ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತು ಮಾನವನಾದವನಿಗೆ ಆಸೆ ಸಹಜ, ಆದರೆ ಅತಿಯಾಸೆಯಿಂದ ಎನ್ನನ್ನೂ ಪಡೆಯಬಾರದು ಎಂಬುದನ್ನು ತಿಳಿಸಲು ಮಾಡಿದ ಒಂದು ಬಗೆ ಗಾದೆ ಮಾತಾಗಿದೆ . ಮಾನವನಿಗೆ ಆಸೆ-ಆಕಾಂಕ್ಷೆ ,ಕನಸು ಇತ್ಯಾದಿಗಳು ಇರುವುದು ಸಹಜ . ಆದರೆ ಅವುಗಳು ಒಂದು ಮಿತಿಯಲ್ಲಿ ಇದ್ದರಷ್ಟೇ ಚಂದ. ಅದು ಅತಿಯಾದಾಗ ನಮ್ಮ ನಾಶಕ್ಕೆ ಕಾರಣವಾಗಬಹುದು. ಹಾಗಾಗಿ ತಿಳಿದವರು ಹೇಳಿದಂತೆ ನಮ್ಮ ಮಿತಿ ಎಲ್ಲಿಯವರೆಗೆ ಇರುತ್ತದೆಯೊ ಅಲ್ಲಿಯವರೆಗೆ ನಾವು ನಮ್ಮ ಕಾಲನ್ನು ಚಾಚುವ ಕೆಲಸಮಾಡೋಣ.
ಈ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತಿಗೆ ಅದರದೆ ಆದ ಒಂದು ಅರ್ಥವಿದೆ . ಏಕೆಂದರೆ ಒಂದು ಸಮಾಜದಲ್ಲಿ ಮಾನವನು ತನ್ನ ಜೀವನ ಕ್ರಮಕ್ಕೆ ಒಂದು ಚೌಕಟ್ಟನ್ನು ಹಾಕಿಕೊಂಡು ಜೀವಿಸುತ್ತಿರು ತ್ತಾನೆ , ಯಾವಾಗ ಆ ಚೌಕಟ್ಟನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತಾನೊ ಆಗ ಅವನಿಗೆ ಆತಿಯಾಸೆಯ ಗೀಳು ಪ್ರಾರಂಭ ವಾಗಿದೆ ಅಂತಲೆ ಅರ್ಥ . ತನ್ನ ಅವಶ್ಯಕತೆ ಗಿಂತಲೂ ಹೆಚ್ಚಾಗಿ ಯಾವಾಗ ಹಣ , ಸ್ಥಾನ -ಮಾನ , ಸಂಪತ್ತು ಇತ್ಯಾದಿಗಳನ್ನು ಪಡೆಯಲು ಪ್ರಯತ್ನಿಸುತ್ತಾನೊ ಆಗಲೆ ಆತ ತನ್ನ ಕಾಲನ್ನು ಹಾಸಿಗೆಯ ಆಚೆಯೂ ಇಡುತ್ತಿದ್ದಾನೆ ಎಂಬ ಅರ್ಥಬರುತ್ತದೆ.
