ಜಗತ್ತಿನ ಜೀವ ಪ್ರಪಂಚವ ಸೃಷ್ಟಿಸಿದ ಅಣುವಿಗೆ ಶತಕೋಟಿ ನಮನಗಳು. ಜೀವ ವಿಕಾಸವಾದಂತೆಲ್ಲ ಅದರ ಉಳಿವು ಅಳಿವು ನಿರ್ಧರಿಸಿ,ಮುಂದಾಗುವ ಆಗುಹೋಗುಗಳ ಮೇಲೆ ಆ ಜೀವಿಯ ಕಾಲಾವಧಿ ನಿರ್ಧಾರ ವಾಗುತ್ತದೆ. ಜಗತ್ತು ವಿಕಾಸವಾದಂತೆಲ್ಲ ಜೀವಿಗಳ ಸಂಚಲನ ದೊಡ್ಡ ದೊಡ್ಡವೆಂದು ತಿಳಿದಿದ್ದೆಲ್ಲ ಭೂಗರ್ಭದಲ್ಲಿ ಅಡಗಿರುವುದು ಇತಿಹಾಸವೇ.ಒಮ್ಮೊಮ್ಮೆ ಪ್ರಕೃತಿ ಕೊಡುವ ಕೊಡುಗೆಗಳು ಅಮೂಲ್ಯವಾದರೂ ಅದನ್ನು ಪರಿಪೂರ್ಣವಾಗಿ ಸ್ವೀಕರಿಸಿ ಅದರಂತೆ ಸೃಜಿಸದಿರುವುದು ದುರಂತವೇ ಸರಿ.

ತಂದೆ-ತಾಯಿ ಜೀವಪ್ರಪಂಚದ ಸಾತ್ವಿಕ ತಳಹದಿಯೆಂಬುದನ್ನು ಯಾರು ಅಲ್ಲಗಳೆ ಯುವಂತಿಲ್ಲ.ತನ್ನೆಲ್ಲ ನೋವು ಬಾಧೆಗಳನ್ನು ಅದುಮಿ,ಜೀವನದ ಹೋರಾಟದ ನಡುವೆ ಪ್ರಕೃತಿಗೆ ಪ್ರತಿಯಾಗಿ ಇನ್ನೊಂದು ಜೀವ ನೀಡಿ ತಮ್ಮ ಸತ್ಕಾರ್ಯ ಮೆರೆಯುತ್ತಾರೆ. ಆ ಸಂದರ್ಭ ಅವರಿಬ್ಬರಿಗೂ ಕೊನೆಯ ಘಟ್ಟವು ಆಗಿರಬಹುದು. ಜೀವತಳೆದ ಹಸುಗೂಸು ನವೀನ ಜಗತ್ತಿಗೆ ಕಣ್ಣು ತೆರೆದಾಗ ತನಗೆ ನಿಲುಕಿದಷ್ಟು ವ್ಯವಹಾರಿಕ, ದಾರ್ಶನಿಕ ಜ್ಞಾನ ಪಡೆಯಲು ಸಹಕಾರ ವಾಗುತ್ತದೆ. ತಾಯಿ ತನ್ನ ರಕ್ತವನ್ನೆಲ್ಲ ಎದೆಯ ಅಮೃತವಾಗಿಸಿ ಧಾರೆಯೆರೆದು ಪ್ರೇಮದಲಿ ಬೆಳೆಸಿದರೆ, ತಂದೆಯ ಕೈ ಹಿಡಿದು ಪುಟ್ಟ ಹೆಜ್ಜೆಯಿಡುತ್ತ ನಡೆಯುವಾಗ ಮಗು ಸಾಕ್ಷಾತ್ ಭಗವಂತನ ರೂಪವೆಂದು ಭಾವಿಸಿದ್ದಿದೆ.

