ಅದು ಸುಮಾರು ೫ ದಿನಗಳ ಪಯಣ.
ಕಾಡಿನ ಮಧ್ಯೆ ಸಾಗುವ ದಾರಿಯುದ್ದಕ್ಕೂ, ಸೈಕಲ್ಲಿನ ಅನುಭವ ಪಡೆಯುತ್ತಾ ಹೋಗುವ ಅದ್ಭುತಯಾನ.
ಧಾರವಾಡದಿಂದ ಕಾಸರಗೋಡಿಗೆ ನಮ್ಮ ೩ ಜನರ ಜೀವನದಲ್ಲಿ ಮರೆಯಲಾಗದ ಕಥನ.
ಮೊದಲ ದಿನ, ನಮ್ಮ ಚಿತ್ತ ಶಿರಸಿಯತ್ತ. ಬಿರು ಬೇಸಿಗೆಯ ಅನುಭವ ಮೊದಲೇ ಇದ್ದ ನಮಗೆ, ರಸ್ತೆಯ ಧೂಳು ಪರಿಣಾಮ ಬೀರಲಿಲ್ಲ.
ಮುಂಜಾವು ೪ಕ್ಕೆ ಮನೆಯಿಂದ ಹೊರಟು, ಸುಮಾರು ೧೦ ಗಂಟೆಗೆ ಕಲಘಟಗಿಯಲ್ಲಿ ಟಿಫನ್ ಮಾಡಲು ಕೊಂಚ ನಿಂತೆವು. ಬೇಸಿಗೆಯ ಕಾವು ಆವಾಗಲೇ ನಮ್ಮ ತಲೆಯನ್ನೇರಿ ಯಾನವನ್ನು ಹಿಂತಿರುಗಿ ನೋಡುವಂತೆ ಮಾಡಿತ್ತು. ಗುಟುಕು ನೀರನ್ನು ಕುಡಿಯುತ್ತಾ, ಕಿವಿಯಲ್ಲಿ ಹಾಡೊಂದನ್ನು ಕೇಳುತ್ತಾ ಹೊರಟಿದ್ದೆವು.
ಸೂರ್ಯ ಆವಾಗಲೇ ನಮ್ಮೆಲ್ಲ ಶಕ್ತಿಯನ್ನು ಹೀರತೊಡಗಿದ್ದ. ಅವನ ಶಾಖ ಮಧ್ಯಾಹ್ನದ ಹೊತ್ತಿಗೆ ನೂರ್ಮಡಿಯಾಗಿ, ಶಿರಸಿ ತಲುಪುವ ನಮ್ಮ ಆಸೆಗಳನ್ನೆಲ್ಲಾ ಬರಿದು ಮಾಡತೊಡಗಿದ್ದ. ಹೊಟ್ಟೆ ಚುರುಚುರು ಅನ್ನುವ ಹೊತ್ತಿಗೆ, ಯಲ್ಲಾಪುರ ದಾಟಿ ಒಂದು ಸೇತುವೆಯ ಪಕ್ಕ ಊಟಕ್ಕೆಂದು ಕುಳಿತೆವು.
ಅಮ್ಮನ ಅಡುಗೆ ಆಗಲೇ ಕೈಬೀಸಿ ಕರೆಯತೊಡಗಿ, ನೆಲದ ಮೇಲೆಯೇ ಕುಳಿತು, ಮೃಷ್ಠಾನ್ನವನ್ನು ಸವಿದು ನೀರು ಕುಡಿದಾಗ ಸರಿಸುಮಾರು ಅಪರಾಹ್ನ ೨.೩೦.ಹಾಗೆಯೇ ಮೂರೂ ಸೈಕಲ್ಲುಗಳನ್ನು ಅಲ್ಲಿಯೇ ಇದ್ದ ಹುಣಸೆ ಮರಕ್ಕೆ ಕಟ್ಟಿ ಹಾಕಿ ಎಲೆಗಳ ರಾಶಿಯನ್ನೇ ಚಾಪೆಯನ್ನಾಗಿರಿಸಿ ನಿದ್ದೆಗೆ ಜಾರಿದೆವು. ಪ್ರಯಾಣದ ಆಯಾಸ ವನ್ನೆಲ್ಲ ಆ ಸವಿನಿದ್ರೆಯು ನಮ್ಮಿಂದ ಕಸಿದುಕೊಂಡಿತು. ರವಿಯು ಮೂಡಣ ದಿಂದ ಪಡುವಣದತ್ತ ಹೊರಡಲು, ನನ್ನ ಗೆಳೆಯ ವೈಶಾಖನಿಗೆ ಥಟ್ಟನೆ ಎಚ್ಚರವಾಗಿ, ಮುಂದಿನ ದಾರಿಯ ಅರಿವೇ ಇಲ್ಲದಿರುವ ನಮ್ಮಿಬ್ಬರನ್ನೂ ಬಡಿದೆಬ್ಬಿಸಿದ.
ನಾನಾಗಲೇ ಕನಸಿನ ಲೋಕದಲ್ಲಿ, ವಿರಮಿಸುತ್ತಾ, ಅಪ್ಸರೆಯರ ಒಡನಾಟ ದಲ್ಲಿ, ಎದ್ದೇಳುವ ಯೋಚನೆಯನ್ನೇ ಕೈಬಿಟ್ಟ ಹಾಗಾಗಿತ್ತು. ಈ ಅದ್ಭುತಯಾನದಲ್ಲಿ ನಮ್ಮ ಪ್ರಯಾಣಕ್ಕೆ ಇನ್ನೊಬ್ಬ ಯಾತ್ರಿ ಜತೆಯಾ ಗಿದ್ದ. ಅವನು ರೋಹಿತ್.ನಮ್ಮಿಬ್ಬರಿಗಿಂತ ಒಂದೇ ವರ್ಷ ಚಿಕ್ಕವನು. ಅವನೂ ಸಹ ನಿದ್ರಾದೇವಿಯನ್ನು ಆಲಂಗಿಸಿ ಒರಗಿ ಕೊಂಡಿದ್ದ. ಎಲ್ಲರೂ ಎದ್ದು ಸೈಕಲ್ಲಿಗೆ ನಮ್ಮ ಗಂಟುಮೂಟೆಗಳನ್ನು ಕಟ್ಟಿ ಹೊರಡುವ ಹೊತ್ತಿಗೆ ಆಗಸವು ತಿಳಿ ನೀಲಿ ಬಣ್ಣದಿಂದ ಹಳದಿಗೆ ತಿರುಗತೊಡಗಿತ್ತು.ಯಲ್ಲಾಪುರ ಮಾತ್ತು ಶಿರಸಿಯ ಹೆದ್ದಾರಿಯ ಮಧ್ಯ ಒಂದು ಕಡಿದಾದ ಸೇತುವೆ ಇದೆ. ಇದಕ್ಕೆ ಬೇಡ್ತಿ ಸೇತುವೆ ಎಂದು ಹೆಸರು.
ನಾವು ನಮ್ಮೆಲ್ಲ ಸರಂಜಾಮುಗಳನ್ನು ಕಟ್ಟಿಕೊಂಡು ಸೇತುವೆಯತ್ತ ಪ್ರಯಾಣ ಬೆಳೆಸಿದೆವು.
