ಅನೇಕ ಆಶ್ಚರ್ಯಗಳನ್ನು ಸೌಂದರ್ಯ ಗಳನ್ನು ತನ್ನಲ್ಲಿಟ್ಟು ಕೊಂಡು ಪೋಷಿಸುತ್ತಿರುವ ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಇರುವ ಅದೇಷ್ಟೇ ಅದ್ಬುತ ಗಳಲ್ಲಿ ಯಾಣವು ಒಂದು.ಅಂತಹ ವಿಶೇಷ ತಾಣ ವನ್ನು ನೋಡುವುದಕ್ಕಾಗಿಯೇ ನನ್ನ ಸ್ನೇಹಿತರೋಂದಿಗೆ ಅಲ್ಲಿಗೆ ಭೇಟಿ ನೀಡಿದೆವು.ಬೃಹದಾಕಾರದ ಕಲ್ಲು ಇಲ್ಲಿಯ ವಿಶೇಷ.ಮೊನಚಾಗಿರುವ ದೊಡ್ಡ –ದೊಡ್ಡ ಶಿಲೆಯೇ ಯಾಣದ ಕೇಂದ್ರ ಬಿಂದುವಾಗಿದೆ.
ಶಿರಸಿಯಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಡಿಸೆಂಬರ್ ತಿಂಗಳಿನ ಚಳಿಯಲ್ಲಿ ಬೆಳಿಗ್ಗೆ ಬೇಗನೆ ಹೊರಟಿದ್ದೆವು. ಯಾಣಕ್ಕೆ ಹೋಗುವಾಗ ದಾರಿಯೂ ಕೂಡ ಅಷ್ಷೆ ಸುಂದರವಾಗಿತ್ತು.ಸುತ್ತಲು ದಟ್ಟವಾದ ಕಾಡು.ಚಳಿಗಾಲವಾಗಿದ್ದರಿಂದ ಮುಂಜಾನೆಯ ಮಂಜು ಮುಸುಕಿದ ವಾತಾವರಣ. ಎಲ್ಲೊ ಒಂದೊಂದು ಕಡೆ ಇಣುಕುವ ಸೂರ್ಯನ ಕಿರಣಗಳು ಭೂಮಿಯ ಸ್ಪರ್ಶವನ್ನು ಮಾಡುತ್ತಿದ್ದ ಹಾಗೆ, ಮರಗಿಡಗಳೆಲ್ಲ ಬಾಗಿ – ಬಾಗಿ ಬೆಳಗಿನ ಶುಭ ಸಂದೇಶ ನೀಡುತ್ತಿದ್ದವೊ ಎನ್ನುವಂತಿತ್ತು.ಶಿರಸಿಯಿಂದ ಒಂದು ಗಂಟೆಗಳ ಕಾಲ ಪ್ರಮಾಣದಲ್ಲಿ ಸಮಯ ಹೋದದ್ದೆ ತಿಳಿಯಲಿಲ್ಲ. ಯಾಣದ ಸಮೀಪದ ವರೆಗೂ ರಸ್ತೆಯ ಸೌಲಭ್ಯ ವಿರುವುದರಿಂದ ಕೇವಲ ಒಂದು ಕಿ.ಮೀ ನಡೆದರೆ ಸಾಕು.
ಯಾಣದ ಆ ಅದ್ಬುತ ಶಿಲೆ ನಮ್ಮ ಕಣ್ಣಿಗೆ ಕಾಣುತ್ತಿದಂತೆ ನಾವೆಲ್ಲ ಮೂಕ ವಿಸ್ಮಿತ ರಾದೆವು.ಪ್ರಕೃತಿಯ ವಿಸ್ಮಯ ಕಂಡು ನನ್ನ ಸ್ನೇಹಿತರಿಗೂ ಮಾತೇ ಹೊರಡಲಿಲ್ಲ.ಆ ಶಿಲೆಯ ಬುಡದಲ್ಲಿ ಒಂದು ಶಿವಾಲಯ ವಿದೆ.ಮೊದಲು ಶಿವನ ದರ್ಶನ ಮಾಡಿ ನಂತರ ಬೃಹತ್ ಶಿಲೆಯನ್ನು ನೋಡಲು ಹೋದೆವು.ಈ ಶಿಲೆಗಳ ನಡುವೆ ಗುಹೆಗಳಿ ದ್ದವು.ಒಳಗೆ ಸಂಚಾರಕ್ಕೆ ದಾರಿ ಕೂಡ ಇತ್ತು.ಎಂಥ ಅದ್ಭುತ ಸ್ಥಳ. ಹೋರಗಡೆ ಎಷ್ಟೇ ಬಿಸಿಲಿದ್ದರೂ ಒಳಗೆ ಮಾತ್ರ ನಡುಕ ತರುವ ಚಳಿ. ಅಲ್ಲಲ್ಲಿ ಬಾವಲಿಗಳು, ಮೇಲಿಂದ ಮೇಲೆ ಇಣುಕುವ ಬಿಸಿಲು…ಅಬ್ಬಾ! ಗುಹೆಯೊಳಗೆ ಪ್ರವೇಶಿಸಿದ ನಮಗೆ ರೋಮಾಂಚನವಾದದ್ದು ಸತ್ಯ.ನಮ್ಮ ಧ್ವನಿ ಪ್ರತಿಧ್ವನಿಯಾಗಿ ನಮಗೇ ಕೇಳುತ್ತಿದ್ದವು. ಹೀಗಾಗಿ ನಮ್ಮ ಹೆಸರನ್ನು ನಾವೇ ಕರೆದಂತಾಗುವುದು ಬಹಳ ಸಂತೋಷ ನೀಡುತ್ತಿತ್ತು.
