ಜೀವನದಲ್ಲಿ ಹಲವು ಹವ್ಯಾಸಗಳು ಮನುಷ್ಯನ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಬದುಕಿನಲ್ಲಿ ಸದಭಿರುಚಿಯ ಆಲೋಚನೆ ಗಳನ್ನಿಟ್ಟುಕೊಂಡು ಯಾವುದೇ ಕಾರ್ಯ ಮಾಡಿದರೂ ಅದಕ್ಕೆ ಒಂದು ನೆಲೆ ಇದ್ದೇ ಇದೆ ಎಂಬುದಕ್ಕೆ ಬಾಬಾಜಾನ್ ಮುಲ್ಲಾ ಸಾಕ್ಷಿ.
ಮೂಲತಃ ಬಾಗಲಕೋಟೆ ತಾಲೂಕಿನ ಹೊಳೆಯಂಕಂಚಿ ಗ್ರಾಮದವರಾದ ಬಾಬಾಜಾನ್ ಮುಲ್ಲಾ ಪ್ರಸ್ತುತ ಅಳ್ನಾವರ ತಾಲೂಕಿನ ಹೊನ್ನಾಪುರ ಗ್ರಾಮದ ಪ್ರಭುದೇವ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚಿಗೆ ನನಗೆ ಕರೆ ಮಾಡಿ ಸರ್ ತಾವು ಹೆಬ್ಬಳ್ಳಿಗೆ ಬರಬೇಕು ಲೂಸಿ ಸಾಲ್ಡಾನಾ ಅವರ ಬದುಕಿನ ಬಂಡಿ ಚಿತ್ರೀಕರಣದಲ್ಲಿ ತಮಗೆ ಮಾಧ್ಯಮ ಪ್ರತಿನಿಧಿ ಪಾತ್ರವಿದೆ. ಎಂದಾಗ ಆಶ್ಚರ್ಯ. ಅವರು ನನ್ನ ಸಂಪಾದಕತ್ವದ ಕತೆಯಲ್ಲಿ ಜೀವನ (ಲೂಸಿ ಸಾಲ್ಡಾನಾ ಬದುಕಿನ ಜೀವನ ಚಿತ್ರಣ) ಕತೆಯನ್ನಿಟ್ಟು ಕೊಂಡು ಚಲನಚಿತ್ರ ಚಿತ್ರೀಕರಣ ಮಾಡುತ್ತಿರುವ ಸಂಗತಿ ಒಂದು ತಿಂಗಳ ಹಿಂದೆ ತಿಳಿಸಿದ್ದರು. ಆಗ ನಾನು ಚಲನಚಿತ್ರ ಶೀರ್ಷಿಕೆಯಲ್ಲಿ ನನ್ನ ಹೆಸರನ್ನು ಬಳಸಿಕೊಳ್ಳಿ ಅಂತಾ ಹೇಳಿದ್ದೆ. ಈಗ ದಿಡೀರ್ ನಿಮ್ಮನ್ನು ಬಳಸಿಕೊಂಡು ಚಿತ್ರೀಕರಣ ಮಾಡುತ್ತೇವೆ ಅಂದಾಗ ಆಯಿತು ಎಂದಷ್ಟೇ ಹೇಳಿದ್ದೆ.
