ಬ್ರಾಹ್ಮೀ ಮಹೂರ್ತವ ಮುಗಿಸಿ
ಉಷೆಯ ನಾಟ್ಯದೊಡನೆ
ಮೂಡಣದಂಬರದಿ ರಂಗನು ಚೆಲ್ಲಿ
ವಿವಿಧಾಕರ್ಷಕ ಚಿತ್ತಾರವ ಮೂಡಿಸಿ ಬಣ್ಣದೋಕುಳಿಯಾಡುತ ಇಳೆಗೆ ಎಳೆಯ ಪ್ರಭೆಯನ್ನೀಡುತ ಬರುವ ಚೈತನ್ಯದ
ಚಿಲುಮೆಯ ದೊರೆಯೇ ನಿನಗಿದೋ ಸ್ವಾಗತ.

ಕಶ್ಯಪ, ಅಧಿತಿಯ ಸುತನಾಗಿ
ಅಶ್ವಿನಿ ದೇವತೆಗಳ ಪಿತನಾಗಿ
ಗಾಯತ್ರಿ,ಬೃಹತಿ,ಉಷ್ಣಿಕ, ಜಗತಿ
ತ್ರಿಷ್ಟುಪ, ಅನುಷ್ಟುಪ ಪಂಕ್ತಿಗಳೆಂಬ
ಸಪ್ತಾಶ್ವಗಳ ರಥದೊಡೆಯ, ಸಾರಥಿ
ಅರುಣನೊಡಗೂಡಿ ಬರುವ ಪರ್ಜನ್ಯನೆ
ನಿನಗಿದೋ ಸ್ವಾಗತ

ಹೇ ರವಿತೇಜ ಧರೆಯ ಬೆಳಗಲು ಬಾ
ಭುವಿಯ ಸಿರಿಯ ನೋಡಲು ಬಾ, ನೀನು ಬಾರದೇ ಹೋದರೆ, ಕವಿಗಳು ವರ್ಣಿಪರಾದಾರು,ಪೈರುಗಳು ಬಿಳಿಚುವವು ಕಾಳುಗಳು ಎಳಚುವವು ಗಿಡ ಮರಗಳ ಕಾಂತಿ ಖಳೆಗುಂದುವವು ಸಮಸ್ತ ಸೃಷ್ಟಿಯೇ ನಿಶ್ಚಲವಾದೀತು, ಸರ್ವಕೂ ಜೀವ ಖಳೆ ತುಂಬಲು ಬಾ, ನಿನಗಿದೋ ಸ್ವಾಗತ.

ಯುಗ ಯುಗಗಳಿಂದಲೂ ಬೆಳಗುತ್ತಿರುವೆ
ಝಗ ಮಗಿಸುತ್ತಿರುವೆ, ವಿಶ್ರಾಂತಿಯೇ ಇಲ್ಲದೇ,
ಕೇಂದ್ರದಲ್ಲಿದ್ದು ನಿನ್ನ ಪರಿಭ್ರಸುವ ಗ್ರಹಗಳನ್ನು ನಿಭಾಯಿಸುತ್ತಿರುವೆ, ನಿನ್ನನ್ನು ನೋಡಿ ಮನುಜರು
ಘಳಿಗೆ,ಫಳ,ಕಲೆ,ವಿಕಲೆ,ತೃಟಿ ಎಂದೆಲ್ಲಾ ಜಾತಕದಲ್ಲಿ ನಿನ್ನನ್ನಳೆಯುವರು, ಪಿತೃ ಕಾರಕನೆಂದರು ಹೇ ಜಗತ್ಚಕ್ಷುವಾದ ದಿವ್ಯತೇಜನೇ ಬಾ, ನಿನಗಿದೋ ಸ್ವಾಗತ ಸುಸ್ವಾಗತ…

               🔆🔆🔆

✍️ ಪವಿ (ಪ. ವಿಶ್ವನಾಥ) ಜ್ಯೋತಿಷ್ಯ ಪರಿಣತ ಹಾಗೂ ಅಂತರ್ಜಲ ಶೋಧಕರು,ದಾವಣಗೆರೆ.