ಇದಕ್ಕೊಂದು ಸಣ್ಣ ಉದಾಹರಣೆ ಕೊಡುವುದಾದರೆ ಒಂದು ಊರಿನಲ್ಲಿ ಒಬ್ಬ ಚಿನ್ನದ ವ್ಯಾಪಾರಿ ಇದ್ದ . ಆತನು ತನ್ನ ಮಗಳಿಗೆ ಮದುವೆ ಮಾಡಬೇಕೆಂದು ತನ್ನ ಊರಿನಲ್ಲೆ ಒಬ್ಬ ಹುಡುಗನನ್ನು ಹುಡುಕುತಿದ್ದ . ಅವನಿಗೆ ತನ್ನ ಅಳಿಯನಾಗಿ ಬರುವವನು ತನ್ನ ಮನೆಯಲ್ಲೆ ಇದ್ದು ತನ್ನ ನಂತರ ಅವನೆ ತನ್ನ ಈ ವ್ಯಾಪಾರ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬ ಆಸೆ . ಹಾಗೆ ಮನೆಗೆ ಬರುವ ಅಳಿಯ ಅತಿ ಶ್ರೀಮಂತನಾಗಿರ ಬೇಕು,ಆಗ ಅವನ ಆಸ್ತಿಯು ತನ್ನ ಮನೆಗೆ ಸೇರುತ್ತದೆಂಬ ದುರಾಸೆ. ಹಾಗೆ ಅವನಿಗೆ ತಂದೆ ತಾಯಿಯು ಇರಬಾರದೆಂಬ ಷರತ್ತು . ಈ ಎಲ್ಲಾ ಕರಾರಿನ ಅಡಿಯಲ್ಲಿ ಆ ವ್ಯಾಪಾರಿ ತನ್ನ ಮಗಳಿಗೆ ಗಂಡನನ್ನು ಹುಡುಕುತ್ತಿದ್ದ .ಆದರೆ ಇವನ ಷರತ್ತಿಗೆ ಒಪ್ಪುವಂತ ಹುಡುಗ ಆ ಊರಿನಲ್ಲಿ ಇರಲಿಲ್ಲ . ಅದಕ್ಕಾಗಿ ಆತ ತನ್ನ ಸುತ್ತಮುತ್ತಲಿನ ಹಳ್ಳಿಯಲ್ಲಿ ಹುಡುಗನ್ನನ್ನು ಹುಡುಕಲು ಪ್ರಾರಂಭಿಸಿದ . ಆದರೂ ಅವನಿಗೆ ಒಪ್ಪುವಂತ ಯಾವ ಹುಡುಗನು ಅಲ್ಲಿನ ಸುತ್ತಮುತ್ತ ಹಳ್ಳಿಯಲ್ಲೂ ಇರಲಿಲ್ಲ .
ಹೀಗೆ ಈತ ಹುಡುಗನ್ನನ್ನು ಹುಡುಕುತ್ತಿರುವಾಗ ಒಂದು ದಿನ ವ್ಯಾಪಾರಿಯ ಮನೆಗೆ ನಗರದ ಅತಿ ಶ್ರೀಮಂತ ವ್ಯಕ್ತಿಯೊಬ್ಬ ಬಂದು ನನ್ನ ಮಗನಿಗೆ ನಿಮ್ಮ ಮಗಳನ್ನು ಕೊಡಬಹುದೆ ಎಂದು ಕೇಳಿಕೊಂಡಾಗ, ವ್ಯಾಪಾರಿಯು ತನ್ನ ಮಗಳನ್ನು ಕೊಡಲು ನಿರಾಕರಿಸುತ್ತಾನೆ . ಏಕೆಂದರೆ ಹುಡುಗನ ತಂದೆ ಇನ್ನು ಬದುಕಿದ್ದಾನೆ, ಅವನಿಗೆ (ಹುಡುಗ ) ಒಂದು ತಂಗಿಕೂಡಾ ಇದ್ದಾಳೆಂದು. ಹಾಗೆ ಸಮಯ ಕಳೆದಂತೆ ಹೊಸ ಹೊಸ ಸಂಬಂಧಗಳು ಬಂದವು ಆದರೆ ಈ ವ್ಯಾಪಾರಿಗೆ ಯಾವ ಸಂಬಂಧವು ಸರಿಹೊಂದಲಿಲ್ಲ . ಅದೆ ಸಮಯದಲ್ಲಿ ಆ ಊರಿನ ಅತಿ ಬಡವನೊಬ್ಬ ಅವನ ಮನೆಗೆ ಬಂದು ನನಗೆ ನಿಮ್ಮ ಮಗಳನ್ನು ಕೊಡಬಹುದೆ ಎಂದು ಕೇಳಿಕೊಂಡ. ಆಗ ಆ ವ್ಯಾಪಾರಿ ಅವನನ್ನು ನೋಡಿ ಅವನ ಮುಖಕ್ಕೆ ಬಾಯಿಯಿಂದ ತನ್ನ ಎಂಜಲನ್ನು ಉಗಿದು ಛಿ ಮಾರಿ ಹಾಕಿ ಅಲ್ಲಿಂದ ಓಡಿಸೆಯೆ ಬಿಟ್ಟ . ಇದಾದ ನಂತರ ಆ ಊರಿನ ಜನರೆಲ್ಲಾ ಈ ವ್ಯಾಪಾರಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ನಿರ್ಧಾರ ಮಾಡಿದರು .
