ಅಮ್ಮಾ…ಈ ಪುಟ್ಟ ಹಕ್ಕಿ ಹಾರಲಾಗದೇ ನಡೆಯಲು ಆಗದೇ ಒದ್ದಾಡುತ್ತಿತ್ತು.ನಾನು ಅದಕ್ಕೆ ಉಪಚರಿಸಲು ಹೋದಷ್ಟು ಅದು ಜಿಗಿದು ಬೀಳುತ್ತಿತ್ತು.ಪಾಪ ನನ್ನ ನೋಡಿ ಹೆದರಿತ್ತಮ್ಮ.ನೀನು ಹೇಳಿಕೊಟ್ಟರೀತಿಯಲ್ಲಿ ಅದನ್ನು ಮೆಲ್ಲಗೆ ನೋವಾಗದಂತೆ ಎತ್ತಿಕೊಂಡಾಗ ಅದು ಹಾರಲಿಲ್ಲ, ನನ್ನ ಅಂಗೈಯಲ್ಲಿ ಮಲಗಿತ್ತು.ಪಾಪ ಅದರ ರೆಕ್ಕೆಯ ಹತ್ತಿರ ಪುಟ್ಟ ಗಾಯವಾಗಿದೆ. ಬಹುಶಃ ಮರದಲ್ಲಿತ್ತು ಯಾರೋ ಮಾವಿನ ಹಣ್ಣಿಗೆ ಹೊಡೆದ ಕಲ್ಲು ಇದಕೆ ತಾಕಿರ ಬೇಕು.ಏನೂ ಆಗಲ್ಲ ಗುಬ್ಬಿ ಹೆದರಬೇಡ, ನಾನು ನಿನ್ನ ಆರಾಮ‌‌ ಮಾಡತಿನಿ ಅಮ್ಮಾ… ಆಸ್ಪತ್ರೆಗೆ ಹೋಗೋಣ್ವಾ? ಎನ್ನುತ್ತ ಹನಿಹನಿಯಾಗಿ ಪುಟ್ಟ ಕೊಕ್ಕೆಯನ್ನು ಅಗಲಿಸಿ ನೀರು ಕುಡಿಸುವ ಮೂಲಕ ಪ್ರಥಮ‌ ಚಿಕಿತ್ಸೆ ಮಾಡುವ ಮಗಳ ಕಂಡು ಹೆಮ್ಮೆಯೆನಿಸಿತು.ಆರೈಕೆಯನ್ನು ಹಗಲು ರಾತ್ರಿ ಮಾಡಿ ಹಕ್ಕಿ ನಿಧಾನವಾಗಿ ರೆಕ್ಕೆ ಬಡಿಯಲು ಪ್ರಾರಂಭಿಸಿದ್ದನ್ನು ಕಂಡು ಖುಷಿಪಟ್ಟಿದ್ದಳು. ಅದು ಕೂಡ ಅವಳ ಸ್ನೇಹಿತಳಾಗಿತ್ತು.ಅದಕ್ಕೂ ಅದರ ಪರಿವಾರ ನೆನಪಾಗಿರಬೇಕು…

