ಹೀಗೆ ಈಗೀಗ ಕನ್ನಡ ಸಾಹಿತ್ಯದಲ್ಲಿ ಜಾಯಾಮಾನಕ್ಕೆ ತಕ್ಕಂತೆ ಹೊಸ ಹೊಸ ಸಾಹಿತ್ಯ ಪ್ರಕಾರಗಳು ಹುಟ್ಟಿಕೊಂಡಿವೆ. ಅಂತಹ. ಸಾಹಿತ್ಯ ಪ್ರಕಾರಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾದ ಸಂಗತಿಯಾಗಿದೆ. ಟಂಕಾ ಸಾಹಿತ್ಯ ಪ್ರಕಾರವನ್ನುಪರ್ಶಿಯನ್ ಮೂಲವೆಂದು ಪರಿಗಣಿಸಲಾಗಿದ್ದು, ಇದು ಇತ್ತೀಚೆಗೆ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಪ್ರಚಾರ ಪಡೆದ ಸಾಹಿತ್ಯ ಪ್ರಕಾರವಾಗಿದೆ. ಇದು ಸುಮಾರು ಏಳನೇ ಶತಮಾನದಷ್ಟು ಹಿಂದಿನದಾಗಿದ್ದು ಇದರ ಸಂಕ್ಷಿಪ್ತ ರೂಪವಾಗಿ ಹಾಯ್ಕು ಹುಟ್ಟಿಕೊಂಡಿತು. ಟಂಕಾದಲ್ಲಿ ಕಾವ್ಯದ ವೈಭವ ಕಲಾಮಯತೆ ಕಡಿಮೆ ಇದ್ದು ಇದು ಹೆಚ್ಚಾಗಿ ನೀರವತೆಗೆ ಒಗ್ಗುವಂತಹ ಸಾಹಿತ್ಯ. ನೀರವತೆಯ ಮೌನ ಇದರಲ್ಲಿದ್ದರೆ ಇದರ ಸೊಬಗು ಹೆಚ್ಚು. ಆದರೆ ಇತ್ತೀಚೆಗೆ ಇದನ್ನು ಹೆಚ್ಚಾಗಿ ಎಲ್ಲಾ ವಿಷಯಗಳ ಪ್ರಸ್ತಾವನೆಗೆ ಬಳಸುತ್ತಾರೆ. ಕಾವ್ಯದ ಸೊಬಗಿಗಿಂತ ಗದ್ಯದ ನೀರವತೆ ಹೆಚ್ಚಾಗಿದ್ದರೆ ಅದು ಟಂಕಾ. ಇದುಐದು ಸಾಲುಗಳನ್ನುಒಳಗೊಂಡಿದ್ದು 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು ಹೊಂದಿರುತ್ತವೆ. 2,4,5 ನೇ ಸಾಲುಗಳು ಏಳೇಳು ಅಕ್ಷರಗಳನ್ನು ಹೊಂದಿರಬೇಕು. ಒಟ್ಟು31 ಅಕ್ಷರಗಳನ್ನು ಹೊಂದಿರುವ ಸಾಹಿತ್ಯದ ಗುಚ್ಛ. ಈಗೀಗ ಇದು ತನ್ನ ಗಾಂಭೀರ್ಯತೆಯನ್ನು ಕಳಚಿಕೊಂಡು ಎಲ್ಲಾ ಭಾವಾವೇಶಗಳಿಗೆ ಹೊಂದಾಣಿಕೆ ಆಗುತ್ತದೆ. ಇಲ್ಲಿ ನನ್ನ ಕೆಲವು ಟಂಕಾಗಳನ್ನು ಉದಾಹರಣೆಯಾಗಿ ಬಳಸುತ್ತಿದ್ದೇನೆ.

ಟಂಕಾ-೧

ಒಲವಾಗಿದೆ,
ಅವನ ದನಿ ಕೇಳಿ
ಮನದಲ್ಲೆಲ್ಲಾ
ಮಳೆ ಬರುವ ಮುಂಚೆ
ಮಿಂಚು ಸಂಚಾರ

ಟಂಕಾ-೨

ಕದಿಯದಿರು
ಸಿಹಿಗನಸ ನಿದ್ರೆ
ಕೇಳು ಕೊಡುವೆ,
ನಾನಿರುವುದೇ ನಿನ್ನ
ವಿರಹ ತಣಿಸಲು

ಟಂಕಾ-೩

ಸೃಷ್ಟಿಯ ಕುಂಚ
ಬರಯುತಿದೆ ಚಿತ್ರ
ಅಳಿಸಿದರೂ
ಬೇಸರವಿಲ್ಲದೆಯೇ
ಮತ್ತೆ ಮತ್ತೆ ನಗುತಾ

ಟಂಕಾ -೪

ಅವನೊಲುಮೆ
ಕಡಲ ಅಲೆಯಂತೆ
ಮಾಯಾವಿ ತೊರೆ
ಮಾಯವಾಗುವುದು ನಾ
ಬಿಗಿದಪ್ಪೋ ಮೊದಲೆ

ಹೀಗೆ ಟಂಕಾ ಸಾಹಿತ್ಯ ಪ್ರಕಾರವು ತನ್ನದೇ ಆದ ವಿಶಿಷ್ಟತೆಯನ್ನು ಪಡೆದಿದ್ದು, ರಭಸದಿ ಮಳೆ ಸುರಿದು ಸ್ತಬ್ದವಾದಗಿನ ಭಾವವನ್ನು ಹೊರಸೂಸುತ್ತದೆ. ನೀರವತೆ ಇದರ ಪ್ರಮುಖ ಲಕ್ಷಣವೆಂದು ಪರಿಗಣಿಸಿದರೂ ಇತ್ತೀಚೆಗೆ ಇದು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಬೇಕಾದ ಭಾವವನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿದೆ.

                 🔆🔆🔆

✍️ ಶ್ರೀಮತಿ.ಗಿರಿಜಾ ಮಾಲಿಪಾಟೀಲ
ಜಿಲ್ಲಾಧ್ಯಕ್ಷರು,ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ವಿಜಯಪುರ.