ಶ್ರೀ ಸುರೇಶ್. ಸಿ.ಆರ್, ಅವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೋಟೆಹಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಾ ವಿದ್ಯಾರ್ಥಿಗಳ ಮೆಚ್ಚುಗೆಯನ್ನು ಗಳಿಸಿಕೊಂಡು ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕನ್ನಡ ಸಾಹಿತ್ಯ ಸಾರಸ್ವತಲೋಕದಲ್ಲಿ ಕಥೆ, ನಾಟಕ, ವಿಮರ್ಶೆ,ಕಾದಂಬರಿ, ಕಾವ್ಯ ಮತ್ತು ಕವಿತೆ ಮೊದಲಾದ ಸಾಹಿತ್ಯ ಪ್ರಕಾರಗಳಿವೆ. ಇವು ತಮ್ಮ ವಿಶಿಷ್ಟ ಬರವಣಿಗೆಯ ಶೈಲಿಯಿಂದಲೇ ಸಹೃದಯರಿಗೆ ಪ್ರಿಯವಾದವು. ಕವಿಗಳು ಬರಹಗಾರನ ಅನುಭವ-ಅನುಭಾವಗಳನ್ನು ವೈಯಕ್ತಿಕ ವಾಗಿಯೂ, ಸಮುದಾಯಕವಾಗಿಯೂ ಅಭಿವ್ಯಕ್ತಪಡಿಸಬಲ್ಲ/ಪ್ರತಿನಿಧಿಸಲ್ಲ ಮಾಧ್ಯಮವಾಗಿವೆ. ಈ ಯುವ ಬರಹಗಾರ ತಮ್ಮ ಚೊಚ್ಚಲ ಕೃತಿಯಾದ “ ಗರಿ ಮೂಡಿತು ” ಕವನ ಸಂಕಲನದ ಮೂಲಕ ಉದಯೊನ್ಮುಖ ಭರವಸೆಯ ಕವಿಯಾಗಿ ಕನ್ನಡ ಸಾರಸತ್ವ ಲೋಕಕ್ಕೆ ಸೇರ್ಪಡೆ ಗೊಳ್ಳುತ್ತಿರುವುದು ಸಂತಸದ ವಿಷಯ.

ತಾನು ಹುಟ್ಟಿ ಬೆಳೆದ ಮತ್ತು ಕೆಲಸ ನಿರ್ವಹಿಸುತ್ತಿರುವ ಸಾಮಾಜಿಕ ಪರಿಸರ ದಲ್ಲಿ ಕವಿ ಅನುಭವಿಸಿದ, ಕಂಡು ಕೇಳಿದ ದು:ಖದುಮ್ಮಾನುಗಳು ಇಲ್ಲಿನ ಕವಿತೆಗಳಿಗೆ ಮುಖ್ಯ ವಸ್ತುಗಳಾಗಿವೆ.ಪ್ರತಿಯೊಂದು ಕವಿತೆಯಲ್ಲೂ ಕವಿ ತಾನು ಕಾಣಬಯಸುವ ಆದರ್ಶ ಸ್ಥಿತಿಯೊಂದನ್ನು ಪ್ರತಿಪಾದಿಸು – ವುದು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆಯ ಬದುಕಿಗಾಗಿ ಆಶಿಸುವುದು ಅರ್ಥಪೂರ್ಣ ಮಾನವ ಸಂಬಂಧಗಳನ್ನು ಹುಡುಕಾಡುವುದು ಗೋಚರವಾಗುತ್ತದೆ. ಭೂತ,ವರ್ತಮಾನ, ಭವಿಷ್ಯತ್ತಿನ ಈ ಕಾಲತ್ರಯಗಳಲ್ಲಿ ಮಾನವ ಬದುಕಿನಲ್ಲಿ ಆಗುವ ಬದಲಾವಣೆ ಮತ್ತು ತಲ್ಲಣಗಳ ಸೂಕ್ಷ್ಮ ಸಂವೇದನೆಯನ್ನು ಆನಾವರಣಗೊಳಿಸುತ್ತವೆ.ಅನ್ನದಾತ, ನಾಡು-ನುಡಿ, ಜಲ ಸಂರಕ್ಷಣೆ ವರ್ಣನೆಯನ್ನು ಅಭಿವ್ಯಕ್ತಿಸುವ ಸಿರಿಬೀಡು ಕವಿತೆಗೆ ಸಂದಿದೆ. ಅಕ್ಷರನುಡಿ, ಜ್ಞಾನಪ್ರಭು ಕವಿತೆಗಳು ಕಲಿಕಾ ವಾತಾವರಣದ ಮುಕ್ತತೆ ಮತ್ತು ಪರಿಸರ ಶಿಕ್ಷಣ ಮಹತ್ವವನ್ನು ಪ್ರತಿಬಿಂಬಿಸುತ್ತವೆ,