ಸಂಪೂರ್ಣ ಗುಣಮುಖವಾದ ಗುಬ್ಬಚ್ಚಿಯು ಸ್ವತಂತ್ರವಾಗಿ ಹಾರಲು ಬಾನೆತ್ತರಕ್ಕೆ ಹಾರಿಸಿದ್ದಳು. ಅದು ಪಟಪಟಯೆಂದು ನಸುನಕ್ಕು ಹಾರಿಹೋಯಿತು,ಮನೆಯಲ್ಲಿ ಒಬ್ಬ ಸದಸ್ಯ ಕಡಿಮೆಯಾದಂತೆನಿಸಿ ನನ್ನ ಮಗಳು ಮೌನವಾಗಿದ್ದು ಅಮ್ಮಾ..ಪುನಃ ಗುಬ್ವಚ್ಚಿ ನಮ್ಮ ಬಳಿ‌ಬರೊದಿಲ್ವಾ? ಅವಳ ಮುಗ್ಧ ಭಾವದಲ್ಲಿ ಅಡಗಿದ ವೇದನೆಯ ಕಂಡು ಬರಬಹುದು ಮಗಾ….‌ ನಿನ್ನ ನಿಸ್ವಾರ್ಥ ಸೇವೆ ಖಂಡಿತ ಫಲ ನೀಡುತ್ತೆ… ಒಂದು ಕೆಲಸ ಮಾಡು ಮನೆಯ ಹಿತ್ತಲಲ್ಲಿ ಹಕ್ಕಿಗಳಿಗಾಗಿ ನೀರಿನ ವ್ಯವಸ್ಥೆ ಮಾಡೋಣ. ಅವಕ್ಕೆ ಕಾಳು, ಹಣ್ಣು ಇಡೋಣ…ಪ್ರತಿದಿನ ಗಿಡಗಳಿಗೆ ನೀರೂಣಿಸು. ಹಸಿರಾದ ಗಿಡಗಳು ಹಕ್ಕಿಗಳ ವಾಸಕ್ಕೆ ಯೋಗ್ಯ… ಎಂದು ತಲೆಸವರುತ್ತ ಪ್ರೀತಿಯಿಂದ ತಿಳಿಹೇಳುತ್ತ ಹೇಳಿ ಕೊಟ್ಟೆ.

ಹೂ..ನಮ್ಮಾ…ನೀ ಹೇಳಿದಂತೆ ಮಾಡುವೆ ಎಂದು ಪುಟಾಣಿ ಕೈಗಳಿಂದ ಶ್ರದ್ಧೆಯಿಂದ ಮಾಡುವ ಕಾರ್ಯದಲ್ಲಿ ತೊಡಗಿದ ಮಗಳ ಮುಖದಲ್ಲಿ ಸಂತಸ ಕಾಣುತ್ತಿತ್ತು. ದಿನದಿಂದ ದಿನಕ್ಕೆ ಹಕ್ಕಿಗಳ ಕಲರವದ ಸದ್ದು ಮನೆ ಹಾಗೂ ಮನಕ್ಕೆ ಹಿತವನ್ನು ತಂದಿತ್ತು. ಪರೋಕ್ಷವಾಗಿ ಪಕ್ಷಿಗಳಿಗೊಂದು ಆಶ್ರಯ ಒದಗಿಸಿದ ಖುಷಿ.ಹೊಸತರಹದ ಪಕ್ಷಿಗಳು ಅತಿಥಿಗಳಾಗಿ ಆಗಮಿಸಿದ್ದು,ಮಗಳು ಅವುಗಳೊಂದಿಗೆ ಆಡುವ ಆಟ ಕಣ್ಣಿಗೆ ಹಬ್ಬದ ಸಡಗರ ತಂದಿತ್ತು. ಅಮ್ಮಾ ಎಷ್ಟೊಂದು ಹಕ್ಕಿಗಳು ಆಶ್ಚರ್ಯದಿಂದ ಕಣ್ಣರಳಿಸುವ ಕ್ಷಣ ಲಕ್ಷಕೊಟ್ಟರೂ ಬರದು. ಇದೊಂದು ಚಿಕ್ಕ ಪ್ರಯತ್ನ ಬಾಯಿ ಮಾತಲ್ಲಿ ಹೇಳೋ ಬದಲು ಸಂರಕ್ಷಣೆಯ ಪ್ರಾಯೋಗಿಕ ಭಾವಗಳು… ಹೆಚ್ಚು ಪರಿಣಾಮ ಬೀರುತ್ತವೆ ಎಂಬುದು ಸರ್ವಕಾಲಕ್ಕೂ ಸತ್ಯವಾದುದು.

