ಶಿವ ಪಾರ್ವತಿಯರ ಪೂಜೆ ಮಾಡುವ ಜಪ, ತಪ,ಇವುಗಳ ಸಂಗಮವೇ ಶಿವರಾತ್ರಿ. ಶಿವನನ್ನು ಲಿಂಗರೂಪದಲ್ಲಿ ಸಾಕಾರ ಪೂಜೆ ಮಾಡುವುದು ಭಾರತೀಯರಲ್ಲಿ ಪುರಾತನ ಕಾಲದಿಂದಲೂ ನಡೆದು ಬಂದಿದೆ. ಲಿಂಗತತ್ವ ಬಹು ಗಹನವಾದ ಅರ್ಥವನ್ನೊಳಗೊಂಡಿದೆ.ಯಾರು ಶಾಸ್ತ್ರೋಕ್ತವಾಗಿ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೋ ಅವರು ಸಾಕ್ಷಾತ್
ಶಿವಸ್ವರೂಪವುಳ್ಳವರಾಗುತ್ತಾರೆ.ಸಕಲವೂ ಲಿಂಗದಲ್ಲಿಯೇ ಅಡಕವಾಗಿದೆ. ಶಿವಭಕ್ತನಾದ ರಾವಣನು ಸಮುದ್ರ ತೀರದಲ್ಲಿ ಶಾಸ್ತ್ರವಿಹಿತವಾದ ಕ್ರಮದಲ್ಲಿ ಭಕ್ತಿಯಿಂದ ಲಿಂಗವನ್ನು ಸ್ಥಾಪಿಸಿ ಅರ್ಚಿಸಿದನು.ಶಿವರಾತ್ರಿಯ ವಿಶೇಷತೆ ಶಿವಭಕ್ತ ಕಣ್ಣಪ್ಪನ ಕತೆಯಿಂದ ತಿಳಿಯ ಬಹುದು.ಶಿವರಾತ್ರಿಯಂದು ಲಿಂಗವನ್ನು ದರ್ಶನ ಮಾಡಿದರೆ ವಿಶೇಷ ಪುಣ್ಯಫಲ
ಪ್ರಾಪ್ತಿಯುಂಟು. ಶಿವರಾತ್ರಿಗೆ ಹೆಚ್ಚು ಪ್ರಾಮುಖ್ಯತೆ ಅಂದು ಆಚರಿಸುವ
ಉಪವಾಸದಲ್ಲಿದೆ. ಶಿಚೊಭೂರ್ತರಾಗಿ ಶಿವನನ್ನು ಧ್ಯಾನಿಸುತ್ತ ದಿನಪೂರ್ತಿ ಭಕ್ತರು ಆಹಾರ ಮುಟ್ಟದೇ ಉಪವಾಸ ಕೈಗೊಳ್ಳುವರು. ಇನ್ನೂ ಕೆಲವರುನಿರಾಹಾರಿ ಯಾಗಿ ಉಪವಾಸದ ಕಠಿಣ ಕ್ರಮವನ್ನು ಅನುಸರಿಸುವರು.ಉಪವಾಸವು ಈ ದಿನ ಹಗಲಿನಿಂದ ಪ್ರಾರಂಭಗೊಂಡು ರಾತ್ರಿ
ಪೂರ್ತಿ ನಡೆದು ಮರುದಿನ ಪ್ರಾತಃಕಾಲಕ್ಕೆ ಕೊನೆಗೊಳ್ಳುತ್ತದೆ.ವ್ರತಾಧಾರಿಗಳು ಹಣ್ಣಿನ
ರಸ.ಹಣ್ಣುಗಳು.ವಿಶೇಷ ವ್ರತ ಆಹಾರ ಸೇವಿಸುವುದು ವಾಡಿಕೆ.ಕರ್ನಾಟಕದಾದ್ಯಂತ ಹಲವು ವಿಶಿಷ್ಟ ಶಿವದೇವಾಲಯಗಳಿವೆ. ಅವುಗಳಲ್ಲಿ ಕೆಲವನ್ನಿಲ್ಲಿ ಪರಿಚಯಿ ಸುತ್ತಿರುವೆ. ಇಲ್ಲಿಮಹಾಶಿವರಾತ್ರಿ ವಿಶೇಷ ಪೂಜೆಗಳಾಗುತ್ತವೆ.

