ನಾವೆಲ್ಲ ನಿಸರ್ಗದ ಒಂದು ಭಾಗ ಎಂದಾದ ಮೇಲೆ ನಿಸರ್ಗಿಕ ವಿಪತ್ತುಗಳ ನಿರ್ವಹಣೆ ಎಂದರೆ ಒಂದು ರೀತಿಯಲ್ಲಿ ನಮ್ಮದೇ ಸಂರಕ್ಷಣೆ. ಇಂದು ನಿಸರ್ಗಕ್ಕೆ ಹೆಚ್ಚು ವಿಪತ್ತು ಒದಗಿ ಬಂದಿರುವುದು ನಮ್ಮಿಂದಲೇ. ವಿಪತ್ತು ಬಂದೊದಗಿದಾಗ ನಿರ್ವಹಣೆ ಮಾಡುವ ಬದಲು ಕೆಲವು ವಿಪತ್ತುಗಳು ಬಾರದಂತೆ ನಿರ್ವಹಿಸಬಹುದು. ಜ್ವಾಲಾ-ಮುಖಿ, ಭೂಕಂಪ,ಪ್ರವಾಹ, ಚಂಡ ಮಾರುತ ಗಳಂತಹ ವಿಪತ್ತುಗಳನ್ನು ನಾವು ನಿರ್ವಹಣೆ ಮಾಡುವುದು ಕಷ್ಟದ ಕೆಲಸ. ಆದರೆ ವಾಯು ಮಾಲಿನ್ಯ, ಜಲ ಮಾಲಿನ್ಯ, ಭೂ ಮಾಲಿನ್ಯಗಳಿಂದಾಗುವ ವಿಪತ್ತು ಗಳನ್ನು ತಡೆಗಟ್ಟುವುದರ ಮೂಲಕ ನಾವು ನಿಸರ್ಗವನ್ನು ಸಂರಕ್ಷಿಸಬಹುದು. ವಾಯು ಮಾಲಿನ್ಯ ತಡೆಗಟ್ಟಲು ನಾಗರೀಕ ರಾದ ನಾವು ಹೆಚ್ಚಾಗಿ ಇಂಧನ ರಹಿತ ವಾಹನಗಳನ್ನು ಬಳಸಬೇಕು. ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದರಿಂದ ಎಲ್ಲಾ ರೀತಿಯ ಮಾಲಿನ್ಯಗಳಿಂದಲೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

ಜಲಮಾಲಿನ್ಯಕ್ಕೆ ಮುಖ್ಯವಾಗಿ ನಾವು ಬಿಡುತ್ತಿರುವ ಚರಂಡಿ ನೀರು ಮತ್ತು ಕಾರ್ಖನೆಗಳಿಂದ ಹೊರ ಬಂದ ನೀರು ನದಿ ಸೇರುವುದು ಮತ್ತು ನದಿ ದಡದಲ್ಲಿರುವ ತೀರ್ಥ ಕ್ಷೇತ್ರದಲ್ಲಿ ಜನರು ಮಾಡುವ ಮಾಲಿನ್ಯವನ್ನು ನಿಯಂತ್ರಿಸುವುದರ ಮೂಲಕ ನಾವು ಜಲ ಮಾಲಿನ್ಯವನ್ನು ತಡೆಗಟ್ಟಬಹುದು. ಮನೆಗೊಂದು ಮಗು ಮನೆಗೊಂದು ಮರ ಎನ್ನುವ ತತ್ವದಡಿ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವಿತಾವದಿಯಲ್ಲಿ ಒಂದಾದರೂ ಗಿಡ ನೆಡಬೇಕು.

ಈತ್ತಿಚೆಗಂತೂ ನಾವು ಬಳಸುವ ಎಸಿ, ರೆಫ್ರೀಜರೇಟರಗಳಿಂದ ಕ್ಲೋರೋ ಫ್ಲೋರೋ ಕಾರ್ಬನ್ ಮತ್ತು ಅರಣ್ಯ ನಾಶ ಜನಸಂಖ್ಯಾ ಏರಕೆ ವಾಹನಗಳ ದಟ್ಟ ಹೊಗೆಯಿಂದ ವಾತವರಣದಲ್ಲಿ ಹೆಚ್ಚಾಗುತ್ತಿರುವ ಇಂಗಾಲದ ಡೈಯಾಕ್ಸೈಡ್ ಪ್ರಮಾಣದಿಂದ ಮತ್ತು ಅದರಿಂದಾಗುವ ಉಷ್ಣತೆಯ ಹೆಚ್ಚಳದಿಂದಾಗಿ ಓಜೋನ್ ಪದರು ನಾಶವಾಗುತ್ತಿದೆ. ನಮ್ಮ ಒಡಲು ನಮ್ಮ ಮನೆ ತಣ್ಣಗಿರಲಿ ಎಂದು ನಾವಿಂದು ಅತೀ ಹೆಚ್ಚಾಗಿ ಬಳಸುತ್ತಿರುವ ಎಸಿ, ರೆಫ್ರಿಜಿರೇಟರ್ ಗಳು ಇಡೀ ಭೂಮಂಡಲದ ವಾತಾವರಣದ ಮೇಲೆ ಪರಿಣಾಮ ಬೀರುತ್ತಿದ್ದು, ಕಡೆಗೊಂದು ದಿನ ಓಜೋನ್ ಪದರವೂ ನಾಶವಾಗಿ ಧರೆ ಹೊತ್ತಿ ಉರಿದಾಗ ನಮ್ಮ ಮನೆಯಲ್ಲಿನ ಎಸಿ ರೆಫ್ರಿಜರೇಟರ್ ಗಳು ನಮ್ಮನ್ನೇನು ಕಾಪಾಡುತ್ತವೆ? ಕಿಂಚಿತ್ ವಿವೇಚನೆ ಇಲ್ಲದ ನಮ್ಮ ಬದುಕು ನಮ್ಮನ್ನು ಅದೋಗತಿಗೆ ತರದೆ ಬಿಟ್ಟೀತೆ? ಸಿ.ಎಫ್.ಸಿ ಯುಕ್ತ ಸುಗಂಧ ದ್ರವ್ಯಗಳನ್ನು ಮೈತುಂಬಾ ಹೊಡೆದುಕೊಳ್ಳುವ ನಮಗೆ ಕೆಟ್ಟಮೇಲೆ ಬುದ್ದಿ ಬಂದಿತೆನ್ನುವುದಕ್ಕಿಂತ ಮೊದಲೇ ಬರುವುದು ಓಳ್ಳೆಯದು. ನಮ್ಮ ವೇಗದ ಬದುಕೆ ಹೆಚ್ಚಿನ ಅನಾಹುತಕ್ಕೆ ಕಾರಣ ಎಂದಾದ ಮೇಲೂ ನಾವು ನಮ್ಮ ವೇಗವನ್ನು ಕೊಂಚ ನಿಯಂತ್ರಿಸಿ ನಿಸರ್ಗ ಸಂರಕ್ಷಣೆಯ ಕಡೆ ಗಮನಿಸದೇ ಇದ್ದಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ. ನಮ್ಮದಿನನಿತ್ಯದ ಬಳಕೆಯ ವಸ್ತುಗಳೂ ನಿಸರ್ಗಕ್ಕೆ ಹಾನಿ ಮಾಡುವಂತವೆ ಇರುತ್ತವೆ ಅಂತಹವನ್ನು ಗುರುತಿಸಿ ಅವುಗಳ ಬಳಕೆಯನ್ನು ಕಡಿಮೆ ಮಾಡಬೇಕು. ಮಣ್ಣಿನ ಸವಕಳಿ ತಡೆಗಟ್ಟಲು ಸಸ್ಯವರ್ಗದ ಪ್ರಮಾಣವನ್ನು ಹೆಚ್ಚಿಸಬೇಕು. ವಿಧ್ಯಾರ್ಥಿಗಳ ಕಲಿಕೆಯನ್ನು ತರಗತಿಗೆ ಮಾತ್ರ ಸೀಮಿತ ಮಾಡದೆ ಅವರನ್ನು ಚಟುವಟಿಕೆಗಳಲ್ಲಿ ತೊಡಗಿಸಬೇಕು ಪರಿಸರ ಸಂರಕ್ಷಣೆಯ ಮಹತ್ವ ಅವರಿಗೆ ತಿಳಿಸಲು ನಿಸರ್ಗದ ಮಡಿಲಲ್ಲೆ ಅವರಿಗೆ ಶಿಕ್ಷಣ ಸಿಗಬೇಕು. ಅವರಿಗೆ ಮರ ಗಿಡಗಳನ್ನು ಬೆಳಸುವುದು ಪರಿಸರವನ್ನು ಸಂರಕ್ಷಿಸುವ ಕೌಶಲ್ಯಗಳನ್ನು ಹೆಚ್ಚು ಹೆಚ್ಚು ಹೇಳಿಕೊಡ ಬೇಕು. ಮುಂದಿನ ಪೀಳಿಗೆಯನ್ನು ನಾವು ಸಂರಕ್ಷಿಸಲು ಇರುವ ಹೆದ್ದಾರಿ ಎಂದರೆ ಇದೆ. ಮೊದಲು ಆಹಾರ ಪದ್ದತಿ, ಪರಿಸರ ಸಂರಕ್ಷಣೆ, ಉತ್ತಮ ವ್ಯಕ್ತಿತ್ವ ಹೇಳಿಕೊಡದ ಶಿಕ್ಷಣ ವ್ಯರ್ಥ. ವೈಜ್ಞಾನಿಕ ಕ್ಷೇತ್ರದಲ್ಲಿ ಸಂಶೋಧನೆ ಅನಿವಾರ್ಯ ಆದರೆ ಕಾಲ ಬುಡದಲ್ಲಿ ಚರಂಡಿ ಇಟ್ಟು ಕೊಂಡು ಕಾಣದ ಲೋಕದ ಅಧ್ಯಾಯನಕ್ಕೆ ಮಿಲಿಯನ್ನ ಗಟ್ಟಲೆ ಹಣ ವ್ಯಯ ಮಾಡುತ್ತಿರುವುದು ಕಂಡು ಕೆಲವೊಂದು ಸಾರಿ ವಿಚಿತ್ರವೆನ್ನಿಸದೆ ಇರದು. ಪರಿಸರವೇ ನಾಶವಾಗಿ ನಾವೇ ಸತ್ತಮೇಲೆ ಇವರ ಸಂಶೋಧನೆ ಓದುವವರು ತಿಳಿದುಕೊಳ್ಳುವವರು ಯಾರು? ಸರಕಾರವು ಪರಿಸರ ಸಂರಕ್ಷಣೆಗೆ ಹೆಚ್ಚು ವ್ಯಯ ಮಾಡುವಂತೆ ನಾಗರೀಕರು ಒತ್ತಾಯಿಸಬೇಕಾಗಿದೆ.

