ರುದ್ರೇಶ್ವರ ಪರಮೇಶ್ವರ
ಕೇವಲ ಭಕ್ತಿಯ ಭಾವವಲ್ಲ
ಬಾಳ ಸತ್ವಗಳ ಝೇಂಕಾರ.!

ಶಿವಶಂಕರ ಮಹೇಶ್ವರ
ಬರಿದೆ ಕಲ್ಪನೆ ದೈವವಲ್ಲ
ನೂರಾರು ತತ್ವಗಳ ಸಾರ.!

ಜಗದಿ ಆಲಯಕ್ಕಳಿವು
ಬಯಲಿಗಿಲ್ಲವೆಂಬ ಸತ್ಯ
ನಿರೂಪಿಸಿದ ಸ್ಮಶಾಣವಾಸಿ.!

ವಸ್ತ್ರಾಭರಣಗಳೆಂದು ನಶ್ವರ
ಮಾಯೆ ಮೋಹಗಳ ಮಿಥ್ಯ ಸಾರಿದ ಭಸ್ಮಾಂಬರಧರ.!

ಸ್ತ್ರೀ-ಪುರುಷ ಐಕ್ಯತೆ ನೀತಿ
ಸಮ್ಮಿಲನ ಸಮಾನತೆ ರೀತಿ
ನಿದರ್ಶನ ಅರ್ಧನಾರೀಶ್ವರ.!

ಚಂದ್ರಶೇಖರ ಗಂಗಾಧರ
ಪಂಚಭೂತಗಳ ಅವಿನಾಭಾವ
ತಿಳಿಸಿ ಹೇಳಿದ ಮಹಾದೇವ.!

ಉರಗಭೂಷಣ ನಂದಿವಾಹನ
ಸಕಲ ಜೀವಸಂಕುಲ ಸಂಪ್ರೀತಿ
ದಿಗ್ದರ್ಶಿಸಿದ ಸರ್ವೇಶ್ವರ.!

ತೆರೆದ ನಯನಗಳಿಗಿಂತಲೂ
ಮುಚ್ಚಿದ ಹಣೆಗಣ್ಣಿನ ಮಹತ್ವ
ಲೋಕಕೆ ತೋರಿದ ತ್ರಿನೇತ್ರ.!

ದೈವವೆಂದರೆ ನಿರಾಕಾರ
ಬೆಳಕಿನ ಸಾಕಾರದ ಸತ್ವ ಸಾಕ್ಷೀಕರಿಸಿದ ಜ್ಯೋತೀಶ್ವರ.!

                   🔆🔆🔆

✍️.ಶ್ರೀ. ಎ.ಎನ್. ರಮೇಶ್, ಗುಬ್ಬಿ