ನಾರಿಯೆಂದರೆ ಬರಿ ಸೀರೆಯೆ?
ಅವಳ ಇರವು ಸಾರಲು ಸೀರೆ ಅನಿವಾರ್ಯವೆ?
ನರನಾಡಿಗಳಲಿ ಹರಿವ ಅವಳ ಪ್ರೀತಿ ನಿನಗರಿವಾಗದೆ?

ಮಹಿಳೆಯೆಂದರೆ ಬರಿ ಬಳೆಗಳೆ?
ಬಳೆಗಳಿಲ್ಲದ ಅವಳ
ನಳಿದೋಳುಗಳು ಕೊರಳ ಬಳಸಲು ಪುಳಕ ನಿನ್ನೊಳಗೇಳದೆ?

ಕನ್ನೆಯೆಂದರೆ ಬರಿ ಕುಂಕುಮವೆ?
ಅವಳ ಕಣ್ಣ ಕಾಂತಿಯ ಬಣ್ಣ ನಿನ್ನ ತಣ್ಣನೆಯ ಎದೆಯಲ್ಲಿ
ತಲ್ಲಣವುಂಟುಮಾಡದೆ?

ಸ್ತ್ರೀ ಎಂದರೆ ಬರಿ ಗೆಜ್ಜೆಯೆ?
ಅವಳ ಹೆಜ್ಜೆಯ ಸದ್ದು ನಿನ್ನ ನಿದ್ದೆಯ ಕದ್ದು ಎದೆಯ ಸಜ್ಜೆಯಲಿ ಮಾರ್ದನಿಸದೆ?

ಆಭರಣ ಲೇಪಗಳೆ ಅವಳ ಅಸ್ಮಿತೆಯಾಗುವವೆ?
ಅವುಗಳಿಲ್ಲದೆ ಆತ್ಮಾನುಸಂಧಾನ
ನಿನಗೆ ಸಾಧ್ಯವಿಲ್ಲವೇ?
ಪ್ರೀತಿ ಗೌರವದಾಭರಣಗಳ ಅವಳಾತ್ಮಕೆ ನೀ ಸಮರ್ಪಿಸಲಾರಯೇ?

ಸಮಾನತೆಯ ಸೀರೆಯುಟ್ಟ
ಬಲವೆಂಬ ಬಳೆಯಿಟ್ಟ
ಗೌರವವೆಂಬ ಗೆಜ್ಜೆತೊಟ್ಟ
ಕಾರುಣ್ಯವೆಂಬ ಕುಂಕುಮವಿಟ್ಟ
ಪ್ರೇಮಮಯಿ ಅವಳಾಗಬಾರದೇ?

ದಮನಿತೆಯಾದಷ್ಟೂ ಭವ ಬಂಧಗಳ ಬಿಡಿಸಿಕೊಳ್ಳುತ್ತ ನಿನ್ನ ಭವಿತವ್ಯವ ಬರಡಾಗಿಸುವವಳು ಮಹಿಳೆ.

ವಿಮೋಚಿತೆಯಾದಷ್ಟೂ ಭಾವ ಬಂಧಗಳಲಿ ಬಂದು ಸೇರಿ ನಿನ್ನ ಬದುಕ ಬೆಳಗಿಸುವವಳು ವನಿತೆ

             🔆🔆🔆

✍️ ಕವಿತಾ ಹೆಗಡೆ, ಹುಬ್ಬಳ್ಳಿ