ಗೋಕರ್ಣ

ಉತ್ತರ ಕನ್ನಡ ಜಿಲ್ಲೆಯ ಕಡಲ ತೀರದ ಸ್ಥಳ.ಇದನ್ನು ಭೂಕೈಲಾಸ. ಪರಶುರಾಮ ಭೂಮಿ ಎಂದೂ ಕರೆಯುವರು. ಇದು ಕಾರವಾರದಿಂದ 65 ಕಿ.ಮೀ ದೂರದಲ್ಲಿದೆ. ಮಹಾಗಣಪತಿಯ ದೇವಾಲಯ ಮಹಾಬಲೇಶ್ವರ ದೇವಾಲಯ ಇಲ್ಲಿನ ಪ್ರಮುಖ ದೇಗುಲಗಳು.ರಾವಣ ತನ್ನ ತಾಯಿಯ ಕೋರಿಕೆಯ ಮೇರೆಗೆ ಶಿವನನ್ನು ಒಲಿಸಿಕೊಂಡು ಆತ್ಮಲಿಂಗ ತರುವಾಗ ಮಾರ್ಗಮಧ್ಯದಲ್ಲಿ ಗಣಪತಿಯ
ತಂತ್ರದಿಂದ ಗೋಕರ್ಣದ ಸಮುದ್ರ ತಟದಲ್ಲಿ ಲಿಂಗವನ್ನು ಇಡುವ ಪ್ರಸಂಗ ರಾಮಾಯಣದಲ್ಲಿ ಓದುತ್ತೇವೆ ಆ ಲಿಂಗವೇ ಇಲ್ಲಿದೆ.ತನ್ನ ಶಕ್ತಿಯಿಂದ ಆ ಲಿಂಗವನ್ನು ಕೀಳಲು ಪ್ರಯತ್ನಿಸಿದ ಫಲವಾಗಿ ಲಿಂಗ ಭೂಮಿಯಲ್ಲಿ ಒಳ ಹೋಗಿರುವ ದೃಶ್ಯವನ್ನು ನಾವಿಂದಿಗೂ ಕಾಣಬಹುದು.ಅಂಥ ಪವಿತ್ರ ಲಿಂಗ ದರ್ಶನ ಶಿವರಾತ್ರಿಯಂದು ಪಡೆದರೆ ಕೈಲಾಸದ ದರ್ಶನವಾದಂತೆ ಎಂಬುದು ಭಕ್ತ ಜನರ ನಂಬಿಕೆ. ತನ್ನ ಸಿಟ್ಟಿನ ಭರದಲ್ಲಿ ರಾವಣ ಲಿಂಗದ ಸಂಪುಟವನ್ನು ನಾಲ್ಕು ದಿಕ್ಕಿಗೆ ಬೀಸಿದ ಅದು ಸಜ್ಜೇಶ್ವರ, ಗುಣವಂತೇಶ್ವರ, ಧಾರೇಶ್ವರ,ಮುರುಡೇಶ್ವರ
ಎಂಬ ಲಿಂಗಗಳಾದವು ಅವು ಪರಶಿವನವು ಎಂಬ ಪ್ರತೀತಿಯಿದ್ದು ಇಲ್ಲಿಯೂ ಕೂಡ ದೇವಾಲಯಗಳಿವೆ.

ಮುರುಡೇಶ್ವರ

ಸಮುದ್ರ ದಡದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರವು ಅರಬ್ಬೀ ಸಮುದ್ರದ ತೀರದಲ್ಲಿದೆ.ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿಯಾದ ಈ ಸ್ಥಳ ಪ್ರಸಿದ್ದ ಪ್ರವಾಸೀ ತಾಣವು ಕೂಡ. ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದ ಇನ್ನೂ ನಾಲ್ಕು ಲಿಂಗಗಳು ಸ್ಥಾಪನೆಗೊಂಡವು.ಆ ನಾಲ್ಕು ಲಿಂಗಗಳಲ್ಲಿ ಮುರುಡೇಶ್ವರವೂ ಒಂದು.ಇಲ್ಲಿನ ರಾಜಗೋಪುರ ಕೂಡ ವಿಶಿಷ್ಟವಾಗಿದೆ.

