ಭಾರತ ವಿಸ್ಮಯಗಳಿಂದ ತುಂಬಿರುವ ದೇಶ. ಇಲ್ಲಿನ ಜೀವನಶೈಲಿ, ಆಹಾರ, ಆಚರಣೆಗಳು, ಸಂಸ್ಕೃತಿ ಮತ್ತು ದೇವಾಲಯಗಳು ಎಲ್ಲಕ್ಕೂ ಅದರದೇ ಆದ ವಿಶೇಷತೆಗಳಿವೆ. ಅದರಲ್ಲಿಯೂ ಭಾರತದ ದೇವಾಲಯಗಳು ಹಲವಾರು ವಿಸ್ಮಯ ಮತ್ತು ನಿಗೂಢತೆಗಳನ್ನು ತನ್ನಲ್ಲಿ ಅಡಗಿಸಿಕೊಂಡಿವೆ. ಶಿವ ಮತ್ತು ವಿಷ್ಣು ದೇವಾಲಯಗಳನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಹೊಂದಿರುವುದು ನಮ್ಮ ದಕ್ಷಿಣ ಭಾರತದ ಹೆಮ್ಮೆ. ಇಂದು ನಾನು ಪಂಚಭೂತ ತತ್ವಗಳ ಆಧಾರದ ಮೇಲೆ ನಿರ್ಮಿತವಾದ ಐದು ಶಿವಾಲಯಗಳ ಕುರಿತು ಹೇಳಲು ಹೊರಟಿದ್ದೇನೆ.
ಅಗ್ನಿ, ವಾಯು, ಜಲ, ಭೂಮಿ ಮತ್ತು ಆಕಾಶಗಳಿಗೆ ‘ಪಂಚಭೂತಗಳು’ ಎಂದು ವಿಶೇಷ ಸ್ಥಾನವನ್ನು ಕೊಟ್ಟು, ನಮ್ಮ ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ಸೃಷ್ಟಿಯ ಮೂಲ ಎಂದೇ ಪರಿಗಣಿಸಲ್ಪಡುವ ಈ ಐದು ತತ್ವಗಳ ಆಧಾರದ ಮೇಲೆ ನಮ್ಮ ಜೀವನ ನಿಂತಿದೆ. ಈ ಶಿವಾಲಯಗಳು ಸಹ ಪಂಚಭೂತಗಳ ಪ್ರಾಮುಖ್ಯತೆಯನ್ನು ಶತಶತಮಾನದಿಂದ ಸಾರುತ್ತಲೇ ಬಂದಿವೆ. ಸುಮಾರು ೨೫೦೦-೩೦೦೦ ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ದೇವಾಲಯಗಳು ನಮ್ಮ ಪೂರ್ವಜರ ವಿಜ್ಞಾನದ ಬಗೆಗಿನ ಜ್ಞಾನ ಮತ್ತು ಆಸಕ್ತಿಯನ್ನು ತಿಳಿಸುತ್ತವೆ. ಈ ದೇವಾಲಯಗಳು ಇಂದಿನ science centre ಗಳಂತೆ ಗೋಚರಿಸುತ್ತವೆ. ನಮ್ಮ ಎಲ್ಲಾ ವಿಜ್ಞಾನದ ಮೇಲಿನ ಪ್ರಶ್ನೆಗಳಿಗೆ, ಕುತೂಹಲಗಳಿಗೆ ತಮ್ಮಲ್ಲಿ ಉತ್ತರಗಳನ್ನು ಹೊಂದಿವೆ.

೧. ಅಗ್ನಿ ಲಿಂಗ

ಭಾರತದ ದಕ್ಷಿಣದಲ್ಲಿರುವ ತಮಿಳುನಾಡಿನ ತಿರುವಣ್ಣಾಮಲೈನ ಅಣ್ಣಾಮಲೈ ದೇವಾಲಯ ಅಗ್ನಿ ತತ್ವದ ಆಧಾರದ ಮೇಲೆ ನಿರ್ಮಾಣವಾಗಿರುವ ಶಿವಾಲಯ. ಇದಕ್ಕೆ ಸಾಕ್ಷಿಯೆಂಬಂತೆ ಈ ದೇವಾಲಯದ ಶಿವಲಿಂಗದ ಬಳಿ ಅತಿ ಹೆಚ್ಚು ಉಷ್ಣಾಂಶ ದಾಖಲೆಯಾಗುತ್ತದೆ. ೩೦-೪೦°c ಉಷ್ಣಾಂಶ ಸದಾಕಾಲ ದೇವಾಲಯದ ಗರ್ಭಗುಡಿಯಲ್ಲಿ ಇರುತ್ತದೆ. ಇದು ಅರುಣಾಚಲ ಬೆಟ್ಟದ ತಪ್ಪಲಲ್ಲಿದೆ. ಅರುಣಾಚಲ ಬೆಟ್ಟವು ಸಾಧು-ಸಂತರ, ಆಯುರ್ವೇದ ಪಂಡಿತರನ್ನು ಹೇರಳವಾಗಿ ಹೊಂದಿದೆ. ಈ ಬೆಟ್ಟದ ತಪ್ಪಲಲ್ಲಿ ಇರುವುದರಿಂದ ಇಲ್ಲಿನ ಶಿವನನ್ನು ಅರುಣಾಚಲೇಶ್ವರ ಎಂದು ಸಹ ಕರೆಯುತ್ತಾರೆ. ಒಮ್ಮೆ ಪಾರ್ವತಿ ಮತ್ತು ಶಿವ ಏಕಾಂತದಲ್ಲಿರುವಾಗ ಅಕಸ್ಮಾತಾಗಿ ಮಾತೆ ಪಾರ್ವತಿ ಶಿವನ ಕಣ್ಣನ್ನು ಮುಚ್ಚುತ್ತಾಳೆ. ಆಗ ಇಡೀ ಪ್ರಪಂಚವೇ ಕತ್ತಲಲ್ಲಿ ಮುಳುಗುತ್ತದೆ. ತನ್ನ ಈ ಸಲ್ಲಾಪವು ಸೃಷ್ಟಿಯಲ್ಲಿ ವ್ಯತ್ಯಾಸವುಂಟು ಮಾಡಬಾರದೆಂದು ತಿಳಿದು ಮಾತೆಯು ಶಿವನಲ್ಲಿ ಕತ್ತಲನ್ನು ದೂರಗಿಸುವಂತೆ ಬೇಡುತ್ತಾಳೆ. ಆಗ ಶಿವನು ಜ್ಯೋತಿ ಸ್ವರೂಪದಲ್ಲಿ ಅರುಣಾಚಲ ಬೆಟ್ಟದ ಮೇಲೆ ಪ್ರತ್ಯಕ್ಷನಾಗಿ, ಕತ್ತಲನ್ನು ದೂರ ಗೊಳಿಸಿದ ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಅರುಣಾಚಲ ಬೆಟ್ಟವು ಸಹ ಶಿವಲಿಂಗದ ರೂಪದಲ್ಲಿದೆ. ಹೀಗಾಗಿ ಇಂದಿಗೂ ಸಹ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಬೆಟ್ಟದ ಮೇಲೆ ಒಂದು ಬೃಹತ್ ಜ್ಯೋತಿಯನ್ನು ಬೆಳಗಿಸುವುದು ಇಲ್ಲಿನ ಪದ್ಧತಿ.

