ಕಾಲ ಬದಲಾದಂತೆ ಮನುಷ್ಯನ ರೀತಿ ನೀತಿಗಳು ಬದಲಾಗುತ್ತಿರುವುದು ಸರ್ವೇಸಾಮಾನ್ಯ ಸಂಗತಿಯಾಗಿದೆ. ಅದ‌ರೊಟ್ಟಿಗೆ ಒಳನೋಟಗಳು ವೈಜ್ಞಾನಿಕ ತಳಹದಿಯ ಮೇಲಿ‌ದೆ ಎಂಬುದನ್ನು ಮರೆಯುವಂತಿಲ್ಲ. ಮೂಢನಂಬಿಕೆಗಳು ಮನಸ್ಸನ್ನು ಕೇಂದ್ರಿತಗೊಳಿಸುವಲ್ಲಿ‌ ದಾಪುಗಾಲು ಹಾಕುತ್ತಿರುವ ಆತಂಕಕಾರಿ ಬೆಳವಣಿಗೆಯನ್ನು ಅಲ್ಲಗಳೆಯುವಂ‌ತಿಲ್ಲ. ಅದರ ಪರಿಣಾಮ ಯಾರೆಲ್ಲರ ಮೇಲಾಗ ಬಹುದೆಂಬ ಕಲ್ಪನೆಯು ಸಹ ನಿಲುಕದಿರುವ ನಕ್ಷತ್ರದಂತೆ.ಪ್ರಕೃತಿ ನೀಡಿದ ಎಲ್ಲ ಅವಕಾಶ ಗಳನ್ನು ಕಡೆಗಣಿಸಿ ಬೆಳೆದಂತೆಲ್ಲಾ ಕೇಡುಗಾಲವನ್ನು ನಮಗರಿವಿಲ್ಲದಂತೆಯೇ ಅಪ್ಪಿಕೊಂಡಂತೆ.

ಮನೆಯಂಗಳದಲಿ ಅರಳುವ ಹೂವಿನ ಗಿಡವನ್ನು ಕಾಲ ಕಾಲಕ್ಕೆ ನೀರು,ಗೊಬ್ಬರ ನೀಡಿ ಬಹು ಪ್ರೀತಿಯಿಂದ ಬೆಳೆಸುತ್ತೇವೆ. ಅದು ಬಿಡುವ ಹೂವಿಗಾಗಿಕೂತುಹಲದಿಂದ ಕಾಯುತ್ತೆವೆ. ನಮ್ಮ ಕರುಳಬಳ್ಳಿಯ ಕುಡಿಯಾದ ಹಸು ಗೂಸು ಮನೆತುಂಬ ಓಡಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ಮಗುವನ್ನು ಬಿದ್ದರೆಲ್ಲಿ ಪೆಟ್ಟಾಗುತ್ತೋ ಎಂಬ ಆತಂಕದಲ್ಲಿ‌ ಕಾಪಾಡುತ್ತೇವೆ. ಪುಟ್ಟ ಮಗುವನ್ನು ಮನಸೋಯಿಚ್ಚೆ ತಿದ್ದಿ ತೀಡಲು ತವಕಿಸು ತ್ತೇವೆ. ಮನೆ ಹಾಗೂ ಮನಸ್ಸು ಗರಡಿಮನೆ ಯಾಗಿ ಮಾರ್ಪಾಡಾಗುತ್ತಿರುವುದನ್ನು ನಾವೆಂದು ಅಲ್ಲಗಳೆಯುವಂತಿಲ್ಲ. ಮಗುವೆಂದರೆ ಮಗುವೇ ಅದು ಹೆಣ್ಣಿರಲಿ, ಗಂಡಿರಲಿ ಸಧೃಡವಾಗಿರಲೆಂಬ ಆಶಯ ಪ್ರತಿಯೊಬ್ಬರ ಬದುಕಿಗೊಂದು ಕೊಂಡಿ ಇದ್ದಂತೆ.