ಕವಳೇಶ್ವರ

ದಾಂಡೇಲಿ ಪ್ರಕೃತಿ ನಡುವಿನ ಕವಳ ಗುಹೆಯೊಳಗೆ ಕವಳೇಶ್ವರನ ಸನ್ನಿಧಿಗೆ ಮಹಾಶಿವರಾತ್ರಿಆಚರಣೆ ವಿಶಿಷ್ಟವಾದುದು. ದಾಂಡೇಲಿಯಿಂದ 26 ಕಿ.ಮೀ ಇರುವ ಈ ಗುಹಾದೇಗುಲ ವಿಶಿಷ್ಟವಾಗಿದೆ. ಕಾಡಿನಲ್ಲಿ ಮೂರು ಕಿ.ಮೀ ಅಂತರ ನಡೆದು ತಲುಪ ಬಹುದಾದ ಈ ಸ್ಥಳ ಶಿವಾರಾತ್ರಿಯಂದು ದಾಂಡೇಲಿ,ಹಳಿಯಾಳ,ಜೋಯಿಡಾ ತಾಲೂಕುಗಳಲ್ಲದೇ ರಾಜ್ಯದ ಮೂಲೆ
ಮೂಲೆಗಳಿಂದ ಇಲ್ಲಿಗೆ ಜನ ಆಗಮಿಸುವ ಮೂಲಕ ಗುಹೆಯಲ್ಲಿರುವ ಕವಳೇಶ್ವರನ ದರ್ಶನ ಪಡೆಯುವರು.

ಕುಂದಾಪುರ ಕುಂದೇಶ್ವರ

ಉಡುಪಿ ಜಿಲ್ಲೆಯ ತಾಲೂಕು ಕೇಂದ್ರವಾದ ಕುಂದಾಪುರವು ಉಡುಪಿ ಯಿಂದ 35 ಕಿಲೋ ಮೀಟರ್ ದೂರದಲ್ಲಿದೆ. ಸುಮಾರು 45 ಕಿ.ಮೀ. ಸಮುದ್ರದ ಅಂಚನ್ನೂ ಹೊಂದಿದ್ದು ಸಮುದ್ರ ಮಟ್ಟದಿಂದ. 26 ಅಡಿ ಎತ್ತರ ದಲ್ಲಿದ್ದು ತತ್ಸಂಬಂಧಿತ ನಿಸರ್ಗ ಸೌಂದರ್ಯ ವನ್ನೂ ಹೊಂದಿರುವ ತಾಲೂಕುಕುಂದಾಪುರ. ಇದರ ಸಮತಟ್ಟಾದ ಒಳಪ್ರದೇಶದಲ್ಲಿ ಕೆಲವು ಕಾಡು ಪ್ರಾಣಿಗಳನ್ನು ಹೊಂದಿರುವ
ದಟ್ಟವಾದ ಅರಣ್ಯ ಪ್ರದೇಶವೂ ಉಂಟು. ಇಲ್ಲಿನ ಯಕ್ಷಗಾನ, ಕುಣಿತ, ನಾಟಕ ಹಾಗೂ ಇತ್ತೀಚಿನ ವರ್ಷಗಳಲ್ಲಿ ಇಡೀ ದೇಶದ ಗಮನವನ್ನೇ ಸೆಳೆಯುತ್ತಿರುವ ಕಂಬಳ ಹಾಗೂ ಕೋಳಿ ಅಂಕ ಪ್ರವಾಸಿಗರನ್ನು ಆಕರ್ಷಿಸುವ ಅಂಶಗಳು. ಕುಂದೇಶ್ವರ ದೇಗುಲವು ಇಲ್ಲಿನ ವಿಶಿಷ್ಟತೆ. ಈ ದೇವಾಲಯದ ಗರ್ಭಗೃಹದ ಒಳಗೆ ನೆಲಕ್ಕೆ
ಕಗ್ಗಲ್ಲ ಚಪ್ಪಡಿಗಳನ್ನು ಹಾಸಿ ಸದೃಢಗೊಳಿಸ ಲಾಗಿದೆ. ಇಲ್ಲಿ ಸ್ಥಳಾವಕಾಶ ತೀರ ಕಡಿಮೆ.
ಇದರ ಕೇಂದ್ರ ಭಾಗದಲ್ಲಿ ಸರಳ ರೀತಿಯಲ್ಲಿ ಕೆತ್ತಲ್ಪಟ್ಟ ಕಲ್ಲಿನ ದೊಡ್ಡ ಪಾಣಿಪೀಠ. ತೀರ್ಥ ಹರಿದು ಹೋಗಲು ಇರುವಸೋಮಸೂತ್ರದ ಭಾಗವೂ ಸರಳವಾಗಿದ್ದು ನೇರವಾಗಿ
ಕತ್ತರಿಸಲ್ಪಟ್ಟ ಮೂತಿಯನ್ನು ಹೊಂದಿದೆ.

ಪಾಣೀಪೀಠದಲ್ಲಿ ಶ್ರೀ ಕುಂದೇಶ್ವರನ
ಪ್ರತಿಷ್ಠೆ. ಈ ಶಿವಲಿಂಗವನ್ನು ರುದ್ರಾಕ್ಷ ಶಿಲೆಯಿಂದ ಮಾಡಿದ್ದು, ಇದರ ಹೊರಮೈ ತುಂಬಸೊಗಸಾಗಿದೆ. ಇದರ ಶಿರೋಭಾಗ ಅಡ್ಡಕ್ಕೆ ತುಂಡರಿಸಲ್ಪಟ್ಟ ಕಂಬದಂತೆ ಚಪ್ಪಟೆಯಾಗಿದೆ ಹಾಗಾಗಿ ಇದೊಂದು ಅಪೂರ್ವ ಶಿವಲಿಂಗ. ಮಹಾಶಿವರಾತ್ರಿ ಯಂದು ಇಲ್ಲಿವಿಶೇಷ ಪೂಜೆಜರುಗುವುದು.

ಐತಿಹಾಸಿಕ ಪರಂಪರೆಯ ತಾಣ ಶ್ರೀ ಪಂಚಲಿಂಗೇಶ್ವರ ದೇವಾಲಯ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ತಾಲೂಕು ಕೇಂದ್ರದಿಂದ 16
ಕಿ.ಮೀ ಅಂತರದಲ್ಲಿರುವ ಗ್ರಾಮ. ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ,ಮಲಪ್ರಭಾ ನದಿದಡದಲ್ಲಿರುವ ಆಲೂರುಮಠ, ವಿಠೋಬಾ ಮಂದಿರ, ವೆಂಕಟೇಶ್ವರ ದೇವಾಲಯ.ಗ್ರಾಮದಕೈವಲ್ಯಾಶ್ರಮ, ಸೋಮಶೇಖರ ಮಠ,ಇವುಗಳ ಜೊತೆಗೆ ಮುನವಳ್ಳಿ ಜನರ ಆರಾಧ್ಯ ದೈವ ಶ್ರೀಪಂಚಲಿಂಗೇಶ್ವರ ದೇವಾಲಯದಿಂದ ಪ್ರಸಿದ್ದಿ ಹೊಂದಿದ ಐತಿಹಾಸಿಕ ಪ್ರವಾಸೀ ತಾಣ. ಪಂಚಲಿಂಗೇಶ್ವರ ದೇವಾಲಯವು ವಿವಿಧ 8 ದೇವಾಲಯಗಳನ್ನೊಳಗೊಂಡ ಸ್ಥಳ.ಪೌರಾಣಿಕ. ಐತಿಹ್ಯದಂತೆ “ಅಗಸ್ತ್ಯ” ಮುನಿಗಳು ಮಲಪ್ರಭಾ ನದಿ ದಡದಲ್ಲಿ ತಪಗೈದು “ಅಂಧಕಾಸುರ”ನೆಂಬ
ದೈತ್ಯನ ಸಂಹಾರ ಮಾಡಿ,ಪಂಚಭೂತ ತತ್ವಗಳಾದ “ಪೃಥ್ವಿ,ಅಪ್,ತೇಜ,ವಾಯು, ಅಗ್ನಿ,”ಪ್ರತಿ ತತ್ವಕ್ಕೂ ಆಧಾರವಾಗಿ ಐದು ಲಿಂಗಗಳನ್ನು ಪ್ರತಿಷ್ಠಾಪಿಸಿ”ಪಂಚಲಿಂಗೇಶ್ವ” ನನ್ನು ಪೂಜಿಸಿದರೆಂಬ ಪುರಾಣ ಕಥೆಯನ್ನು ಹೊಂದಿದ ಈ ದೇಗುಲವು ಬನಶಂಕರಿ, ರೇಣುಕಾದೇವಿ,ತ್ರ್ಯಂಭಕೇಶ್ವರ,ಅಗ್ನಿದೇವಾಲಯ,ರುದ್ರಮುನೀಶ್ವರ,ತಾರಕೇಶ್ವರ, ಮಲ್ಲಿಕಾರ್ಜುನ ದೇವಾಲಯಗಳನ್ನು ಎರಡು ಪುಷ್ಕರಣಿಗಳನ್ನು ಹೊಂದಿದ ದೇಗುಲಗಳ ತಾಣ.ಮಹಾಶಿವರಾತ್ರಿ ಇಲ್ಲಿ
ರಥೋತ್ಸವ ಜರುಗುವುದಲ್ಲದೇ ಜಾಗರಣೆ ಉಪವಾಸ ಪೂಜೆ ಪುನಸ್ಕಾರಗಳು ಇಲ್ಲಿ ಜರುಗುತ್ತವೆ. ಹೂಲಿಯ ಪಂಚಲಿಂಗೇಶ್ವರ

ಹೂಲಿ ಗ್ರಾಮ ಸವದತ್ತಿಯಿಂದ ಪೂರ್ವಕ್ಕೆ ಸುಮಾರು ಒಂಬತ್ತು ಕಿ.ಮೀ ಅಂತರ ದಲ್ಲಿದ್ದು ಸವದತ್ತಿಯಿಂದ ರಾಮದುರ್ಗ, ಜಮಖಂಡಿ,ವಿಜಾಪುರಗಳಿಗೆ ಸಂಚರಿಸುವ ಎಲ್ಲ ಬಸ್ಗಳ ನಿಲುಗಡೆ ಹೊಂದಿದ್ದು ಕೃತಯುಗದಲ್ಲಿ ಕಾರ್ತವೀರ್ಯಾರ್ಜುನನ ರಾಜಧಾನಿಯೆಂದೂ ಎಲ್ಲಮ್ಮದೇವಿ ಚರಿತ್ರೆಯಲ್ಲಿ ಉಲ್ಲೇಖಿತವಾದ ಹೂಲಿಯನ್ನು ಇಲ್ಲಿ ಲಭ್ಯವಾದ ಹಲವಾರು ಶಾಸನಗಳಲ್ಲಿ ಮಹಿಸ್ಪತಿ ನಗರ,ದಕ್ಷಿಣ ಲ ಕಾಶಿ,ಪೂವಲ್ಲಿ,ಪುಲಿಪುರ,ಪುಲಿಗ್ರಾಮ, ಚೂಡಾಮಣಿ ಪೂಲಿ, ಹೂಲಿ ಎಂದೆಲ್ಲ ಕರೆಯಲಾಗಿದೆ. ಎಲ್ಲಮ್ಮ ಚರಿತೆಯಲ್ಲಿ ಧರ್ಮವರ್ಧನ ಎಂಬ ರಾಜನು ಇಲ್ಲಿ ಆಳುತ್ತಿದ್ದನಂತೆ. ಜಮದಗ್ನಿಯು ರೇಣುಕಾದೇವಿಗೆ ಅಕ್ಕಿ ಕಾಳಿನ ತೂಕದ ಬಂಗಾರ ತರಲು ಈ ರಾಜನಲ್ಲಿಗೆ ಕಳಿಸುತ್ತಾನೆ ಎಂಬ ದೃಷ್ಠಾಂತವು, ಪರಶುರಾಮ ಮತ್ತು ಕಾರ್ತವೀರ್ಯಾರ್ಜುನರ ಹಲವು ಪ್ರಸಂಗಗಳು ಹೂಲಿ ಮತ್ತು ಸುತ್ತ ಮುತ್ತಲಿನ ಸ್ಥಳಗಳ ಕೆಲವು ಘಟನೆಗಳ