ತಿರುವಣ್ಣಾಮಲೈನ ಅಣ್ಣಮಲೈ ದೇವಾಲಯ ‘ಪ್ರಪಂಚದ ಅತಿ ದೊಡ್ಡ ಶಿವಾಲಯ’ ಎಂಬ ಖ್ಯಾತಿ ಪಡೆದಿದೆ. ಇದು ಸುಮಾರು ೧೨೫ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ದೇವಾಲಯ. ನಾಲ್ಕು ದಿಕ್ಕುಗಳಲ್ಲೂ ೪ ರಾಜ ಗೋಪುರ ಹಾಗೂ ದ್ವಾರವನ್ನು ಹೊಂದಿದೆ. ಪೂರ್ವದಲ್ಲಿನ ವಿಮಾನ ಗೋಪುರ ಸುಮಾರು ೨೧೭ ಅಡಿ ಎತ್ತರವಾಗಿದೆ. ಸಾಮಾನ್ಯವಾಗಿ ಶಿವನ ದೇವಾಲಯಗಳಲ್ಲಿ ತ್ರಿಕಾಲ ಅಥವಾ ನಾಲ್ಕು ಜಾವದ ಪೂಜೆಗಳನ್ನು ನೆರವೇರಿ ಸುತ್ತಾರೆ. ಆದರೆ ಇಲ್ಲಿ ೬ ಬಾರಿ ಪೂಜೆ ಯನ್ನು ಪ್ರತಿದಿನವೂ ನೆರವೇರಿಸುತ್ತಾರೆ. ಇಲ್ಲಿನ ಅರ್ಚಕರ ಪ್ರಕಾರ ದೇವಾಲಯದ ಗರ್ಭಗುಡಿಯ ಒಳಗೆ ಬೇಸಿಗೆ ಕಾಲದಲ್ಲಿ ಹೋಗುವುದು ಬಹಳ ಕಷ್ಟವಂತೆ. ಈ ಸಮಯದಲ್ಲಿ ಉಷ್ಣಾಂಶ ೪೦°c ಮೀರುತ್ತದೆ. ಚಳಿ ಮತ್ತು ಮಳೆಗಾಲದಲ್ಲಿ ದೇವಾಲಯದ ಗರ್ಭಗುಡಿ ಬೆಚ್ಚಗಿರುತ್ತದೆ ಎಂದು ಅರ್ಚಕರು ವರದಿ ಮಾಡುತ್ತಾರೆ.
ಇದಿಷ್ಟು ಅಗ್ನಿ ಲಿಂಗದ ಬಗೆಗಿನ ಸಣ್ಣ ಪರಿಚಯ.

೨) ವಾಯು ಲಿಂಗ

ದಕ್ಷಿಣ ಭಾರತದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಶ್ರೀಕಾಳಹಸ್ತೀಶ್ವರ ವಾಯು ತತ್ವದ ಆಧಾರದ ಮೇಲೆ ನಿರ್ಮಾಣವಾಗಿರುವ ಶಿವಾಲಯ. ಇದು ಕೈಲಾಸಗಿರಿ ಎಂಬ ಬೆಟ್ಟದ ಪಕ್ಕದಲ್ಲಿರುವು ದರಿಂದ ಇದನ್ನು ದಕ್ಷಿಣ ಕೈಲಾಸ ಎಂದು ಕರೆಯುತ್ತಾರೆ. ಈ ದೇವಾಲಯಕ್ಕೆ ಶ್ರೀಕಾಳಹಸ್ತಿ ಎಂದು ಹೆಸರು ಬರಲು ಮೂಲ ಕಾರಣ ಇಲ್ಲಿ ಜೇಡ, ಹಾವು ಮತ್ತು ಆನೆ ಇಲ್ಲಿನ ಶಿವಲಿಂಗವನ್ನು ಪೂಜಿಸಿ ಮುಕ್ತಿ ಹೊಂದಿದವು ಎಂಬ ಪುರಾಣದ ಕಥೆ.

ಶ್ರೀ ಎಂದರೆ ಜೇಡ ಕಾಳ ಎಂದರೆ ಹಾವು ಮತ್ತು ಹಸ್ತಿ ಎಂದರೆ ಆನೆ ಎಂದರ್ಥ. ಇಲ್ಲಿರುವ ಶಿವಲಿಂಗಕ್ಕೆ ಬಿಸಿಲು, ಧೂಳು ಬೀಳದಂತೆ ಜೇಡ ತನ್ನ ಬಲೆ ಹೆಣೆದಿತ್ತು, ಹಾವು ತನ್ನ ನಾಗಮಣಿಯನ್ನು ಇಟ್ಟು ಪೂಜಿಸುತ್ತು, ಆನೆ ಪ್ರತಿನಿತ್ಯವೂ ಸ್ವರ್ಣಮುಖಿ ನದಿಯ ನೀರಿನಿಂದ ಅಭಿಷೇಕವನು ಮಾಡಿ ಮುಕ್ತಿಯನ್ನು ಹೊಂದಿದವು ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಇದಕ್ಕೆ ಪೂರಕವಾಗುವಂತೆ ದೇವಾಲಯದಲ್ಲಿ ಈ ಪ್ರಾಣಿಗಳ ಕೆತ್ತನೆಯನ್ನು ಕಾಣಬಹುದು. ಇಲ್ಲಿನ ಶಿವಲಿಂಗ ಚೌಕಾಕಾರವಾಗಿದ್ದು ಇದನ್ನು ಬ್ರಹ್ಮದೇವರು ಪ್ರತಿಷ್ಠಾಪಿಸಿದರೆಂದು ನಂಬಿಕೆಯಿದೆ. ಸೃಷ್ಟಿಯ ಪ್ರಾರಂಭದಲ್ಲಿ ವಾಯುದೇವ ಈ ಜಾಗದಲ್ಲಿ ಶಿವನನ್ನು ಕುರಿತು ತಪಸ್ಸನ್ನಾಚರಿಸಿ, ಮೂರು ವರಗಳನ್ನು ಪಡೆದು ಕೊಂಡನಂತೆ. ತಾನು ಎಲ್ಲಾ ಜೀವರಾಶಿಯ ಉಸಿರಾಗುವಂತೆ, ತಾನು ಪ್ರಪಂಚದ ಎಲ್ಲಾ ಭಾಗದಲ್ಲಿಯೂ ಲಭ್ಯವಾಗುವಂತೆ ಹಾಗೂ ತಾನು ಪೂಜಿಸಿದ ಕರ್ಪೂರ ಲಿಂಗ ಹಿಂದೆ ಮುಂದೆ ಪೂಜಿಸಲ್ಪಡುವ ವರಗಳನ್ನು ಪಡೆದು ಕೊಳ್ಳುತ್ತಾನೆ ಎಂದು ವಾಯು ಪುರಾಣದಲ್ಲಿ ಉಲ್ಲೇಖವಿದೆ. ಇಲ್ಲಿ ಗಾಳಿಯ ವೇಗ ಬೇರೆಲ್ಲಾ ಪ್ರದೇಶಗಳಿಗೆ ಹೋಲಿಸಿದರೆ ಅತಿ ಕಡಿಮೆ ಇದ್ದು, ವಾಯುದೇವ ಇನ್ನೂ ತಪಸ್ಸನ್ನಾಚರಿಸುತ್ತಿರುವುದರಿಂದ, ಅವನ ಆರ್ಭಟ ಇಲ್ಲಿ ಕಮ್ಮಿ ಎಂದು ಜನರ ನಂಬಿಕೆ. ದೇವರ ಮುಂದಿರುವ ದೀಪವು ಸ್ವಲ್ಪವೂ ವಿಚಲಿತಗೊಳ್ಳದೆಪ್ರಜ್ವಲಿಸುವುದು ದೇವಾಲಯದ ವಿಶೇಷಗಳಲ್ಲೊಂದು. ಬ್ರಹ್ಮನಿಗೆ ಇಲ್ಲಿ ಜ್ಞಾನಪ್ರಾಪ್ತಿಯಾಗಿದ್ದರಿಂದ, ಆತ ನಾಲ್ಕು ಯುಗದಲ್ಲಿಯೂ ಸಹ ಶಿವನ ಪೂಜೆಯನ್ನು ಇಲ್ಲಿ ಮಾಡುತ್ತಿದ್ದಾನೆ ಎಂದು ಸ್ಥಳಪುರಾಣವಿದೆ.

