ಏಳಿ.. ಏಳಿ.. ಎದ್ದೇಳಿ.. ಮೇಲೇಳಿ..
ಸ್ವಾಮೀಜಿ, ಪಾದ್ರಿ, ಮೌಲಿಗಳೇ..

ಹಿರಿದೊಂದು ಮಠ ಕಟ್ಟಿಸಿದ್ದೇವೆ..
ನಿಮಗೆ ಸ್ವಾಮಿ ಪಟ್ಟ ಕಟ್ಟಿದ್ದೇವೆ
ಸುಮ್ಮನೆ ಜಪ ತಪ ಮಾಡಲಿಕ್ಕಲ್ಲ
ಹೋಮಹವನ ಮಾಡುತ್ತ ಇರಲಿಕ್ಕಲ್ಲ.!

ಬೃಹತ್ತಾದ ಚರ್ಚು ಕಟ್ಟಿಸಿದ್ದೇವೆ..
ನಿಮ್ಮ ಪಾದ್ರಿ ಮಾಡಿ ಕೂಡಿಸಿದ್ದೇವೆ
ಬರೀ ಬೈಬಲ್ಲು ಓದಲಿಕ್ಕಾಗಿಯಲ್ಲ
ಪ್ರಾರ್ಥನೆ ಮಾಡಿಕೊಂಡು ಇರಲಿಕ್ಕಲ್ಲ.!

ದೊಡ್ಡದೊಂದು ಮಸೀದಿ ಕಟ್ಟಿಸಿದ್ದೇವೆ
ಮೌಲಿ ಮಾಡಿ ನಿಮ್ಮನ್ನಿಲ್ಲಿ ಇರಿಸಿದ್ದೇವೆ
ಕೇವಲ ಖುರಾನು ಹೇಳಿಕೊಡಲಿಕ್ಕಲ್ಲ
ನಿತ್ಯ ನಮಾಜು ಮಾಡಿಕೊಂಡಿರಲಿಕ್ಕಲ್ಲ.!

ನೀವು ವಾರಕ್ಕೊಮ್ಮೆ ಜನ ಕೂಡಿಸಬೇಕು
ತಿಂಗಳಿಗೊಂದು ಸಭೆ ಮಾಡಲೇಬೇಕು
ವರ್ಷಕ್ಕೊಂದು ಸಮಾವೇಶ ಮಾಡಬೇಕು
ನಮ್ಮವರ ಬಲ ಪ್ರದರ್ಶನ ಮಾಡಬೇಕು.!

ಚುನಾವಣೆಯಲ್ಲಿ ನಮ್ಮ ಬೆಂಬಲಿಸಬೇಕು
ಸಂಪುಟರಚನೆಯಲ್ಲಿ ಪಾತ್ರ ವಹಿಸಬೇಕು
ನಮ್ಮ ಮಂತ್ರಿಯಾಗಿಸಲುಒತ್ತಾಯಿಸಬೇಕು
ನಮ್ಮವರ ಪರ ಆಗಾಗ ಬೀದಿಗಿಳಿಯಬೇಕು.!

ಆಗಾಗ ನಮ್ಮ ಜಾತಿ ಕಹಳೆಯೂದಬೇಕು
ಮಲಗಿದ ನಮ್ಮವರ ಬಡಿದು ಎಬ್ಬಿಸಬೇಕು
ಸರಕಾರದ ಮೇಲೆ ಪ್ರಭಾವ ಬೀರಬೇಕು
ಜಾತಿಹೋರಾಟದ ಮುಂಚೂಣಿವಹಿಸ ಬೇಕು.!

ಕೇಳಿ.. ಸ್ವಾಮೀಜಿ, ಪಾದ್ರಿ, ಮೌಲಿಗಳೇ..
ನಮ್ಮದೇಶ ಭಾರತವಿದು ಜತ್ಯಾತೀತರಾಷ್ಟ್ರ
ಅಕ್ಷರಶಃ ಇಲ್ಲಿ ನಿಜ ಜಾತ್ಯಾತೀತರು ನಾವು
ನಮ್ಮ ಜಾತಿ ಪ್ರತೀತರಾಗಿ ಹೋರಡಿರಿ ನೀವು.!

ಏಳಿ ಎದ್ದೇಳಿ ಸ್ವಾಮೀಜಿ, ಪಾದ್ರಿ, ಮೌಲಿಗಳೇ..
ಮಠ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ
ಬೀದಿಗಿಳಿದು ನಮ್ಮ ಪರ ಹೋರಾಡಲು ಬನ್ನಿ.!
ನಮ್ಮ ಜಾತಿಬಾವುಟ ಹಿಡಿದು ಮುನ್ನಡೆಯಬನ್ನಿ.!

          🔆🔆🔆

✍️ ಎ.ಎನ್.ರಮೇಶ್. ಗುಬ್ಬಿ.