ಅದೊಂದು ಶುಭಮುಂಜಾವಿನ ಘಳಿಗೆ. ಆಗ ತಾನೇ ಜಗವು ಕಣ್ತೆರೆದಂತೆ ಇಣುಕು ತ್ತಿದ್ದ ನೇಸರನ ಕೆಂಬಣ್ಣ ಹೋಳಿ ಹಬ್ಬಕ್ಕೆ ಮುನ್ನವೇ ಪ್ರಕೃತಿಯನ್ನು ಹೊಂಬಣ್ಣದಲ್ಲಿ ಮಿಂದೇಳುವಂತೆ ಮಾಡಿತ್ತು. ಆಗ ತಾನೇ ಮೇಲೆದ್ದು ಬಂದು, ನಕ್ಕು ನಲಿಯುವ ಪ್ರಕೃತಿಯ ಮೈದಡವಿ ಕುಶಲೋಪರಿಯನ್ನು ಕೇಳುವಂತೆ, ನೇಸರನು ಹಸಿರು ಬೆಟ್ಟಗಳ ತಲೆಯ ಹಿಂದೆ ನಿಂತು ಬೆಳಗುತ್ತಿರುವ ಅಪೂರ್ವದೃಶ್ಯಕಾವ್ಯದ ಆಲಾಪವನ್ನೊಮ್ಮೆ ಹೋಳಿ ಹಬ್ಬದ ಮುನ್ನ ಸವಿಯುವ ಭಾಗ್ಯವೇ ಅಪೂರ್ವವಾದ ಅನುಭವವ ನ್ನುಂಟು ಮಾಡಿತು.
ಹಬ್ಬಕ್ಕೆ ಮೊದಲೇ ವೈವಿಧ್ಯಮಯ ರಂಗುಗಳ ರಂಗದಲ್ಲಿ ಹೀಗೆ ಮೈದುಂಬಿ ಕುಣಿಯುತ್ತಿದ್ದ ನಿಸರ್ಗದ ನಾದ ಲಯಕ್ಕೆ ತಲೆದೂಗುತ್ತಿದ್ದ ತರುಲತೆಗಳ ಸೌಂದರ್ಯ ಹಬ್ಬದ ಪ್ರವೇಶಕ್ಕೆ ಕಳೆಯನ್ನು ತಂದಿತ್ತು.ನಿಶ್ಚಲ,ನಿಶಾಂತ ನೀಲಸರೋವ ರವು ಬಣ್ಣ ಬಳಿದ ಪ್ರಕೃತಿಯ ಮುಖಕ್ಕೆ ದರ್ಪಣವಿಡಿದಂತೆ ಕಂಗೊಳಿಸುತ್ತಿತ್ತು. ಹಸಿರುಟ್ಟ ಗಿಡ ಮರ ಬಳ್ಳಿಗಳ ನೋಟ, ಬಣ್ಣ ಬಣ್ಣದ ರೆಕ್ಕೆಯುಳ್ಳ ಹಕ್ಕಿಗಳ ಹಾರಾಟ, ಕೆಂದಳಿರ ಚಿಗುರಿನ ನಾಟ್ಯ ವಿಲಾಸ, ಸಾಲಾಗಿ ಹೊಂದಿಕೊಂಡ ಕೆಲವು ಹೊಲಗಳಲ್ಲಿ ತೆನೆಗಟ್ಟಿ ಎದೆಯುಬ್ಬಿಸಿ ನಿಂತ ಫಸಲಿನ ಬಂಗಾರ ವರ್ಣದ ಸರಸ, ಮುಂಜಾವಿನ ರಸಗಾನಕ್ಕೆ ತಲೆದೂಗುತ್ತಾ ತೊನೆಯುತ್ತಿರುವ ಕಲ್ಪವೃಕ್ಷಗಳ ಮೇಲಾಟ, ತಾನೇನು ಕಮ್ಮಿ ಎಂದು ಪ್ರಕೃತಿಯ ನಿರ್ಮಲ ನಿಚ್ಚಳ ಬೆಳಗಿನ ಸೌಂದರ್ಯಕ್ಕೆ ನಶೆಯ ಮಬ್ಬು ಆವರಿಸಿ ಮುದವೆಲ್ಲಾ ಮದವಾಗುವಂತೆ ಹಂಬಲಿಸಿ, ಹಂಬಲಿಸಿ, ಆವರಿಸುತ್ತಿದ್ದ ಇಬ್ಬನಿಯ ರಸದೂಟ, ತನ್ನ ವೇಗಕ್ಕೂ ಸಾಟಿಯಿಲ್ಲ ಎನ್ನುತ್ತಲೇ ತಂಗಾಳಿಗೆ ಮತ್ತಷ್ಟು ತಂಪನ್ನೆರೆದು ಸುಯ್ ಗುಡುತ್ತಾ, ಒಂದೇ ಸಮನೆ ಬಂದಪ್ಪಳಿಸು ತ್ತಿದ್ದ ಮಾರುತನ ಚೆಲ್ಲಾಟ, ಸರೋವರದ ಸಲಿಲ ದರ್ಪಣದಲ್ಲಿ ಮುಖ ನೋಡಿಕೊಳ್ಳು ತ್ತಿರುವ ಬೆಳ್ಳಕ್ಕಿಗಳೆಂಬ ಶ್ವೇತ ಸುಂದರಿಯರ ಚೆಲ್ಲಾಟ, ರಾತ್ರಿಯೆಲ್ಲಾ ನಿದ್ದೆಯಲ್ಲಿ ಬಾಯಾರಿದ ಹಸುಗೂಸುಗಳಂತಿದ್ದ ಬೆಳೆಗಳಿಗೆ ಬೆಳಗಾಗೆದ್ದು ನೀರುಣಿಸುತ್ತಿದ್ದ ಕಾರಂಜಿಗಳ ಸಿಂಚನದಾಟ, ಹೀಗೆ ಹೋಳಿ ಹಬ್ಬದ ಹೊಸ್ತಿಲಲ್ಲಿದ್ದ ಶುಭೋದಯದ ಪ್ರಮೋದ ಎದೆಯನ್ನೆಲ್ಲಾ ತುಂಬಿಕೊಂಡಿತ್ತು ಹೋಳಿ ಹಬ್ಬಕ್ಕೆ ಒಂದೆರಡುದಿನಗಳಿರುವಾಗ ಮೈದಾಳಿದ ಪ್ರಕೃತಿಯ ಈ ಅವತಾರ ಕಂಡು ವಿಸ್ಮಯಗೊಂಡೆ. ಹೌದು. ನಮಗೆ ವಸಂತ ಕ್ಕೊಮ್ಮೆ ಕೃತಕ ಬಣ್ಣಗಳನ್ನೆರಚಿಕೊಂಡು ಸಂಭ್ರಮಿಸುವ ಹಬ್ಬವಾಗಿ ಹೋಳಿ ಕಂಡರೆ, ಪ್ರಕೃತಿಗೆ ನಿತ್ಯವೂ ಹೋಳಿಯೇ. ಬೆಳಗಿನ ಕೆಂಬಣ್ಣ,ಗಿಡಮರದೆಲೆಗಳ ಹಸಿರು, ಹಳದಿ, ಕೆಂದಳಿರ ಕಂದು, ಕೆಂಪು, ಆಗಸದ ನೀಲಿ, ಶ್ವೇತ, ಮಣ್ಣಿನ ಕಪ್ಪು, ಹಣ್ಣುಗಳ ನೇರಳೆ, ನೇಸರನ ಹಳದಿ, ಬೆಳದಿಂಗಳ ಬಿಳುಪು, ಹಕ್ಕಿಗಳ ಬೂದು, ಹೂಗಳಲ್ಲಿಯ ಗುಲಾಬಿ, ಕೇಸರಿಗಳು ಹೀಗೆ ಪ್ರಕೃತಿಯಲ್ಲಿ ವೈವಿಧ್ಯಮಯ ಸಾವಯವ ಬಣ್ಣಗಳ ಚಿತ್ರ ಚಿತ್ತಾರವುಂಟು. ಈ ಚಿತ್ತಾರದೊಳಗೆ ಅರಳುವ ಸಹಜ ಕಲೆಯ ನಿತ್ಯ ವಿಲಾಸ ವುಂಟು ಎಂದ ಮೇಲೆ ನಿಸರ್ಗಕ್ಕೆ ನಿತ್ಯವೂ ರಂಗಿನಾಟವೇ.