ನಮ್ಮ ಹಾಗೂ ಮಗುವಿನ ಸಂಬಂಧ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.ತಂದೆಯ ಬೆನ್ನೆರಿ ಕುಂಕಿಮರಿ ಆಟದಲಿ, ಜಂಬೂ – ಸವಾರಿಯಲಿ, ಪೇಟೆಯ ರಸ್ತೆಯ ಬೀದಿ ಗಳಲಿ ರಾಜಠೀವಿಯಲಿ ಅಪ್ಪನ ಹೆಗಲೇರಿ ಹೊರಟ ನೋಟವೇ ಅತ್ಯದ್ಭುತ.ಅಷ್ಟಲ್ಲದೆ ತಾಯಿ ಸೆರಗ ಹಿಡಿದು, ಕಂಕುಳಲ್ಲಿ ಕೂತು, ಎದೆಗವುಚಿಕೊಂಡು, ಅಮ್ಮನ ಕೈತುತ್ತಿಗೆ ಬಾಯಿ ತೆರೆಯುವ ಸುಖ ಮರೆತವರುಂಟೆ? ಅಮ್ಮನ ಮಡಿಲಲಿ ಜೋಗುಳ ಕೇಳುತ ಅವಳ ಸ್ಪರ್ಶವನ್ನು ಸದಾ ಬಯಸುವ ಕೋಳಿ ಮರಿಯಂತೆ,ಬೆಚ್ಚಗೆ ಮಲಗುವ ಪುಟ್ಟ ಕಂದನ ಕನಸು,ನನಸು,ಪ್ರಪಂಚ ಎಲ್ಲವೂ ಅಮ್ಮನೇ.ಯಾವಾಗ ಮಗು ಅಮ್ಮಾ,ಅಪ್ಪಾ ಎಂದು ತೊದಲು ನುಡಿ ಯಿಂದ ಕರೆಯಲು ಪ್ರಯತ್ನ ಮಾಡುವುದೋ ಕೇಳಲು ಆನಂದಿಸಲು ಹಬ್ಬದ ಸಡಗರ ಮನೆಮಂದಿಗೆಲ್ಲ.ಪುಟ್ಟ ಕಂದನ ಹಸ್ತದಲ್ಲಿ ಜಗತ್ತು ಅಡಗಿದಂತೆ.

ಮನೆಗೊಂದು ದೀಪ ಬೆಳಗಿದಂತೆ ಮಕ್ಕಳು.ಅವರ ಲಾಲನೆ ಪಾಲನೆ ಎಲ್ಲವೂ ಅಮೂಲ್ಯವೇ.ಅಂತಹ ಸಂದರ್ಭದಲ್ಲಿ ಮಗುವಿನ ಸರ್ವಾಂಗೀಣ ಪ್ರಗತಿಗೆ ಗಮನ ವಹಿಸಬೇಕಾಗಿರುವುದು ಅತೀ ಮುಖ್ಯ. ಪ್ರತಿಹಂತಗಳಲ್ಲೂ ಮಗು ಜ್ಞಾನ ಪಡೆದು ಕೊಳ್ಳುವುದರಿಂದ ಮಗುವಿಗೆ ಮನೆಯೇ ಮೊದಲ ಪಾಠಶಾಲೆಯಾಗಿ ಮಾರ್ಪಾಡಾ ಗುತ್ತದೆ. ಅಂತಹ ಅಮೃತ ಗಳಿಗೆಗೆ ಪಾಲಕರಾದ ನಾವುಗಳು ಸಂಸ್ಕಾರಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗುವುದು ಬಹುಮುಖ್ಯ.

ದಾರಿಯಾವುದಯ್ಯ..ಇಹಪರ ಲೋಕಕೆ ಎಂಬಂತೆ ಮಗುವಿನಲ್ಲಿ ಅಡಗಿರುವ ಪ್ರಾಥಮಿಕ, ಪ್ರಾಪಂಚಿಕ ಜ್ಞಾನವನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ, ಮಗುವಿಗೆ ಅನ್ನಶಾಸ್ತ್ರದ ಜೊತೆಗೆ ಅಕ್ಷರ ಅಭ್ಯಾಸದ ಶಾಸ್ತ್ರವು ಅಷ್ಟೇ ಮಹತ್ವ ಪಡೆಯುತ್ತದೆ. ಸಂಸ್ಕಾರ ನೀಡುವುದೂ ಒಂದು ಆಯಾಮ. ಶಿಕ್ಷಣದ ಗಂಧತೇದು ಹಣೆಗೆ ಹಚ್ಚುತ, ಬಳಪದ ರುಚಿ ಹಚ್ಚುವ ವಿದ್ಯಾದೇವಿಯ ಆರಾಧನೆಯ ಪಾತ್ರ ಮಹತ್ವವಹಿಸುತ್ತೆ. ಮಗು ಪರಿವರ್ತನೆಯಾಗುವ ಕ್ಷಣಗಳು ಅವಿಸ್ಮರಣೀಯ.

