ಬಿಡೆನ್ನ ಗೋಪಿಕೆ ಹೋಗಬೇಕಿದೆ ನಾನು
ನಾದ ನುಡಿಸುತ ಕಾಯುತಿಹನು ಮಾಧವ
ಕೊಳಲ ಊದಿ ಕೂಗುತಿಹನು ಕೇಶವ.!

ನೋಡಲ್ಲಿ ಕೆಂಪಾಗುತಿದೆ ಪಡುವಣ ಬಾನು
ಕಾದು ಕಾದು ಕನಲುತಿಹನು ವಾಸುದೇವ
ತಡವಾದಷ್ಟೂ ತಳಮಳಿಸುವನು ಯಾದವ.!

ತುಸು ವಿಳಂಬ ಮಾಡಿ ಹೋದರು ನಾನು
ಮುನಿದು ವೂಗ ಊದಿಸುವನು ಅಚ್ಯುತ
ಮಾತುಬಿಟ್ಟು ಮೌನದಿ ಕಾಡುವನು ಅನಂತ.!

ಲೋಕವೀರ ಧೀರ ಚತುರನಾದರೂ ಅವನು
ಒಲವಿನಲ್ಲಿ ಅಕ್ಷರಶಃ ಮಗುವಂತೆ ಭೂಪಾಲ
ಮುಗ್ಧ ಸ್ನಿಗ್ಧ ಮುದ್ದು ಬಾಲನಂತೆ ಗೋಪಾಲ.!

ಅನನ್ಯ ಗಾರುಡಿಗಳ ಮೋಡಿಗಾರ ಅವನು
ಶಸ್ತ್ರವಿಲ್ಲದೆ ಧರ್ಮರಥ ನಡೆಸಿದ ಪಾರ್ಥಸಾರಥಿ
ಒಲವಿಗೇ ನವಭಾಷ್ಯ ಬರೆದ ಪ್ರೇಮಮೂರುತಿ.!

ಬಿಡು ಗೋಪಿಕೆ ನಾ ಸೇರಲೇಬೇಕಿದೆ ಈಗವನ..
ಒಲಿದಾಗ ತಡಮಾಡದೆ ಕೂಡಬೇಕು ಗೋಪನ
ಕ್ಷಣಕ್ಷಣ ಅನುಭಾವಿಸಬೇಕು ಅನುರಾಗದೀಪನ.!

     🔆🔆🔆

✍️ ಎ.ಎನ್.ರಮೇಶ್. ಗುಬ್ಬಿ.