ಕಸದವನ ಮಾತೆಂದು ಕೇಳದಂತಿರು ಅಕ್ಕ ಕಸದ ನುಡಿಗಳೆಂದು ಕಡೆಗಣಿಸದಿರು ಅಣ್ಣ ನಿಮ್ಮ ಮನೆಯ ಸ್ವಚ್ಚತೆ ಕಾಳಜಿಯಷ್ಟೆ ಸಾಕೆ? ಪರಿಸರರಕ್ಷಣೆ ಕಾರ್ಯ ನಿಮ್ಮದೇ ಜೋಕೆ.!

ಕಸವೆಂಬ ಹಾಲಾಹಲವನು ನಿಗ್ರಹಿಸಿದರಷ್ಟೇ ಇಲ್ಲಿ ನೈರ್ಮಲ್ಯವೆಂಬ ಅಮೃತದ ಸಿಂಚನ.! ಕಾಲ ಕಾಲಕ್ಕೆ ಕಸ ವಿಲೇವಾರಿಯಾದರಷ್ಟೇ ಮಾಲಿನ್ಯವೆಂಬ ಶಾಪದಿಂದ ವಿಮೋಚನ.!

ಪ್ರತಿ ಮನೆಯೂ ಕಸೋತ್ಪಾದನೆ ಕಾರ್ಖಾನೆ ನಿತ್ಯಕಾರ್ಯಗಳಿಂದಲೇ ಕಸದ ಹುಟ್ಟು ತಾನೆ ಮನ ಮನವೂ ಎಚ್ಚೆತ್ತು ಜಾಗೃತರಾದರಷ್ಟೇ ಕಸದ ಸಮಸ್ಯೆಗೆ ಸುಲಭ ಪರಿಹಾರ ತಂತಾನೆ.!

ಹಸಿಕಸ ಒಣಕಸಗಳ ಪ್ರತ್ಯೇಕ ವಿಂಗಡಿಸು ಪ್ರತಿದಿನ ಮರೆಯದೇ ಶಿಸ್ತಿನಲಿ ರವಾನಿಸು ಕಸ ಸಂಗ್ರಹಣೆಗೆ ಬರುವೆವು ಮನೆಬಾಗಿಲಿಗೆ ಸಾಮರಸ್ಯದಿ ಸಹಕರಿಸಿ ದಿನ ನಮ್ಮೊಂದಿಗೆ.!

ಮನೆಕಸಗಳ ತಂದು ಸುರಿಯದಿರು ಬೀದಿಗೆ ಒಣಕಸದಿಂದ ಮಾಲಿನ್ಯ ನೆಲ ಜಲ ಗಾಳಿಗೆ ಅಪಾಯ ಪಕ್ಷಿ ಜಾನುವಾರು ಜಲಚರಗಳಿಗೆ ಪರೋಕ್ಷ ಮಾರಕ ನಮ್ಮದೇ ಬದುಕುಗಳಿಗೆ.!

ಹಸಿಕಸದಿಂದ ಹಾದಿ ಬೀದಿ ಹಾಳಾಗುವವು ನೊಣ ಸೊಳ್ಳೆ ಹುಳ ಹುಪ್ಪಟಗಳಿಗೆ ತಾವು ಡೆಂಗ್ಯು ಮಲೇರಿಯಾ ರೋಗ ರುಜಿನಗಳು ಆರೋಗ್ಯ ನೆಮ್ಮದಿ ಹಾಳು ಮಾಡಿಯಾವು.!

ಕಸವನ್ನು ಸಂಸ್ಕರಿಸಿದರೆ ರಸವಾಗಬಲ್ಲುದು ತೋಟ ಗಿಡಗಂಟೆಗೆ ಗೊಬ್ಬರವಾಗಬಲ್ಲುದು.! ನೈಸರ್ಗಿಕ ಸಾವಯವ ಅನಿಲವಾಗಬಲ್ಲುದು. ಸಂಪ್ರೀತಿಯಿರೆ ಸಕಲವೂ ಸಾಧ್ಯವಾಗಬಲ್ಲುದು.!

ಕಸಸಂಗ್ರಹಣೆ, ಸಾಗಣೆ, ತ್ಯಾಜ್ಯ ವಿಲೇವಾರಿಗೆ ಟೊಂಕ ಕಟ್ಟಿ ನಿಂತ ಪೌರಕಾರ್ಮಿಕರು ನಾವು ನೈರ್ಮಲ್ಯ ಸಂರಕ್ಷಣೆ, ಮಾಲಿನ್ಯ ನಿವಾರಣೆಗೆ ಕೈಜೋಡಿಸಬೇಕಿದೆ ನಿತ್ಯ ನಮ್ಮೊಂದಿಗೆ ನೀವು.!
🔆🔆🔆

✍️ ಶ್ರೀ ಎ.ಎನ್.ರಮೇಶ್. ಗುಬ್ಬಿ.