ನಾವು ದೊಡ್ಡವರು ಎಲ್ಲವನ್ನು ಬಲ್ಲವರು ಎಂಬ ಭ್ರಮೆಯಲ್ಲಿ ತೇಲುತ್ತಿರುತ್ತೆವೆ. ಕೆಲವೊಮ್ಮೆ ನಮ್ಮ ದೊಡ್ಡತನ ಯಾವಾಗ ಸಣ್ಣತನವಾಗಿ ಮಾರ್ಪಾಡಾಗುವುದೋ ಅರಿವಿಗೆ ಬರುವುದಿಲ್ಲ.ಹೇಳುವುದು ಸುಲಭ ಕಾರ್ಯರೂಪಕ್ಕೆ ತರುವುದು ಸುಲಭದ ಮಾತಲ್ಲ.ನಾವುಗಳು ಮೌಲ್ಯಗಳ ಬೀಜ ಬಿತ್ತಬೇಕೆನ್ನುವವರು ಕೇವಲ ಟಿ.ವಿ/ ಕಾರ್ಟೂನ್ ಗಳಿಂದ ಸಾಧ್ಯವಾ? ಪುಸ್ತಕ ಓದಿಯೇ ಅರ್ಥೈಸಿಕೊಳ್ಳಲು ಸಮಯ ಯಾರಿಗಿದೆ? ಇನ್ನು ಪ್ರಾಯೋಗಿಕವಾಗಿ ಸಮಯ ವ್ಯಯಿಸುವುದು ಅಸಾಧ್ಯದ ಮಾತು.ತಲೆಕೆಟ್ಟಿದೆ ಅಥವಾ ಕೆಲಸವಿಲ್ಲದ ವರು ಮಾಡೋದು..ಇನ್ನೆನೋ. ನಮಗೆ ಕುಡಿಯಲು ನೀರಿಲ್ಲ‌ ಅಂತಹುದರಲ್ಲಿ‌ ಈ ಕೆಲಸಾ ಆತ ಬಿಡ್ರಿ..ನೀವ್ ಮಾಡ್ರಿ ಎಂದು ಅಸಡ್ಡೆ ನುಡಿಗಳಾಡುವವರ ಮುಂದೆ ಮಾತಾಡಿ ಗೆಲ್ಲಲಾಗದು.

ಪಕ್ಷಿಗಳು‌ ಪುರಾತನ ಕಾಲದಿಂದ ಮಾನವ ಸ್ನೇಹಿತರಾಗಿ, ಒಳ್ಳೆಯ ಕೆಲಸಕ್ಕೆ ಪ್ರಾಣ ತ್ಯಾಗ ಮಾಡಿದ ಸಂದರ್ಭ ಸಾಕಷ್ಟಿದೆ. ಪುಟ್ಟ ಉದಾಹರಣೆಗೆ “ಜಟಾಯು” ಸೀತೆಯ ಕಾಪಾಡುವಲ್ಲಿ‌‌ ರಾವಣನೊಂದಿಗೆ ಹೋರಾಟ ಮಾಡಿ ಅಸುನಿಗೀದ ಕಥೆ ತಮಗೆಲ್ಲ ಗೊತ್ತೆ ಇದೆ..ಪಾರಿವಾಳಗಳನ್ನು ಸಂದೇಶ ರವಾನಿಸುವ ಕೆಲಸಕ್ಕೆ ಬಳಸುತ್ತಿದ್ದರೆಂದು ಪ್ರಚಲಿತ.

