ಇರುವುದೊಂದೇ ಬದುಕು ಕೊಂಚ ಉಸಿರಾಡಲು ಬಿಡುವೆಯಾ
ಸಿಕ್ಕ ಅವಕಾಶವನು ತುಸು ಅನುಭವಿಸಲು ಬಿಡುವೆಯಾ

ಸುಂದರ ಕ್ಷಣಗಳಿಗೆ ಮಾತಿನಿರಿತದ ಗಾಯಗಳಾಗಿವೆ
ಸಾವರಿಸಿಕೊಂಡು ಮತ್ತೆ ಮುನ್ನಡೆಯಲು ಬಿಡುವೆಯಾ

ಸ್ವಚ್ಚಂದದ ‌ಹಾರಾಟದ ಹಂಬಲ ನಿನ್ನಂತೆ ನನಗೂ ಇದೆ
ಪಂಜರದ ಬಾಗಿಲು ತೆರೆದು ಹಾರಾಡಲು ಬಿಡುವೆಯಾ

ನಿನ್ನ ಕಡು ವ್ಯಾಮೋಹ ಕೈದಿ ಮಾಡಿ ಬಂಧಿಸದಿರು
ಪುಟ್ಟ ಬದುಕಲಿ ಜಗದೊಂದಿಗೆ ಬೆರೆಯಲು ಬಿಡುವೆಯಾ

ಅಲ್ಪ ಸ್ವಾರ್ಥಕೆ ‘ಆರಾಧ್ಯೆ’ ಯ ಬಾಳ ಸಾರ್ಥಕ್ಯ ಹಾಳಾಗದಿರಲಿ
ಒಬ್ಬಂಟಿತನದ ಹಿಂಸೆಯಿಂದ ಮರೆಯಾಗಲು ಬಿಡುವೆಯಾ

         🔆🔆🔆

✍️ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯಪುರ