ಬಾಲ್ಯದಲ್ಲೇ ಅಪ್ಪನನ್ನು ಕಳೆದುಕೊಂಡಿದ್ದರಿಂದ ಅಪ್ಪನ ಪ್ರೀತಿ ಅಂದ್ರೆ ಏನು ಅಂತಾನೆ ತಿಳಿದೇ ಇಲ್ಲ. ಹೆಣ್ಣು ಮಕ್ಕಳಿಗೆ ಅಪ್ಪನೇ ತುಂಬಾ ಇಷ್ಟ ,ಅವನೇ ಪ್ರಪಂಚ ಅಂಥ ನನ್ನ ಫ್ರೆಂಡ್ಸ್ ಎಲ್ಲ ಹೇಳುತ್ತಿದ್ರು. ಹಾಗೆ ಸಿನಿಮಾದಲ್ಲೂ ನೋಡಿದ್ದೆ. ಅಪ್ಪ ಬಡವನೇ ಆಗಿರಲಿ,ಶ್ರೀಮಂತನೇ ಆಗಿರಲಿ ತನ್ನ ಮಗಳನ್ನು ಮಾತ್ರ ರಾಜಕುಮಾರಿ ತರ ಬೆಳೆಸುತ್ತಾನೆ ಆದ್ರೆ ನಂಗೆ ಏನು ಗೊತ್ತಿಲ್ಲ.
ನನ್ನ ಫ್ರೆಂಡ್ಸ್ ಅಪ್ಪನ ಸ್ಕೋಟರ್ ನಲ್ಲಿ ಬರ್ತಾ ಇದ್ರೆ ,ನಾನು ಮಾತ್ರ ಅಣ್ಣನ ಕೈ ಹಿಡಿದು ಶಾಲೆಗೆ ಹೋಗುತ್ತಿದ್ದೆ. ಆ ಅಣ್ಣನ ಕೈಗಳೇ ಇಂದು ತಂದೆ ಪ್ರೀತಿಯ ಕೊರತೆ ಕಾಣದಂತೆ ಕಾಪಾಡಿಕೊಂಡು ಬಂದಿದೆ.
ನಾನು ನೋಡಿದ ಮೊದಲ ವೀರ ಅಂತ ಎಲ್ಲ ಅಪ್ಪ ಅಂತಾ ಹೇಳ್ತಾರೆ ಆದ್ರೆ ನಂಗೆ ನನ್ನ ಅಣ್ಣ ನೇ ಮೊದಲ ವೀರ, ಮೊದಲ ಫ್ರೆಂಡ್.ನನಗಿಂತ ಎರಡು ಮೂರು ವರ್ಷ ದೊಡ್ಡವನಾದ್ರು ಕೂಡ ನಾನು ಮಾತ್ರ ಅವನನ್ನು ಹೋಗೋ ಬಾರೋ ಅಂತಾನೆ ಕರಿಯೋದು.ನಗು ಅಳು ಏನೇ ಅದ್ರು ಕೂಡ ಚಿಕ್ಕ ವಯಸ್ಸಿನಿಂದ ಈಗಲೂ ಕೂಡ ಜೊತೆ ಇದ್ದಾನೆ.
ಅಮ್ಮ ಒಬ್ಬರೇ ಇಡಿ ಮನೆಯ ಜವಾಬ್ದಾರಿಯನ್ನು ವಹಿಸಿದ್ದರಿಂದ ಅದನ್ನು ಕಂಡ ಅಣ್ಣ 10ನೇ ತರಗತಿಯ ರಜಾ ದಿನಗಳಲ್ಲಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಅಲ್ಲಿ ದಿನಕ್ಕೆ 50 ರೂಪಾಯಿ ಸಿಗುತಿತ್ತು. ಅದ್ರಲ್ಲಿ ನನಗೆ ಪ್ರತಿ ದಿನ 5 ರೂಪಾಯಿ ಚಾಕ್ಲೆಟ್ ತರ್ತಾ ಇದ್ದ. ಕಲಿಕೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಇಂದು ಒಳ್ಳೆಯ ಕೆಲಸಕ್ಕೆ ಸೇರಿ ಇಡೀ ಮನೆಯ ಜವಾಬ್ದಾರಿನ್ನು ನಿರ್ವಹಿಸುತ್ತಿದ್ದಾನೆ. ನನ್ನ ಶಿಕ್ಷಣಕ್ಕೂ ಒಳ್ಳೆಯ ಪ್ರೋತ್ಸಾಹವನ್ನು ನೀಡುತ್ತಿದ್ದಾನೆ.
ಅಪ್ಪನ ಪ್ರೀತಿಯನ್ನು ನಾನು ಅಣ್ಣನ ಮೂಲಕ ಪಡೆಯುತ್ತಿದ್ದೇನೆ.
🔆🔆🔆
✍️ ಕು.ಅಕ್ಷತಾ ಕಿರಣ, ಉಜಿರೆ