ಪ್ರಾಣಿ,ಪಕ್ಷಿಗಳ ಜೀವನವನ್ನು ದುಸ್ತರ ಗೊಳಿಸಿದವರು ನಾವುಗಳು. ಪರ್ಯಾಯ ವಾಗಿ ಉಳಿವಿಗೆ ಶ್ರಮಿಸಬೇಕಿದೆ. ಪಕ್ಷಿ ಪ್ರೇಮಿ ಡಾ.ಸಲಿಂ ಅಲಿ ಯವರನ್ನು ಪಕ್ಷಿ ಮನುಷ್ಯ ಎಂದೆ ಕರೆಯುವರು.ಯಾವ ಕೆಲಸವೂ ಚಿಕ್ಕದಲ್ಲ ಮಾಡುವಲ್ಲಿ ಶ್ರದ್ಧೆ ಇರಬೇಕು.ಪಕ್ಷಿಗಳ ನಂಟು ಅವುಗಳ ಕುರಿತು ಅಧ್ಯಯನ.ತಮ್ಮ ಜೀವಮಾನ ದುದ್ದಕ್ಕೂ ಅವರ ಅವಿರತ ಸೇವೆಗೆ ಸಲ್ಲಿಸಿ ಪಕ್ಷಿಗಳ ತಾಣ,ಹಾಗೂ ಅವುಗಳ ಜೀವಿತಾ ವಧಿ, ಸಂತತಿ, ವೈವಿದ್ಯತೆ ಕುರಿತಾಗಿ ನಮ್ಮೆದುರು ತೆರೆದ ಪುಸ್ತಕದಂತೆ ಬದುಕಿದ್ದು ಸಾಮಾನ್ಯವಾ?

ಪ್ರತಿ ಮನೆಯು ಸಾತ್ವಿಕ ನೆಲೆಗಟ್ಟಲ್ಲಿ ತಾನು ಬದುಕುವುದರೊಂದಿಗೆ, ಇತರರಿಗೂ ಬದುಕಲು ಅವಕಾಶ ಕಲ್ಪಿಸಬೇಕು. ಪ್ರಾಮಾಣಿಕ ಭಾವವನ್ನು ಮಗುವಲ್ಲಿ ತಮ್ಮ ನಡತೆಗಳಿಂದ ಬಿತ್ತುವ ಕೆಲಸವನ್ನು ಪ್ರತಿಯೊಬ್ಬರು ಮನೆಯಿಂದಲೇ ಪ್ರಾರಂಭಿ ಸಬೇಕು.ಸಾಲುಮರದ ತಿಮ್ಮಕ್ಕ ಕಣ್ಣೆದುರು ಬರುತ್ತಾರೆ.ನೂರಾರು ಮರಗಳು ಇಂದು ಅವಳ ಯಶೋಗಾಥೆಯ ಸಾಕ್ಷಿಗಳಾಗಿವೆ. ಮಕ್ಕಳಿಲ್ಲ ಎಂಬ ಮಕ್ಕಳ ಕೊರತೆಯನ್ನು ಗಿಡಬೆಳೆಸುವುದರಲ್ಲಿ ಸಾರ್ಥಕತೆ ಕಂಡವಳು.ನೂರಾರು ಜೀವಿಗೆ ಆಶ್ರಯ ನೀಡುವ ಕೇಂದ್ರಗಳಾಗಿ ಪರಿವರ್ತಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಲು ಶ್ರಮವಹಿಸಿದವಳು.

ನೆಟ್ಟ ಗಿಡ ಬೆಳೆದು ಫಲಕೊಟ್ಟಾಗಲೇ ಜೀವನ ಧನ್ಯವಾಗುವುದು. ಅರ್ಥೈಸಿ ಕೊಂಡರೆ ತಾನೆ ಬದುಕು ಮಾನ್ಯವಾಗು ವುದು.ನಮ್ಮ ಸುತ್ತಮುತ್ತ ಲಿನ ಉತ್ತಮ ಅಂಶಗಳನ್ನು ಮನದಟ್ಟು ಮಾಡುವು ದರೊಂದಿಗೆ,ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಲು ಶ್ರಮವಹಿಸಬೇಕು. ಕಷ್ಟವೇನಲ್ಲ, ಮನಸ್ಸಿದ್ದರೆ ಮಾರ್ಗ. ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ನಮ್ಮಗಳ ಪಾತ್ರ ಬಲು ದೊಡ್ಡದು.

                🔆🔆🔆

ಶ್ರೀಮತಿ.ಶಿವಲೀಲಾ ಹುಣಸಗಿ ಶಿಕ್ಷಕಿ, ಯಲ್ಲಾಪೂರ