ದೃಷ್ಠಾಂತಗಳಲ್ಲಿ ಉಲ್ಲೇಖಿತವಾಗುವ ಮೂಲಕ ಪುರಾಣ ಚರಿತ್ರೆಯಿಂದಲೂ ಪ್ರಸಿದ್ದಿ ಹೊಂದಿದ ಗ್ರಾಮವಾಗಿದೆ ಹೂಲಿ.ಗ್ರಾಮದ ಬಸ್ ನಿಲ್ದಾಣದಿಂದ ಇಳಿದು ಕಾಲ್ನಡಿಗೆಯಿಂದ ಬಂದರೆ ಸಿಗುವ ದೇಗುಲವೇ ಪಂಚಲಿಂಗೇಶ್ವರ ದೇವಾಲಯ. ಇದನ್ನು ಪುರಾತತ್ವ ಇಲಾಖೆಯವರು ಸಂರಕ್ಷಿಸಿದ್ದು ಇದೊಂದು
ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು ಇನ್ನುಳಿದ ದೇವಾಲಯಗಳು ಕಾಯಕಲ್ಪಕ್ಕಾಗಿ
ಕಾಯುತ್ತಿವೆ.ಐದು ವಿಶಿಷ್ಟ ಗೋಪುರಗಳನ್ನು ಒಳಗೊಂಡ ಈ ದೇವಾಲಯವನ್ನು ಕ್ರಿ.ಶ.1044 ರಲ್ಲಿ ಲಚ್ಚಿಯಬ್ಬರಸಿಯು ಕಟ್ಟಿಸಿದ್ದು ಪೂರ್ವಾಭಿಮುಖವಾಗಿ ಮೂರು.ದಕ್ಷಿಣ ಮತ್ತು ಉತ್ತರಕ್ಕೆ ಮುಖಮಾಡಿದ ಒಂದೊಂದು ಗರ್ಭ ಗೃಹಗಳನ್ನು ಈ ದೇವಾಲಯ ಒಳಗೊಂಡಿದೆ.ಈ ದೇವಾಲಯದಲ್ಲಿ 20 ವಿಶಾಲವಾದ ಕಂಬಗಳ ಅಂತರಾಳವಿದೆ. ಮೇಲ್ಚಾವಣಿಯಲ್ಲಿ ಕಮಲಗಳನ್ನು
ಬಿಡಿಸಲಾಗಿದ್ದು ಎದುರಿನ ವಿಶಾಲವಾದ ಮುಖಮಂಟಪದಲ್ಲಿ 50 ಕಂಬಗಳಿದ್ದು ಇದು ಮೂರುದಿಕ್ಕಿನಲ್ಲಿ ಪ್ರವೇಶದ್ವಾರ ಗಳಿಂದ ಕೂಡಿದ ಭವ್ಯವಾದ ಮುಖ ಮಂಟಪ ಹೊಂದಿರುವುದು.ಸುಂದರ
ವಿನ್ಯಾಸದ ಆಕರ್ಷಕ ಕೆತ್ತನೆ ಇದರ ವಿಶೇಷ,ಗರ್ಭಗೃಹಕ್ಕೆ ಎದುರಾಗಿ ನಂದಿ, ಅದರ ಬಲಕ್ಕೆವಿಷ್ಣು ಎಡಕ್ಕೆ ಗಣೇಶ ವಿಗ್ರಹಗಳಿವೆ.
