ಪರಿಭಾವ ಅವಸ್ಥೆ ಅನುಭಾವ. ದೇವರಿಗೆ ನಮಗೆಷ್ಟು ಕೊಡಬೇಕೆಂದು ಗೊತ್ತು, ಕೊಡುತ್ತಾನೆ ಎಂಬ ಭಾವವಿದ್ದರೆ ಪರಮಸುಖ. ಆಗ ಮಾತ್ಸರ್ಯ ಸಂತಾಪಗಳು ಇರವು. ಕರ್ಮಸಿದ್ಧಾಂತ ಒಂದನ್ನು ನಂಬಿದರೆ ಸಾಕದೇ ಪರಮೋಚ್ಚ ಸುಖವೀಯುತ್ತದೆ.

               🔆🔆🔆

✍️ ಶ್ರೀಮತಿ. ಸುಜಾತಾ ರವೀಶ್ ಮೈಸೂರು