ಇಂಥ ವೈವಿಧ್ಯಮಯ ರಂಗಗಳ ಮೋದ ಲಾಲಿತ್ಯದಲ್ಲಿ ಕಾಲ ಕಳೆ ಯುವ ಪ್ರಕೃತಿಯದ್ದೇ ನಿಜದ ಅರ್ಥದಲ್ಲಿ ಹೋಳಿ ಹಬ್ಬ. ಕಣ್ತುಂಬಿಕೊಳ್ಳುವ ಅಂತರಂಗವನ್ನೊಮ್ಮೆ ಧ್ಯಾನದಿಂದ ತೆರೆದರೆ ಸಾಕು ಈ ಸೊಬಗು ಕಣ್ಣಿಗೆ ಹಬ್ಬವನ್ನುಂಟು ಮಾಡುವುದರಲ್ಲಿ ಸಂದೇಹವಿಲ್ಲ. ನಾವೂ ಹೋಳಿಯನ್ನಾಚರಿಸುತ್ತೇವೆ, ವಸಂತ ಕ್ಕೊಮ್ಮೆ ಕಾಮದಹನದ ಕಾವಿನಲ್ಲಿ ಸುತ್ತಲೂ ನೆರೆದು ಬಣ್ಣದ ಕೃತಕ ಮುಖವಾಡಗಳಿಂದ ಮೆರೆದು. ಹಲಗೆ ವಾದ್ಯಗಳ ನಾದಮಯ ಪ್ರಪಂಚದಲ್ಲಿ ತೇಲಾಡುತ್ತಾ ಓಕುಳಿಯಾಡುತ್ತಾ ಮೈಮರೆತು ಕುಣಿಯುವುದೇ ಈ ಕಾಮನ ಹಬ್ಬಕ್ಕೊಂದು ಮೆರುಗನ್ನು ತಂದುಕೊಡು ತ್ತದೆ. ಒಬ್ಬರಿಗೊಬ್ಬರು ಬಣ್ಣಗಳನ್ನು ಎರಚಿ ಒಂದಾಗುವ ಅನಿಕೇತನದ ಹೊಳೆಯಲ್ಲಿ ಹೊರಳಾಡಿ ನಲಿಯುವ ಸಂಗತಿಯೇ ಸಂಭ್ರಮ ಪಡುವಂತಹದ್ದು. ಈ ನೆಪದಲ್ಲಿ ಜಾತಿ ಮತ ಪಂಥಗಳ ಗೊಡವೆಯನ್ನು ಮೀರುವ ಬಣ್ಣಗಳ ಮರೆಯಲ್ಲಿ ಕಾಣದ ಭಾವಾಂತರಂಗದ ಹೊದರನ್ನಿಟ್ಟುಕೊಂಡು ಬಯಲಾಟವಾಡುತ್ತೇವೆ. ಹೌದು ಬಣ್ಣಗಳ ಉಲ್ಲಾಸದಲ್ಲಿ ಬೆಣ್ಣೆಯಂತಾಗುವ ಮನಸು ಸರ್ವರನ್ನೂ ಬಾಚಿ ಅಪ್ಪಿಕೊಳ್ಳುವ ಹೆಚ್ಚುಗಾರಿಕೆ ಈ ರಂಗಪಂಚಮಿಯದ್ದು. ನಮ್ಮೊಳಗಿನ ಅಹಂಕಾರದ ತಾರಕಾಸುರ ನನ್ನು ಕೊಲ್ಲಲು ಇದಕ್ಕಿಂತ ಬೇರೆ ಸುಯೋಗ ವಿದೆಯೇ ? ನಮ್ಮೊಳಗಿನ ಕಪಟ ನಾಟಕ ಕಾಮನೆಗಳನ್ನು ಉರಿಸಲು ಇದಲ್ಲವೇ ಮಹಾಯಜ್ಞದ ಸಂಧಿಕಾಲ ?. ಪತ್ನಿ ರತಿಗೆ ಮಾತ್ರ ಶರೀರಿಯಾಗಿ ಜಗತ್ತಿಗೆ ಅನಂಗನಾಗಿ ರುವ ಕಾಮನ ಉಪಟಳಗಳನ್ನು ಅದೆಂತು ಬಣ್ಣಿಸುವುದು? ಇಂತಹ ಅನಂಗಕಾಮ – ನೇನಾದರೂ ಇಂದು ಒಡಲನ್ನು ಹೊತ್ತುಕೊಂಡೇ ಭುವಿಗಿಳಿದಿದ್ದರೆ ಇನ್ನೆಷ್ಟು ಅವಘಡಗಳು ಸಂಭವಿಸಬಹುದಿತ್ತೋ ಏನೋ? ಭುವನದ ಭಾಗ್ಯ ಹಾಗಾಗಿಲ್ಲ ವೆಂಬುದೇ ಸಮಾಧಾನದ ಸಂಗತಿ. ಶಿವಕಾಮ ತತ್ವವೇ ಜಗವೊಪ್ಪಿ ಅಪ್ಪಿಕೊಂಡ ಪರಂಪರೆ. ಇದನ್ನು ಮೀರಲು ಪ್ರಯತ್ನಿಸಿದ ಮಾಯೆಯ ಮೋಹದ ಜಾಲವನ್ನು ಭೇದಿಸಿ ಬಯಲಾದ ಅಲ್ಲಮನಿಗೆ ಮಾಯೆ, ಅರಿಯಲಾಗದ ತಾಮಸೆಯೇನಲ್ಲ. ತನ್ನ ಅಂತಃಪುರವೆಂಬ ಆಲಯದೊಳಗೆ ಅಲ್ಲಮನನ್ನು ಸೆರೆಹಿಡಿಯಬೇಕೆಂದು ವ್ಯರ್ಥ ಹಠವಿಡಿದು ಹೊರಟ ಮಾಯೆಗೆ ದಕ್ಕಿದ್ದು ನಿರ್ವಯಲ ಬಯಲು. ಅಂದು ಆಲಯ ದೊಳಗಿದ್ದ ಮಾಯೆ ಅಲ್ಲಮನಿಂದ ಬಯಲಾಗಿ ಹೋದಂತೆ, ಇಂದು ಮನದೊಳ ಗಿನ ತಾಮಸೆಯಾಗಿ, ಬಯಲೊಳಗಿನ ಬೆಂಕಿಯಾಗಿ, ಕಾಮದಹನದಿಂದುಸಿದ ಬೆಳಕಾಗಿ ವೈವಿಧ್ಯಮಯ ರೂಪಲಾವಣ್ಯ ಗಳನ್ನು ಹೊತ್ತು ಮತ್ತೆ ಬಂದಿದ್ದಾಳೆ ಹೋಳಿ ಹಬ್ಬದ ನೆಪದಲ್ಲಿ. ಎಂದರೆ ೧೨ ನೇಯ ಶತಮಾನದಿಂದಲೂ ಮಾಯೆಯನ್ನು ಮೀರಲು ಮಾಡುತ್ತಿರುವ ಶೋಧಗಳು ನಿತ್ಯನಿರಂತರವಾಗಿ ಹೀಗೆ ಹಬ್ಬಗಳ ರೂಪದಲ್ಲಿಯೋ, ಆಧ್ಯಾತ್ಮದ ಸಾಂಗತ್ಯ ದಲ್ಲಿಯೋ, ಧರ್ಮವಿಜ್ಞಾನದ ಸಂವಾದ ಗಳಲ್ಲಿಯೋ ಸಾಗುತ್ತಲೇ ಇರುವುದು ವಿಸ್ಮಯ. ಆವರಿಸಿ ಕಂಗೆಡಿಸುವ ಮಾಯೆಯನ್ನು ಧಿಕ್ಕರಿಸಿ, ಸೋಲಿಸಿ ಸೆಳೆದು ದಿಕ್ಕುತಪ್ಪಿಸುವ ಕಾಮನನ್ನು ಬಯಲಲ್ಲೊಟ್ಟಿ ದಹನ ಮಾಡಿಬಿಡುವ ಹೋಳಿ ಹಬ್ಬದ ಸಾಂಕೇತಿಕತೆಯನ್ನು ವಿಭಿನ್ನವಾಗಿ ಅರ್ಥೈಸಿ ಕೊಳ್ಳಬೇಕಾಗಿದೆ. ಕಾಮನನ್ನು ದಹಿಸಿದ ಬೂದಿಯನ್ನೊಮ್ಮೆ ಹಣೆಗಿಟ್ಟುಕೊಂಡು ತಾಮಸಾದಿ ದುರಾಸೆಗಳನ್ನು ಹೊರಗಟ್ಟುವ ಹಬ್ಬವಾಗಿ ಈ ರಂಗಪಂಚಮಿಗೆ ಭಾರತೀಯ ಪರಂಪರೆಯಲ್ಲಿ ತನ್ನದೇ ಆದ ಅನನ್ಯತೆಯನ್ನು ಹೊಂದಿದೆ. ಬಣ್ಣಗಳ ಹೊಳೆಯಲ್ಲಿ ಜಾತಿ ಮತ ಪಂಥಗಳೆಂಬ ಭೇದದ ಕಲ್ಮಶಗಳನ್ನು ತೊಳೆಯಲೆಂದೇ ಆಚರಿಸಲ್ಪಡುವ ಪವಿತ್ರ ಹಬ್ಬವಿದು. ವೈವಿಧ್ಯಮಯ ಬಣ್ಣಗಳ ಬೆಳಕಿನಿಂದ ಮನದ ಮೂಲೆಯಲ್ಲಿ ಅಡಗಿರುವ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವ ರೂಪಕದಂತಿರುವ ಈ ಹಬ್ಬಕ್ಕೊಂದು