ಮರುದಿನ ನನ್ನ ಪಾತ್ರಕ್ಕೆ ಬೇಕಾದ ವಸ್ತ್ರಾಲಂಕಾರದ ಸಾಮಗ್ರಿಗಳೊಂದಿಗೆ ಹೆಬ್ಬಳ್ಳಿಗೆ ಹೋಗಿದ್ದೆ. ಅಲ್ಲಿ ಶಾಲಾ ಆವರಣದಲ್ಲಿ ಪೆಂಡಾಲ್ ಹಾಕಲಾಗಿತ್ತು. ಹೆಬ್ಬಳ್ಳಿಯ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರಿಗೂ ಸನ್ಮಾನ ಜೊತೆಗೆ ಲೂಸಿ ಸಾಲ್ಡಾನಾ ಗುರುಮಾತೆಯವರಿಗೆ ಸನ್ಮಾನ.ಅದು ಲೂಸಿ ಸಾಲ್ಡಾನಾ ಬಹಳ ವರ್ಷ ಸೇವೆ ಸಲ್ಲಿಸಿದ ಶಾಲೆಯಾದ ಕಾರಣ ಅಲ್ಲಿ ಅವರ ಸನ್ಮಾನದ ಚಿತ್ರೀಕರಣದ ಎಲ್ಲ ಸಿದ್ದತೆ ಜರುಗಿತ್ತು. ನನ್ನನ್ನು ಕಂಡು ಸರ್ ನೀವು ಮಾಧ್ಯಮ ಪ್ರತಿನಿಧಿಯಾಗಿ ಕುಳಿತಿರುತ್ತೀರಿ ಇಡೀ ಕಾರ್ಯಕ್ರಮದ ವರದಿ ಸಿದ್ದಪಡಿಸುವಂತೆ ತಮ್ಮ ಹಾವಭಾವ ಇರಬೇಕು ಎಂದು ಪ್ಯಾಡ್ ನೀಡಿದರು. ಸರಿ ಎಂದು ನನಗೆ ತೋರಿಸಿದ ಖುರ್ಚಿಯಲ್ಲಿ ಕುಳಿತುಕೊಂಡೆ. ಚಿತ್ರೀಕರಣ ಸಾಗಿತು. ಕ್ಯಾಮರಾ ನನ್ನತ್ತ ಬಂದಾಗ ನನ್ನ ಬರವಣಿಗೆಯ ಶೈಲಿಯ ಚಿತ್ರೀಕರಣ ಜರಗುತ್ತಿತ್ತು.
ಕೂಡಲೇ ಮುಂದಿನ ಹಂತದ ಚಿತ್ರೀಕರಣಕ್ಕೆ ಅಣಿಯಾಗುವಂತೆ ಸಂಭಾಷಣೆಯ ತುಣುಕನ್ನು ಕೈಗಿತ್ತರು. ಪದೇ ಪದೇ ಓದಿಕೊಂಡೆ, ಆದರೆ ಹೇಳುವಲ್ಲಿ ತಡವರಿಸತೊಡಗಿದೆ. ಆಗ ಬಾಬಾಜಾನ್ ಅವರು ಹತ್ತಿರಕ್ಕೆ ಬಂದು ಆ ಸಂಭಾಷಣೆ ಯನ್ನು ಸರಾಗವಾಗಿ ಹೇಳಿ ಅಭಿನಯಿಸಿ ತೋರಿಸಿದರು. ನಂತರ ಅದು ಸರಿಗೊಂಡಿತು.ಅವರ ಆ ತಾಳ್ಮೆ ಕಂಡಾಗ ಸಿನಿಮಾ ನೋಡಿ ಅನುಭವವಿದ್ದ ನನಗೆ ಚಿತ್ರೀಕರಣದಲ್ಲಿ ನಾನೇ ಕಲಾವಿದನಾಗಿ ಅಭಿನಯಿಸುವಂತೆ ಮಾಡಿದ್ದು ನನಗೆ ಒಂದೆಡೆ ಸಂತಸವಾಗಿದ್ದರೆ ನಿರ್ದೇಶಕನ ಪರಿಶ್ರಮ ಕುರಿತು ಯೋಚಿಸತೊಡಗಿದ್ದೆ. ನನ್ನದೇ ಕೃತಿಯನ್ನು ಅವರು ಸಿನಿಮಾ ಮಾಡಿದ ರೀತಿಯನ್ನು ನನಗೆ ವಿವರಿಸಿದರು.
