ಯಶಸ್ಸು ಎಂಬುವುದು ಯಾರೊಬ್ಬರ ಸೊತ್ತು ಅಲ್ಲ . ಸಾಧಿಸಬೇಕೆಂಬ ಹಂಬಲವಿದ್ದರೆ ಬಡತನ, ಅಂಗವಿಕಲತೆ ಮುಂತಾದ ಎಂಬ ತೊಡಕುಗಳು ಗೌಣವಾಗುತ್ತದೆ. ಬದುಕಿನಲ್ಲಿ ಭರವಸೆಯೊಂದಿಗೆ ಏನನ್ನಾದರು ಸಾದಿಸುವೆ ಎಂಬ ಛಲವಿದ್ದವರು ಮಾತ್ರ ಸಾಧಿಸಲು ಸಾಧ್ಯ.
ಕಠಿಣ ಪರಿಶ್ರಮ ಅಚಲ ವಿಶ್ವಾಸದೊಂದಿಗೆ ಅಸಾಧ್ಯವಾದುದನ್ನು ಸಾಧಿಸಿದವರ ಹಲವಾರು ಉದಾಹರಣೆ ನಮ್ಮ ಕಣ್ಣಮುಂದೆ ಇದೆ. ಹುಟ್ಟಿನಿಂದಲೇ ಎರಡು ಕೈಗಳು ಇಲ್ಲದಿದ್ದರೂ ನಾನು ಎಲ್ಲರಂತೆ ಬದುಕಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡು ಸ್ವಾವಲಂಬಿ ಜೀವನವನ್ನು ನಡೆಸುತ್ತಿರುವ ಭಾರತೀಯ ಮಹಿಳಾ ಸಾಧಕಿ ಪ್ರಶಸ್ತಿ ಪುರಸ್ಕೃತೆ ಸಬಿತಾ ಮೊನಿಸ್ ಅವರು ಅಂಗವೈಕಲ್ಯತೆ ಸಮಸ್ಯೆಯಲ್ಲ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದ್ದಾರೆ. ಕೈ ಗಳಿಲ್ಲ ಎಂಬುವುದನ್ನು ಕಾರಣವಾಗಿಟ್ಟುಕೊಳ್ಳದೆ ಕಾಲಿನ ಮೂಲಕ ಪರೀಕ್ಷೆ ಪಡೆದು ಉನ್ನತ ವಿದ್ಯಾಭ್ಯಾಸ ಪಡೆದಿರುವ ಇವರು ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಕಾಲಿನಲ್ಲಿ ಮತ ಚಲಾಯಿಸುವಮೂಲಕ ಪ್ರಜಾಪ್ರಭುತ್ವಕ್ಕೆ ಗೌರವ ಸಲ್ಲಿಸುವ ಇವರ ಗುಣ ಎಲ್ಲರಿಗೆ ಮಾದರಿಯಾಗಿದೆ. ದೇವರು ನನ್ನ ಹಣೆಬರಹದಲ್ಲಿ ಬರೆದಿಲ್ಲ ಎಂಬ ಪೊಳ್ಳು ನೆಪಗಳನಿಟ್ಟುಕೊಂಡು ಬದುಕಿನಲ್ಲಿ ಏನನ್ನು ಸಾದಿಸದವರು ಇವರನ್ನು ನೋಡಿ ಪಾಠಕಲಿಯಬೇಕು.
ಜೀವನದಲ್ಲಿ ಆಗುವ ಸಣ್ಣ ಸಣ್ಣ ನೋವು ಆಘಾತಗಳಿಗೆ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವ ಯುವಜನತೆ ಒಮ್ಮೆ, ಒಂಟಿ ಕಾಲಿನಲ್ಲಿ ಮೌಂಟ್ ಎವರೆಸ್ಟ್ ಏರಿದ ಅರುಣಿಮ ಸಿನ್ಹಾ ರ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ದರೋಡೆಕೊರರಿಂದ ರೈಲಿನಿಂದ ತಲ್ಲಲ್ಪಟ್ಟ ಅರುಣಿಮಾ ಅವರ ಕಾಲಿನ ಮೇಲೆ ರೈಲು ಹರಿದು ಶಾಶ್ವತವಾಗಿ ತಮ್ಮ ಒಂದು ಕಾಲನ್ನು ಕಳೆದುಕೊಂಡರು. ಇದರಿಂದ ದೃತಿಗೆಡದೆ ತಾನು ವಿಶೇಷವಾಗಿ ಏನನ್ನಾದರು ಸಾಧಿಸಬೇಕೆಂಬ ಛಲದೊಂದಿಗೆ ಮುನ್ನಡೆದರು. ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಬಚೇಂದ್ರಿ ಪಾಲ್ ಅವರಿಂದ ನಿರಂತರ ತರಬೇತಿ ಪಡೆದ ಅರುಣಿಮಾ 2012 ರಲ್ಲಿ ಜಗತ್ತಿನ ಅತೀ ಎತ್ತರದ ಹಿಮಶಿಖರ ಮೌಂಟ್ ಎವರೆಸ್ಟ್ನ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಅಂದು ಕಾಲನ್ನು ಕಳೆದುಕೊಂಡ ದುಃಖದಲ್ಲಿ ಅರುಣಿಮಾ ಸುಮ್ಮನೆ ಕೂರುತ್ತಿದ್ದರೆ ಇಂದು ಅರುಣಿಮಾ ಎಂದರೆ ಯಾರೆಂದು ನಮಗೆ ತಿಳಿಯುತ್ತಿರಲಿಲ್ಲ.
