ಮುಂಜಾನೆ ಎದ್ದಾಕ್ಷಣ ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ ಕರಮೂಲೆ ಸ್ಥಿತೆ ಗೌರಿ ಪ್ರಭಾತೇ ಕರದರ್ಶನಂ ಎಂದು ಹೇಳುವಕಾಲ ಹೋಗಿ, ಈಗ ಏನಿದ್ದರೂ ಬೆಳಿಗ್ಗೆ ಎದ್ದಾಕ್ಷಣ ಹಾಳು ಮೊಬೈಲ್ ಕೈ ಸೇರುತ್ತದೆ. ಯಾರು ಯಾವ ಸ್ಟೇಟಸ್ ಹಾಕಿದ್ದಾರೆ, ನಿನ್ನೆ ಇನ್ಸ್ಟ್ರಾಗ್ರಾಮ್ ಗೆ ಹಾಕಿದ ಫೋಟೋಗೆ ಎಷ್ಟು ಲೈಕ್ ಬಂತು, ನೋಡುವಾಗ ಕೈ ಬೀಸಿ ಕರೆಯುವ ಫೇಸ್ಬುಕ್ ಹೀಗೆ ಎಲ್ಲಾ ಸೋಶಿಯಲ್ ಮೀಡಿಯಾಗಳಿಗೆ ತಮ್ಮ ದರ್ಶನವನ್ನು ನೀಡಿದ ನಂತರವೇ ಹೊರಪ್ರಪಂಚಕ್ಕೆ ನಮ್ಮ ಮುಖ ದರ್ಶನವಾಗುವುದು. ನಾವು ಸ್ವಲ್ಪ ಹೊತ್ತು ಮೊಬೈಲ್ ಉಪಯೋಗ ಮಾಡುವುದನ್ನು ನಿಲ್ಲಿಸಿದರು ಮೊಬೈಲ್ ನಮ್ಮನ್ನು ಉಪಯೋಗ ಮಾಡುವುದನ್ನು ನಿಲ್ಲಿಸುವುದಿಲ್ಲ. ಅದರಲ್ಲೂ ಹೊರಗೆ ಹೋದಾಗ ಬಸ್ಸಿನಲ್ಲಿ ನಮಗೆ ಒಂದು ಕಿಟಕಿ ಪಕ್ಕದ ಸೀಟು ಸಿಕ್ಕಿದರೆ ಹೇಳುವುದೇ ಬೇಡ. ಸಿಂಹಾಸನದಲ್ಲಿ ಕೂತಷ್ಟೇ ಖುಷಿ. ಅದರಲ್ಲೂ ಕಿವಿಗೆ ಒಂದು ಇಯರ್ ಫೋನ್ ಸಿಕ್ಕಿಸಿಕೊಂಡು ಕೂತರೆ ಅದೇ ಸ್ವರ್ಗ ಎನ್ನಬಹುದು. ಪಕ್ಕ ದಲ್ಲಿ ಏನಾದರೂ ತಿಳಿಯದು. ಅದರಲ್ಲೂ ಸೆಲ್ಫಿ ಗೀಳಿಗೆ ಮರುಳಾದವರನ್ನು ಮನೋವೈದ್ಯರಿಂದ ಕೂಡ ಸರಿಪಡಿಸಲು ಸಾಧ್ಯವಾಗುವುದಿಲ್ಲ ಎನ್ನಬಹುದು. ಇದರಿಂದ ಎಷ್ಟೋ ಜನ ತಮ್ಮ ಪ್ರಾಣ ಕಳೆದುಕೊಂಡದ್ದು ಇವೆ .ಎಲ್ಲಿ ಹೋದರು ಸೆಲ್ಫಿ ರೆಸ್ಟೋರೆಂಟಿಗೆ ಹೋದರಂತೂ ತಿನ್ನುವುದಕ್ಕಿಂತ ಸ್ಟೇಟಸ್ ಅಪ್ಲೋಡ್ ಮಾಡುವವರೇ ಜಾಸ್ತಿ. ಈಗಿನ ಜನಾಂಗಕ್ಕೆ ಮೊಬೈಲ್ ಅತ್ಯಗತ್ಯ. ಆದರೆ ಅತಿಯಾದರೆ ಅಮೃತ ಕೂಡಾ ವಿಷವಾಗ ಬಹುದು ಎಂಬಂತೆ. ಮೊಬೈಲ್ ಫೋನ್ ಅನ್ನು ಹಿತಮಿತವಾಗಿ ಬಳಸಿದರೆ ಅದು ಯೋಗ್ಯ ಎನ್ನಬಹುದು. ಮೊಬೈಲ್ ನಿಂದ ಅದೆಷ್ಟೊ ಉಪಯೋಗಗಳಿವೆ ಅದನ್ನು ಮಾತ್ರ ಉಪಯೋಗಿಸಿಕೊಂಡು ಬಾಳಬೇಕು, ಹೊರತು ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎನ್ನುವಂತೆ ಆಗಬಾರದು.

        🔆🔆🔆                  

✍️ ಕೀರ್ತನ
ಆಳ್ವಾಸ್ ಕಾಲೇಜು,ಮೂಡುಬಿದ್ರೆ