ಮಾರ್ಗ; ಹೂಲಿ ಗ್ರಾಮಕ್ಕೆ ಬರಬೇಕೆಂದರೆ ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ
ಮಾರ್ಗವಾಗಿ ಸವದತ್ತಿಗೆ ಬರಬೇಕು. ಸವದತ್ತಿಯಿಂದ 9 ಕಿ.ಮೀ ಅಂತರದಲ್ಲಿ ಹೂಲಿಗ್ರಾಮವಿದ್ದು.ಸವದತ್ತಿ-ರಾಮದುರ್ಗ ಬಸ್ ಎಲ್ಲವೂ ಇಲ್ಲಿ ನಿಲುಗಡೆಯನ್ನು ಹೊಂದಿವೆ.ದಕ್ಷಿಣ ಕಾಶಿ ಎಂದು ಹೆಸರು ವಾಸಿಯಾದ ಶ್ರೀ ಕ್ಷೇತ್ರ ಸೊಗಲ

ದಕ್ಷಿಣ ಕಾಶಿ ಎಂದು ಹೆಸರು ವಾಸಿಯಾದ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶ್ರೀ
ಕ್ಷೇತ್ರ ಸೊಗಲ ಸೋಮೇಶ್ವರನ ಹಿಂದಿನ ಕಾಲದಲ್ಲಿ ಶಿವನಿಂದ ಆತ್ಮಲಿಂಗ ಪಡೆದ ಪರಮ. ಶಿವಭಕ್ತ ರಾವಣದ ನೆಚ್ಚಿನ ಬಂಟರಾದ ಮಾಲಿ ಸುಮಾಲಿಯರು ಸ್ಥಾಪಿಸಿದ ಕ್ಷೇತ್ರ “ಸುವರ್ಣಾಕ್ಷಿ” ಅದುವೆ ಮುಂದೆ ಸೋಮೇಶ್ವರ ನೆಲೆಸಿದ ಸೊಗಲ ಕ್ಷೇತ್ರ “ದಕ್ಷಿಣ ಕಾಶಿ”ಎಂದು ಪ್ರಸಿದ್ದಿ ಪಡೆದು ಋಷಿ ಮುನಿಗಳಿಗೆ ತಪೋಭೂಮಿ ಭಕ್ತರಿಗೆ ಯಾತ್ರಾ ಸ್ಥಳವಾಗಿದೆ.
ಶ್ರೀ ಕ್ಷೇತ್ರದ ಸೋಮೇಶ್ವರ ಮಂದಿರ ದೊಡ್ಡ ಜಲಪಾತ (125 ಪೂಟ ಎತ್ತರ) ಸಣ್ಣ ಜಲಪಾತಗಳು (40 ಪೂಟ ಎತ್ತರ) ಉದ್ಯಾನ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸೋಮೇಶ್ವರ ಮಂದಿರದ ಬಲ. ಬದಿಗೆ 10ನೇ ಶತಮಾನದ ಶಿಲಾಶಾಸನವಿದೆ. ಅದರಲ್ಲಿ ಶ್ರೀ ಕ್ಷೇತ್ರದ ಕುರಿತು ಉಲ್ಲೇಖಿಸ ಲಾಗಿದೆ. ಧರ್ಮೊ ರಕ್ಷತಿ ರಕ್ಷಿತ ಎಂಬ ತತ್ವವನ್ನು ಈ ಶಾಸನವು ಸಾರುತಿದೆ. ಮಂದಿರದ ಎಡ ಭಾಗದಲ್ಲಿ ಶಿವ ಪಾರ್ವತಿ ಯರ ಕಲ್ಯಾಣಮಂಟಪವಿದೆ. ಅಲ್ಲಿ ಶಿವ ಪಾರ್ವತಿಯರು ಶೈವ ಸಂಪ್ರದಾಯದಂತೆ ಹಸೆಮಣೆ ಏರಿದ ಮೂರ್ತಿಗಳಿವೆ. ವರನಾದ ಶಿವ ಧೋತಿ ಉಟ್ಟು ಬಾಸಿಂಗ ಕಟ್ಟಿಕೊಂಡಿದ್ದರೆ, ವಧುವಾದ ಪಾರ್ವತಿ ಸೀರೆ ಕುಪ್ಪಸ ತೊಟ್ಟು ತಲೆಗೆದಂಡೆ ಕಟ್ಟಿಕೊಂಡಿದ್ದಾಳೆ. ಇಂತಹ ಮೂರ್ತಿಗಳು ಬೇರೆಲ್ಲೂ ಸಿಗದು ಎಂಬುದು ಜನರ ಅಭಿಪ್ರಾಯ. ಶಿವರಾತ್ರಿಯಂದು ಪರಮೇಶ್ವರ ಪಾರ್ವತಿಯರ ವಿಶಿಷ್ಟ ವಿಗ್ರಹ ಹೊಂದಿದ ಈ. ದೇವಾಲಯದಲ್ಲಿ ಜಾಗರಣೆ ಉತ್ಸವಗಳು ಜರುಗುತ್ತವೆ.ಬೆಳಗಾವಿ ಜಿಲ್ಲಾ ಕೇಂದ್ರದಿಂದ 56 ಕಿ.ಮೀ.ಇರುವ ಈ ಸ್ಥಳ ಸವದತ್ತಿ ತಾಲೂಕಿನಲ್ಲಿದ್ದು ತಾಲೂಕ ಕೇಂದ್ರದಿಂದ 35 ಕಿ.ಮೀ ಅಂತರದಲ್ಲಿದೆ. ಬೈಲಹೊಂಗಲದಿಂದ 16 ಕಿ.ಮೀ ದೂರದಲ್ಲಿದ್ದು ಬೈಲಹೊಂಗಲದಿಂದ ಸಾಕಷ್ಟು ಸಾರಿಗೆ ವ್ಯವಸ್ಥೆ ಉಂಟು.ವಿಜಯಪುರದ ಪರಶಿವನ ದೇಗುಲ

ವಿಜಯಪುರದ ಸಿಂದಗಿ ರಸ್ತೆಯಲ್ಲಿ ಶಿವಪುರ ಅಥವ ಶಿವಗಿರಿ ಎಂಬ ಸ್ಥಳದಲ್ಲಿ 85 ಪೂಟ. ಎತ್ತರದ ಬೃಹತ್ ಶಿವನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗಿದ್ದು ವಿಜಯಪುರದಿಂದ ಇದು ಮೂರು
ಕಿ.ಮೀ ಅಂತರದಲ್ಲಿದೆ.ಈ ಮೂರ್ತಿಯ ಕೆಳಗಿನ ದೇಗುಲದಲ್ಲಿ ಶಿವನಿಗೆ ಸಂಬಂಧಿಸಿದ ಕತೆಯ ಧಾರ್ಮಿಕ ಹಿನ್ನಲೆಯ ವಿವರಣೆಯನ್ನು ಕಾಣಬಹುದು. ಈ ಭಾಗದ ಜನ ಶಿವರಾತ್ರಿಯಂದು ಇಲ್ಲಿಗೆ ಭೇಟಿ ನೀಡುವ ಮೂಲಕ ಮಹಾ ಶಿವರಾತ್ರಿಯ ಆಚರಿಸುವರು.ವಿಜಯಪುರವು ಬೆಂಗಳೂರಿನಿಂದ ಪಶ್ಚಿಮಕ್ಕೆ 520 ಕಿ.ಮೀ ಅಂತರದಲ್ಲಿದೆ. ರಸ್ತೆ ಮತ್ತು ರೈಲು ಮಾರ್ಗದ ಅನುಕೂಲವಿದೆ.🔆🔆🔆✍️ ಶ್ರೀ ಯಲ್ಲಪ್ಪ .ಬಿ,ಕಡಕೋಳ.
ಸಂಪನ್ಮೂಲ ವ್ಯಕ್ತಿಗಳು ಮುನವಳ್ಳಿ