ಅದಲ್ಲದೆ ನಮಗೆಲ್ಲರಿಗೂ ಚಿರಪರಿಚಿತ ವಿರುವ ಬೇಡರಕಣ್ಣಪ್ಪ ಕತೆ ನಡೆದ ಸ್ಥಳ ಎಂದು ಸಹ ಇಲ್ಲಿ ನಂಬಿಕೆ ಇದೆ. ಮಾತೆ ಪಾರ್ವತಿಯನ್ನು ಇಲ್ಲಿ ಜ್ಞಾನಪ್ರಸನಾಂಭ ಹೆಸರಿನಿಂದ ಪೂಜಿಸಲಾಗುತ್ತದೆ. ಇಲ್ಲಿರುವ ಪಾತಾಳ ಗಣಪತಿ, ದಕ್ಷಿಣಾಮೂರ್ತಿ ಮತ್ತು ಅಮ್ಮನವರು ಬೇರೆ ಬೇರೆ ದಿಕ್ಕುಗಳಿಗೆ ಅಭಿಮುಖವಾಗಿರುವುದು ವಿಶೇಷ. ಅಮ್ಮನವರು ಪೂರ್ವಾಭಿಮುಖವಾಗಿ ಕಾಳಹಸ್ತೀಶ್ವರ ಪಶ್ಚಿಮಾಭಿಮುಖವಾಗಿ ಗಣಪತಿ ಉತ್ತರಾಭಿಮುಖವಾಗಿ ಹಾಗೂ ದಕ್ಷಿಣಾಮೂರ್ತಿ ದಕ್ಷಿಣಾಭಿಮುಖವಾಗಿ ರುವುದು, ದರ್ಶನ ಮಾಡಿದ ಭಕ್ತರಿಗೆ ಚತುರ್ವಿಧ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ. ಇಲ್ಲಿ ಸರ್ಪ ಸಂಸ್ಕಾರ ರಾಹು ಕೇತು ದೋಷ ನಿವಾರಣೆಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಗ್ರಹಣ ಕಾಲದಲ್ಲಿ ಯಾವ ದೇವಾಲಯದಲ್ಲಿ ದೇವರ ದರ್ಶನಕ್ಕಾಗಲಿ, ಪೂಜೆಗಾಗಲಿ ಅವಕಾಶವಿರುವುದಿಲ್ಲ. ಆದರೆ ಶ್ರೀಕಾಳಹಸ್ತಿಯಲ್ಲಿ ಗ್ರಹಣಕಾಲ ದಲ್ಲಿಯು ಸಹ ದೇವರ ದರ್ಶನ ಪಡೆಯ ಬಹುದು. ಈ ದೇವಾಲಯದ ರಾಜಗೋಪುರವನ್ನು ಶ್ರೀಕೃಷ್ಣದೇವರಾಯ ನಿರ್ಮಿಸಿದ್ದ ಎಂದು ಶಾಸನಗಳುತಿಳಿಸುತ್ತವೆ. ಆದರೆ 2010ರಲ್ಲಿ ಗೋಪುರ ಕುಸಿದು 2017ರ ಹೊತ್ತಿಗೆ ಅದನ್ನು ಪುನರ್ ನಿರ್ಮಾಣ ಮಾಡಲಾಯಿತು. ಶ್ರೀಕಾಳಹಸ್ತಿ ಯು ತಿರುಪತಿಯಿಂದ 40 ಕಿಲೋಮೀಟರ್ ದೂರದಲ್ಲಿದ್ದು, ತಿರುಪತಿಯಿಂದ ಹಿಂದಿರುಗುವಾಗ ಶ್ರೀಕಾಳಹಸ್ತಿಗೆ ಭೇಟಿ ನೀಡುವುದು ವಾಡಿಕೆ.

ಇಲ್ಲಿಂದ ಸುಮಾರು 60 ಕಿಲೋ ಮೀಟರ್ ದೂರದ ಶ್ರೀಹರಿಕೋಟಾದಲ್ಲಿ ನಮ್ಮ ದೇಶದ ಉಡಾವಣೆ ಕೇಂದ್ರಗಳು ಇವೆ. ಇಲ್ಲಿ ಗಾಳಿ ಪಶ್ಚಿಮದಿಂದ ಪೂರ್ವದ ಕಡೆಗೆ ಬೀಸುತ್ತದೆ. ಇದು ರಾಕೆಟ್ ಲಾಂಚ್ ಗೆ ಬಹಳ ಉತ್ತಮವಾದ ವಾತಾವರಣ. ನಮ್ಮ ಪೂರ್ವಜರು ಬಹುಶ: ಈ ಕಾರಣದಿಂದ ಇಲ್ಲಿ ಶಿವಾಲಯವನ್ನು ನಿರ್ಮಿಸಿ, ವಾಯು ತತ್ವದ ಲಿಂಗ ಎಂದು ಆರಾಧಿಸಬಹುದು.

೩.ಜಲ ಲಿಂಗ

ಭಾರತದಲ್ಲಿ ನೀರಿಗೆ ಬಹಳ ವಿಶೇಷ ಸ್ಥಾನವನ್ನು ನೀಡಿದ್ದೇವೆ. ಅದರಲ್ಲಿಯೂ ನೀರಿನ ಮೂಲವಾದ ನದಿಗಳಿಗೆ ತಾಯಿಯ ಸ್ಥಾನವನ್ನು ನೀಡಿ ಪ್ರತಿದಿನವೂ ಸಪ್ತ ನದಿಗಳನ್ನು ಸ್ಮರಿಸಿ ನಮ್ಮ ದಿನವನ್ನು ಪ್ರಾರಂಭಿಸುತ್ತೇವೆ. ಈ ನದಿಗಳು ತಾವು ಹರಿಯುವ ಸುತ್ತಮುತ್ತಲಿನ ಸ್ಥಳಗಳನ್ನು ಸಮೃದ್ಧವಾಗಿಡುತ್ತವೆ. ಈ ಕಾರಣದಿಂದ ನಾವು ವರ್ಷಕ್ಕೊಮ್ಮೆ ನದಿಗಳಿಗೆ ಬಾಗಿನ ನೀಡಿ ಪೂಜೆ ಸಲ್ಲಿಸುವ ಪದ್ಧತಿಯೂ ಇದೆ. ಈ ಏಳು ನದಿಗಳಲ್ಲಿ, ದಕ್ಷಿಣ ಭಾರತದ ಪ್ರಮುಖ ನದಿಯಾದ ಕಾವೇರಿ ತಟದಲ್ಲಿರುವ ಶ್ರೀಜಂಬುಕೇಶ್ವರ ದೇವಾಲಯವು ಜಲ ತತ್ವದ ಆಧಾರದ ಮೇಲೆ ನಿರ್ಮಾಣವಾಗಿರುವ ಶಿವಾಲಯ. ಇದು ತಮಿಳುನಾಡಿನ ತಿರುಚ್ಚಿಯ ಬಳಿಯಿರುವ ತಿರುವನೈಕವಲ ನಲ್ಲಿದೆ. ಅಲ್ಲಿ ಕಾವೇರಿ ಯನ್ನು ಪೊನ್ನಿ ಎಂದು ಕರೆಯುತ್ತಾರೆ. ಇಲ್ಲಿಯ ಸ್ಥಳಪುರಾಣದ ಪ್ರಕಾರ, ಒಮ್ಮೆ ಪಾರ್ವತಿ ಶಿವನನ್ನು ತಪಸ್ಸಿನಿಂದ ಎಚ್ಚರಿಸಿ ಬಿಟ್ಟಳು. ಇದರಿಂದ ಶಿವ ಕೋಪಗೊಂಡು, ‘ತಪೋಭಂಗ’ ಎಂಬುದರ ಅರಿವನ್ನು ಪಾರ್ವತಿಗೆ ಮೂಡಿಸಲು ಆಕೆಯನ್ನು ಭೂಲೋಕಕ್ಕೆ ಕಳುಹಿಸಿದ. ಶಿವನಿಗೆ ಪ್ರಿಯವಾದ ಜಂಬುದ್ವೀಪಕ್ಕೆ ಬಂದ ಪಾರ್ವತಿಯು, ಅಲ್ಲಿಯೇ ಪಕ್ಕದಲ್ಲಿ ಹರಿಯುತ್ತಿದ್ದ ಕಾವೇರಿ ನದಿಯ ಜಲದಿಂದ ಒಂದು ಲಿಂಗವನ್ನು ಮಾಡಿ, ಅಲ್ಲಿಯೇ ತಪಸ್ಸನ್ನಾಚರಿಸಿದಳು. ಪಾರ್ವತಿಯ ತಪಸ್ಸಿಗೆ ಮೆಚ್ಚಿ ಶಿವ ಅವಳಿಗೆ ಹಲವು ವಿದ್ಯೆಗಳನ್ನು ಸೃಷ್ಟಿಯ ರಹಸ್ಯಗಳನ್ನು ಬೋಧಿಸಿದಂತೆ. ಇದರಿಂದ ಶಿವ-ಪಾರ್ವತಿ ಯರು ಇಲ್ಲಿ ಗುರು-ಶಿಷ್ಯೆಯರಾದರು.

