ಒಂದು ಪುಟ್ಟ ಬೀಜ ಮಣ್ಣಿನಲ್ಲಿ ಜೀವತಳೆದು ಇಡೀ ಸಸ್ಯದ ಅಸ್ತಿತ್ವಕ್ಕೆ ನಾಂದಿ ಹಾಡುತ್ತದೆ ಎಂದಾದರೆ ಅದರ ಗಟ್ಟಿತನಕ್ಕೆ ಅಭಿನಂದಿಸಲೇಬೇಕು.ಬೀಜ ಟೊಳ್ಳಾದರೆ ಮೊಳಕೆಯೊಡೆಯುದೆಂತು? ಉಹಿಸಲು ಸಾಧ್ಯವಿಲ್ಲ. ಹಾಗೆಯೇ ಮನುಷ್ಯನ ಸಂಬಂಧಗಳು ಗಟ್ಟಿಯಾಗಲು ಅವು ಕೊಂಡಿಯಂತೆ ಬೆಸೆದುಕೊಳ್ಳಲು ಸಹಾಯಕವಾಗುವ ಸನ್ನಿವೇಶಸೃಜಿಸುವುದು ಅನಿವಾರ್ಯ. ಉದಾಹರಣೆಗೆ ಒಂದು ಪುಟ್ಟ ಇರುವೆಯನ್ನು ಗಮನಿಸಿದಾಗ,ಅದರ ಜೀವನ ಹಾಗೂ ಅದರ ಗುಣವನ್ನು ಬಲ್ಲವರಾರಿಲ್ಲ. ಇರುವೆ ತುಂಬಾ ಜಾಣ, ಗುಪ್ತದಳದ ನಾಯಕನಾಗುವ ಎಲ್ಲ ಅರ್ಹತೆಗಳನ್ನು ಒಳಗೊಂಡಿರುವ ಪುಟ್ಟ ಜೀವಿ. ನಮ್ಮಂತಿರದಿದ್ದರೂ ಅದರ ಚಾಣಾಕ್ಷತೆಗೆ ಮಾರು ಹೋಗದವರಿಲ್ಲ. ಇರುವೆಯಂತೆ ನಾವು ಸದಾ ಚಟುವಟಿಕೆ ಯಿಂದ ಸಿಹಿಯನ್ನು ಅಂದರೆ ಸದ್ಗುಣ ಗಳನ್ನು ಮಾತ್ರ ಅರಸುವ ಗುಣಹೊಂದು ವಂತಾಗಬೇಕು ಎಂಬುದನ್ನು ಅರ್ಥೈಸ ಬೇಕಿದೆ. ಇರುವೆಯ ಮೌಲ್ಯ ಪರಿಚಯಿ ಸುವುದು ಪ್ರಸ್ತುತವೇ? ಮಹತ್ವವೆನಿಸ ದಿದ್ದರೂ ಒಮ್ಮೆತಾಳ್ಮೆಯಿಂದ ಚಿಂತಿಸಿದಾಗ ಮಾತ್ರ ಗೋಚರವಾಗುತ್ತದೆ. ನಿದರ್ಶನಗಳ ಮನವರಿಕೆ ಮಾಡುವ ಚಾಕಚಕ್ಯತೆ ಇರಬೇಕಾಗಿದ್ದು ಯಾರಲ್ಲಿ? ಕೇವಲ ಅಮ್ಮನಲ್ಲಾ?ಅಪ್ಪನಲ್ಲಾ? ಅಥವಾ ಕುಟುಂಬದಲ್ಲಾ? ಚಿಂತಿಸುವುದು ಮುಖ್ಯ.

ನಾವೆಲ್ಲ ಅರಿತಿದ್ದೇವೆ ಮಗು ಯಾವತ್ತು ಬರಿದಾದ ಮಡಿಕೆಯಲ್ಲ.ಅದು ತುಂಬಿದ ಮಡಿಕೆ.ಹುಟ್ಟುವಾಗಲೇ ಜ್ಞಾನದ ಕಣಜ ವನ್ನು ಹೊತ್ತು ತಂದಿದೆ.’ಅಭಿಮನ್ಯು’ವಿನ ತರಹ. ವಿಕಾಸವಾದಂತೆ ವಾತಾವರಣ, ಸನ್ನಿವೇಶಕ್ಕೆ ತೆರೆದುಕೊಳ್ಳುತ್ತ ಒಂದೊಂದು ಪಾಠವನ್ನು ತನ್ನದಾಗಿಸಿಕೊಳ್ಳುತ್ತಲೇ ಬೆಳೆಯುತ್ತದೆ.ಮಗುವಿನ ಪುಟ್ಟ ಪುಟ್ಟ ಕುತೂಹಲ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಜವಾಬ್ದಾರಿಯಿಂದ ನಾವುಗಳು ವಿಮುಖವಾದರೆ,ಆ ಮಗು ಆ ವಿಷಯ ದಿಂದ ವಂಚಿತವಾಗಿ, ನಕಾರಾತ್ಮಕ ಭಾವಗಳಿಗೆ ಆಕರ್ಷಿಸಲ್ಪಡುತ್ತದೆ. ಅದರಿಂದ ಮಗುವನ್ನು ಹೊರತರುವುದು ಕಷ್ಟ. ಪರಿಪೂರ್ಣ. ಜ್ಞಾನ ಪಡೆಯದ ಮಗು ಅನಾಯಾಸವಾಗಿ ಅವನತಿಯತ್ತ ಸಾಗುತ್ತದೆ.ಮಗುವಿಗೆ ನಿಲುಕುವ ಜ್ಞಾನದ ದಾಹವನ್ನು ಪೂರೈಸುವುದು ನಮ್ಮ ಹೊಣೆ. ಇದರತ್ತ ಗಮನ ಹರಿಸುವಲ್ಲಿ ನಮ್ಮ ಪಾತ್ರ ತುಂಬಾ ಇದೆಯೆಂಬುದನ್ನು ತಿಳಿದಷ್ಟು ಒಳ್ಳೆಯದೆ.

ದಿನದ ಜಂಜಾಟದಲ್ಲಿ ನಮಗೆ ನಮ್ಮ ದುಡಿಮೆಯೆ ಮಹತ್ವವೆನಿಸಿದೆ.ಅದು ತಮ್ಮ ಮಗುವಿನ ಭಾವಿ ಭವಿಷ್ಯದ ಕನಸು ಹೊತ್ತು ಹಗಲಿರುಳೆನ್ನದೇ ಕೂಡಿಡುವ ಕಾರ್ಯದಲ್ಲಿ ಬ್ಯೂಜಿಯಾಗಿರುವುದನ್ನು ನಾವು ಅಲ್ಲಗಳೆ ಯುವಂತಿಲ್ಲ.ಎಂಥ ಧಾವಂತದ ಬದುಕು ನಮ್ಮದು.ನಮ್ಮೆಲ್ಲ ಸುಖಗಳನ್ನು ಕಡೆಗಣಿಸಿ ಮಗುವಿನ ಭಾವಿ ಜೀವನ ರೂಪಿಸುವ ಓಟಕ್ಕೆ ಜೀವನವನ್ನು ಮೀಸಲಿಡಿಸಿದ್ದೇವೆ. ವಿಚಿತ್ರವಾದರೂ ಸತ್ಯವೇ, ನಾವೆಲ್ಲ ಗೆದ್ದವರಂತೆ ಕಂಡರೂ ನಿಜಾರ್ಥದಲ್ಲಿ ಸೋತಂತೆ. ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬರದಂತೆ‌ ನಾವು ಬೆಳೆದು ಬಿಟ್ಟಿದ್ದೇವೆ.