ಜೊತೆಗೆ ಲೂಸಿ ಸಾಲ್ಡಾನಾ ಗುರುಮಾತೆಯ ಮನೆಯಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡೆ ನು. ಅವರು ತಾವು ತಯಾರಿಸಿದ ಕಿರುಚಿತ್ರ ಗಳ ಲಿಂಕ್ ನನಗೆ ವ್ಯಾಟ್ಸಪ್ ಕಳಿಸಿದರು.ಅವುಗಳನ್ನು ವೀಕ್ಷಿಸಿದೆ. ಅದರಲ್ಲಿ ಐದನೆಯ ತರಗತಿಯ “ಒಟ್ಟಿಗೆ ಬಾಳುವ ಆನಂದ ನೋಡಿದೆನು.ನಿಜಕ್ಕೂ ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಂಡು ಶಾಲೆಯಲ್ಲಿ ಮಕ್ಕಳನ್ನು ಕೂಡ ಚಿತ್ರೀಕರಣ ದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಕಿರುಚಿತ್ರ ರೂಪಿಸಿದ್ದು ಇವರ ಪ್ರತಿಭೆಗೆ ಸಾಕ್ಷಿಯಾಗಿದೆ. ಅದರಲ್ಲೂ ಯಾವುದೇ ಮೇಕಪ್ ಬಳಸದೇ ಇರೋ ರೀತಿಯಲ್ಲಿ ನೈಜವಾಗಿ ಚಿತ್ರೀಕರಿ ಸುವುದು.ಸ್ಥಳೀಯ ನೈಸರ್ಗಿಕ ಪರಿಸರ ವನ್ನು ಕೂಡ ಚಿತ್ರೀಕರಣದ ಲೋಕೇಶನ್ ಆಗಿ ಚಿತ್ರಿಸುವ ಇವರ ಪರಿ ನಿಜಕ್ಕೂ ಸಂತಸ ಮತ್ತು ಆಶ್ಚರ್ಯವನ್ನುಂಟು ಮಾಡಿತು. ನಾವು ಬೋಧನೆಗೆ ಬಳಸುವ ಪರಿಕರಗಳನ್ನು ಸರಿಯಾಗಿ ಬಳಸಿದರೆ ಪಾಠ ಮಕ್ಕಳಿಗೆ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ.ಅದರಲ್ಲೂ ನಾಟಕ ಅಥವ ಸಿನೇಮಾ ಅಂದರೆ ಇನ್ನೂ ಆಸಕ್ತಿದಾಯಕ ವಲ್ಲವೇ.? ಅಂತಹ ಪರಿಣಾಮಕಾರಿ ಬೋಧನೆಗೆ ಸಿನಿಮಾ ಮಾಧ್ಯಮವನ್ನು ಅನುಸರಿಸಿದರೆ ಹೇಗೆ ಎಂಬುದನ್ನು ಬಾಬಾಜಾನ್ ಮುಲ್ಲಾ ಮಾಡುತ್ತಿರುವುದು ಹೆಮ್ಮೆಯ ಸಂಗತಿ.
