ನನ್ನೆದೆಯ ಆಳ ಎಷ್ಟೆಂದು ನೀ ಕೇಳುವ ಮಾತೂ ಅಲ್ಲ ನಾ ಹೇಳುವ ಮಾತೂ ಅಲ್ಲ ಸಖಿ
ಇಬ್ಬರೂ ಒಂದೇ ತಟ್ಟೆಯಲಿ ಕೈತೊಳೆದ ದಿನ ಮರೆವ ಮಾತೂ ಅಲ್ಲ ನಾ ನೆನಪಿಸುವ ಮಾತೂ ಅಲ್ಲ ಸಖಿ

ಬದುಕಿನ ಭುಜದ ಮೇಲೆ ನೀ ಕೈ ಇಟ್ಟು‌ ನಡೆದಾಗ ವಿಶ್ವಕಧಿಪತಿಯಾಗಿ ಪಟ್ಟಾಭಿಷೇಕ ಮಾಡಿದಂತಿತ್ತು
ಆದರೆ ಈಗದೆಂತ ಕನಸೆಂದು ನೀ ಹೊಗಳುವ ಮಾತೂ ಅಲ್ಲ ನಾ ತೆಗಳುವ ಮಾತೂ ಅಲ್ಲ ಸಖಿ

ನೂರಾರು ಗಾಯಗಳೀಗ ನನಗೆ ಅದೇ ನಿನ್ನ ನೆನಪುಗಳು ಬಿಡದೆ ರಕ್ತಸ್ರಾವ ಸುರಿಸುತ್ತಿವೆ
ಏನು ಮಾಡಲಿ ಹೇಳೆಂದು ನೀ ಪ್ರಶ್ನಿಸುವ ಮಾತೂ ಅಲ್ಲ ನಾ ಉತ್ತರಿಸುವ ಮಾತೂ ಅಲ್ಲ ಸಖಿ

ನೀ ನನ್ನ ಮನದಲಿ ತುಂಬಿಹೋಗಿದ್ದೆ ಆದರೆ ಎದೆಯಲಿ ಮಾತ್ರ ವೆಕೇಟ್ ಆಗುವೆಯೆನಿಸಿರಲಿಲ್ಲ
ಗಾಳಿಯಂತೆ ಬರುವೆ ಹೋಗುವೆ ಎನಲು ನೀ ಒಪ್ಪುವ ಮಾತೂ ಅಲ್ಲ ನಾ ನಂಬುವ ಮಾತೂ ಅಲ್ಲ ಸಖಿ

ಇಲ್ಲಿಗೆ ಬಂದವರು ಸರಾಸರಿ ಎಲ್ಲಿಗೆ ಹೋಗಿ ಮುಟ್ಟುವರೋ ಯಾರಿಗೆ ಗೊತ್ತು “ಜಾಲಿ”
ಗೊತ್ತೂ ಗೊತ್ತಿಲ್ಲದಂತೆ ದೂರವಾದರೆ ನೀ ದೋಷ ನಿನ್ನದೆವೆನುವ ಮಾತೂ ಅಲ್ಲ ನಾ ಬರಿ ನೆಪವಾಗಿದ್ದೆಯೆನುವ ಮಾತೂ ಅಲ್ಲ ಸಖಿ

              🔆🔆🔆

✍️ವೇಣು ಜಾಲಿಬೆಂಚಿ, ರಾಯಚೂರು.