ಕಾಲಾನಂತರ ಇದೇ ಸ್ಥಳದಲ್ಲಿ ಋಷಿಯೊಬ್ಬ ತಪಸ್ಸನ್ನು ಮಾಡುತ್ತಿದ್ದ. ಅವನು ನೇರಳೆ ಮರಗಳಿಂದ ತುಂಬಿದ ಈ ಸ್ಥಳದಲ್ಲಿ ನೆಲೆಸಿದ್ದರಿಂದ, ಅವನನ್ನು ‘ಜಂಬೂ ಮಹರ್ಷಿ’ ಎಂದು ಕರೆಯುತ್ತಿದ್ದರು. ಅವನ ತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾಗಿ, ಆತ ನೀಡಿದ ಜಂಬು ಫಲಗಳನ್ನು ತಿಂದು, ಬೀಜಗಳನ್ನು ಬಿಟ್ಟನು. ಶಿವಪ್ರಸಾದವೆಂದು ಆ ಬೀಜಗಳನ್ನು ಜಂಬು ಮಹರ್ಷಿ ತಿಂದು, ಆತನ ಶರೀರದಿಂದ ಒಂದು ಬೃಹತ್ ಜಂಬೂ ವೃಕ್ಷ ಬೆಳೆಯಿತಂತೆ. ಈ ವೃಕ್ಷಾವನ್ನು ನಾವು ಇಂದಿಗೂ ಸಹ ಕಾಣಬಹುದು. ಈ ಮಹರ್ಷಿ ಪೂಜಿಸಿದ ಎಂಬ ಕಾರಣದಿಂದ, ಜಂಬು ವೃಕ್ಷ ಇಲ್ಲಿ ಹೆಚ್ಚಾಗಿರುವುದರಿಂದ, ಈ ಶಿವನನ್ನು ಜಂಬುಕೇಶ್ವರ ಎಂದು ಕರೆಯುತ್ತಾರೆ. ಮತ್ತೊಂದು ಮೂಲದ ಪ್ರಕಾರ ಮಲಯ ಮತ್ತು ದಂತ ಪುಷ್ಪ ಎಂಬ ಗಂಧರ್ವರು ಒಮ್ಮೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡುತ್ತಾ ಒಬ್ಬರನ್ನೊಬ್ಬರು ಕೊಂದರಂತೆ. ಅವರಿಬ್ಬರೂ ಆನೆ ಮತ್ತು ಜೇಡವಾಗಿ ಈ ಜಂಬೂದ್ವೀಪದಲ್ಲಿ ಜನ್ಮ ಪಡೆದರು. ಆನೆ ಪ್ರತಿನಿತ್ಯ ಕಾವೇರಿ ನೀರಿನಿಂದ ಈ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ, ಜೇಡವು ಧೂಳು, ಬಿಸಿಲು, ಮರದ ಎಲೆಗಳು, ಹಣ್ಣು ಶಿವನ ಮೇಲೆ ಬೀಳದಂತೆ ಬಲೆ ಹೆಣೆಯುತ್ತಿತ್ತು. ಈ ಜೇಡರ ಬಲೆಯನ್ನು ಕಸವೆಂದು ಭಾವಿಸುತ್ತಿದ್ದ ಆನೆ, ಅದನ್ನು ಸ್ವಚ್ಛಗೊಳಿಸಿ ಅಭಿಷೇಕ ಮಾಡುತ್ತಿತ್ತು. ಜೇಡ ಮತ್ತೆ ಬಲೆ ಹೆಣೆಯುತ್ತಿತ್ತು. ಹೀಗೆ ಬಹಳಷ್ಟು ಬಾರಿ ನಡೆಯಿತು. ತನ್ನ ಬಲೆಯನ್ನು ಹಾಳು ಮಾಡುತ್ತಿರುವವರು ಯಾರೆಂದು ನೋಡಲು ಜೇಡ ಒಮ್ಮೆ ಬಲೆಯಲ್ಲಿ ಇದ್ದುಬಿಟ್ಟಿತು. ಆನೆ ಪ್ರತಿ ನಿತ್ಯದಂತೆ ಬಲೆಯನ್ನು ಕೀಳಲು ಹೊರಟಾಗ, ಜೇಡ ಆನೆಯ ಸೊಂಡಿಲಿನ ಒಳಗಡೆ ಸೇರಿ ಆನೆಯನ್ನು ಕಚ್ಚಿತು. ಇದರಿಂದ ಆನೆಗೆ ವಿಷವೇರಿ ಅಲ್ಲೇ ಸಾವನ್ನಪ್ಪಿತ್ತು. ಇತ್ತ ಜೇಡ ಆಚೆ ಬರಲಾಗದೆ, ಅಲ್ಲೇ ಪ್ರಾಣವನ್ನು ಬಿಟ್ಟಿತು. ಇದನ್ನು ಗಮನಿಸುತ್ತಿದ್ದ ಶಿವ ಈ ಗಂಧರ್ವರಿಗೆ ಮೋಕ್ಷವನ್ನು ನೀಡಿದ ಅಥವಾ ಪುನರ್ಜನ್ಮ ನೀಡಿದ ಎಂಬ ಎರಡು ವಾದಗಳಿವೆ. ಒಂದು ವಾದದ ಪ್ರಕಾರ ಇಲ್ಲಿ ಸಾವನ್ನಪ್ಪಿದ ಜೇಡ ಪುನರ್ಜನ್ಮ ಪಡೆದು ಕೋಚಂಗನ್ ಎಂಬ ಚೋಳ ಅರಸನಾದ ಎಂದು ಹೇಳುತ್ತಾರೆ. ಈತ ಈ ದೇವಾಲಯ ವನ್ನು ಕಟ್ಟಿಸಿದ ಚೋಳ ಅರಸ. ಇವನು ಶೈವಪಂಥದ ನಯನಾರ್ ಗಳಲ್ಲಿ ಒಬ್ಬ.
ಈ ಲಿಂಗದೊಳಗಿನ ನೀರಿನ ಸೆಲೆ ದೇವಾಲಯದ ಪ್ರಮುಖ ಆಕರ್ಷಣೆ. ದೇವರ ಮೇಲೆ ಒಂದು ಶುಭ್ರ ಬಟ್ಟೆಯನ್ನು ಹಾಕಿದರೆ ಕೆಲವೇ ನಿಮಿಷಗಳಲ್ಲಿ ಆ ಬಟ್ಟೆ ಒದ್ದೆಯಾಗುತ್ತದೆ. ಈ ದೇವಾಲಯದಲ್ಲಿ ಪ್ರಮುಖವಾಗಿ ಮೂರು ಕಲ್ಯಾಣಿಗಳಿದ್ದು, ಆ ಕಲ್ಯಾಣಿ ಒಂದರಲ್ಲಿ ಶ್ರೀರಂಗಂನ ರಂಗನಾಥನನ್ನು ವರ್ಷಕೊಮ್ಮೆ ಕರೆತಂದು ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಶಿವ ಮತ್ತು ವಿಷ್ಣು ದೇವಾಲಯಗಳಲ್ಲಿ ಕಲ್ಯಾಣೋತ್ಸವ, ಸಾಮೂಹಿಕ ವಿವಾಹಗಳ ಆಚರಣೆ ಸರ್ವೇಸಾಮಾನ್ಯ. ಆದರೆ ಇಲ್ಲಿ ಶಿವ-ಪಾರ್ವತಿಯರು ಗುರು ಶಿಷ್ಯೆಯ ರೂಪದಲ್ಲಿರುವುದರಿಂದ ಇಲ್ಲಿ ವಿವಾಹ ನಿಷಿದ್ಧ . ಇಲ್ಲಿ ಅಮ್ಮನವರನ್ನು ಅಖಿಲಾಂಡೇಶ್ವರಿ ಎಂದು ಪೂಜಿಸಲಾಗು ತ್ತದೆ. ಪೂರ್ವದಲ್ಲಿ ಅಮ್ಮನವರು ಬಹಳ ಉಗ್ರರೂಪಿಯಾಗಿದ್ದು, ಶ್ರೀ ಆದಿಶಂಕರರು ಅಮ್ಮನವರ ಕಿವಿಯ ಬಳಿ ಎರಡು ಶ್ರೀ ಚಕ್ರಗಳನ್ನು ಪ್ರತಿಷ್ಠಾಪಿಸಿ, ಶಾಂತ ಸ್ವರೂಪಿಯನ್ನಾಗಿ ಮಾಡಿದರು ಎನ್ನಲಾಗುತ್ತದೆ. ತಾಯಿಯ ಗಮನ ಮಗುವಿನ ಕಡೆ ಹರಿಸಲು ವಿನಾಯಕನನ್ನು ಅಮ್ಮನವರ ಮುಂದೆ ಪ್ರತಿಷ್ಠಾಪಿಸಲಾಗಿದೆ. ಶಿವ ಪಾರ್ವತಿಯರ ದೇವಾಲಯಗಳಲ್ಲಿ ಅವರಿಬ್ಬರ ಗರ್ಭಗುಡಿಗಳು ಅಕ್ಕಪಕ್ಕದಲ್ಲಿ ಇರುತ್ತವೆ. ಆದರೆ ಇಲ್ಲಿ ಎದುರುಬದುರಾಗಿ ಎಂದರೆ ಶ್ರೀಜಂಬುಕೇಶ್ವರಪಶ್ಚಿಮಾಭಿಮುಖ ವಾಗಿಯೂ, ಅಖಿಲಾಂಡೇಶ್ವರಿ ಅಮ್ಮ ನವರುವರು ಪೂರ್ವಾಭಿಮುಖವಾಗಿಯೂ ಇರುವುದು ವಿಶೇಷ. ಈ ಶಿವಲಿಂಗದಲ್ಲಿನ ನೀರಿನ ಸೆಲೆಯ ಮೂಲ ತಿಳಿಯದಿರುವುದು ವಿಜ್ಞಾನಕ್ಕೆ ಸವಾಲಾಗಿದೆ.
ನಮ್ಮ ಪೂರ್ವಜರು ನಿಜವಾಗಿಯೂ ನಮಗಿಂತ ಬುದ್ಧಿವಂತರು!!
ಇದಿಷ್ಟು ಜಲ ಲಿಂಗದ ಬಗೆಗಿನ ಮಾಹಿತಿ.