ಖನಿಜ ಸಂಪತ್ತಿಗಾಗಿ ಗಣಿಗಾರಿಕೆಯಿಂದಲೂ ಮುಂದೊಂದು ದಿನ ಅಪಾಯ ತಪ್ಪಿದ್ದಲ್ಲ. ಗಣಿಗಾರಿಕೆ ಮುಗಿದ ಮೇಲೆ ಆ ಭೂಮಿಯನ್ನು ಹಾಗೆ ಬಿಡದೆ ಅಲ್ಲಿ ಸತತ ಪ್ರಯತ್ನದಿಂದ ಮರು ಬಳಕೆ ಮಾಡಬೇಕು ಮರ ಗಿಡಗಳನ್ನು ನೆಟ್ಟು ಅಥವಾ ಜಲ ಸಂಪನ್ಮೂಲದಿಂದ ಮತ್ತೆ ಯಥಾಸ್ಥಿತಿಗೆ ತರಬೇಕು. ಪರಿಸರದಿಂದ ಆಗುವ ವಿಪತ್ತಿನ. ಕಲ್ಪನೆ ಇರುವ ಪ್ರತಿಯೊಬ್ಬ ನಾಗರೀಕನೂ ಹೆಜ್ಜೆಹೆಜ್ಜೆಗೆ ಅವನು ಮತ್ತು ಪರಿಸರದೊಂದಿಗಿನ ನಂಟನ್ನು ಗಮನದಲ್ಲಿಟ್ಟುಕೊಂಡು ಪರಿಸರಕ್ಕೆ ತನ್ನಿಂದಾಗುವ ಅಪಾಯಗಳನ್ನು ಆಗದಂತೆ ನೋಡಿಕೊಳ್ಳಬೇಕು. ಇಂದಿನ ಯುವ. ಜನತೆಯ ಬದುಕಿನಲ್ಲಿ ಸಿನಿಮಾ ನಟರು ಮಾದರಿ ನಾಯಕರಾಗಿ ಕಾಣುವುದ ಕ್ಕಿಂತ ನಿಸರ್ಗ ಪ್ರೇಮಿಗಳಾದ ಸಾಲುಮರದ ತಿಮ್ಮಕ್ಕ, ಕೃಪಾಕರ್ ಸೇನಾನಿ, ಪೂರ್ಣಚಂದ್ರ ತೇಜಸ್ವಿಯಂತವರೂ ಮಾದರಿಯಾಗಲಿ.

‌ ‌‌‌‌ 🔆🔆🔆

✍️ ಶ್ರೀಮತಿ‌.ಗಿರಿಜಾ ಮಾಲಿಪಾಟೀಲ
ವಿಜಯಪೂರ