ಅಗ್ನಿ ಶ್ರೀಧರ ಸಂದರ್ಶನ ಒಂದರಲ್ಲಿ ಕೆಂಪೇಗೌಡ ಮೂಲತಃ ‌ಮಾಗಡಿ ಯವರಾದರೂ, ಬೆಂಗಳೂರು ನಗರ ನಿರ್ಮಾಣ ಶಿಲ್ಪಿ ಎಂದು ವಿವರಣೆ ನೀಡುತ್ತಿದ್ದರು.

ಆದರೆ ಬೆಂಗಳೂರು ನಗರ ನಿರ್ಮಾಣ ಮಾಡಿದ ಕೆಂಪೇಗೌಡ ಮಾಗಡಿಯವರೇ? ಕರ್ನಾಟಕ ಸರ್ಕಾರ ಜೂನ್ ೨೭ ರಂದು ಆಚರಿಸುವ ಕೆಂಪೇಗೌಡ ಜಯಂತಿ ಯಾವ ಕೆಂಪೇಗೌಡರದ್ದು? ಮಾಗಡಿ ಕೆಂಪೇಗೌಡರು ಯಾರು? ವಾಟ್ಸಪ್ ಹಾಗೂ ಫೇಸ್ಬುಕ್ ನಲ್ಲಿ ಕೆಂಪೇಗೌಡ ಜಯಂತಿಯ ಶುಭಾಶಯಗಳು ಎಂದು ಪೋಸ್ಟ್ ಮಾಡುತ್ತಿರುವ ನಮಗೆ ಕೆಂಪೇಗೌಡ ಯಾರೆಂದು ಗೊತ್ತೇ? ಹೀಗೆ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ. ಕೆಂಪೇಗೌಡರ ವಿಷಯ ಹೀಗೆ ಗೊಂದಲ ವಾಗಲು ಮೂಲಕಾರಣಕೆಂಪನಂಜೇಗೌಡರ ಹರಕೆ!

ಕ್ರಿ.ಶ ೧೩-೧೪ನೇ ಶತಮಾನದಲ್ಲಿ ಯಲಹಂಕದ ನಾಡನ್ನು ಆಳುತ್ತಿದ್ದವರು ಕೆಂಪನಂಜೇಗೌಡರು. ಇವರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ಇವರಿಗೆ ಬಹಳ ಕಾಲ ಸಂತಾನವಿಲ್ಲವಾಗಿ ತಮ್ಮ ಕುಲದೇವರಾದ ಕೆಂಪಮ್ಮ ಮತ್ತು ಭೈರ ದೇವರಲ್ಲಿ ತಮಗೆ ಮಕ್ಕಳಾದರೆ ತಮ್ಮ ವಂಶದ ಮುಂದಿನ ಪೀಳಿಗೆಗೆ ದೇವರ ಹೆಸರೇ ಇಡುವುದಾಗಿ ಹರಕೆ ಹೊತ್ತರು. ಆ ಹರಕೆ ಫಲವಾಗಿ ಹುಟ್ಟಿದವರೇ ಹಿರಿಯ ಕೆಂಪೇಗೌಡ(ಕೆಂಪೇಗೌಡ-೧). ಇವರು ತಮ್ಮ ತಂದೆಯ ನಂತರ ಯಲಹಂಕ ನಾಡಿನ ಆಡಳಿತವನ್ನು ಬಹಳ ಸಮರ್ಥ ವಾಗಿ ಮಾಡಿದ್ದರಿಂದ ಇವರಿಗೆ ನಾಡಪ್ರಭು ಎಂಬ ಬಿರುದು ಬಂದಿತು. ನಂತರ ಈ ವಂಶವು ನಾಡಪ್ರಭು ವಂಶವೆಂದೇ ಪ್ರಸಿದ್ಧಿ ಪಡೆಯಿತು. ಹಿರಿಯ ಕೆಂಪೇಗೌಡರು ಕೃಷ್ಣದೇವರಾಯ ಹಾಗು ಅಚ್ಯುತರಾಯರ ಆದೇಶದಂತೆ ಯಲಹಂಕದ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ ಮಾಡಿದರು. ಈ ಸಂದರ್ಭದಲ್ಲಿ ನಿರ್ಮಾಣವಾದ ಹೊಸನಗರವೇ ಬೆಂಗಳೂರು. ಇಲ್ಲಿ ೫೪ ಪೇಟೆಗಳನ್ನು ನಿರ್ಮಿಸಿ, ಬೆಂಗಳೂರನ್ನು ವ್ಯಾಪಾರ ಕೇಂದ್ರವನ್ನಾಗಿ ಮಾಡಿದರು.
ಹಿರಿಯ ಕೆಂಪೇಗೌಡ ಹಾಗೂ ಚೆನ್ನಮ್ಮರ ಮಗ ಎರಡನೇ ಕೆಂಪೇಗೌಡ. (ಕೆಂಪೇಗೌಡ -೨). ಇವರು ನಾವಿಂದು ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ಕಾಣಬಹುದಾದ ಕಾವಲು ಗೋಪುರಗಳನ್ನು ನಿರ್ಮಿಸಿದವರು. ತಮ್ಮ ತಂದೆ ಹಿರಿಯ ಕೆಂಪೇಗೌಡರಂತೆ ದಕ್ಷ ಆಡಳಿತಗಾರನಾದ ಎರಡನೇ ಕೆಂಪೇಗೌಡ, ಬೆಂಗಳೂರಿನಿಂದ ಮಾಗಡಿವರಿಗೂ ತಮ್ಮ ಆಡಳಿತವನ್ನು ವಿಸ್ತರಿಸಿ, ಮಾಗಡಿಯ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿ ಮಾಡಿದರು. ಈ ಕಾರಣದಿಂದ ಎರಡನೇಕೆಂಪೇಗೌಡರನ್ನು ಮಾಗಡಿ ಕೆಂಪೇಗೌಡ ಎಂದು ಕರೆಯುತ್ತಾರೆ. ಈ ನಾಡಪ್ರಭುಗಳ ವಂಶಕ್ಕೆ ವಿಜಯನಗರದ ನಂಟಿತ್ತು ಎಂದು ಸಾಬೀತುಪಡಿಸುವಂತೆ, ಮಾಗಡಿಯ ಪ್ರಸನ್ನ ಸೋಮೇಶ್ವರ ದೇವಾಲಯದಲ್ಲಿ, ಹಂಪಿಯಲ್ಲಿ ಕಾಣುವ ಸಂಗೀತ ಕಂಬ ಗಳಂತೆ ಕಂಚಿನ ಶಬ್ದ ಕೇಳಿ ಬರುವ ಕಂಬವಿರುವುದು ಅಚ್ಚರಿಗಳಲ್ಲೊಂದು. ಇಲ್ಲಿನ ಶಿವಲಿಂಗವು ಕಾಶಿಯಿಂದ ತಂದ ಲಿಂಗವಾಗಿದ್ದು, ದೇವಾಲಯದ ಪ್ರಾಕಾರ ದಲ್ಲಿ ಶ್ರೀ ಸತ್ಯನಾರಾಯಣ ದೇವರ ಗುಡಿ ಇರುವುದು ವಿಶೇಷ.

ಮಾಗಡಿ ಕೆಂಪೇಗೌಡರ ಮಗ ಕಿರಿಯ ಕೆಂಪೇಗೌಡ( ಕೆಂಪೇಗೌಡ-೩). ಇವರು ಮಾಗಡಿಯಿಂದ ಕುಣಿಗಲ್ ತನಕ ತಮ್ಮ ಆಡಳಿತವನ್ನು ವಿಸ್ತರಿಸಿದರು. ಆದ್ದರಿಂದ ಇವರನ್ನು ಕುಣಿಗಲ್ ಕೆಂಪೇಗೌಡ ಎಂದು ಕರೆಯುತ್ತಾರೆ.

ಹೀಗೆ ನಾಡಪ್ರಭು ವಂಶವೆಲ್ಲಾ ಕೆಂಪೇಗೌಡ ಎಂದೇ ಹೆಸರಿರುವುದರಿಂದ, ಕೆಂಪೇಗೌಡ ಜಯಂತಿ ಎಂದ ತಕ್ಷಣ ಯಾವ ಕೆಂಪೇಗೌಡರದ್ದು ಎಂದು ಗೊಂದಲವಾಗು ವುದು ಸತ್ಯ. ಕರ್ನಾಟಕ ಸರ್ಕಾರ ಆಚರಿಸುತ್ತಿರುವ ಕೆಂಪೇಗೌಡ ಜಯಂತಿ, ನಾಡಪ್ರಭು ಹಿರಿಯ ಕೆಂಪೇಗೌಡರ ಜಯಂತಿ. ಈ ಗೊಂದಲ ಮುಂದೆ ಬಾರದಿರಲಿ ಎಂದು ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

           🔆🔆🔆

✍️ ಶ್ರೀರಕ್ಷಾ ಶಂಕರ್, ಉಜಿರೆ