ಸೇತುವೆಯತ್ತ ಹೊರಟಾಗ ರಸ್ತೆಯು ಹಾವಿನ ಹಾಗೆ ಸಾಗಿ ಕೊನೆಗೆ ಇಳಿಜಾರಿನಲ್ಲಿ ಸೇತುವೆಯನ್ನು ಕೂಡುತ್ತದೆ. ನಮಗದರ ಅರಿವಿಲ್ಲದೇ, ಸುಯ್ಯನೇ ಹೊರಟಾಗ ಇಳಿಜಾರು ತುಂಬಾ ಕಡಿದಾಗಿ ಇಳಿಯತೊ ಡಗಿತ್ತು. ಹುಮ್ಮಸ್ಸಿನಿಂದ ನಾವು ಬ್ರೇಕ್ ಹಚ್ಚದೇ ಹೊರಟಿದ್ದು ಮೊದಲ ತಪ್ಪು. ಸೈಕಲ್ಲನ್ನು ಪ್ರತಿಯೊಂದು ತಿರುವಿನಲ್ಲಿ ಬೈಕಿನ ಹಾಗೆ ಒರಗಿಸಿದ್ದು ಇನ್ನೊಂದು ದೊಡ್ಡ ತಪ್ಪು.ಶರವೇಗದಲ್ಲಿ ಬಂದ ನಮಗೆ, ಸೇತುವೆಯ ಪಕ್ಕ ಇದ್ದ ರಸ್ತೆತಡೆಗಳು ಕಾಣದೆ, ಮುಗ್ಗರಿಸಿಕೊಂಡು ಬಿದ್ದು ಹೊಟ್ಟೆಗೆ ಹುಣ್ಣಾಗುವಂತೆ ನಕ್ಕು, ಚೆಲ್ಲಾಪಿಲ್ಲಿಯಾಗಿದ್ದ ಎಲ್ಲ ವಸ್ತುಗಳನ್ನೆಲ್ಲ ಆರಿಸಿಕೊಂಡು ಎದ್ದು ಮತ್ತೆ ನಮ್ಮ ಪಯಣವನ್ನು ಮುಂದುವರಿಸಿದೆವು.
ಸೇತುವೆಯನ್ನು ದಾಟಿ, ಏರಿಯನ್ನೇರಿ ಮೇಲೆ ಹೊರಟಾಗ, ಕೆಂಬಣ್ಣದ ಸೂರ್ಯ ನೀಲಾಕಾಶದಲ್ಲಿ ತನ್ನ ಕಂಪನ್ನು ರಾಚತೊಡ ಗಿದ್ದ. ಹೊಂಗಿರಣಗಳು ಆಗಾಗಲೇ ಭೂಮಿಯ ಮೇಲ್ಮೈಯನ್ನು ತಲುಪಿ ನಮ್ಮ ಆಯಾಸವನ್ನೆಲ್ಲ ನೀಗಿಸಿ ಪ್ರಯಾಣವನ್ನು ಸೊಗಸಾಗಿಸಿದ್ದ. ತಂಗಾಳಿಯು ಹಾಗೆಯೇ ಮೈಯ ಉಷ್ಣತೆಯನ್ನು ಇಳಿಸಿ ಸೊಂಪಾದ ವಾತಾವರಣವನ್ನು ನಿರ್ಮಿಸಿ ಕೊಟ್ಟಿತ್ತು. ದೂರ ದೂರದಿ ರಸ್ತೆಯ ಮೇಲೆ ಮೈಲಿಗಲ್ಲು ಗಳ ಮೇಲೆ ಶಿರಸಿಗೆ ೧೦ ಕಿ.ಮೀ ಎಂದು ಬರೆದಿತ್ತು. ಆ ಮೈಲಿಗಲ್ಲು ನಮ್ಮಿಂದ ಸುಮಾರು ೧೦ ಗಜ ದೂರದಲ್ಲಿತ್ತು. ಮೈಲಿಗಲ್ಲಿನಿಂದ ಶಿರಸಿಯ ಹೆದ್ದಾರಿ ತಲುಪಿದಾಗ ರಾತ್ರಿ ೯.ಅಂದು ಶಿರಸಿಯಲ್ಲಿ ನಮ್ಮ ಪರಿಚಯಸ್ಥರ ಮಾನೆಯಲ್ಲಿ ಮಲಗಿ ನಿದ್ದೆ ಹೋದೆವು. ಬೆಳಗ್ಗೆ ಎದ್ದು ನಮ್ಮ ಮುಂದಿನ ಪ್ರಯಾಣಕ್ಕೆ ಸೈಕಲ್ಲನ್ನು ಸಿದ್ಧಪಡಿಸಿ ೬ಕ್ಕೆ ಮನೆ ಬಿಟ್ಟು ಯಾನವನ್ನು ಮುಂದುವರೆಸಿದೆವು.
🔆🔆🔆
✍️ ವಿನಯ ಕುಮಾರ ಪಾಟೀಲ
ಪತ್ರರಿಕೋದ್ಯಮ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಜಿರೆ
Nice vijay … Journey to sirsi
LikeLiked by 1 person