ಕೆ.ಎಫ್.ಸಿ ಈ ಹೆಸರು ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತವಾದದ್ದು . ಜಗತ್ತಿನ ಆಹಾರೋದ್ಯಮದಲ್ಲಿ ಮೈಲುಗೈಳನ್ನು ಸ್ಥಾಪಿಸಿದ ಈ ಉದ್ಯಮವನ್ನು ಆರಂಭಿಸಿದ್ದು 65 ವರ್ಷದ ಕರ್ನಲ್ ಹಾರ್ಲಾಂಡ್ ಸ್ಯಾಂಡರ್ಸ್. 60 ವರ್ಷದವರೆಗೂ ಹಲವಾರು ಕಷ್ಟ ನೋವು ಸೋಲನ್ನು ಕಂಡ ಸ್ಯಾಂಡರ್ಸ್ ಜೀವನದ ಕೊನೆಯ 15 ವರ್ಷಗಳಲ್ಲಿ ಕೆ ಎಫ್ ಸಿ ಎಂಬ ರೆಸಿಪಿಯ ಮೂಲಕ ಕೋಟ್ಯಾಂತರ ಮಾಲ್ಯದ ಆಸ್ತಿಯ ಒಡೆಯನಾದ . ಬದುಕಿನಲ್ಲಿ ಯಾವಾಗ ಯಶಸ್ಸು ಲಭಿಸುತ್ತದೆ ಎಂದು ಹೇಳುವುದು ಕಷ್ಟ. ಆ ಒಂದು ತಿರುವಿಗಾಗಿ ಸಾಕಷ್ಟು ಕ್ರಮಿಸಬೇಕಾಗುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ನಿರಂತರ ಪ್ರಯತ್ನಪಡುವವನು ಸಾರ್ಥಕ್ಯದ ಯಶಸ್ಸನ್ನು ಪಡೆಯಬಹುದು. ಒಂದೇ ದಿನದಲ್ಲಿ ಶ್ರೀಮಂತನಾಗಬೇಕೆಂದರೆ ಸಾಧ್ಯವಿಲ್ಲ ಏನು ಪ್ರಯತ್ನ ಪಡದೆ ಕ್ಷಣಮಾತ್ರದಲ್ಲಿ ದೊರಕಿದ ಯಶಸ್ಸು ನೀರಿನ ಮೇಲಿನ ಗುಳ್ಳೆಯಂತೆ.
ಒಂದು ಬಲವಾದ ನಂಬಿಕೆ, ಗೆದ್ದೇ ಗೆಲ್ಲುತ್ತೇನೆ ಎಂಬ ಹಠ ಮತ್ತು ಪರಿಶ್ರಮವಿದ್ದರೆ ಬೆಟ್ಟವನ್ನು ತನ್ನ ಕಾಲಡಿಗೆ ತರಬಹುದು. ಇಂದು ಆಳಗಿದ್ದವನು ನಾಳೆ ಅರಸನಾಗಬಹುದು. ಬೀದಿ ದೀಪದಡಿ ಓದಿದ ವಿಶ್ವೇಶ್ವರಯ್ಯ ಶ್ರೇಷ್ಠ ಇಂಜಿನಿಯರ್, ತಮಿಳುನಾಡಿನ ಹಳ್ಳಿಯಲ್ಲಿದ್ದ ಬೆಳೆದ ಹುಡುಗ ಮುಂದೆ ಕ್ಷಿಪಣಿ ಬ್ರಹ್ಮ, ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಹುಡುಗ ಭಾರತದ ಶ್ರೇಷ್ಠ ಪ್ರಧಾನಿ ಮತ್ತು ಪತ್ರಿಕೆ ಮಾರುತಿದ್ದ ಬಾಲಕ ಅಮೆರಿಕಾದ ಅಧ್ಯಕ್ಷ ಆಗಬಹುದಾದರೆ ನಮಗೇಕೆ ಸಾಧ್ಯವಿಲ್ಲ.

            🔆🔆🔆

✍️ಜಗದೀಶ ಬಳಂಜ ಎಂ.ಸಿ.ಜೆ. ವಿದ್ಯಾರ್ಥಿ ಎಸ್. ಡಿ.ಎಮ್. ಕಾಲೇಜು, ಉಜಿರೆ