ಇವರು ಹಿಂದಿ ಮತ್ತು ಚಿತ್ರಕಲಾ ವಿಷಯದಲ್ಲಿ ಬೋಧಕರು ಮತ್ತು ಸಂಪನ್ಮೂಲ ವ್ಯಕ್ತಿಗಳು.ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬುವ ಇವರ ಆಲೋಚನೆಗೆ ಮುಖ್ಯ ಕಾರಣ ಇವರದು ಅವಿಭಕ್ತ ಕುಟುಂಬ.ಅಲ್ಲಿ ಎಲ್ಲರೂ ಒಟ್ಟಿಗೆ ಬಾಳಬೇಕೆಂಬ ಸಂದೇಶ ಸಂಸ್ಕಾರ ಬಾಲ್ಯದಿಂದಲೂ ರೂಢಿಗತವಾಗಿರುತ್ತದೆ. ಅದನ್ನೇ ಅವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವುದಲ್ಲದೇ ಮಕ್ಕಳಲ್ಲಿಯೂ ಕೂಡ ನೈತಿಕತೆ ಇರಲಿ ಎಂಬ ಸದುದ್ದೇಶ ಹೊಂದಿ ಆ ನಿಟ್ಟಿನಲ್ಲಿ ತಮ್ಮ ಕತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿ ರುವುದು.ಇವರ ತಂದೆ ಹುಸೇನಸಾಬ ತಾಯಿ ಸಾದಿರಾ.ಇವರ ಎಂಟು ಜನ ಮಕ್ಕಳಲ್ಲಿ ಬಾಬಾಜಾನ್ ಒಬ್ಬರು.ಇವರ ಬಾಲ್ಯದ ಶಿಕ್ಷಣ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಜರುಗಿತು.ಕಾರಣ ತಂದೆ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಅವರಿರುವ ಸ್ಥಳದಲ್ಲಿ ಶಿಕ್ಷಣ ಮಕ್ಕಳಿಗೆ ಕೊಡಿಸಿದರು.ನಂತರ ಹಾನಗಲ್ ದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ ಧಾರವಾಡದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆ ಡಿಪ್ಲೋಮಾ ಅಭ್ಯಸಿಸಿದರು.
ಇವರ ಶಿಕ್ಷಣ ಸಂದರ್ಭದಲ್ಲಿ ಕುಲಕರ್ಣಿ ಎಂಬ ಗುರುಗಳು ಮಕ್ಕಳನ್ನು ಬಳಸಿ ಕೊಂಡು ನಾಟಕ ಮಾಡಿಸುತ್ತಿದ್ದರಂತೆ, ಅದರಲ್ಲಿ ಬಾಬಾಜಾನ್ ಕೂಡ ಭಾಗವಹಿಸುತ್ತಿದ್ದರು.ಅವರ ಗುರುಗಳಿಗೆ ಇವರು ಮೆಚ್ಚಿನ ಕಲಾವಿದರಾಗಿದ್ದರು.ಹೀಗೆ ಪ್ರಾಥಮಿಕ ಶಾಲಾ ಹಂತದಲ್ಲಿ 46 ನಾಟಕಗಳಲ್ಲಿ(ಶಾಲಾ ಪಠ್ಯಾಧಾರಿತ) ಅಭಿನಯಿಸುವ ಮೂಲಕ ಇವರಲ್ಲಿನ ಕಲಾವಿದ ಬೆಳಕಿಗೆ ಬರತೊಡಗಿದ.ಗುರುಗಳ ನಿರ್ದೇಶನದ ಪ್ರಭಾವ ಕೂಡ ಇವರಲ್ಲಿ ನಿರ್ದೇಶಕನು ಮೊಳಕೆಯೊಡೆದಿದ್ದ.
ಇವರ ಪತ್ನಿ ಮನೆಗೆಲಸದೊಡನೆ ಪತಿಯ ಕಲೆಗೆ ಸ್ಪೂರ್ತಿದಾತೆ.ಹೀಗಾಗಿ ಇವರ 6 ಜನ ಮಕ್ಕಳೂ ಕೂಡ ಸಂಗೀತ,ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿರುವರು.ಅವರ ಮಕ್ಕಳನ್ನು ಕೂಡ ಅಲ್ಲಲ್ಲಿ ಪಾತ್ರ ನೀಡುವ ಮೂಲಕ ಅವರ ಕಲೆಯನ್ನು ಬಾಬಾಜಾನ್ ಪ್ರೋತ್ಸಾಹಿಸುತ್ತಿರುವರು.ಕೋರೋನಾ ಜಾಗೃತಿಯತ್ತ ನಮ್ಮ ಚಿತ್ತ ಇವರ ಮಗಳು ರಾಹೀಲಾ ಮುಲ್ಲಾ ನಿರೂಪಣೆ ಅಕ್ಸಾ ಮುಲ್ಲಾ ಳ ಗಾಯನದಲ್ಲಿ ತಮ್ಮದೇ ಗೀತೆಯನ್ನು ಬಾಬಾಜಾನ್ ಮುಲ್ಲಾ ಚಿತ್ರೀಕರಿಸಿ ಯ್ಯೂಟ್ಯೂಬ್ ಚಾನೆಲ್‍ದಲ್ಲಿ ಹಾಕಿದಾಗ ಅಪಾರ ಸಂಖ್ಯೆಯ ಸಂಗೀತ ಪ್ರೇಮಿಗಳ ಮನಸೆಳೆದಿರುವುದನ್ನು ಗಮನಿಸಿದರೆ ಮಕ್ಕಳು ತಂದೆಯ ಹಾದಿಯಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ.