ಸ್ವಾಮಿ ವಿವೇಕಾನಂದರು ಬಾಲ್ಯದಲ್ಲಿಯೇ ಆಧ್ಯಾತ್ಮಿಕ ಚಿಂತನೆಗಳು ಅವರ‌ ಸ್ಮೃತಿ ಪಟಲದಲ್ಲಿ ಅಚ್ಚೊತ್ತಿದ್ದು ಮುಂದೊಂದು ದಿನ ವಿಶ್ವಕ್ಕೆ ಮಾದರಿಯಾಗಬಲ್ಲದೆಂದು ಅವರಮ್ಮನು ಉಹಿಸಿರಲಿಲ್ಲ.ಆದರೆ ಬಾಲಕ ನರೇಂದ್ರನ ಗ್ರಹಿಕೆಯ ಸಾಮಥ್ರ್ಯ, ಅವಲೋಕಿಸುವ ದೃಷ್ಟಿಕೋನ, ಮನೆಯ ಸಂಸ್ಕಾ‌ರಗಳು ಅವನ ಮೇಲೆ ಅಗಾಧ ಪರಿಣಾ‌ಮ ಬೀರಿದ್ದಲ್ಲದೇ, ದೈವಗುರು ಶ್ರೀರಾಮಕೃಷ್ಣ ಪರಮಹಂಸ‌ರ ಅಚ್ಚು – ಮೆಚ್ಚಿನ ಶಿಷ್ಯರಾಗಿ ಹೊರಹೊಮ್ಮಿರುವುದು ಮರೆಯಲಾದಿತೆ? ವಜ್ರದ ವ್ಯಾಪಾರಿಗೆ ಮಾತ್ರ ವಜ್ರದ ಬೆಲೆ ಗೊತ್ತಾಗುವುದು.. ನಮ್ಮ ನಾಡು ಸಂಸ್ಕೃತಿಗಳ ಕುರಿ‌ತು ಜಗತ್ತಿಗೆ ಸಾರಿದ ಧೀಮಂತ ನಾಯಕ ಸಾತ್ವಿಕ ಮಹಾಪುರುಷ. ನಮಗೆಲ್ಲ ದಾರಿದೀಪವಿದ್ದಂತೆ.

ಇಂತಹ ನೆಲದಲ್ಲಿ ಹುಟ್ಟಿರುವ ಪ್ರತಿಯೊಬ್ಬರು ಪುಟ್ಟ ವಿವೇಕಾನಂದರೇ .. ಆದರೆ ಅವರೆಲ್ಲ ಎತ್ತ ಸಾಗುತಿಹರು? ಅವರ ಗತಿ ವಿಧಿಗಳು ಎಲ್ಲಿ ಸ್ಥಿರವಾಗಿ ನಿಂತಿವೆ ? ಎಂಬ ಕೂಗು ಕೇಳಿದಾಗಿಂದ ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಮಕ್ಕಳ ಭವಿಷ್ಯ ನೆನೆದು ಕಣ್ಣೀರು ಹಾಕುವ ಕ್ಷಣಗಳು ಬರದಿರಲೆಂದು ಹಗಲಿರುಳು ಭಗವಂತನಲ್ಲಿ ಬೇಡಿದ್ದಿದೆ. “ಮನೆಯೇ ಮಂತ್ರಾಲಯ ಮನಸೇ ದೇವಾಲಯ”ವೆಂಬ ಹಾಡು ಪ್ರಚಲಿತವಿದ್ದಂತೆ.ಪ್ರತಿ ಮನೆಯಲ್ಲೂ ಬೇಯುವ ಅಕ್ಕಿ ಅನ್ನವಾಗದೇ ಬೇರೆನಾದರೂ ಆದರೆ ಗತಿಯೇನು? ಪ್ರತಿಮನೆಯ ನೀರು ಅನ್ನವಾಗಲು ಹದವಾಗಿ ಬೆರೆಯ ಬೇಕಷ್ಟೇ ಎಂಬುದು ಸಾಮಾನ್ಯ ವಾಡಿಕೆ.

ಅಪ್ಪ ಅಮ್ಮರ ಕೈ ಹಿಡಿದು ಜ್ಞಾನ ದೇಗುಲಕೆ ಆಗ ತಾನೇ ಬಂದ ಮಗು ಪಾಠಶಾಲೆ ಯನ್ನೊಮ್ಮೆ ಕಣ್ಣಾಡಿಸಿ ಒಮ್ಮೆ ಹೆದರಿ ಅಮ್ಮನ ಸೆರಗಲಿ ಅಡಗುತ್ತೆ.ಅಪ್ಪನ ಕಂಗಳ ಎದುರಿಸಲಾರದೇ ಅಮ್ಮನ ಬಿಗಿದಪ್ಪಿ ಅಳಲಾರಂಭಿಸುತ್ತದೆ,ಒಂಟಿಯಾಗುವೆನೆಂಬ ಭಯದಲ್ಲಿ. ಒಮ್ಮೆ ರಮಿಸಿ, ಸಂಭಾಳಿಸಿ ಧೈರ್ಯದ ಅಪ್ಪುಗೆ, ಮುತ್ತಕೊಟ್ಟು, ಇಲ್ಲೇ ಇರುವೆನೆಂಬ ಭರವಸೆ ತುಂಬಿ ಶಾಲೆಯ ಪಡಸಾಲಿಯಲಿ ಕುಳಿತ ಕ್ಷಣಗಳು ಯಾರಿಗಾಗಿ? ಕೂಸು ಕಲಿಕಾರ್ಥಿಯಾಗಿ ಪರಿವರ್ತನೆಯಾಗಿ ಕ್ರಮೇಣ ಸ್ವತಂತ್ರವಾಗಿ ಕಲಿಯಲು‌ ಆರಂಭಿಸುತ್ತದೆ. ಆಗೊಂದು ಬಾಂಧವ್ಯಕ್ಕೆ ಮೆರಗು ಬಂದಂತಾಗಿ ಸುತ್ತಲೂ ಸುಗಂಧ ಹರಡಿದಂತೆ.

