ತೌಡು ಕುಟ್ಟುತ್ತಾರೆ ಈ ಮೀಡಿಯಾದವರು
ದಿನವೆಲ್ಲ ಎಡಬಿಡದೆ ತೌಡು ಕುಟ್ಟುತ್ತಾರೆ
ನಾಲ್ಕು ಕಾಳಾದರೂ ಅಕ್ಕಿ ಉದರೋದಿಲ್ಲ
ಇರುವ ತೌಡು ಸ್ವಲ್ಪಕೂಡಾ ಕರಗೋದಿಲ್ಲ
ಬರೀ ಧೂಳೆಬ್ಬಿಸಿ ಕುಟ್ಟುತ್ತಲೇ ಇರುತ್ತಾರೆ.!

ಬೆಳ್ಳಂಬೆಳಿಗ್ಗೆ ಒಬ್ಬರ ಹೀರೋ ಮಾಡುವರು
ರಾತ್ರೋರಾತ್ರಿ ಜೀರೋ ಮಾಡಿ ಬಿಡುವರು
ಬೇಕಾದಾಗ ಬಾವುಟವೆತ್ತಿಮೇಲೇರಿಸುವರು
ಬೇಡವಾದಾಗ ಖೆಡ್ಡಾತೋಡಿ ಬೀಳಿಸುವರು
ತಮ್ಮಿಷ್ಟದ ಕಥೆಕಟ್ಟಿ ಕುಣಿಸುವರು ಕಾಲೆಳೆವರು.!

ಅದ್ಯಾರೋ ನಟಿ ಹೆತ್ತಿದ್ದು ಬ್ರೇಕಿಂಗುನ್ಯೂಸು
ಇನ್ಯಾರೋ ನಟ ಬೈದಿದ್ದು ಶೇಕಿಂಗ್ ನ್ಯೂಸು
ನೇತಾರ ಬಟ್ಟೆ ಬಿಚ್ಚಿದ್ದು ಸೆನ್ಸೇಶನಲ್ ನ್ಯೂಸು
ಗಣ್ಯರಿನ್ನೂ ಸಾಯುವ ಮೊದಲೇ ಹಾಕುವರು
“ಸತ್ತರು. ನಮ್ಮಲ್ಲೇ ಮೊದಲು ಫ್ಲಾಶ್ ನ್ಯೂಸು”

ಟಿ.ಆರ್.ಪಿ. ಪೈಪೋಟಿಗಾಗಿ ಎಷ್ಟೆಲ್ಲಾ ನಖರಾ
ನೋಡುವವರ ಮಾಡುತ್ತಾರೆ ನಿತ್ಯವೂ ಬಕರಾ
ದಿನಕ್ಕೊಂದು ಹೊಸದು ಎಕ್ಸಕ್ಲೂಸಿವ್ ಸ್ಟೋರಿ
ಸುಳ್ಳನ್ನೂ ಸತ್ಯವಾಗಿಸುವರು ಮತ್ತೆ ಮತ್ತೆ ತೋರಿ
ಹುಚ್ಚೆಬ್ಬಿಸುವರು ಹೇಳಿದ್ದೇ ಹೇಳಿ ಬಾರಿ ಬಾರಿ.!

ಸುಳ್ಳೆಂಬ ಪೊಳ್ಳು ತೌಡು ಕುಟ್ಟಿಕುಟ್ಟಿ ಕುಟ್ಟುತ್ತಾರೆ
ಒಮ್ಮೆಯೂ ಸತ್ಯವೆಂಬ ಅಕ್ಕಿಕಾಳು ಉದುರಲಿಲ್ಲ
ಆರೋಪಿ ಅಪರಾಧಿಯೆಂದು ಸಾಬೀತಾಗಲಿಲ್ಲ
ಇದುವರೆಗೂ ಯಾವುದಕ್ಕೂ ಫಲಿತಾಂಶವಿಲ್ಲ
ಎಂತಹ ಸುದ್ದಿಯೂ ತಾರ್ಕಿಕ ಅಂತ್ಯ ಕಾಣಲಿಲ್ಲ.!

ಭ್ರಮೆಭ್ರಾಂತಿ ಸೃಷ್ಟಿಸುತ ಮಂಕುಬೂದಿಯೆರಚಿ
ಅನುಕ್ಷಣವೂ ತೌಡುಕುಟ್ಟಿ ಕುಟ್ಟಿ ಧೂಳೆಬ್ಬಿಸುತ
ನಿತ್ಯ ನಮ್ಮನ್ನು ಮೂರ್ಖರಾಗಿಸುತ್ತಲೇ ಇದ್ದಾರೆ.!

            🔆🔆🔆

✍️ ಎ.ಎನ್.ರಮೇಶ್. ಗುಬ್ಬಿ.