ಆಡ್ರೀನ್ ರಿಚ್ ಅಮೆರಿಕದ ಖ್ಯಾತ ಪ್ರಬಂಧಕಾರ್ತಿ ಹಾಗೂ ಮಹಿಳಾ ಪರ ಹೋರಾಟಗಾರ್ತಿ. (೧೬.೫.೧೯೨೯ – ೨೭.೩.೨೦೧೨) ಅವರ “ದ ಟ್ರೀಸ್” ಕವನದ ಅನುವಾದ ಇಲ್ಲಿದೆ. ಮರವಿಲ್ಲದ ಕಾಡುಗಳಿರಬಹುದೆ? ಎಲ್ಲಿವೆ ಹಾಗಾದರೆ ಮರಗಳು? ಮನುಷ್ಯ ಹಾಗೂ ನಿಸರ್ಗದೊಂದಿಗಿನ ಘರ್ಷಣೆ ಹಾಗೂ ವಿಮೋಚನೆಯನ್ನು ವಸ್ತುವಾಗುಳ್ಳ ಈ ಕವನ ವಿಶ್ವವಿಖ್ಯಾತ.
ಒಳಗಿನ ಮರಗಳು ಹೊರಗೆ ಕಾಡಿಗೆ ಹೋಗಲಾರಭಿಸಿವೆ
ಇಷ್ಟು ದಿನಗಳೂ ಬರಿದಾಗಿದ್ದ
ಹಕ್ಕಿಗಳು ಕೂರಲಾಗದ
ಕೀಟಗಳು ಅಡಗಲಾರದ
ಸೂರ್ಯ ಕಿರಣಗಳು ನೆರಳಲ್ಲಿ ಮಾಯವಾಗದ ಕಾಡು,
ಇಷ್ಟು ರಾತ್ರಿಗಳೂ ಬರಿದಾಗಿದ್ದ ಕಾಡು
ಬೆಳಗಿನ ವೇಳೆಗೆ ಮರಗಳಿಂದ ತುಂಬಿ ಹೋಗುವುದು.
ರಾತ್ರಿಯಿಡೀ ಬೇರುಗಳು ಕೆಲಸಗೈಯುವವು
ಜಗುಲಿಯ ನೆಲದ ಬಿರುಕುಗಳಿಂದ ತಮ್ಮನ್ನು ಮುಕ್ತವಾಗಿಸಿಕೊಳ್ಳಲು
ಎಲೆಗಳು ಗಾಜಿನೊಂದಿಗೆ ಘರ್ಷಿಸಿ ದಣಿಯುವವು
ರೆಂಬೆಗಳು ಒತ್ತಡಕೆ ಗಡುಸಾಗುವವು
ಸೂರಿನಡಿ ಬೆಳೆಯಲಾರದೆ ಅಡ್ಡಾದಿಡ್ಡಿಯಾಗಿ
ಮುರುಟಿಹೋಗಿದ್ದ ಉದ್ದದ ಕೊಂಬೆಗಳು
ಆಗಷ್ಟೇ ಬಿಡುಗಡೆಗೊಂಡ ರೋಗಿ ಅರೆನಿದ್ರೆಯಲಿದ್ದಂತೆ
ಆಸ್ಪತ್ರೆಯ ಬಾಗಿಲಿನಿಂದ ಹೊರನಡೆಯುವವು.
ಒಳಗೆ ಕುಳಿತಿದ್ದೇನೆ ನಾನು, ಹೊರ ಜಗುಲಿಯತ್ತ ತೆಗೆದಿವೆ ಬಾಗಿಲುಗಳು
ಉದ್ದುದ್ದ ಪತ್ರಗಳ ಬರೆಯುತ್ತ
ಮನೆಯಿಂದ ಮರಗಳ ತೆರಳುವಿಕೆಯ
ಗುಟ್ಟಾಗಿ ಉಲ್ಲೇಖಿಸುತ್ತ.
ತಾಜಾ ಆಗಿದೆ ರಾತ್ರಿ, ಪೂರ್ಣಚಂದ್ರ ಬೆಳಗುತ್ತಿದ್ದಾನೆ
ಆಕಾಶವಿನ್ನೂ ಮುಕ್ತವಾಗಿದೆ
ಪಾಚಿ ಹಾಗೂ ಎಲೆಗಳ ಗಂಧ
ಈಗಲೂ ಒಂದು ಧ್ವನಿಯಂತೆ ಕೋಣೆಗಳೊಳಕ್ಕೆ ತಲುಪುತ್ತಿದೆ.
ನನ್ನ ತಲೆ ತುಂಬ ತುಂಬಿರುವ ಪಿಸುಮಾತು
ನಾಳೆಯೆಂದರೆ ಮೌನವಾಗುವವು.
ಕೇಳು, ಗಾಜು ಒಡೆಯುತ್ತಿದೆ
ಮರಗಳು ಎಡವುತ್ತ ಕತ್ತಲಿನೆಡೆಗೆ ಮುನ್ನಡೆಯುತ್ತಿವೆ
ಗಾಳಿ ಅವುಗಳ ಭೇಟಿಗೆ ಓಡಿದೆ
ಚಂದ್ರ ಕನ್ನಡಿಯಂತೆ ಒಡೆದುಹೋಗಿದ್ದಾನೆ
ಅದರ ಹೊಸ ಚೂರುಗಳು ಎತ್ತರದ ಓಕ್ ಮರದ ಕಿರೀಟದಂತಿವೆ ಈಗ.
🔆🔆🔆
ಆಂಗ್ಲ ಮೂಲ – ಆಡ್ರೀನ್ ರಿಚ್
ಕನ್ನಡಕ್ಕೆ – ಕವಿತಾ ಹೆಗಡೆ