ಕನ್ನಡ ಸಾಹಿತ್ಯ ಶ್ರೀಮಂತವಾದುದು, ಹರಿವ ನದಿ ಹರಿಯುತ್ತಾ ತನ್ನ ತೆಕ್ಕೆಗೆ ಉಪನದಿಗಳನ್ನು ಬಾಚಿಕೊಳ್ಳುತ್ತಾ ವಿಶಾಲವಾಗಿ ಸಾಗಿ ಸಮುದ್ರವನ್ನು ಸೇರುವಂತೆ ಕನ್ನಡ ಸಾಹಿತ್ಯವೂ ಹಾಗೆ ಹಲವು ಪ್ರಕಾರಗಳನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಸಾಗುತ್ತದೆ. ಸಾಹಿತ್ಯದ ಗುರಿ ಒಂದೇ, ಮನರಂಜನೆ ಮತ್ತು ಆತ್ಮ ಸಾಕ್ಷಾತ್ಕಾರ. ಇತ್ತೀಚೆಗೆ ಕನ್ನಡದಲ್ಲಿ ‌ಹನಿಗವನ, ಮಿನಿಗವನ, ಹಾಯ್ಕು ಟಂಕಾಗಳಂತೆ ಚುಟುಕು ಸಾಹಿತ್ಯ ಪ್ರಕಾರವು ಹೆಚ್ಚು ಜನಪ್ರಿಯತೆ ಪಡೆದಿದೆ ಕಾರಣ ಅದರ ಸಂಕ್ಷಿಪ್ತತೆ.
ಚುಟುಕು ಎಂದರೆ ಸಂಕ್ಷಿಪ್ತವಾಗಿ ಬರೆದ ಬರಹ ಅಥವಾ ಕವಿತೆ. ಚಿಕ್ಕದರಲ್ಲಿ ಚೊಕ್ಕತೆಯನ್ನು ಅಳವಡಿಸಿಕೊಂಡು ಬೆರಗು ಮೂಡಿಸುವ ಈ ಸಾಹಿತ್ಯ ಪ್ರಕಾರ ಕನ್ನಡದಲ್ಲಿ ಈಗ ಹೆಚ್ಚು ಹೆಚ್ಚು ತನ್ನ ಚಾಪು ಮೂಡಿಸುತ್ತಿದೆ. ಹಳೆಯ ತಲೆಮಾರಿನ ಲೇಖಕರು ಅಷ್ಟೇ ಅಲ್ಲದೆ ಹೊಸ ತಲೆಮಾರಿನ ಕವಿಗಳು ಇದನ್ನು ಅಳವಡಿಸಿಕೊಂಡಿದ್ದಾರಾದ್ದರಿಂದ ಇದು ತನ್ನ ಅಸ್ತಿತ್ವವನ್ನು ಆರಾಮಾಗಿ ಉಳಿಸಿಕೊಂಡಿದೆ.

ಚುಟುಕು ಸಾಹಿತ್ಯ ಪ್ರಸಿದ್ದಿಗೆ ಬರಲು ಅದರ ಆಕೃತಿ ಮತ್ತು ನೇರವಂತಿಕೆಯೆ ಕಾರಣ. ಒಂದು ಕಾಲದಲ್ಲಿ ಪತ್ರಿಕೆಗಳಲ್ಲಿ ಉಳಿದ ಜಾಗವನ್ನು ತುಂಬಲು ಇದ್ದದ್ದು ಈಗ ಮೇರು ಸಂಧೇಶದಂತೆ ಎಲ್ಲಾ ಪತ್ರಿಕೆಗಳಲ್ಲಿ ಇದು ಮೆರೆಯುತ್ತಿರುವುದು ಇದರ ವಿಶಿಷ್ಟತೆಗೆ ಕಾರಣವಾಗಿದೆ.
ಚುಟುಕು ಸಾಹಿತ್ಯ ಇದೊಂದು ಆಧುನಿಕ ಕಾವ್ಯ ಪ್ರಕಾರ ಎಂದು ಹೇಳುವುದು ಕಷ್ಟದ ಸಂಗತಿ. ಜಾನಪದ ಸಾಹಿತ್ಯ ಪ್ರಕಾರವು ಇದಾಗಿರುವುದು ಇದರ ವಿಶಿಷ್ಟತೆಗೆ ಸಾಕ್ಷಿ. ಚುಟುಕು ಎಂದರೆ ಅನುಭವಸ್ಥರು ಮಾತನಾಡುವ ಗಾದೆ ನಾಣ್ಣುಡಿಗಳು ಇದೆ ಪ್ರಕಾರಕ್ಕೆ ಸೇರುತ್ತವೆ. ಇವು ಕೆಲಕಾಲ ಕೇಳುಗರನ್ನು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ವ್ಯವಸ್ಥೆಯನ್ನು ಸರಿ ದಾರಿಗೆ ತರುವುದು, ವ್ಯಂಗ್ಯವಾಗಿ ವಿಮರ್ಶಿಸುವ, ಹಾಸ್ಯದ ಹೊನಲಿನ ಮೂಲಕ ಮುಜುಗರದ ಸನ್ನಿವೇಶವನ್ನು ತಿಳಿಯಾಗಿ ಸುವುದು. ಆದರೂ ಚುಟುಕು ರಚನೆಗೆ ಜಾನಪದವೇ ಮೂಲ ಎನ್ನುವುದು ಹಲವರ ಅಭಿಮತ.