ಈ ಹಿರಿದಾದ ಬಂಡೆಗಳು 120 ಮೀಟರ್ ಎತ್ತರವಾಗಿದ್ದು ಸುಮಾರು ಅಷ್ಟೇ ಅಗಲವಾಗಿದೆ ಎಂದು ಹೇಳುವರು.ಈ ಬಂಡೆಯ ಮಧ್ಯದಲ್ಲಿಯೆ ಜಲ ಸಂಚಯನವೂ ಇದೆ.ಇಂತಹ ಕಲ್ಲು ಬಂಡೆಗಳಿಂದ ನೀರು ಒಸರುವುದು ನಿಜವಾಗಿಯೂ ಅದ್ಬುತವಲ್ಲವೆ? ಈ ಬಂಡೆಯ ಬುಡದಲ್ಲಿರುವ ಭೈರವೇಶ್ವರ ಲಿಂಗವು ತಾನಾಗಿಯೇ ಉದ್ಭವವಾಗಿದೆ ಎಂದು ಪ್ರತೀತಿಯೂ ಇದೆ.ಹಾಗೆಯೇ ಶಿಖರದ ಮಧ್ಯದಲ್ಲಿ ಒಸರುವ ನೀರು ವರ್ಷವಿಡೀ ಭೈರವೇಶ್ವರ ಲಿಂಗದ ಮೇಲೆ ಬಿದ್ದು ಶಿವನಿಗೆ ಅಭಿಶೇಕ ಮಾಡುತ್ತದೆ. ಶಿವರಾತ್ರಿಯ ದಿನ ಇಲ್ಲಿ ವಿಶೇಷ ಪೂಜೆಗಳು ಹಾಗೂ ವಿಶೇಷ ಕಾರ್ಯಕ್ರಮ ನಡೆಯು ತ್ತದೆ.
ಶಿವನಿಂದ ವರಪಡೆದ ಭಸ್ಮಾಸುರ ಶಿವನನ್ನೇ ಭಸ್ಮ ಮಾಡಲು ಹೊರಟಾಗ, ಶಿವ ಈ ಪ್ರದೇಶಕ್ಕೆ ಒಂದು ಶಿಲೆಯೊಳಗೆ ಅಡಗಿ ಕುಳಿತಿದ್ದನಂತೆ.ಆ ನಂತರ ವಿಷ್ಣು ಮೋಹಿನಿಯ ವೇಷಧರಿಸಿ ಭಸ್ಮಾಸುರನನ್ನು ಹತ್ಯೆ ಮಾಡಿದ್ದಾನೆ ಎಂಬ ನಂಬಿಕೆಯೂ ಇದೆ.ಇಲ್ಲಿನ ಮಣ್ಣು ಕೂಡಾ ವಿಶಿಷ್ಟ ಕಪ್ಪು ಬಣ್ಣವನ್ನು ಹೊಂದಿದೆ.ಯಾಣದ ಎದುರುಗಡೆ ನಿಂತರೆ ಮತ್ತೊಂದು ಶಿಖರ ದೂರದಲ್ಲಿ ಕಾಣಿತ್ತೇವೆ ಅದನ್ನು ಮೋಹಿನಿ ಶಿಖರ ವೆಂದು ಕರೆಯುವರು.ಇಂಥ ಇನ್ನೂ ಹಲವು ಕಿರಿಯ ಬಂಡೆಗಳನ್ನು ಕಾಣಬಹುದು.
ಆಶ್ಚರ್ಯವೆನೆಂದರೆ ಇಲ್ಲಿ ಅನೇಕ ಜೇನು ಗೂಡುಗಳಿವೆ.ಹಿರಿಬಂಡೆಯಲ್ಲಿರುವ ಶಿವಾಲಯದ ಸುತ್ತ ಮುತ್ತ ಜೇನುಗಳು ಗೂಡು ಕಟ್ಟಿವೆ.ಇವು ಯಾವತ್ತೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ತೊಂದರೆ ಕೊಟ್ಟಿಲ್ಲವಂತೆ.
🔆🔆🔆
✍️ ಅಂಕಿತಾ ಭಟ್
ಪತ್ರಿಕೋದ್ಯಮ ವಿಭಾಗ ಎಸ್.ಡಿ.ಎಮ್ ಕಾಲೇಜು, ಉಜಿರೆ