ನಾನು ಗಾಳಿಯ
ಒಳ ಹೊರಗನ ಕೊಳುವೆ
ಗಾಳಿ ತಾನೆ
ಒಳನುಗ್ಗಿ ಹೊರಬರುವ
ದಾರಿ ನಾನು
ನಾನು ನಾನಲ್ಲ

ನಾನು ಜಲವು
ಹರಿದು ಮಲವ ತೊಳೆದು
ನಿರ್ಮಲ ಹೊಂದಿ
ಮುಂದೆ ಸಾಗುವ
ಜಲ ಪಥವ ನಾನು
ನಾನು ನಾನಲ್ಲ

ನಾನು ಭೂಮಿ
ಮಣ್ಣೊಳಗಿನ ಅನ್ನವ
ನುಂಗಿ ಉಬ್ಬಿದ
ಚರ್ಮದ ಬಲೂನು ನಾನು
ನಾನು ನಾನಲ್ಲ

ನಾನು ಆಕಾಶ
ಅಗಣಿತ ಬಯಲೊಳಗೆ
ಬಯಲಾಗುವ ಭಾವದ
ಬಿಂಬ ನಾನು
ನಾನು ನಾನಲ್ಲ

ನಾನು ಬೆಂಕಿ
ಬೆಂಕಿಯ ಕಿಡಿಗಳ
ನಡುವಣ ಕಿಡಿ ನಾನು
ಕಿಡಿ ಬೂದಿಯಾಗುವ ಮನ್ನ
ನಾನು ನಾನಲ್ಲ

ನೋವೆನು ಸಾವೇನು
ನಾನು ನಾನಲ್ಲದ ಬಳಿಕ
ನನ್ನಳುವ ನುಂಗಿ
ನಾನು ನಾನಾಗಲೇಕೆ
ನನಗೆ ಕಾತರ ಬಯಲೆ
ನಾನಾದಾಗ ಬಯಲಿಗೇಕೆ
ಬಂಧನ ಗೋಡೆ ಮಹಡಿ

             🔆🔆🔆

✍🏻ಪರಸಪ್ಪ‌ ತಳವಾರ. ಕನ್ನಡ ಸಹಾಯಕ ಪ್ರಾಧ್ಯಾಪಕರು ಸಪ್ರದಕಾಲೇಜು, ಲೋಕಾಪೂರ