ಐದು ಬೆರಳುಗಳು ಸಮನಾಗಿಲ್ಲವೆಂದ ಮೇಲೆ,ಅವುಗಳ ಅವಶ್ಯಕತೆಯಿಲ್ಲವೆಂದು ಕತ್ತರಿಸಲಾದಿತೆ?ತುತ್ತು ಮಾಡಿ ಉಣ್ಣುವಾಗ ಅವು ಒಂದಾಗದಿರುತ್ತವೆಯೇ… ಹಾಗೆ ಮಗುವಿನ ಮುಗ್ದ ಮನಸ್ಸು ಹರವಿಟ್ಟ ಜ್ಞಾನ ಪಡೆಯಲು ಮುಂದಾಗುವ ಸನ್ನಿವೇಶಕ್ಕೆ ಅಡಿಯಿಡುತ್ತಿದ್ದಂತೆಯೇ ಅದನ್ನು ಸರಿಯಾದ ಕ್ರಮದಲ್ಲಿ ಮುನ್ನಡೆಸುವುದು ನಮ್ಮ ಕೈಯಲ್ಲಿದೆ. ಭಾವ ಚಂಚಲತೆ ಉಂಟಾದಂತೆಲ್ಲ ರೈಲು ಹಳಿಬಿಟ್ಟು ರಸ್ತೆಗೆ ಬಂದಂತಾಗುತ್ತದೆ.ಮಗುವೆಂಬ ಬಟ್ಟಲಿಗೆ ನೈಜ ಅಳತೆಯ ಮೌಲ್ಯಗಳನ್ನು ತುಂಬಿಸುವ ಜವಾಬ್ದಾರಿ ಪ್ರತಿಯೊಬ್ಬರದು.ಹಸಿಮಣ್ಣಿ ನಲ್ಲಿ ಹುಸಿ ಬೀಜ ಬಿತ್ತದೆ, ಗಟ್ಟಿಕಾಳು ಸದೃಢವಾಗಲು ಮೊಳಕೆಯೊಡೆಯಲು ವಾತಾವರಣ ಸೃಷ್ಟಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

ಮರಳಿ ಬಾರದ ಬಾಲ್ಯಕ್ಕೆ ಅಗಾಧ ಶಕ್ತಿಯಿದೆ.ಅದನ್ನು ಸರಿಯಾದ ಕ್ರಮದಲ್ಲಿ ಪೋಷಿಸುವುದು ನಮ್ಮ ಕೈಯಲ್ಲಿದೆ. ಮಗುವಿನ ಮನಸ್ಸು ಹೂವಂತೆ ಸದಾ – ಅರಳಿ ಬೆಳೆಯುವಂತೆ ಸೃಜಿಸುವುದು ಕಲಾಕಾರನ ಕೈಯಲ್ಲಿ‌ ಮಾತ್ರ. ಪಾಲಕರ ಮಹತ್ವಾಕಾಂಕ್ಷೆಯ ಭಾವಗಳು ಮಗುವಿನ ಆಂತರಂಗಿಕ ಚೈತನ್ಯಕ್ಕೆ ಕಾರಂಜಿಯಾದರೆ ಮಾತ್ರ ಮಗುನಿರಾತಂಕವಾಗಿ ಅನ್ವಯಿಸಲು ಸಹಕಾರಿಯಾಗುತ್ತದೆ.ಆಲದ ಮರವೊಂದು ತನ್ನ ವಿಶಾಲಬಾಹುಗಳ ಬಂಧದಿಂದ ಮಣ್ಣಿನ ಸವಕಳಿಯ ತಪ್ಪಿಸಿದಂತೆ, ಮುಂದಾಗುವ ಎಲ್ಲ ಅನಾಹುತಗಳಿಗೆ ಪರೋಕ್ಷವಾಗಿ ತಡೆಯೊಡ್ಡಿದಂತೆಯೇ… ಈ ಬಾಂಧವ್ಯ…

               🔆🔆🔆

✍️ ಶ್ರೀಮತಿ.ಶಿವಲೀಲಾ ಹುಣಸಗಿ ಯಲ್ಲಾಪೂರ