ಇಲ್ಲಿ ಕನಸುಗಳನ್ನು ಕಾಣಬೇಡಿ ಕಣ್ಣುಗಳೇ ಬತ್ತಿಹೋಗಿವೆ
ಇಲ್ಲಿ ಹೂಗಳನ್ನು ಕೀಳಬೇಡಿ ಬೇರುಗಳೇ ಬತ್ತಿಹೋಗಿವೆ

ಇಲ್ಲಿ ಮನುಷ್ಯರನ್ನು ನೋಡಬೇಡಿ ನರನಾಡಿಗಳೇ
ಬತ್ತಿಹೋಗಿವೆ
ಇಲ್ಲಿ ರೀತಿರಿವಾಜುಗಳನ್ನು ನಂಬಬೇಡಿ ಕರುಳುಗಳೇ ಬತ್ತಿಹೋಗಿವೆ

ಇಲ್ಲಿ ಮೊಹಬ್ಬತ್ತನ್ನು ಮಾಡಬೇಡಿ ಹೃದಯಗಳೇ ಬತ್ತಿಹೋಗಿವೆ
ಇಲ್ಲಿ ಹುಣ್ಣಿಮೆಯನ್ನು ಅರಸಬೇಡಿ ಭರವಸೆಗಳೇ ಬತ್ತಿಹೋಗಿವೆ

ಇಲ್ಲಿ ಸ್ವರಗಳನ್ನು ಹುಡುಕಬೇಡಿ ಗಟ್ಟಿ ದನಿಗಳೇ ಬತ್ತಿಹೋಗಿವೆ
ಇಲ್ಲಿ ಮಾತುಗಳನ್ನು ಮೆರೆಸಬೇಡಿ ಮತಲಬುಗಳೇ ಬತ್ತಿಹೋಗಿವೆ

ಇಲ್ಲಿ ನೆಮ್ಮದಿಯನ್ನು ಬಯಸಬೇಡಿ ದೀವಿಗೆಗಳೇ ಬತ್ತಿಹೋಗಿವೆ
“ಜಾಲಿ” ಇಲ್ಲಿ ಕಣ್ಣೀರು ಸುರಿಸಬೇಡಿ ಕವಾಟಗಳೇ ಬತ್ತಿಹೋಗಿವೆ

-ವೇಣು ಜಾಲಿಬೆಂಚಿ
ರಾಯಚೂರು.