ಮಾತಾಡಿಯೂ ಮಾತು ತಪ್ಪುವುದು ಇವರಿಗೆ ಹೊಸದೇನಲ್ಲ ಗೆಳೆಯ
ನಂಬಿಸಿಯೂ ನಂಬಿಕೆ ಕಳೆಯುವುದು ಇವರಿಗೆ ಹೊಸದೇನಲ್ಲ ಗೆಳೆಯ

ಆರಂಭದಲಿ ಆಕಾಶಕೇ ಸರಾಸರಿ ಏಣಿ ಹಾಕುವ ತರಾತುರಿ ತಮ್ಮಣ್ಣರು
ಹುರುಪು ತೋರಿಯೂ ಕೈಯೆತ್ತುವುದು ಇವರಿಗೆ ಹೊಸದೇನಲ್ಲ ಗೆಳೆಯ

ಸಿಧ್ಧಾಂತ-ಗಿದ್ದಾಂತ ಮೈಕು ಮುಂದೆ ಮಾತ್ರ ಕೆಳಗೆ ಇಳಿದರೆ ಟೈಂಪಾಸ್ ಬಟಾಣಿ
ಏನೆಲ್ಲ ಕೊಚ್ಚಿಕೊಂಡೂ ಜಾರಿಕೊಳ್ಳುವುದು ಇವರಿಗೆ ಹೊಸದೇನಲ್ಲ ಗೆಳೆಯ

ಬಡವನಿಗೆ ಹಸಿವಿನ ಪುರಾಣ ವಗ್ಗರಣೆ ವಾಸನೆ ಹೊಟ್ಟೆ ತುಂಬಿಸದು
ದೀಪ ಉರಿಸಿಯೂ ಕತ್ತಲನಪ್ಪಿಕೊಳ್ಳುವುದು ಇವರಿಗೆ ಹೊಸದೇನಲ್ಲ ಗೆಳೆಯ

ಇತಿಹಾಸದ ಪುಟಗಳು ಎಷ್ಟು ತಿರುವಿ ಹಾಕಿದರೂ ಮನುಷ್ಯ ಮಾತ್ರ ಕಾಣೆ
“ಜಾಲಿ” ದಿಕ್ಕು ಬದಲಿಸುವ ಕೈಯಿದ್ದರೂ ಕಾಲ್ಕಿತ್ತುವುದು ಇವರಿಗೆ ಹೊಸದೇನಲ್ಲ ಗೆಳೆಯ

-ವೇಣು ಜಾಲಿಬೆಂಚಿ
ರಾಯಚೂರು.