ಇನ್ನು ಇವರ ಸಹೋದರನ ಅಕಾಲ ಮರಣ ಇವರನ್ನು ಕಂಗೆಡಿಸಿದ್ದನ್ನು ಆಗಾಗ ನೆನಪಿಸಿಕೊಳ್ಳುವ ಇವರು ತಮ್ಮ ಸಹೋದರ ಕೂಡ ಒಳ್ಳೆಯ ಶಿಕ್ಷಣ ಪ್ರೇಮಿಯಾಗಿದ್ದ ಹಾಗೂ ಆತನೂ ಕೂಡ ಚಿತ್ರಕಲಾವಿದನಾಗಿದ್ದ ಎಂದು ಹೆಮ್ಮೆಯಿಂದ ಹೇಳುವರು.ಅವನಿಗೆ ಅರ್ಪಣೆ ಮಾಡಿ ಬಾಗಿನ ಎಂಬ ಟೆಲಿಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದು. ಬಡತನದ ಬೇಗೆಯ ಸನ್ನಿವೇಶದಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಬದುಕನ್ನು ಚಿತ್ರಿಸಿರುವುದನ್ನು ಬಾಗಿನದಲ್ಲಿ ಗಮನಿಸಬಹುದು.
ಅಕ್ಸಾ ಮುಲ್ಲಾ ಅಭಿನಯ ಮತ್ತು ಗಾಯನದಲ್ಲಿ ಸೋಜಿಗದ ಸೂಜು ಮಲ್ಲಿಗೆ ಗೀತೆಯ ವಿಡಿಯೋ ನೋಡಿದರೆ ಅಕ್ಸಾಳ ಧ್ವನಿ ಮತ್ತು ಅಭಿನಯ ಗಮನ ಸೆಳೆಯುತ್ತವೆ. ಹಾಗೆಯೇ ಮುಗಳಖೋಡ ಸ್ಥಳ ಚಿತ್ರಣವನ್ನು ಕೂಡ ಇವರು ಮಾಡಿದ್ದು ಹಿನ್ನಲೆ ಸಂಗೀತದೊಂದಿಗೆ ಸ್ಥಳ ಪುರಾಣ ತಿಳಿಸುವ ರೀತಿ ಮನಮೋಹಕ.ಇವರ ಈ ಎಲ್ಲ ಚಟುವಟಿಕೆಗಳಿಗೆ ತಂದೆ ತಾಯಿಯ ಪ್ರೋತ್ಸಾಹದ ಜೊತೆಗೆ ನವರಸ ಸ್ನೇಹಿತರ ವೇದಿಕೆಯೂ ಕಾರಣ ಎಂದು ಅಭಿಮಾನ ಮತ್ತು ಹೆಮ್ಮೆಯಿಂದ ಹೇಳುತ್ತಾರೆ.ಇವರು ನವರಸ ಸ್ನೇಹಿತರ ವೇದಿಕೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದಲ್ಲದೇ.ತಮ್ಮ ಮಗನನ್ನು ಬದುಕು ಬಂಡಿಯಲ್ಲಿ ಕಲಾವಿದನನ್ನಾಗಿ ಮಾಡಿದ್ದು ಇಷ್ಟರಲ್ಲೇ ಬದುಕು ಬಂಡಿ ತೆರೆ ಕಾಣಲಿದೆ.