ಅದೆ ಊರಿನ ಭಿಕ್ಷುಕನೊಬ್ಬನನ್ನು ಕರೆದು ಅವನಿಗೆ ಆ ವ್ಯಾಪಾರಿಗೆ ಬುದ್ಧಿ ಕಲಿಸಲು ಒಂದು ನಾಟಕ ಮಾಡುವಂತೆ ಹೇಳಿದರು. ಅದೆ ನಾಟಕದಂತೆ ಆ ಭಿಕ್ಷುಕ ಅತಿ ಶ್ರೀಮಂತನಂತೆ ವಸ್ತ್ರ ,ಆಭರಣವನ್ನೆಲ್ಲ ತೊಟ್ಟು ಆ ವ್ಯಾಪಾರಿ ಮನೆಗೆ ಬಂದನು. ನನಗೆ ನಿಮ್ಮ ಮಗಳು ತುಂಬಾ ಇಷ್ಟವಾಗಿದ್ದಾಳೆ ನಾನು ಅವಳನ್ನು ಮದುವೆಯಾಗಲೆ, ನೀವು ಷರತ್ತಿನಲ್ಲಿ ತಿಳಿಸಿರುವ ಎಲ್ಲಾ ಅಂಶಗಳು ನನಗೆ ಒಪ್ಪಿಗೆಯಿದೆ . ನನಗೆ ನನ್ನವರು ಯಾರು ಇಲ್ಲ . ನೀವು ಒಪ್ಪಿಗೆ ನೀಡಿದರೆ ನಿಮ್ಮ ಮಗಳನ್ನು ವರಿಸುತ್ತೇನೆಂದು ಹೇಳಿದನು. ಆಗ ವ್ಯಾಪಾರಿಯು ಹುಡುಗನ ಹಿಂದೆ ಮುಂದೆ ವಿಚಾರಿಸದೆ ತನ್ನ ಆಸೆಗಳೆಲ್ಲ ನೆರವೇರುತ್ತದೆ ಎಂಬ ದುರಾಸೆಯಿಂದ ಅವನನ್ನು ಒಪ್ಪಿಕೊಂಡನು. ಹಾಗೆಯೆ ತನ್ನ ಮಗಳ ಮತ್ತು ಅವನ ಮದುವೆಗೆ ಸಿದ್ದತೆಯನ್ನು ನೆಡೆಸಿದನು. ಕೊನೆಗೆ ಭಿಕ್ಷುಕನಿಗೂ ವ್ಯಾಪಾರಿ ಮಗಳಿಗೂ ಮದುವೆಯಾಯಿತು .
ಇದಾದ ನಂತರ ಊರಿನವರೆಲ್ಲ ಬಂದು ಸತ್ಯಸಂಗತಿಯನ್ನು ಆ ವ್ಯಾಪಾರಿಗೆ ತಿಳಿಸಿದರು. ಹಾಗೆ ಅವನಲ್ಲಿದ್ದ ಜಂಬಕ್ಕೂ ಒಂದು ಪಾಠಕಳಿಸಿದರು. ಅವನು ಪಟ್ಟಿದ್ದ ಆಸೆಯೆಲ್ಲಾ ನಿರಾಸೆ ಆಗಿ ಒಂದು ಸರಿಯಾದ ಪಾಠವನ್ನು ಕಲಿತನು. ಹೀಗೆ ನಾವು ನಮ್ಮ ಮಿತಿಯನ್ನು ಮೀರಿ , ನಮ್ಮ ಯೋಗ್ಯತೆಗಿಂತಲೂ ಹೆಚ್ಚಿನ ಆಸೆ ಪಟ್ಟಾಗ ಅದು ನಿರಾಸೆಗೆ ಕಾರಣವಾಗುತ್ತದೆ . ಹಾಗಾಗಿ ನಾವು ಹಾಸಿಗೆ ಇದ್ದಷ್ಟೇ ಕಾಲು ಚಾಚಲು ಪ್ರಯತ್ನಿಸಬೇಕು.

               🔆🔆🔆

✍️ ಪ್ರಣವ್ ಎಮ್
ಎಸ್. ಡಿ. ಎಮ್. ಕಾಲೇಜ್, ಉಜಿರೆ