ಕಾಮನ ಬಿಲ್ಲನೇರಿ ಕನಸಲಿ ಬರುವವನು ಯಾರವನು
ಒಲವ ರಂಗನೆರಚಲು ಹಾತೊರೆಯುವವನು ಯಾರವನು

ಕಲ್ಲು ಮುಳ್ಳುಗಳಿಲ್ಲದ ದಣಿವಾಗದ ಹಾದಿಯ ತೋರುವವನು
ಒಲವ ಹಣತೆಯಲಿ ಭಾವ ತೈಲ ಬೆರೆಸಿ ಬೆಳಗುವವನು ಯಾರವನು

ನುಡಿಯದೆಯೆ ಮಾತೊಂದು ಹಾವಭಾವ ಅರಿಯುವವನು
ಮಾತಿನ ನೂಲ ಹಿಡಿದು ಅಂತರಾಳ ಬಗೆಯುವವನು ಯಾರವನು

ಜಾತ್ರೆಯ ಗದ್ದಲದಲ್ಲೂ ಕಣ್ಣೋಟದ ಕೊಲ್ಮಿಂಚಿನೆಸೆಯುತ
ಜಂಜಾಟದಲೂ ನನ್ನೊಲವಿನಿಂದ ವಿಮುಖನಾಗದವನು ಯಾರವನು

‘ಆರಾಧ್ಯೆ’ಯ ಕನಸಲಿ ಬರುವ ಕಲ್ಪನೆಯ ಗೆಳೆಯನವನು
ಅನುಕ್ಷಣವೂ ಕಾಳಜಿಯ ಕಾವಲುಗಾರನಾಗಿರುವವನು ಯಾರವನು

                🔆🔆🔆

✍️ಶ್ರೀಮತಿ. ಗಿರಿಜಾ ಮಾಲಿಪಾಟೀಲ ವಿಜಯಪೂರ