ರಸ್ತೆ ಬೀದಿಗಳಲ್ಲಿ ಹಾಳೆಯಾರಿಸುತ್ತ, ಅಲ್ಲೆ ಬಿದ್ದ ಅರೆಬರೆ ಆಹಾರ ಸೇವಿಸುತ ಅಲೆಯುವ ಅಲೆಮಾರಿಗಳು ಕಂಕುಳಿಗೆ ಉದ್ದನೆ ಬಟ್ಟೆ ಬಿಗಿದು, ಆ ಬಟ್ಟೆಯೊಳಗೆ ಮಗುವ ಬಿಗಿದು ಓಣಿ ಓಣಿ ತಿರುಗಿ, ಎಲ್ಲೊ ಮರದ ಕೆಳಗೆ ಎದೆಹಾಲೂಣ್ಣಿಸಿ‌, ಇನ್ನೆಲ್ಲೊ ಬಯಲಲಿ ರಾತ್ರಿ ಕಳೆಯುವ ಪಾಲಕರಿಗೆ ಚೌಕಟ್ಟಿ ಬಂಧನವಾದೀತೆ? ತುತ್ತು ಕೂಳಿಗೂ ತತ್ವಾರಗೊಂಡ ಮನಸ್ಸು ಗಳಿಗೆ ಒಂದೆಡೆ ನಿಲ್ಲಿಸಲು ಸಾಧ್ಯವೇ? ಮಗು ಮಗುವೇ, ಅದು ಎಲ್ಲಿದ್ದರೂ ಅಲ್ಲಿಯ ಸನ್ನಿವೇಶದಲ್ಲಿ ಲೀನವಾಗಿ ಬಿಡುತ್ತದೆ‌.

ನೀರನ್ನು ಯಾವ ಪಾತ್ರೆಗೆ ಹೊಯ್ಯು ತ್ತೆವೆಯೋ ಅದು ಆ ಪಾತ್ರೆಯ ಆಕಾರ ಪಡೆವಂತೆ ಮಗುವಿನ ಮನಸ್ಸು ಅಷ್ಟೇ ಸೂಕ್ಷ್ಮ.ಅಂತಹ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಡುವ ಕಾರ್ಯ ಹೆತ್ತವರದ್ದು, ಅದಕ್ಕೆ ಅವರೇ ನೇರಹೊಣೆ.‌ ಹುಟ್ಟಿ‌ಸಿದ ಮಾತ್ರಕ್ಕೆ ಎಲ್ಲವು ಮುಗಿಯುವು ದಿಲ್ಲ. ಮಗು ಪ್ರಪಂಚಕ್ಕೆ ಕಾಲಿಟ್ಟ ಗಳಿಗೆ ಯಿಂದ ಜವಾಬ್ದಾರಿಗಳು ಪ್ರಾರಂಭ. ಆಟ ನೋಟ,ಪಾಠ, ನೀತಿ, ರೀತಿಗಳ ಬಗ್ಗೆ ನಿಗಾವಹಿಸುವುದು ಆರಂಭಿಕ ಸಂಸ್ಕಾರಕೆ ಮುನ್ನುಡಿ ಬರೆದಂತೆ.

              🔆🔆🔆                               

✍️ ಶ್ರೀಮತಿ. ಶಿವಲೀಲಾ ಹುಣಸಗಿ ಯಲ್ಲಾಪೂರ