ಘನವಾದ ಪುರಾಣದ ಹಿನ್ನೆಲೆಯಿದೆ. ತಪಗೈದು ಶಿವನನ್ನೊಲಿಸಿಕೊಂಡು ಶಿವಶಿಶುವಿನಿಂದಲೇ ತನಗೆ ಮರಣವೆಂಬ ವರ ಪಡೆದ ತಾರಕಾಸುರನ ಉಪಟಳ ಮೇರೆ ಮೀರಿದಾಗ ದೇವತೆಗಳೆಲ್ಲಾ ತಪೋನಿರತನಾಗಿದ್ದ ಶಿವನ ಬಳಿ ಬರುತ್ತಾರೆ. ತಪೋನಿರತನಾಗಿದ್ದ ಮಹಾದೇವನನ್ನು ಕಂಡವರೆ ದಾರಿ ತೋಚದೇ ಕಾಮ- ರತಿಯರನ್ನು ಶಿವನನ್ನೆಚ್ಚರಿಸುವಂತೆ ಬೇಡಿಕೊಳ್ಳುತ್ತಾರೆ. ಒಪ್ಪಿದ ಕಾಮದೇವನು ಶಿವನೆದೆಗೆ ತನ್ನ ಹೂಬಾಣದ ಗುರಿಯನ್ನಿಟ್ಟು ಅವನ ತಪಸ್ಸನ್ನು ಭಂಗಗೊಳಿಸುತ್ತಾನೆ. ಮಾಡಿದ ತಪ್ಪಿಗಾಗಿ ರುದ್ರನ ಹಣೆಗಣ್ಣ ಬೆಂಕಿಯಲ್ಲಿ ಉರಿದು ಭಸ್ಮವಾಗುತ್ತಾನೆ. ಪತಿಯನ್ನು ಕಳೆದುಕೊಂಡು ಏಕಾಂಗಿಯಾಗಿ ಶೋಕಿಸುತ್ತಿದ್ದ ರತಿಯ ಪ್ರಾರ್ಥನೆಗೆ ಮಣಿದ ಗಂಗಾಧರ ಆಕೆಗೆ ಮಾತ್ರ ಶರೀರಿಯಾಗಿ, ಜಗತ್ತಿಗೆ ಅನಂಗನಾಗಿ ಕಾಮನನ್ನು ದಯಪಾಲಿಸುತ್ತಾನೆ. ಹೀಗೆ ಅನಂಗನಾ ಗಿಯೇ ತನ್ನ ಮೋಹಕ ಜಾಲವನ್ನು ಹೆಣೆದು ಜೀವಿಗಳನ್ನೆಲ್ಲಾ ಹಣಿದು ಮೆರೆಯುತ್ತಿರುವ ಕಾಮದೇವನನ್ನು ಒಮ್ಮೆಯಾದರೂ ದಹಿಸಿ ಮರೆಯುವ ಹಬ್ಬವೆಂದರೆ ಅದು ಹೋಳಿಯೇ. ಸವಿನೆನಪಿಗಾಗಿ ಏಕತೆಯ ರಂಗನ್ನೆರಚಿ ಭಾರತವನ್ನು ಸಿಂಗರಿಸುವ ಹಬ್ಬವಾಗಿ ಹೋಳಿ ತನ್ನದೇ ಮಹತ್ವವನ್ನು ಪಡೆದುಕೊಂಡಿದೆ. ನಾವು ನಿತ್ಯ ತೊಡುವ ವೈವಿಧ್ಯಮಯ ಮುಖವಾಡಗಳನ್ನು ಕಳಚಿಟ್ಟು ಬಗೆ ಬಗೆಯ ಸೋಗು ಹಾಕಿ ಸಂಭ್ರಮಿಸುವ ಈ ಬಣ್ಣಗಳ ಉತ್ಸವಕ್ಕೆ ಸಾಟಿಯಾದ ಹಬ್ಬ ಮತ್ತೊಂದೆಲ್ಲಿದೆ ?. ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹಗಳೆಂಬ ಅರಿಷಡ್ವರ್ಗಗಳೆಂಬ ಬಣ್ಣಗಳನ್ನು ಹೊರಗೆರಚಿ ಕಳೆದುಕೊಳ್ಳುವ ಪ್ರತಿಮಾತ್ಮಕ ಮಹಿಮೆಯನ್ನು ಹೊಂದಿದಂತಿರುವ ಈ ಹಬ್ಬವನ್ನೊಮ್ಮೆ ವರುಷಕ್ಕೊಮ್ಮೆಯಾದರೂ ಹೀಗೆ ಹೃದಯದುಂಬಿ ಆಸ್ವಾದಿಸಬೇಕು.
ಬಗೆ ಬಗೆಯ ಬಣ್ಣಗಳ ಮುಖವಾಡಗಳನ್ನು ತೊಟ್ಟು ನಿಸರ್ಗದಿಂದ ಬಲು ದೂರ ಸಾಗುತ್ತಿರುವ ನಾವು, ಈ ದಿನವಾದರೂ ಆ ಮುಖವಾಡಗಳನ್ನು ಕಳಚಿಟ್ಟು ಪ್ರಕೃತಿಯೊಳಗಿನ ಸಹಜ ರಂಗನ್ನು ಮನದ ತುಂಬೆಲ್ಲಾ ಎರಚಿಕೊಂಡು ಬಾಗಿ ಸಂಭ್ರಮಿಸುವ ಸುಗುಣಶೀಲತೆಯನ್ನು ತೋರಬೇಕಾಗಿದೆ. ರಾಘವಾಂಕ ಹೇಳುವ “ಸತ್ಯವೆಂಬುದೇ ಹರ; ಹರನೆಂಬುದೇ ಸತ್ಯವೆಂಬ” ಮಂತ್ರದಿಂದ ಜೀವನದ ಸೊಬಗನ್ನು ಆನಂದಿಸಬೇಕಾಗಿದೆ. ಮತಕ್ಕೊಂದು ಬಣ್ಣವನ್ನಂಟಿಸಿ ಅವುಗಳ ದರ್ಶನ ಸೌಂದರ್ಯವನ್ನೇ ಅಣಕ ಮಾಡುತ್ತಿರುವ ಈ ಹೊತ್ತಿನಲ್ಲಿ “ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮುಂ ಪರಧರ್ಮಮುಂ” ಎಂಬ ಕವಿರಾಜಮಾರ್ಗಕಾರನ ಜೀವನದ ತಾತ್ವಿಕತೆಯಂತೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಬೆಳಕು ಮತ್ತು ಬಣ್ಣಗಳು ಪ್ರಕೃತಿಯ ಎರಡು ಮಹೋನ್ನತ ಸಂಗತಿಗಳು. ಬುದ್ಧಿಜೀವಿಗಳಾದ ನಾವು ಇವೆರಡಕ್ಕೂ ನಮ್ಮ ಪೂರ್ವಾಗ್ರಹಗಳನ್ನು ಆರೋಪಿಸಿ ಅವುಗಳ ಸಹಜ ಸೌಂದರ್ಯವನ್ನು ಕೃತ್ರಿಮಗೊಳಿಸಿದ್ದೇವೆ. ಓಶೋ ಹೀಗೆ ಹೇಳುತ್ತಾರೆ – ನಾವು ಪ್ರೇಮಮಂದಿರವನ್ನು ಪ್ರವೇಶಿಸುವಾಗ ನಮ್ಮ ಬುದ್ದಿ ಮತ್ತು ಮನಸುಗಳನ್ನು ಪಾದರಕ್ಷೆಗಳಂತೆ ತ್ಯಜಿಸಿ ಹೊರಡಬೇಕು ಈ ಮಾತನ್ನು ನಾವು ಬಣ್ಣ ಹಾಗೂ ಬೆಳಕಿನ ಸೌಂದರ್ಯಮೀಮಾಂಸೆಗೂ ಅಷ್ಟೇ ಅರ್ಥಪೂರ್ಣವಾಗಿ ಅನ್ವಯಿಸಬಹುದು. ಬೆಳಕಿನ ಅಂತರಾಳವನ್ನು ಬಣ್ಣ ವ್ಯಾಪಿಸಿ ಕೊಂಡಿರುವಂತೆಯೇ ಬಣ್ಣದ ಒಡಲನ್ನು ಬೆಳಕು ಅಲಂಕರಿಸಿ ತುಳುಕುವುದರಲ್ಲಿ ಆನಂದವನ್ನು ಕಾಣುತ್ತದೆ. ಒಂದನ್ನು ಹೊರತುಪಡಿಸಿ ಮತ್ತೊಂದರ ಬದುಕಿಲ್ಲ ವೆನ್ನುವಂತಹ ಸಮರಸದ ಜೀವನ ಇವುಗಳದು. “ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎನ್ನುವಂತಹ ಇವರಿಬ್ಬರ ಆದರ್ಶ ಸಂಸಾರವನ್ನು ಈ ಹೋಳಿ ಹಬ್ಬದಲ್ಲಿ ನೆನೆದು ಅವರಂತೆ ಬದುಕುವ ಆಶಯವನ್ನು ಜೀವಂತವಿರಿಸಿ ಕೊಳ್ಳಬೇಕಾಗಿದೆ.
