ಹಬ್ಬ ಬಂತು ಹೋಳಿ ಹಬ್ಬ ಬಂತು
ಎಲ್ಲಾರು ನಲಿಯುವ ಹಬ್ಬ ಬಂತು
ಎಲ್ಲರು ಕೂಡಿ ರಂಗನು ಎರಚುತ
ನೃತ್ಯವ ಮಾಡುತ, ಸಂತಸ ಹಂಚುತ
ತಮಟೆಯ ಸದ್ದಿಗೆ ಹೆಜ್ಜೆಯ ಹಾಕುತ
ಕಾಮನ ಮಾದರಿ ಶವದ ಮೆರವಣಿಗೆ
ಮಾಡುತ ಊರೆಲ್ಲ ಸುತ್ತುತ ಕಾಮನ ಸತಿ,
ರತಿ ವೇಷಧಾರಿಯು ಅಳುವಂತೆ ನಟಿಸುತ
ನಡೆವಾಗ ಹಬ್ಬದ ಸಡಗರ ಜೋರಾಯ್ತು

ಕಾಮನ ಹಬ್ಬದಲಿ ಪಡ್ಡೆ ಯುವಕರ
ಗುಂಪು ” ಕಾಮಣ್ಣ ಮಕ್ಕಳೋ ಕಳ್ಳ ಮಳ್ಳ
ಮಕ್ಕಳೊ , ಏನನ್ನ ಕದ್ದರೊ, ಬೆರಣಿ
ಸೌದೆ ಕದ್ದರೊ, ಯಾತಕ್ಕಾಗಿ ಕದ್ದರೊ,
ಕಾಮಣ್ಣನ ಸುಡಲಿಕ್ಕಾಗಿ ಕದ್ದರೊ”
ಎನ್ನುವ ಹಾಡನ್ನು ಹಾಡಿ ನೃತ್ಯವ ಮಾಡಿ
ಹಣವನ್ನು ಬೇಡಿ ಕೊಡದವ್ರ ಮನೆಗೆ
ಮೆಣಸಿನ ಪುಡಿಯ ಘಾಟವನಿಟ್ಟು
ಕಾಡಿದ್ದು ನೆನೆದು ನಗು ಬಂತು

ಶಿವೆಯ ನೆನಪಲಿ ಈಶನು ತಪದಲಿ
ಕಾಮನು ಹೂಡಿದ ಹೂ ಬಾಣ,
ಶಿವನು ತೆರೆದನು ಉರಿಗಣ್ಣ
ಕ್ಷಣದಲೆ ದಹನವಾದನು ಕಾಮಣ್ಣ
ರತಿಯು ಹಿಡದಳು ಶಿವ ಪಾದವನ
ಬೇಡಿದಳು ಶಾಶ್ವತ ಮುತ್ತೈದೆ ತನ
ತಥಾಸ್ತು ಎಂದನು ಮುಕ್ಕಣ್ಣ
ಶಿವ ಶಿವೆಯರ ಪುತ್ರನ ಜನನವಾಯ್ತಣ್ಣ
ತಾರಕ ಹೊಂದಿದ ಅವಸಾನವನ.

ಫಾಲ್ಗುಣ ಮಾಸದ ಪೌರ್ಣಿಮೆಯಂದು
ಹಿರಣ್ಯಕಶ್ಯಪು, ಸೋದರಿ ಹೋಲಿಕಾಗ್ಹೇಳಿದ
ಪ್ರಹ್ಲಾದನ ಸುಡಲು, ಮಾಡಿದ ಪಾಪಕೆ
ತಾನೇ ಸುಟ್ಟಳು ಹೋಲಿಕ, ಗುಲಾಲು
ರಂಗನು ವಿಷ್ಣು ಪಾದಕ್ಕೆ ಅರ್ಪಿಸಿ
ಮನೆಯಲಿ ಹಜ್ಜೆಯ ಮೂಡಿಸಿ ಬಣ್ಣವ
ಎರಚುವ ಹೋಳಿಯ ಪದ್ದತಿ ಶುರುವಾಯ್ತು ಹೋಲಿಕಾ ದಹನವೆಂದಾಯ್ತು
ಪ್ರಪಂಚಕ್ಕೆಲ್ಲಾ ಹರಡಾಯ್ತು

              🔆🔆🔆

✍️ ಪವಿ (ಪ ವಿಶ್ವನಾಥ್) ಡಾವಣಗೆರೆ