ನಗುಮೊಗದ ಸುಂದರಿ ಅವಳು. ನಕ್ಕಾಗ ನಿಂತು ನೋಡದೆ ಹಿಂತಿರುಗಿ,ಬಹುಶಃ ಅವಳ ನಗುವನ್ನು ಆನಂದಿಸದ ಹುಡುಗನೇ ಇಲ್ಲ. ನಾನೂ ಕೂಡ ಅವರಲ್ಲೊಬ್ಬ. ಮೊದಲನೇ ದಿನವೇ ಅವಳ ನಗುವಿನ ಪರಿಚಯ ನನಗಾಯಿತು. ನಗುತಾ ಮಾತಲ್ಲೇ ಮೋಡಿ ಮಾಡುವ ಕಲೆ ಅವಳದ್ದು.

ಕಿವಿಯಲ್ಲಿ ಓಲೆ, ಕಣ್ಣಲ್ಲಿ ಕಾಡಿಗೆ ಮೊಗದಲ್ಲಿ ನಗೆ. ಅವಳ ಮುಖದಲ್ಲಿ ಅದೇನೋ ತೃಪ್ತಿ, ಜೀವನದ ಸುಖವನ್ನೆಲ್ಲಾ ಅನುಭವಿಸಿದ ಭಾಸ.ಕಾಲೇಜಿನ ಮೊದಲನೆ ದಿನವೇ ಅವಳ ಮಾತನಾಡಿಸುವ ಹಂಬಲದಲ್ಲಿ ನಾನಿದ್ದೆ. ಆದ್ರೆ ಏನು ಹೇಳಬೇಕು ಅಂತ ತೋಚದೆ ಆ ಯೋಚನೆಯನ್ನು ಕೈಬಿಟ್ಟು ಮುಂದೆ ಯಾವಾಗಲಾದರೂ ಮಾತನಾಡಿ ಸುವ ಅಂತ ವಿಚಾರ ಮಾಡಿದೆ.ಅದ್ಯಾಕೋ ಮನಸ್ಸು ವಿಚಿತ್ರವಾಗಿ ವರ್ತಿಸುತ್ತಿತ್ತು. ಎಲ್ಲಿ ಹೋದರೂ ಅವಳದೇ ನಗು, ಎಲ್ಲಿ ನೋಡಿದರೂ ಅದೇ ಭಾವ.ಕನ್ನಡಿಯಲ್ಲಿ ನೋಡಿಕೊಂಡೆ, ಮುಖದಲ್ಲಿ ಎಲ್ಲಿಂದಲೋ ಒಂದು ಮುಗುಳ್ನಗೆ ಬಂದು ಮಾಯ ವಾಯಿತು.

ನಾನಾ ತರಹದ ಭಾವ. ಕಣ್ಣ ಕನ್ನಡಿಯಲ್ಲಿ ಸಂತೋಷದ ತವಕಕ್ಕೆ ಹೃದಯ ತಲ್ಲಣಿಸಿ ಭಾವನೆಗಳಿಗೆ ನೀರೆರೇಚತೊಡಗಿತ್ತು.ಇದೇ ಸುಸಮಯ ಎಂದುಕೊಂಡು ಸುಮ್ಮನಾದೆ. ಅವತ್ತು ಮನಸ್ಸಿಗೆ ನೆಮ್ಮದಿಯೇ ಇರಲಿಲ್ಲ. ಫೇಸ್ಬುಕ್ ನಲ್ಲಿ ಅವಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯ ಮಾಡಿಕೊಳ್ಳಬೇಕು ಎಂದು ಮೊಬೈಲ್ ಹಿಡಿದು ಕೂತಾಗ ಥಟ್ಟನೇ ಆಚೆಯಿಂದ ಒಂದು ಸಂದೇಶ. ಅವಳ ಹೆಸರಿನ ಕೆಳಗೆ – ಇವರು ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ.

ಮಾನಸ ಸರೋವರದಲ್ಲಿ ಈಜಿ, ಮಿಂದೆದ್ದ ಹಾಗಾಯಿತು. ಮನದ ತುಂಬ ಕೋಲಾಹಲ. ಮೊಬೈಲಿನ ಕನ್ನಡಿಯಲ್ಲಿ ಮುಖ ನೋಡಿದೆ, ಅದೆಲ್ಲೋ ಅವಿತಿದ್ದ ಮುಗುಳ್ನಗೆ ಮಿಂಚಿ ಮತ್ತೆ ಕಳೆದುಹೋಗಿತ್ತು. ಗೋಡೆಗೆ ಜಾರಿ ಥಟ್ಟನೇ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿಯೇ ಬಿಟ್ಟೆ. ಮುಂದೆ? ಮಂದಹಾಸ, ಮುಗುಳ್ನಗೆ ಎಲ್ಲ ಮಾಯವಾಗಿ, ಕೈ ಕಾಲು ತೊಳೆದು ಅವಳ ಪ್ರೊಫೈಲ್ ತೆಗೆದು ಅವಳಭಾವಚಿತ್ರ ಗಳನ್ನು ವೀಕ್ಷಿಸುತ್ತಾ ಕುಳಿತಾಗ ಮೂಲೆ ಯಲ್ಲಿ ಅಳುಕು,ತಲೆ ತುಂಬಾ ಭಾವನೆಗಳು, ಮೊಬೈಲ್ ಬದಿಗಿಟ್ಟು ನಿದ್ದೆಗೆ ಜಾರಿದೆ, ಸಮಯ ರಾತ್ರಿ ೧೨.

ಮಾರನೆಯ ದಿನ ಬೆಳಗ್ಗೆ ಎದ್ದಾಗ, ಎರಡು ಸಂದೇಶ ನನಗಾಗಿ ಕಾಯುತ್ತಿದ್ದವು. ತೆಗೆದು ಓದಿದಾಗ ಒಂದು ಅಪ್ಪನ ಗುಡ್ಮಾರ್ನಿಂಗ್ ಮತ್ತು ಅವಳ ಗುಡ್ ನೈಟ್. ಮನದಲ್ಲೆ ಮಂಡಿಗೆ ಮೇಯುತ್ತಾ ಗುಡ್ ಮಾರ್ನಿಂಗ್ ಎಂದು ಬರೆದು ಕಳುಹಿಸಿದೆ. ಅದೇ ಕ್ಷಣ ಅವಳೂ ಗುಡ್ ಮಾರ್ನಿಂಗ್ ❤️ ಎಂದು ರಿಪ್ಲೈ ಕೊಟ್ಟಳು.ಎದೆಯ ತುಂಬ ಮಂಡಿಗೆ ತಿಂದ ಅನುಭವ, ಮನದ ತುಂಬ ತವಕ. ಥಟ್ಟನೇ ಎದ್ದು ಕನ್ನಡಿಯ ಮೇಲೆ ಕಣ್ಣಾಡಿಸಿದೆ, ಮತ್ತದೇ ಮಂದಹಾಸ. ಮುಗುಳ್ನಗೆ ಮಾಯವಾಗಿ ಕಣ್ಣು ಅವಳನ್ನೇ ದಿಟ್ಟಿಸಿ ನೋಡಿದ ಭಾಸ.

              🔆🔆🔆

✍️ ವಿನಯ ಕುಮಾರ ಪಾಟೀಲ.
ಪತ್ರಿಕೋದ್ಯಮ ವಿಭಾಗ,ಎಸ್ ಡಿ ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ
ಉಜಿರೆ.