ತಮ್ಮ ಈ 55 ನೆಯ ವಯಸ್ಸಿನಲ್ಲಿಯೂ ಕೂಡ ಉತ್ಸಾಹದ ಚಿಲುಮೆಯಂತೆ ಓಡಾಡುವ ಬಾಬಾಜಾನ್ ಕನಸುಗಳು ಹತ್ತು ಹಲವು. ಇವರ ನಿರ್ದೇಶನದ ಬೆಳಕು.ಒಟ್ಟಿಗೆ ಬಾಳುವ ಆನಂದ,ಬಾಗಿನ ಕಿರು ಚಿತ್ರಗಳು ಸಾವಿರಾರು ಸಹೃದಯ ಪ್ರೇಕ್ಷಕರ ಮನಗೆದ್ದಿವೆ. ಈಗಲೂ ಕೂಡ ಇವುಗಳನ್ನು ವೀಕ್ಷಿಸಿ ಮೆಚ್ಚುಗೆ ಮಾತುಗಳನ್ನಾಡುವ ಸಹೃದಯರು ಯ್ಯೂಟ್ಯೂಬ್ ಚಾನೆಲ್‍ದಲ್ಲಿ ವೀಕ್ಷಿಸಬಹುದು.ನವರಸ ಸ್ನೇಹಿತರ ವೇದಿಕೆ ಎಂದು ಇಂಗ್ಲೀಷಿನಲ್ಲಿ ಗೂಗಲ್ ಪುಟಕ್ಕೆ ಹೋಗಿ ಟೈಪಿಸಿದರೆ ಬದುಕು ಬಂಡಿಪ್ರೋಮೋ.ಚಿತ್ರಕಲಾ ಪಾಠಗಳು, ಸ.ಜ.ನಾಗಲೋಟಿಮಠರ ಸಂದರ್ಶನ ಸರದೇಶಪಾಂಡೆಯವರದು. ಭೀತಿ ತೊರೆಯುವಾ ಎಸ್,ಎಸ್,ಎಲ್ಸಿ ಪರೀಕ್ಷಾ ಸಿದ್ದತೆ ಕುರಿತಾದ ಸಾಕ್ಷಚಿತ್ರ.ನಾಶಿಪುಡಿ ನಿಂಗ್ಯಾ ಹಾಸ್ಯ ರೂಪಕ.ಮೊದಲಾದ ವಿಡಿಯೋಗಳನ್ನು ತಾವೂ ಕೂಡ ನೋಡ ಬಹುದು.ಇಂತಹ ಒಬ್ಬ ಅಪರೂಪದ ಶಿಕ್ಷಕರ ಪ್ರತಿಭೆಗೆ ಪ್ರೋತ್ಸಾಹ ಕೂಡ ಅಗತ್ಯ. ಇವರಿಂದ ಇನ್ನೂ ಅನೇಕ ಚಲನಚಿತ್ರಗಳು ಮೂಡಿ ಬರಲಿ ಎಂದು ಆಶಿಸುವೆ.ಇವರ ಸಂಪರ್ಕ ಸಂಖ್ಯೆ.9008203006
🔆🔆🔆
✍️ಶ್ರೀ ವೈ.ಬಿ.ಕಡಕೋಳ
ಸಂಪನ್ಮೂಲ ಶಿಕ್ಷಕರು
ಮುನವಳ್ಳಿ 591117
ತಾ: ಸವದತ್ತಿ ಜಿ: ಬೆಳಗಾವಿ ಜಿಲ್ಲೆ