ಕೆಲವು ಕವನಗಳು
ಕಾಡತಾವ
ಕೆಲವು ಕವನಗಳು
ಕಾಡಿಸತಾವ

ಕಾಡಿದ ಕವನ
ಬನದ ಹಚ್ಚ ಹಸಿರಂತೆ
ಅದಕೆ ಅದರದೆ
ಸೊಗಸು ಕನಸು

ಕಾಡಿಸಿದ ಕವನ
ನಾಡಿನ ಜನರು ಚೆಂದಾಗಲು
ಮನೆ ಮುಂದಿಟ್ಟ ಪ್ರದರ್ಶನದ
ಹೂ ಗಿಡಗಳಂತೆ

ಕಾಡಿನ ಸೊಬಗು
ನಾಡಿಗೆ ಬಂದೀತೆ..?
ಇಲ್ಲಿ ತಳಕು ಬಳುಕಿನ
ವಯ್ಯಾರದ ಸಂತೆ

ಬಿರುದು ಬಹುಮಾನದ
ಚಿಂತೆ ನಾಡಿಗೆ,
ಸೃಷ್ಟಿಯ ಹೂವಾಗುವ
ಜೀವಕೆ ಹಣ್ಣಾಗುವಾಸೆ ಕಾಡಿಗೆ

ನನ್ನ ಕವನವೇ
ನಾಡಾಗಿ ಬರಬೇಡ
ಕಾಡಾಗಿ ಬಂದು
ಕಾಡಿಬಿಡು ಹಾಡಿ ಬಿಡು

               🔆🔆🔆

✍🏻 ಪರಸಪ್ಪ ತಳವಾರ ಕನ್ನಡ ಉಪನ್ಯಾಸಕರು ಸಪ್ರದ ಕಾಲೇಜು,ಲೋಕಾಪೂರ