ಬಣ್ಣಗಳನ್ನು ಆರಾಧಿಸುವ ಮಗದೊಂದು ಧಾರೆಯೆಂದರೆ ಚಿತ್ರಕಲಾ ಪರಂಪರೆ. ಬಣ್ಣಗಳಿಂದಲೇ ಬದುಕಿಗೊಂದು ಅರ್ಥವನ್ನು, ಧ್ವನಿಯನ್ನು ತಂದುಕೊಡುವ ಇವರದು ಬಣ್ಣದ ಬದುಕಲ್ಲ; ಬಣ್ಣವೇ ಬದುಕು. ಬೇಂದ್ರೆಯವರು ಹಾಡುವಂತೆ
“ಮೈಯ್ಯಾಚೆ ಉಸಿರಾಚೆ ಬಗೆಯ ಬಣ್ಣಗಳಾಚೆ ಅವನ ಹೂವು ಅರಳುವುದು”
ಕೇಸರಿ, ಬಿಳಿ, ಹಸಿರು, ಕೆಂಪು, ನೀಲ, ಬೂದು, ನೇರಳೆ, ಹಳದಿ…ಬಣ್ಣಗಳಲ್ಲದೇ ಒಂದರೊಳಗೊಂದು ಸಮರಸವ ತೋರಿದಾಗ ಹುಟ್ಟುವ ನವ್ಯ ವರ್ಣಗಳ ಮೋಡಿಗೆ ಬೀಗಿ ಬಿಡಿಸುವ ಕಲೆಯ ಜಗತ್ತು ವರ್ಣಿಸಲಸದಳ.
ಇವರಂತೆ ಬಣ್ಣಗಳನ್ನು ಆರಾಧಿಸುವ ಮಗದೊಂದು ಸಮುದಾಯವೆಂದರೆ ಮಕ್ಕಳಗಣ. ಮುಗ್ಧತೆಯ ಮನದೊಳಗೆ ಉಲ್ಲಾಸದ ಭಾವಬಣ್ಣಗಳನ್ನರಳಿಸಿ ಕೊಂಡು ಈ ಹೋಳಿಯ ಘಳಿಗೆಯಂದು ಅವರಿವರೆನ್ನದೇ ಎದುರುಬಂದವರೆಲ್ಲರಿಗೂ ಎರಚಿ ಸಂಭ್ರಮಿಸುವ ಅವರ ಜಗತ್ತೇ ಪ್ಲೇಟೋ ಹೇಳುವ ಆದರ್ಶ ಪ್ರಪಂಚವಿರ ಬೇಕು. ನಾವು ನಿತ್ಯ ಶೋಧಿಸುತ್ತಿರುವ ಸತ್ಯ, ಸೌಂದರ್ಯ ಹಾಗೂ ನ್ಯಾಯಗಳ ದರ್ಶನವಿರುವ ಲೋಕವದು. ಇದನ್ನೇ ನಾವು “ಸತ್ಯಂ ಶಿವಂ ಸುಂದರಂ” ಎಂದೂ ಕರೆಯುತ್ತೇವೆ. ಸಿಟ್ಟು-ಸೆಡವು ಪ್ರೀತಿ, ಹಾಸ, ಕರುಣೆ, ಶೋಕವೆಂಬ ಭಾವಬಣ್ಣಗಳು ಬದುಕನ್ನು ಹಸಿರಾಗಿಸಿ ಸಮೃದ್ಧಗೊಳಿಸಬಲ್ಲವು. ಹೀಗಾದಾಗ ಮಾತ್ರ ಜೀವನವೊಂದು ಅನುಭವಗಳ ಕಾವ್ಯವಾಗಿಬಿಡುತ್ತದೆ. ಪ್ರಖ್ಯಾತ ಚಿತ್ರಕಲಾವಿದ ಪಾಲ್ ಕ್ಲೀ – “ಬಣ್ಣವೆಂದರೆ, ನಮ್ಮ ಬುದ್ಧಿ ಮತ್ತು ಈ ಬ್ರಹ್ಮಾಂಡಗಳು ಕೂಡುವ ತಾಣ” ಎಂದು ಹೇಳುತ್ತಾರೆ. ಬಣ್ಣಗಳ ವಿಲಾಸ ಸೀಮಾತೀತವಾದದ್ದು; ಅನಂತವಾದದ್ದು; ಅನಿಕೇತನಾವದದ್ದು. ಬೇಂದ್ರೆಯವರು