ನೆಟ್ಟ ಸಸಿ ಫಲಬರುವಂತೆ ಬದುಕಿನುದ್ದಕ್ಕೂ ಅನುಭವವೇ ಪಾಠಗಳು. ಕವಿಯ ಧನಾತ್ಮಕವಾದ ಮನೋಧೋರಣೆಯು ಅಭಿವ್ಯಕ್ತಗೊಳ್ಳುತ್ತಾ ಸಮಾಜವನ್ನು ಕ್ರಿಯಾಶೀಲತೆಗೆ ಕರೆದೊಯ್ಯುವ ಅಭೀಪ್ಸೆಯನ್ನುಹೊಂದಿದೆ. ಪ್ರಮಾಣಿತವಾದ ಮತ್ತು ತೀವ್ರವಾದ ಸ್ಪಂದನಾ ಅಥವಾ ಪ್ರತಿಕ್ರಿಯೆಯನ್ನು ನೀಡುವ ಜಾಯಮಾನದ್ದು. “ ಪಾಪದಕೂಪ ”, “ ಆಕ್ರಂದನ ” ಮರುಕವೂ ಜೀವಭಯವೋ ಕವಿತೆಯ ಶೀರ್ಷಿಕೆಗಳು ಮುಖ್ಯವಾಗಿ ನಿಸರ್ಗದೊಳಗಿನ ಒಂದು ವಿದ್ಯಾಮಾನದ ಮೂಲಕ ಮನುಷ್ಯ ಸಮಾಜದ ವಿಪರ್ಯಾಸವನ್ನು ಸೂಚಿಸುವುದು ಮಾತ್ರವಲ್ಲದೇ ಅಂಧಕಾರದ ಮೌಢ್ಯತೆಯ ಅಸ್ತಿತ್ವದ ಪರಿಸ್ಥಿತಿಯನ್ನು ಬಿಚ್ಚಿಡುತ್ತದೆ.

“ ಕೆಡಿಸದಿರು ಜಲಾಮೃತ ” ಕವಿತೆಯಲ್ಲಿ ಪ್ರಕೃತಿಯ ಜೀವಪರ ಮಾನವೀಯ ಮೌಲ್ಯಗಳು ಕಾರಣೀಭೂತವಾದ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತಾ ಮಾನವನ ಅಸಹಜ ಪ್ರಕ್ರಿಯೆ ವಾತಾವರಣವನ್ನು ಬಿಚ್ಚಿಡುವುದು ಕವಿತೆ ಆಶಯವಾಗಿದೆ. ನಿಮಗೂ ಮುಪ್ಪು ಬರುತ್ತೆ, ಕಾಡುವ ನೋವು ಇದ್ದಾಗ ತೆಗಳುವರು, ಸತ್ತಾಗ ಹೊಗಳುವರು. ಈ ಹೇಳಿಕೆಗಳು ದಾಸರ ವಾಣಿಯಲ್ಲಿ ಬರುವ ಶಕ್ತನಾದರೆ ನಂಟರೆಲ್ಲಾ ಹಿತರು ಎಂಬ ದೃಷ್ಟಿ ಧೋರಣೆಗಳನ್ನು ಈ ಕವಿಯಲ್ಲೂ ಅಭಿವ್ಯಕ್ತಗೊಂಡಿರುವುದನ್ನು ಕಾಣಬಹುದು. ಸಾಮಾಜಿಕ ಶೈಕ್ಷಣಿಕ ವಿಚಾರಧಾರೆಗಳಲ್ಲದೇ ರಾಜಕೀಯ ವಿದ್ಯಾಮಾನಗಳನ್ನು ಕವಿತೆಯ ವಸ್ತುವಾಗಿ ಉಲ್ಲೇಖಿಸಿದ್ದಾರೆ. ಈ ಅಂಶವನ್ನು “ಜಾಗೃತನಾಗು” ಎಂಬ ಕವಿತೆಯು ಸಾಬೀತುಪಡಿಸುತ್ತದೆ. ನವ್ಯ ಸಾಹಿತಿಯಾದ ಲಂಕೇಶರಿಂದ ಹಿಡಿದು ಹೆತ್ತ ತಾಯಿಯಾದ ಅವ್ವನನ್ನು ಕುರಿತು ಬರೆಯದ ಕವಿಯಿಲ್ಲ. “ ಹೆತ್ತವ್ವ”, “ನನ್ನಪ್ಪ” ಕವಿತೆಗಳು ಮನುಷ್ಯನಾಗಿ, ಶಿಕ್ಷಕನಾಗಿ,ಕವಿಯಾಗಿ ರೂಪಿಸಿದ ಸತ್ಯ ಸಂಗತಿಯನ್ನು ನಿರೂಪಿಸುತ್ತವೆ. ಹೀಗೆ ವೈವಿಧ್ಯತೆಯ ವಲಯದಲ್ಲಿ ಪ್ರಾರಂಭದಲ್ಲಿಯೇ ಈ ಕವಿಮಿತ್ರ ಭಾವ, ಭಾಷೆ ಅಭಿವ್ಯಕ್ತಿ ಮತ್ತು ಕವಿತೆಯ ಧೋರಣೆಯಲ್ಲಿ ಇನ್ನಷ್ಟು, ಮತ್ತಷ್ಟು ಮಾಗುವ ಗುಣವುಳ್ಳ ಹದಗಾರಿಕೆಯನ್ನು ಕಂಡುಕೊಂಡಿರುವುದು ಸಂತಸದ ಹಾಗೂ ಅಭಿಮಾನದ ಸಂಗತಿ, ಅವರಿಂದ ತುಂಬ ಸಮೃದ್ಧವಾದ ಕಾವ್ಯ ಫಸಲನ್ನು ನಿರೀಕ್ಷಿಸಬಹುದಾಗಿದೆ. ಈ ಭರವಸೆಯ ಕವಿಯ ಬೆಳವಣಿಗೆಗೆ ಸರ್ವ ಶುಭವನ್ನೂ ಕೋರುವೆ.

       🔆🔆🔆         

✍️ ಡಾ. ಪ್ರಸನ್ನಕುಮಾರ್. ಎಂ. ಕನ್ನಡ ಅಧ್ಯಾಪಕರು ಕು. ಕ. ಅ.ಸಂಸ್ಥೆ ಮಾನಸ ಗಂಗೋತ್ರಿ, ಮೈಸೂರು.