ಕಿಟಕಿಯ ಗಾಜಿನ ಮೇಲೆ
ಕುಳಿತ ಹಲ್ಲಿ
ಒಳಗಿದೆಯೊ ಹೊರಗಿದೆಯೊ
ಸ್ಪಷ್ಟವಾಗುತ್ತಿಲ್ಲ
ಅದು ಹೇಳುವ ಶಕುನ
ಯಾವುದಿರಬಹುದು
ಲೊಚಗೊಟ್ಟುವಿಕೆಯ ಅರ್ಥ

ಸುಲಭದಲ್ಲಿ ನಿಲುಕದು
ಸಮಯ ಸರಿಯುತ್ತಿದ್ದರೂ
ಸತ್ತಂತೆ ಸ್ತಬ್ಧವಾಗುವ
ಅದರ ತಪದ ಮರ್ಮ
ಯಾವ ಬೇಟೆಗಿರಬಹುದು
ಕುತೂಹಲದ ದೃಷ್ಟಿ
ಅಲ್ಲಿ ಊರಿಯೇ ಇದೆ

ಪೂರ್ಣಗಮನ
ಹೊತ್ತ ಇನ್ನೊಂದು
ಅದರತ್ತ ಹರಿದು ಬಂದು
ಹತ್ತಿರವಾಯಿತು ಜೋಡಿ
ಬೇಟೆಯಿಲ್ಲ ಹೂಟವಿಲ್ಲ
ಚೆಂದದ ಕೂಟ

ಹಲ್ಲಿಯ ಬೇಟೆಗಾರಿಕೆಗೆ ಕಾದು
ಕೂತ ಕುತೂಹಲದ ಕಂಗಳಿಗೆ
ಕಾಯುವುದು ಬೇಟೆಗೊಂದೇ ಅಲ್ಲ
ಪ್ರೀತಿಗೂ ಹೌದು
ಅರ್ಥವಾದ ಹೊತ್ತು
ನನ್ನವನ ಜೊತೆ
ಸಂಜೆ ಮಲ್ಲಿಗೆಯ ಕಂಪು
ಒಳಗೆ ಅಡಿಯಿಟ್ಟಿತ್ತು

      🔆🔆🔆

✍️ಶ್ರೀಮತಿ. ರೇಖಾ ಭಟ್
1-3-2021