ಭೃಂಗದ ಬೆನ್ನೇರಿ ಹೊರಡುವಂತೆ ನಾವು ಬಣ್ಣಗಳನೇರಿ ಹೊರಟಾಗಲೇ ಅವುಗಳ ಬ್ರಹ್ಮಾನಂದ ಎದೆಗೆ ತಾಗಲು ಸಾಧ್ಯವಿದೆ. ಬಣ್ಣಗಳನ್ನು ಪ್ರೀತಿಸುವ ಮತ್ತೊಂದು ಸಮುದಾಯವೆಂದರೆ ಸಿನೇಮಾ ಹಾಗೂ ರಂಗ ಕಲಾವಿದರು. ಇಬ್ಬರಿಗೂ ಬಣ್ಣಗಳಿಂದೊದಗುವ ಬದುಕೇ ಆಧಾರ. ಬದುಕಿನ ವಿಲಾಸವನ್ನು ಬಗೆ ಬಗೆಯ ಬಣ್ಣಗಳ ಮುಖವಾಡದ ಮೂಲಕ ರಂಗದ ಮೇಲೆ ಅಭಿನಯಿಸಿ ತೋರುವ ಅವರ ಕೌಶಲ್ಯವೇ ವಿಸ್ಮಯಮೂಡಿಸುವಂತ ಹುದು. ಬಣ್ಣದ ಬದುಕೆಂದೇ ಅವರ ಜೀವನಾಂತರಂಗವನ್ನು ವ್ಯಾಖ್ಯಾನಿಸಲಾಗು ವಷ್ಟರ ಮಟ್ಟಿಗೆ ಬಣ್ಣಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿವೆ.
ಹೀಗೆ ಬಣ್ಣಗಳ ಲೋಕದೊಳಗೆ ಪ್ರವೇಶಿಸಿದರೆ ಸಾಕು ನಮ್ಮನ್ನು ಸೆಳೆದು ತಬ್ಬಿಕೊಂಡು ಸಕ್ಕನೆ ಸರಗಿಯಾಡುವ ಹಂಬಲದ ಭಾವಬಣ್ಣಗಳು ಮನದಣಿಯೆ “ಕುಣಿಯೋಣು ಬಾರಾ” ಎಂದು ಹಾಡುವುದನ್ನು ಆಲಿಸಿ ಆಲಾಪಿಸಿದ್ದೇನೆ. ಇವುಗಳೊಂದಿಗೆ ಸಂಭ್ರಮಿಸುವ ತಣ್ಣನೆಯ ವ್ಯವಧಾನವೊಂದನ್ನು ನೀಡಿದರೆ ಅದೇ ನಾವು ತೆರಬೇಕಾದ ಶ್ರೇಷ್ಠವಾದ ಮೌಲ್ಯ. ಮಗುವಿನಂತೆ ಬೆನ್ನು ಬಿದ್ದು, ಹೊರಡುವ ಮುಗ್ಧತೆಯೊಂದಿಗೆ ಜೊತೆಯಾಗುವ ಮನದ ಸ್ನೇಹಿತರಾಗೋಣ. ವರ್ಣ ಮಾಲೆಯ ಕೊರಳೊಳಗಿಂದ ಹೊರಟ ಹಕ್ಕಿಗಳ ಇಂಪಾದ ಹಾಡನ್ನು ಇಂಗಿತವನ್ನರಿತು ಅಂತರಂಗದೊಳಗಿಳಿಸಿ ಕೊಳ್ಳಬೇಕಿದೆ. ಬಣ್ಣಗಳ ಹಬ್ಬ ರಂಗಪಂಚಮಿಯು ಸರ್ವರ ಬದುಕಿನಲ್ಲಿಯೂ ರಂಗು ರಂಗಿನ ಸುಖ ಸಂತೋಷಗಳನ್ನು ದಯಪಾಲಿಸಲಿ.
🔆🔆🔆
✍️ ಶ್ರೀ ಚಂದ್ರಶೇಖರ ಹೆಗಡೆ
ಕನ್ನಡ ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೀಳಗಿ. ಜಿ:ಬಾಗಲಕೋಟ