1 ಗುಟ್ಟು..!
ಕೊಂಚವೂ ಪತಿರಾಯ
ಮುಖ ಕಪ್ಪಿಟ್ಟುಕೊಳ್ಳದೆ
ನಗುನಗುತ ತಿನ್ನುತ್ತಿದ್ದರೆ
ದಿನಂಪ್ರತಿಯೂ ಸತೀಮಣಿ
ಮಾಡಿಹಾಕುವ ಉಪ್ಪಿಟ್ಟು..
ಅದುವೇ.. ಅದುವೇ…
ಯಶಸ್ವಿದಾಂಪತ್ಯದ ಗುಟ್ಟು.!
*******
2 ವಧು ಪರೀಕ್ಷೆ.!
ವಧು ಪರೀಕ್ಷೆಯೆಂದರೆ..
ವಧುವಿಗೆ ಭಾವಿ ಅತ್ತೆ
ಮಾವ ಎಲ್ಲರೊಂದಿಗೆ
ಹಾಡುಹಸೆ ಬಾತ್‍ಚೀತು
ವರನಿಗೆ ಮಾತ್ರ ವಿಧಿಲಿಖಿತ
ಮಾಮೂಲಿ ಖಾರಾಬಾತು.!
******
3 ಫಲಿತಾಂಶ.!
ಮನೆಯಲ್ಲಿ ಜಗಳವಾಗಿ
ಹೆಂಡತಿ ಮುನಿಸಿನಲಿ
ಬಿಟ್ಟುಬಿಟ್ಟರೆ ಮಾತು..
ಮರುದಿನ ಬೆಳ್ಳಂಬೆಳಿಗ್ಗೆ
ಗಂಡನಿಗೆ ತಪ್ಪಿದ್ದಲ್ಲ
ಉಪ್ಪುಖಾರಗಳಿಲ್ಲದ
ದರಿದ್ರ ಖಾರಾಬಾತು.!
************
4. ಕುರುಹು..!
ವಿವಾಹಿತನೊಬ್ಬ ಹೋಟೇಲಿನಲಿ
ಮತಿಕೆಟ್ಟು, ಗತಿಕೆಟ್ಟು, ಆಸೆಪಟ್ಟು
ಗಬಗಬ ತಿನ್ನುತ್ತಿದ್ದರೆ ಉಪ್ಪಿಟ್ಟು…
ಅವನ ಮನೆಯೊಳಗಿದೆ ಬಿಕ್ಕಟ್ಟು
ಅದು ಅವನ ಅರ್ಧಾಂಗಿಯ
ಕೈರುಚಿಯಿಂದಾಗಿರುವ ಎಡವಟ್ಟು.!
********
5. ಖಾರಾಬಾತಿನ ಬಾತು.!
ಅದು ಕೇಸರಿಬಾತಿನೊಂದಿಗೆ
ಜೊತೆಯಾದರೆ ಚೌಚೌಬಾತು
ಒಂಟಿಯಾಗಿದ್ದರೆ ಖಾರಾಬಾತು
ವಧು-ವರರ ಪ್ರಥಮ ಭೇಟಿಗೆ
ಸಾಕ್ಷಿಯಾಗುವ ಪ್ರೇಮಸೇತು
ನಿತ್ಯವೂ ತಿನ್ನಲಾರಂಭಿಸಿದರೆ
ನಾಲಿಗೆಯೇ ನೀರಸವಾದೀತು
ಬದುಕೇ ಬೇಸರ ಬಂದೀತು.!
ಕಡೆಗೆ ಮರತೇ ಹೋದೀತು
ತಿಂಡಿ ಬೇಕೆನುವ ಮಾತು.!
***********
6. ಪರಿಣಾಮ.!
ಎಂದೂ ಸತಿಯೊಂದಿಗೆ
ಸಣ್ಣ ಪುಟ್ಟ ವಿಷಯಕ್ಕೂ
ತೋರಿ ಆರ್ಭಟ ಸಿಟ್ಟು
ಮಾಡದಿರಿ ಎಡವಟ್ಟು
ತಂದುಕೊಳ್ಳದಿರಿ ಬಿಕ್ಕಟ್ಟು.!
ಇಲ್ಲದಿರೆ ವಿಧಿ ಕೈಕೊಟ್ಟು
ಹಣೆಬರಹವೇ ಎಕ್ಕುಟ್ಟು
ನೀವು ತಿನ್ನಬೇಕಾದೀತು
ಮಾರನೆಯದಿನ ಬೆಳಿಗ್ಗೆ
ಬಾಯಿಗಿಡಲಾಗದ ಉಪ್ಪಿಟ್ಟು.!
************
7. ಅಂತರ.!
ಬಿಸಿಬಿಸಿ ಹಬೆಯಾಡುವ
ತರಾವರಿ ತರಕಾರಿಗಳ
ಉಪ್ಪುಖಾರದ ಉಪ್ಪಿಟ್ಟು
ನಾಲಿಗೆಗೆ ರುಚಿಕಟ್ಟು
ಉಪಹಾರದ ಸಂಭ್ರಮ.!
ಹಳಸಿ ತಂಗಳಿನಂತಾದ
ಉಪ್ಪುಖಾರವೂ ಇಲ್ಲದ
ಸಾದಾ ಸಪ್ಪೆ ಉಪ್ಪಿಟ್ಟು
ತಿನ್ನುವವರಿಗೆ ಬಿಕ್ಕಟ್ಟು
ಉಪವಾಸಕ್ಕೆ ಸರಿಸಮ.!
🔆🔆🔆
✍️. ಎ.ಎನ್.ರಮೇಶ್, ಗುಬ್ಬಿ