..ಆಕಾಶ ಲಿಂಗ

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ರಾಜ್ಯ ತಮಿಳುನಾಡು. ಇದಕ್ಕೆ ಚೋಳ, ಪಲ್ಲವ, ಪಾಂಡ್ಯರು ಹಾಗೂ ವಿಜಯನಗರದ ಅರಸರ ಕೊಡುಗೆ ಮುಖ್ಯಕಾರಣ. ವಿಜಯನಗರದ ಅರಸರು ಕರ್ನಾಟಕವಷ್ಟೇ ಅಲ್ಲದೆ ಅಂದು ತಮ್ಮ ಆಳ್ವಿಕೆಯಲ್ಲಿದ್ದ ಈಗಿನ ಎಲ್ಲಾ ರಾಜ್ಯಗಳಲ್ಲಿಯೂ ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ, ಜನ ವಸತಿಗಾಗಿ ಛತ್ರಗಳು, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ. ತಮಿಳುನಾಡಿನ ಚಿದಂಬರಂನ ಶ್ರೀ ತಿಲೈ ನಟರಾಜ ದೇವಾಲಯ ಆಕಾಶತತ್ವದ ಆಧಾರದ ಮೇಲೆ ನಿರ್ಮಾಣವಾಗಿರುವ ಶಿವಾಲಯ. ಈ ದೇವಾಲಯಕ್ಕೂ ವಿಜಯನಗರದ ಕೊಡುಗೆ ಅಪಾರ.
‘ಚಿದ್’ ಎಂದರೆ ‘ಜ್ಞಾನ’, ‘ಅಂಬರ’ ಎಂದರೆ ‘ಆಕಾಶ’, ‘ಚಿದಂಬರಂ’ ಎಂದರೆ ಆಕಾಶದಷ್ಟು ಜ್ಞಾನ ಎಂದರ್ಥ. ಈ ದೇವಾಲಯವು ಹೆಸರಿಗೆ ತಕ್ಕಂತೆ ತನ್ನಲ್ಲಿ ಎಣಿಸಲಾಗದಷ್ಟು ಜ್ಞಾನವನ್ನು ಹುದುಗಿಸಿಕೊಂಡಿದೆ. ಈ ದೇವಾಲಯದಲ್ಲಿ ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸುವುದಿಲ್ಲ. ಬದಲಾಗಿ ನಟರಾಜನ ವಿಗ್ರಹವನ್ನು ಪೂಜಿಸಲಾಗುತ್ತದೆ. ಈ ನಟರಾಜನ ವಿಗ್ರಹವು Cosmic ಶಕ್ತಿಯ ಮೂಲ ಕೇಂದ್ರ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸಹಸ್ರಾರು ವರ್ಷಗಳ ಹಿಂದೆ ಋಷಿಮುನಿಗಳ ಗುಂಪೊಂದು ಈ ಸ್ಥಳದಲ್ಲಿ ವಾಸವಿದ್ದರು. ಈ ಋಷಿಗಳು ತಮ್ಮ ತಪೋಬಲ ಹಾಗೂ ತಂತ್ರವಿದ್ಯೆಗಳಿಂದ ಬಹಳ ಗರ್ವಿಸುತ್ತಿದ್ದರು. ಒಮ್ಮೆ ಶಿವ ಒಬ್ಬ ಬ್ರಾಹ್ಮಣನಂತೆ, ವಿಷ್ಣು ಮೋಹಿನಿಯಂತೆ, ದಂಪತಿಗಳ ರೂಪದಲ್ಲಿ ಈ ಸ್ಥಳಕ್ಕೆ ಬರುತ್ತಾರೆ. ಆ ದಂಪತಿಗಳ ಸೌಂದರ್ಯಕ್ಕೆ ಋಷಿ ಪತ್ನಿಯರು ಮನ ಸೋಲುತ್ತಾರೆ. ತಮ್ಮ ಪತ್ನಿಯರು ಒಬ್ಬ ಪುರುಷನನ್ನು ನೋಡಿ ಸಮ್ಮೋಹಿತರಾಗಿ ದ್ದನ್ನು ಕಂಡು ಸಹಿಸದೆ, ಅಲ್ಲಿದ್ದ ಋಷಿಯೊಬ್ಬ ತನ್ನ ವಿದ್ಯೆಯಿಂದ ಒಂದು ಹಾವನ್ನು ಸೃಷ್ಟಿಸಿ ಆ ಪುರುಷನ ಮೇಲೆ ಎಸೆಯುತ್ತಾನೆ. ಆ ಬ್ರಾಹ್ಮಣ ಹಾವನ್ನು ತನ್ನ ಕೊರಳಿನಲ್ಲಿ ಮಾಲೆಯಂತೆ ಧರಿಸುತ್ತಾನೆ. ಮತ್ತೊಬ್ಬ ಋಷಿ ಒಂದು ಹುಲಿಯನ್ನು ಸೃಷ್ಟಿಸಿ ಆ ಬ್ರಾಹ್ಮಣನ ಮೇಲೆ ಆಕ್ರಮಣ ಮಾಡಲು ಕಳುಹಿಸುತ್ತಾನೆ. ಆದರೆ ಆ ಬ್ರಾಹ್ಮಣ ಹುಲಿಯನ್ನು ಕೊಂದು ಅದರ ಚರ್ಮವನ್ನು ಬಟ್ಟೆಯಾಗಿ ಧರಿಸಿಬಿಡು ತ್ತಾನೆ. ಹೀಗೆ ಹಲವಾರು ಸವಾಲನ್ನು ಆ ಬ್ರಾಹ್ಮಣನಿಗೆ ನೀಡಿದರೂ ಸಹ ಆತ ಅದನ್ನು ಲೀಲಾಜಾಲವಾಗಿ ಗೆಲ್ಲುತ್ತಾ ಬರುತ್ತಾನೆ. ಕೊನೆಗೆ ಎಲ್ಲಾ ಋಷಿಗಳು ಸೇರಿ ಒಬ್ಬ ರಾಕ್ಷಸನ್ನು ಸೃಷ್ಟಿಸಿ ಅವನ ಮೇಲೆ ಆಕ್ರಮಣ ಮಾಡಲು ಕಳುಹಿಸುತ್ತಾರೆ. ಆ ರಾಕ್ಷಸನನ್ನು ಸಂಹಾರ ಮಾಡಿ ಆ ಬ್ರಾಹ್ಮಣ, ಅಲ್ಲೇ ತಾಂಡವ ನೃತ್ಯವನ್ನು ಮಾಡಲಾರಂಭಿ ಸುತ್ತಾರೆ. ಈ ಬ್ರಾಹ್ಮಣನ ರೂಪದಲ್ಲಿ ಇದ್ದವನು ಸಾಕ್ಷಾತ್ ಶಿವನೇ ಎಂದು ತಿಳಿದ ಋಷಿಗಳು ತಮ್ಮ ತಪ್ಪಿನ ಅರಿವಾಗಿ, ಕ್ಷಮೆ ಯಾಚಿಸುತ್ತಾರೆ. ಭಕ್ತವತ್ಸಲನಾದ ಶಿವ ಋಷಿಗಳ ಕೋರಿಕೆಯಂತೆ ನಾಟ್ಯದ ಭಂಗಿ ಯಲ್ಲಿ ಅಲ್ಲಿಯೇ ನೆಲೆನಿಂತು ನಟರಾಜ ಎಂಬ ಹೆಸರನ್ನು ಪಡೆಯುತ್ತಾನೆ ಎಂದು ಸ್ಥಳಪುರಾಣ ತಿಳಿಸುತ್ತದೆ. ಈ ಸ್ಥಳವನ್ನು ತಿಲೈ ಎಂದು ಕರೆಯುತ್ತಿದ್ದರಿಂದ, ಈ ಶಿವನನ್ನು ತಿಲೈ ನಟರಾಜ ಎಂದು ಕರೆಯುತ್ತಾರೆ. ಇದು ಶೈವ ಮತ್ತು ವೈಷ್ಣವ ಸಮಾಗಮ ಕ್ಷೇತ್ರ. ಇಲ್ಲಿ ಶಿವನನ್ನು ಮತ್ತು ವಿಷ್ಣುವನ್ನು ಒಂದೇ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಪಾರ್ವತಿ ದೇವಿಯನ್ನು ಶಿವಕಾಮೀ ಅಮ್ಮನ್ ಎಂದು ಕರೆಯುತ್ತಾರೆ. ಇಲ್ಲಿರುವ ನಟರಾಜ ಮೂರ್ತಿಯು ರುದ್ರತಾಂಡವದಿಂದ ಆನಂದ ತಾಂಡವದ ಬದಲಾಗುವ (middle of transmission) ಮಧ್ಯ ಸ್ಥಿತಿಯಲ್ಲಿ ರುವುದು ವಿಶೇಷ. ಅಲ್ಲದೇ ನಟರಾಜ ವಿಗ್ರಹದ ಭಂಗಿಯು ಅಣು ಶಕ್ತಿಯ (atomic energy) ಮೂಲವನ್ನು ವಿವರಿಸುವಂತಿದೆ ಎಂದು ವಿಜ್ಞಾನಿಗಳು ತಿಳಿಸುತ್ತಾರೆ.

ಈ ದೇವಾಲಯವು ಭೂಮಿಯ ಅಯಸ್ಕಾಂತ ಶಕ್ತಿಯ (magnetic energy) ಮಧ್ಯಭಾಗ ದಲ್ಲಿರುವುದು ಆಶ್ಚರ್ಯಕರ ವಿಚಾರ. ಇಲ್ಲಿನ ನಟರಾಜನ ತಾಂಡವ ಮೂರ್ತಿಯು ಭೂಮಿಯ ಅಯಸ್ಕಾಂತ ಶಕ್ತಿಯನ್ನು ಸಮತೋಲನ ಮಾಡುತ್ತಿದೆ ಎಂದು ಜನರ ನಂಬಿಕೆ. ಚಿದಂಬರಂ, ಏಕಾಂಬರೇಶ್ವರ ಹಾಗೂ ಕಾಳಹಸ್ತಿ, ಆಕಾಶ ಭೂಮಿ ಹಾಗೂ ವಾಯು ತತ್ವದ ದೇವಾಲಯ ಗಳು ಭೌಗೋಳಿಕವಾಗಿ ಒಂದು ಸರಳ ರೇಖೆಯಲ್ಲಿ ಬರುವುದು ವಿಶೇಷ.