ಮಗುವಿಗೊಂದಿಷ್ಟು ಬೇಕುಬೇಡಗಳ ಗುಡ್ಡೆ ಹಾಕಿ ಅದಕ್ಕೆ ಪ್ರಪಂಚ ಅಂದ್ರೆ ಇಷ್ಟೇ ಎಂಬುದನ್ನು ತೋರಿಸಿ ಪರೋಕ್ಷ ವಾಗಿ ನಮ್ಮ ಅಳತೆಯ ಜಾಡಿನಲ್ಲಿ ಇಳಿಸಿಬಿಟ್ಟು ಅಷ್ಟೇ ಗಾತ್ರದಲ್ಲಿ ಬೆಳೆಯುವಂತೆ ಮಾಡಿ ಬಿಟ್ಟಿದ್ದೇವೆ.ತಿಳಿದೋ ತಿಳಿಯದೆಯೋ ನಾವೆಲ್ಲ ಅದರ ಬೇರಾಗಿದ್ದೇವೆ.ಹಿಮಾಲಯ ಪರ್ವತವನ್ನು ಪ್ರತಿಬಾರಿ ನೋಡಿದಾಗಲೂ ಮನಸ್ಸಿಗೆ ಬರುವ ಒಂದೇ ಒಂದು ಆಸೆ ಶಿಖರವನ್ನು ಹತ್ತಬೇಕು ಎಂಬುದನ್ನು ಮನನ ಮಾಡಿಕೊಂಡಷ್ಟು ಪ್ರಾಯೋಗಿಕ ವಾಗಿ ಎದುರಿಸುವಾಗ ನೈಜ ಸಮಸ್ಯೆಗಳನ್ನು ಮೆಟ್ಟಿ ನಿಂತಾಗಲೇ ಆತ/ಅವಳು ಯಶಸ್ಸಿನ ಗುರಿ ತಲುಪಲು ಸಾಧ್ಯ. ಅದು ಅಷ್ಟು ಸುಲಭವೇ.? ಪ್ರಶ್ನೆಗಳು ಉದ್ಭವಿಸಿದ್ದಲ್ಲಿ ಸಾಧಕನಾಗುವ ಕುರುಹು ದೊರೆತಂತಯೇ ಅದರ ಬಗ್ಗೆ ಕುತೂಹಲ ವ್ಯಕ್ತಪಡಿಸುವ ಮಗುವಿಗೆ ಅದರ ನಿಜವಾದ ಅರ್ಥ ತಿಳಿಸು ವಲ್ಲಿ ವಿಫಲರಾದರೆ ಮಗು ಸಾಧನೆಯ ಮೆಟ್ಟಿಲನ್ನು ಹತ್ತದೆ ವಿಮುಖನಾಗಬಹುದು ಅಥವಾ ಕುತೂಹಲವಿರದೆ ಕ್ಷೀಣಿಸಬಹುದು.

ಮಗು ಜ್ಞಾನ ದಾಹಿಯಾಗುವಂತೆ, ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳುವಲ್ಲಿ ನಾವುಗಳು ಮಾರ್ಗದರ್ಶಕರಾಗಿ ಸಮಯಕ್ಕೆ ತಕ್ಕಂತೆ ಸಹಕರಿಸಿದರೆ ಸಾಕೆನಿಸುತ್ತೆ. ಆದರೆ ನಾವುಗಳು ಅನ್ವಯಕ್ಕೆ ಬಿಡದೆ ನಾವೇ ಸುಲಭಗೊಳಿಸಿ ಪರಿಶ್ರಮಪಡಲು ಅವಕಾಶದಿಂದ ವಂಚಿತ ರನ್ನಾಗಿ ಮಾಡಿಬಿಡುತ್ತೇವೆ. ನಡೆಯುವವನು ಎಡುವುದು ಸಹಜ. ಆದರೆ ಕುಳಿತವನು ಎಡುವಲು ಸಾಧ್ಯವೆ? ಎನಪ್ಪಾ ಇದೆಲ್ಲ ನಮಗೆ ಗೊತ್ತಿಲ್ಲವಾ? ಮಕ್ಕಳಿಗೆ ಎನು ಗೊತ್ತಾಗುತ್ತೆ ನಾವು ಮಾಡಿ ತೋರಿಸಿದರೆ ಮಾತ್ರ ತಾನೆ?ಇಲ್ಲಾಂದ್ರೆ ಎಲ್ಲ. ಹಾಳಾಗು ವುದು ಎಂದು ಮೂಗುಮುರಿಯುವವರು ಇದ್ದಾರೆ. ಮುಂದೆ ಹಾಳಾಗುವುದನ್ನು ತಪ್ಪಿಸಲು ಇಂದು ನಮಗೆ ನಮ್ಮ ಮಕ್ಕಳ ಮೇಲೆ ಭರವಸೆಯ ಕಳೆದುಕೊಂಡರೆ ಫಲವೇನು?ನಡೆಯಲು ಬಿಡದೆನಡಿಯೆಂದು ಉಪದೇಶ ನೀಡಿದರೆ ಆದೀತೆ? ವಿಶಾಲವಾದ ಬಯಲು ಕೈ ಬಿಸಿ ಕರೆವಾಗ ಕಾಲಿಗೆ ಮಣ್ಣಾಗುವುದೆಂದರೆ ಹೇಗೆ?? ಭರವಸೆಯ ಹಿಡಿತಗಳು ಬೆಸೆದಷ್ಟು ಬಾಂಧವ್ಯ ಗಟ್ಟಿಯಾಗಲು ಸಾಧ್ಯ….

        🔆🔆🔆           

✍️ ಶ್ರೀಮತಿ.ಶಿವಲೀಲಾ ಹುಣಸಗಿ, ಯಲ್ಲಾಪೂರ