ಮೂಕಿಯಂತೆ ಕುಳಿತಿರುವೆ
ಮೌನದಿ ಕಿಟಕಿಯಾಚೆಗಿನ
ಬರಡು ದಿಗಂತವ ದಿಟ್ಟಿಸುತ್ತಿರುವ
ನನ್ನ ಎಚ್ಚರಿಸಿ
ಬರಿದೆ ಹುಚ್ಚಿಯೆನ್ನದಿರಿ

ಬದುಕಿನ ಹುಡುಕಾಟದಿ
ನನ್ನತನದ ಆಸ್ಥಿತ್ವ ಕಳೆದುಕೊಂಡಿರುವೆ
ನೆನಪಿನ ಬುತ್ತಿಯಲಿ ಕಲಸಿದ
ಅಳಿದುಳಿದ ಕನಸುಗಳ ಹುಡುಕುತ್ತಿರುವೆ
ನನ್ನ ಹುಚ್ಚಿಯೆನ್ನದಿರಿ

ನನ್ನದಾದ ಲೋಕದೊಳಗೆ
ಬಂಧನಗಳ ಕಳಚುತ್ತಾ
ಪಥವನೆತ್ತಲೂ ಕಾಣದೆ
ಹಾರುತ್ತಿರುವೆ ಬಾನಂಚಿನತ್ತಿತ್ತಾ
ಸೋತು ಬಸವಳಿದ ರೆಕ್ಕೆಗಳ
ಕಂಡು ಹುಚ್ಚಿಯೆನ್ನದಿರಿ

ಅಡೆ – ತಡೆ ಗೋಡೆಗಳ
ಮೀರಿದ ನಗು
ಮಗುದೊಮ್ಮೆ ಆಳು
ಇವೆರಡರ ನಡುವಿನ ಲಿ
ಬಾಳಿನ ಅಥ೯ವ ತಿಳಿಯದೆ
ಅನಾಮಿಕ ಪ್ರಪಂಚದಲ್ಲಿರುವೆ
ನನ್ನ ಹುಚ್ಚಿಯೆನ್ನದಿರಿ

ಮನದೊಳಗೆ ಕುದಿಯುವ
ತುಮುಲಗಳ ಮಥಿಸುತ್ತಾ
ಅವ್ಯಕ್ತ ವೇದನೆಯೊಳಗೆ
ಕ್ಷೀಣಿಸಿದ ನನ್ನ ಧ್ವನಿಗಳು
ಯಾರಿಗಥ೯ವಾದಿತ್ತು

ಅದುಮಿಟ್ಟ ನನ್ನ ಭಾವನೆಗಳು
ಕಾದಾಟ ರುದ್ರ ರೂಪವ ತಾಳಿ
ನನ್ನೊಡಲ ರಿಂಗಣದಿ ನತಿ೯ಸುತ್ತಿರಲು
ಬಸವಳಿದ ಜೀವಕ್ಕೆ ಕಹಿರಸವೆ
ದೊರಕಲು ನಾ ಮೌನಿಯಾದೆ
ನನ್ನ ಹುಚ್ಚಿಯೆನ್ನದಿರಿ

ಯಾರು ಹೊಣೆಯೆನ್ನಲಿ
ಯಾರ ದೂಷಿಸಲಿ
ಹುಚ್ಚಿ ಪಟ್ಟ ಕೊಟ್ಟ ನನ್ನವರನ್ನೆ
ಗಹಗಹಿಸುವ ಸಮಾಜವನ್ನೆ
ಮೌನ ರೋದನದಲ್ಲಿರುವ ನನ್ನನ್ನೆ

ಮನದಿ ಭೋಗ೯ರೆಯುವ ಜಲಪಾತಕ್ಕೆ
ಅಣೆಕಟ್ಟು ಕಟ್ಟುವ ಬಯಕೆ
ಹಮ್ಮುಗಳ ಮೀರಿ
ಹೆಣ್ತನದ ಆಚೀನ ಸೀಮೆಯ ದಾಟಿ
ಬದುಕಿ ತೋರಿಸುವ ಛಲವಿಂದು ಹುಟ್ಟಿದೆ
ಬದುಕಬೇಕು ನಾನು ನಾನಾಗಿ ನನ್ನತನದಲಿ
ಇನ್ನು ಯೋಚಿಸಲಾರೆ ಈ ಪದವ
ಹುಚ್ಚಿಯೆನ್ನದಿರಿ ನನ್ನ ಹುಚ್ಚಿಯೆನ್ನದಿರಿ.

           🔆🔆🔆

✍️ಶ್ರೀಮತಿ. ವಾಣಿ ಶೆಟ್ಟಿ,ಮುಂಬಯಿ