ಚಿದಂಬರಂನ ದೇವಾಲಯವು ಭಕ್ತಿ, ಶ್ರದ್ಧೆ, ಆಧ್ಯಾತ್ಮಿಕತೆ, ವಾಸ್ತುಶಿಲ್ಪ, ವಿಜ್ಞಾನ, ಕಲೆ ಹಾಗೂ ಮಾನವ ಶಾಸ್ತ್ರಗಳನ್ನು ಅಧ್ಯಯನ ಮಾಡಬಹುದಾದಂತಹ ಗ್ರಂಥಾಲಯ ದಂತಿದೆ. ಈ ದೇವಾಲಯದ ಆಕಾರ ಒಬ್ಬ ಮಲಗಿರುವ ಮನುಷ್ಯನನ್ನು ಹೋಲುತ್ತದೆ. ಈ ದೇವಾಲಯಕ್ಕೆ ೯ ಪ್ರವೇಶ ಸ್ಥಳಗಳಿದ್ದು ಮಾನವನ ನವರಂದ್ರಗಳನ್ನು ಹೋಲುತ್ತದೆ. ಗರ್ಭಗೃಹವು ಕೊಂಚ ಎಡಭಾಗದಲ್ಲಿದ್ದು, ಅದನ್ನು ಹೃದಯಸ್ಥಾನ ಎನ್ನಲಾಗಿದೆ. ದೇವಾಲಯದ ಮೇಲ್ಚಾವಣಿಯಲ್ಲಿ ೬೪ ತೊಲೆಗಳಿದ್ದು, ಅವು ೬೪ ವಿದ್ಯೆಗಳನ್ನು ಸೂಚಿಸುತ್ತದೆ. ಈ ಮೇಲ್ಛಾವಣಿಗೆ ೨೧,೬೦೦ ಚಿನ್ನದ ಹೆಂಚುಗಳಿದ್ದು, ಒಬ್ಬ ಆರೋಗ್ಯವಂತ ಮನುಷ್ಯನ ಒಂದು ದಿನದ ಉಸಿರಾಟದ ಸಂಖ್ಯೆಯನ್ನು ಸೂಚಿಸುವು ದಲ್ಲದೆ, ಮಾನವರ ಎಣಿಕೆಗೆ ಸಿಕ್ಕಿರುವ ಪ್ರಪಂಚದಲ್ಲಿನ ಜೀವವೈವಿಧ್ಯತೆಯನ್ನು ಸೂಚಿಸುತ್ತದೆ. ಈ ಹೆಂಚುಗಳನ್ನು ಹಿಡಿದಿಡಲು ೭೩,೦೦೦ ಚಿನ್ನದ ಮೊಳೆಗಳಿದ್ದು, ಇವು ಮಾನವನ ದೇಹದ ನಾಡಿಗಳನ್ನು ಸೂಚಿಸುತ್ತದೆ. ಈ ಮೇಲ್ಚಾವಣಿಯಲ್ಲಿ ೯ ಕಳಶಗಳಿದ್ದು, ಇವು ನವಗ್ರಹ ಹಾಗೂ ನವಶಕ್ತಿಯನ್ನು ಸಾಂಕೇತಿ ಸುತ್ತವೆ. ದೇವಾಲಯದ ೫ ಮೆಟ್ಟಿಲುಗಳು ಪಂಚಭೂತಗಳನ್ನು ಹಾಗೂ ಪಂಚೇಂದ್ರಿಯ ಗಳನ್ನು ಸೂಚಿಸುತ್ತದೆ. ಈ ದೇವಾಲಯದ ಗೋಡೆಗಳಲ್ಲಿ ಭರತಮುನಿಯ ನಾಟ್ಯಶಾಸ್ತ್ರದ ಬಗೆಗಳನ್ನು, ನೃತ್ಯಶಿಲ್ಪ ಗಳನ್ನು ಕಾಣಬಹುದು. ದೇವಾಲಯವನ್ನು ಪ್ರವೇಶಿಸುವಾಗ ಅಯಸ್ಕಾಂತದ ಶಕ್ತಿಯು ಅನುಭವಕ್ಕೆ ಬರುವುದನ್ನು ಹಲವಾರು ಜನರು ಹೇಳಿಕೊಂಡಿದ್ದಾರೆ. ಪ್ರತಿಯೊಂದು ವಸ್ತುವಿನ ಮೂಲ ಅಣು. ನಮ್ಮ ಪೂರ್ವಜರು ಅಣುವಿಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಜನ ಸಾಮಾನ್ಯರಿಗೆ ನಟರಾಜನ ಮೂಲಕ ತಿಳಿಸಿರಬಹುದು. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ನಮಗಿರಬೇಕಷ್ಟೇ.
ಇದಿಷ್ಟು ಆಕಾಶದ ಲಿಂಗದ ಬಗೆಗಿನ ಸಣ್ಣ ಮಾಹಿತಿ.

೫.ಭೂ ಲಿಂಗ

ಭಾರತದ ರೇಷ್ಮೆ ನಗರ ತಮಿಳುನಾಡಿನ ಕಾಂಚಿಪುರಂ. ಕಾಳಿದಾಸ ತನ್ನ ಕಾವ್ಯ ಗಳಲ್ಲಿ ಬಹಳಷ್ಟು ವರ್ಣಿಸಿರುವ ನಗರ ಕಾಂಚಿ. ಇದನ್ನು ಭಾರತದ ರೇಷ್ಮೆ ನ’ಗರಿ’, ದೇವಾಲಯಗಳ ನಾಡು, ವಿದ್ಯಾಪೀಠ ಎಂದೆಲ್ಲಾ ಕರೆಯುತ್ತಾರೆ. ಕಾಂಚಿಪುರಂನ ಏಕಂಬರೇಶ್ವರ ಭೂತತ್ವದ ಆಧಾರದ ಮೇಲೆ ನಿರ್ಮಾಣವಾಗಿರುವ ಶಿವಾಲಯ. ಇಲ್ಲಿರುವ ಶಿವಲಿಂಗವನ್ನು ಮಾತೆ ಪಾರ್ವತಿ ಮಣ್ಣಿನಿಂದ ನಿರ್ಮಾಣ ಮಾಡಿದಳು ಎಂದು ಸ್ಥಳಪುರಾಣ ಹೇಳುತ್ತದೆ.

ಒಮ್ಮೆ ಶಿವ ತಪಸ್ಸನ್ನಾಚರಿಸುತ್ತಿರುವಾಗ, ಪಾರ್ವತಿಯು ತಾನು ಭೂಸಂಚಾರ ಮಾಡಿ ಬರುವುದಾಗಿ ಗಣಗಳಿಗೆ ತಿಳಿಸಿ ಕೈಲಾಸ ದಿಂದ ಹೊರಡುತ್ತಾಳೆ. ಭೂಮಿಯ ಪ್ರಕೃತಿ ಸೌಂದರ್ಯ ಮತ್ತು ಜೀವವೈವಿಧ್ಯತೆಯನ್ನು ನೋಡುತ್ತಾ, ಹಲವಾರು ದಿನಗಳನ್ನು ಕಳೆಯುತ್ತಾಳೆ. ಒಂದು ಹುಣ್ಣಿಮೆಯ ರಾತ್ರಿ ಸಂಚರಿಸುತ್ತಾ, ಒಂದೇ ಒಂದು ಹಣ್ಣುನ್ನು ಬಿಟ್ಟಿರುವ ಮಾವಿನ ಮರವನ್ನು ಗಮನಿಸು ತ್ತಾಳೆ. ಆ ಮಾವಿನ ಮರ ನಾಲ್ಕು ಕೊಂಬೆ ಗಳನ್ನು ಹೊಂದಿರುತ್ತದೆ. ಇದನ್ನು ಕಂಡು ಆಶ್ಚರ್ಯಗೊಂಡ ಪಾರ್ವತಿಯು ಅಂದು ಅಲ್ಲೇ ವಿಶ್ರಾಂತಿ ಪಡೆಯುತ್ತಾಳೆ. ಬಹಳ ಕಾಲದಿಂದ ಶಿವನನ್ನು ನೋಡದಿರುವ ಕಾರಣ, ಆ ಮರದಡಿಯೇ ಮಣ್ಣಿನಿಂದ ಒಂದು ಶಿವಲಿಂಗವನ್ನು ಮಾಡಿ ಪೂಜೆ ಮಾಡುತ್ತಾಳೆ ಎಂದು ಸ್ಥಳಪುರಾಣ ತಿಳಿಸುತ್ತದೆ.

