ಹಮ್ಮುಗಾರನ ಮನದ ಕೊಳಕು ಕಂದಕ ತುಂಬಿ ಹೊಳೆಯುವ ಬಣ್ಣದ ಹೊನ್ನಾಗರ ಮಾಡಲಾದೀತೇ…? ಹೋಳಿ ಹಾಸ್ಯಗಾರನ ಮನವ ಕೆಣಕಿ ಹಾಹಾಕಾರ ಸೃಷ್ಟಿಸುವ ಹುಂಬರಿಗೆ ಬಣ್ಣಬಣ್ಣದ ಹೂ ಸರ ಹಾಕಲಾದೀತೇ…? ಹೋಳಿ

ನರಿಯ ಬುದ್ಧಿಯ ನಾಲಿಗೆ ಹಾಲಾಹಲ ಹರಿಸಲು ಹತ್ತುಗೆ ಹೆಚ್ಚಿಸಲು ನಿನ್ನಿಂದ ಸಾಧ್ಯವಾದೀತೇ…? ಹೋಳಿ ಮತ್ತೊಬ್ಬರ ಹೀಯಾಳಿಸದಿರೆ ಹೊಟ್ಟೆ ತುಂಬುವುದಿಲ್ಲವಲ್ಲ ಅಂಥವರ ಹತಾಶೆ ನಿನಗೆ ಹಣಿಯಲಾದೀತೇ…? ಹೋಳಿ

ಸುತ್ತಮುತ್ತಲ ಸುದ್ದಿಯ ಕಲೆಹಾಕಲು ಕದ್ದು ಸುತ್ತಾಡುವ ಮನಕೆ ಮದ್ದು ನಿನ್ನಿಂದ ಅರಿಯಲಾದೀತೇ…? ಹೋಳಿ ಕಾಮುಕರ ಕಾಮ ಸುಡುವ ಹಬ್ಬ ಲಜ್ಜೆಗೇಡಿಗಳ ಹಪಾಹಪಿಯನು ನಿನಗೆ ಕಟ್ಟಿಹಾಕಲಾದೀತೇ…? ಹೋಳಿ

ಮೈಮನದ ತುಂಬ ತುಂಬಿಕೊಂಡಿರುವ ದ್ವೇಷಾಸೂಯೆ ಮತ್ಸರವ ನಿನ್ನಿಂದ ಮರೆಸಲಾದೀತೇ…? ಹೋಳಿ ಕೊಳಕು ಮನಗಳ ಕೆಟ್ಟ ಕೆಟ್ಟ ಬಣ್ಣಗಳ ನಿನ್ನಿಂದ ತೊಳೆಯಲಾ ದೀತೇ…? ಹೋಳಿ

ಮನುಜನ ಮನವ ಕೆಡಿಸುವ ಮನಸ್ಸಿನ ಹೊಯ್ದಾಟ ಹುಚ್ಚಾಟಕ್ಕೆ ನಿನ್ನಿಂದ ಬಣ್ಣ ಬಳಿಯಲಾದೀತೇ…? ಹೋಳಿ
ಸರಸ ಸದ್ಗುಣ ಭಾವನೆಗಳ ತುಂಬಿ ಮನದ ಕೊಳೆಯ ಕಳೆಯುವ ಬಣ್ಣದಾಟ ಆಡಿಸಲು ನಿನ್ನಿಂದ ಸಾಧ್ಯವೇ…? ಹೋಳಿ

         🔆🔆🔆

✍️ ವೀರೇಶ್ ಗಣಾಚಾರಿ ಸರಕಾರಿ ಪ್ರೌಢಶಾಲೆ ರಾಮದುರ್ಗ