ಸಂಸ್ಕೃತದಲ್ಲಿ ‘ಏಕ ‘ ಎಂದರೆ ‘ಒಂದು’ , ‘ಆಮ್ರ’ ಎಂದರೆ ‘ಮಾವು’ ಎಂದರ್ಥ. ಇಲ್ಲಿ ಶಿವನು ಒಂದೇ ಮಾವು ಬಿಡುವ ಮರದ ಕೆಳಗೆ ಪ್ರತಿಷ್ಠಾಪಿಸಲ್ಪಟ್ಟಿರುವುದ ರಿಂದ, ಇಲ್ಲಿ ಶಿವನನ್ನು ‘ಏಕಾಂಬರೇಶ್ವರ’ ಎಂದು ಕರೆಯುತ್ತಾರೆ. ಮತ್ತೊಂದು ಕಥೆಯ ಪ್ರಕಾರ ಈ ಮಾವಿನ ಮರದ ಕೆಳಗೆ ವಿಷ್ಣುವಿನ ಸಾನಿಧ್ಯದಲ್ಲಿ ಶಿವ-ಪಾರ್ವತಿಯ ವಿವಾಹವಾಯಿತು ಎಂದು ಹೇಳುತ್ತಾರೆ. ‘ಶಿವ ಅಭಿಷೇಕ ಪ್ರಿಯ’. ಆದರೆ ಇಲ್ಲಿ ಶಿವನಿಗೆ ನಿತ್ಯ ಅಭಿಷೇಕವಿಲ್ಲ. ಇಡೀ‌ ಪ್ರಪಂಚ ದಲ್ಲಿ ನಿತ್ಯ ಅಭಿಷೇಕವಿಲ್ಲದ ಶಿವಾಲಯವೆಂದರೆ, ಕಾಂಚಿಪುರಂನ ಏಕಂಬರೇಶ್ವರ ದೇವಾಲಯ. ಇಲ್ಲಿ ವರ್ಷಕ್ಕೊಮ್ಮೆ ಗಿರಿಜಾ ಕಲ್ಯಾಣೋತ್ಸವ ಬಹಳ ವಿಜೃಂಭಣೆಯಿಂದ ಆಚರಿಸಲಾಗು ತ್ತದೆ. ಈ ಕಲ್ಯಾಣೋತ್ಸವದ ನಂತರ ಮಾತ್ರ ಶಿವನಿಗೆ ಅಭಿಷೇಕವನ್ನು ಮಾಡುತ್ತಾರೆ. ಈ ದೇವಾಲಯದ ಪ್ರಮುಖ ವಿಶೇಷವೆಂದರೆ ೩೫೦೦ ವರ್ಷಗಳಿಗೂ ಹಳೆಯದಾದ ಮಾವಿನ ಮರ. ಈ ಮಾವಿನ ಮರವನ್ನು ನಾವು ಇಂದಿಗೂ ಸಹ ಕಾಣಬಹುದು. ಮರದ ನಾಲ್ಕು ರೆಂಬೆಗಳು, ನಾಲ್ಕು ಯುಗಗಳನ್ನು, ನಾಲ್ಕು ವೇದಾಗಳನ್ನು ಸೂಚಿಸುತ್ತದೆ. ಇನ್ನು ೧೦೦೮ ಪುಟ್ಟ-ಪುಟ್ಟ ಶಿವಲಿಂಗ ಗಳಿಂದ ಮಾಡಲಾದ ಒಂದು ಬೃಹತ್ ಶಿವಲಿಂಗ ದೇವಾಲಯದ ಮತ್ತೊಂದು ಆಕರ್ಷಣೆ. ಅಲ್ಲದೆ ೧೦೦೮ ಶಿವಲಿಂಗಗಳನ್ನು ದೇವಾಲಯದ ಸುತ್ತಲೂ ಒಳಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯವು ಸುಮಾರು 23 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಈ ದೇವಾಲಯದ ರಾಜಗೋಪುರ ದಕ್ಷಿಣ ಭಾರತದ ಅತಿ ಎತ್ತರದ ರಾಜಗೋಪುರ ಗಳಲ್ಲೊಂದು. ದೇವಾಲಯದ ೧೦೦೦ ಕಂಬಗಳ ಮಂಟಪ, ೧೦ ಸಂಗೀತ ಶಬ್ದಗಳನ್ನು ಮಾಡುವ ಕಂಬಗಳು, ದೇವಾಲಯದ ನೆಲಮಾಳಿಗೆಯಲ್ಲಿನ ಋಷಿ ಪುರಾಣ ದೇವಾಲಯದ ವಿಶೇಷತೆ ಗಳು. ಋಷಿ ಪುರಾಣ ೧೦ ಕೋಣೆಗಳ ಬೃಹತ್ ಗ್ರಂಥಾಲಯದಂತಹ ಶಿಲಾಶಾಸನ ಗಳನ್ನು ಹೊಂದಿರುವ ದೇವಾಲಯದ ನೆಲಮಾಳಿಗೆಯ ಸ್ಥಳ. ಇಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಶಾಸನಗಳಿವೆ. ಈ ಶಾಸನಗಳಲ್ಲಿ ಭೂಮಿಯ ಉಗಮ, ಪ್ರಾಚೀನ ನಾಗರಿಕತೆಗಳು, ನಾಗರಿಕತೆಗಳ ಕರ್ತೃಗಳು, ಜ್ಯೋತಿಷ್ಯಶಾಸ್ತ್ರ, ತಂತ್ರ ವಿದ್ಯೆ ಹೀಗೆ ಹಲವಾರು ವಿಷಯಗಳ ಬಗ್ಗೆ ಉಲ್ಲೇಖವಿದೆಯಂತೆ. ಇದನ್ನು ೫ಋಷಿಗಳು ರಚಿಸಿದರೆಂದು ಹೇಳಲಾಗುತ್ತದೆ. ಅವರಲ್ಲಿ ಅಗಸ್ತ್ಯ ಮಹಾಮುನಿ ಪ್ರಮುಖರು. ಈ ಶಾಸನಗಳಲ್ಲಿರುವ ಪ್ರಾಚೀನ ನಾಗರಿಕತೆಗಳ ಬಗ್ಗೆ ಸಮಗ್ರ ಸಂಶೋಧನೆಯ ನಡೆದರೆ, ಪ್ರಪಂಚದ ಅತಿ ಪುರಾತನ ನಾಗರೀಕತೆಯ ಬಗೆಗಿನ ವಿಷಯಗಳು ಬೆಳಕಿಗೆ ಬರಬಹುದು ಇದಿಷ್ಟು ಭೂಲಿಂಗದ ಬಗೆಗಿನ ಸಣ್ಣ ಮಾಹಿತಿ.

               🔆🔆🔆

✍️ಶ್ರೀರಕ್ಷಾ ಶಂಕರ್, ಉಜಿರೆ