ಚುಟುಕು ಎಂದಾಕ್ಷಣ ನಮಗೆ ನೆನಪಿಗೆ ಬರೋದು ದಿನಕರ ದೇಸಾಯಿಯವರು. ಚುಟುಕು ಬ್ರಹ್ಮ ಎಂದು ಪ್ರಸಿದ್ಧರಾದ ಇವರು ಚುಟುಕು ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರು ಚುಟುಕು ಬರೆಯುವಾಗ ನಾಲ್ಕು ಸಾಲಿನಲ್ಲೇ ಬರೆದು ಅದಕ್ಕೊಂದು ಚೌಕಟ್ಟು ನೀಡಿದರು. ಪ್ರಾಸ ಮತ್ತು ವಿಷಯ ವಸ್ತುವಿನೆಡೆಗೆ ಹೆಚ್ಚು ಹೆಚ್ಚು ಗಮನ ಹರಿಸಿದರು. ಅವರು ಕೆಲವು ಪ್ರಸಿದ್ಧ ಚುಟುಕುಗಳು ಉದಾಹರಣೆಗೆ..

ಚುಟುಕುದೊಳಗಿದ್ದರೂ ಬರೀ ನಾಲ್ಕು ಸಾಲು
ಇದರ ರಚನೆಗೆ ಬೇಕು ಪೂರ್ಣ ಕಂಟ್ರೋಲು
ಕಂಟ್ರೋಲು ತಪ್ಪಿದರೆ ರಚನೆ ನೆಲಕುರುಳಿ
ಚುಟುಕಾಗುವುದುಂಟು ಕಾಗದ ಸುರುಳಿ

ಹೀಗೆ ದಿನಕರ ದೇಸಾಯಿಯವರ ಈ ಚುಟುಕು ನಮಗೆ ಚುಟುಕಿನ ಸ್ವರೂಪ ಏನೆಂದು ತಿಳಿಸುತ್ತದೆ. ದಿನಕರರು ತಾವು ಬರೆದ ಚುಟುಕುಗಳಿಗೆ ನಾಲ್ಕು ಸಾಲೆಂದು ಹೇಳಿದ್ದಾರೆ. ನಿಜ ಖಂಡಿತಾ ಪ್ರತಿಯೊಂದು ಸಾಹಿತ್ಯ ತನ್ನದೆ ಆದ ಚೌಕಟ್ಟು ಒಳಗೊಂಡಿದ್ದರೆ ಅದು ಪರಿಪೂರ್ಣತೆ ಸಾಧಿಸಲು ಸಾಧ್ಯ. ಆದರೆ ಕೆಲವೊಂದು ಸಾರಿ ಚುಟುಕು ತನ್ನ ನಿಯಮವನ್ನು ಮೀರಿ ಸ್ವತಂತ್ರವಾಗುತ್ತದೆ. ಇದರ ಅರ್ಥದ ಮಿಂಚು ಪ್ರಾಸಭದ್ದತೆ ಲಯ ನಮ್ಮನ್ನು ಆಕರ್ಷಿಸುತ್ತವೆ. ಚುಟುಕು ಛಂದಸ್ಸು ತ್ರಿಪದಿ, ಚೌಪದಿ, ಷಟ್ಪದಿಗೂ ಹೊಂದಿಕೊಳ್ಳುವ ಸಾಹಿತ್ಯ ಪ್ರಕಾರವಾಗಿದೆ. ಇದು ಪಾದಗಳ ಮೋಡಿಯಿಂದ ಬಿಂದುವಿನಲ್ಲಿ ಬ್ರಹ್ಮಾಂಡ ತೋರಿಸಿದರೆ ಸಾಕು. ದಿನಕರ ದೇಸಾಯಿ ಅವರ ಇನ್ನೊಂದುಚುಟುಕುಇಲ್ಲಿ ಗಮನಿಸಬಹುದು

ಅವರೆಂದರು ನನಗೆ ಚುಟುಕು ಸಾಮ್ರಾಟ
ನಾನೆಂದೆ; ಈ ರೀತಿ ಕೊಡಬೇಡಿ ಕಾಟ
ಸಾಮ್ರಾಟರೆಲ್ಲರೂ ಮುಕ್ಕಿದರು ಮಣ್ಣು
ಕೊನೆಗೆ ಉಳಿಯುವುದೊಂದೆ ಕಬ್ಬಿಗನೆ ಕಣ್ಣು

ಈ ಚುಟುಕು ದೇಸಾಯಿಯವರು ಹೇಳುವಂತೆ ಕೊನೆಗೆ ಉಳಿಯುವುದು ಕಬ್ಬಿಗನೆ ದೃಷ್ಟಿ. ಅದು ಸಾಹಿತ್ಯಕ್ಕೆ ಬಹಳ ಮುಖ್ಯವಾಗಿದೆ. ಒಟ್ಟಿನಲ್ಲಿ ಚುಟುಕು ತನ್ನದೇ ಆದ ನಿಶ್ಚಿತ ಚೌಕಟ್ಟು ಮೀರಿದ ವೈವಿಧ್ಯಮಯ ಸಾಹಿತ್ಯ ಪ್ರಕಾರವಾಗಿದೆ. ಇದು ವ್ಯಂಗ್ಯ, ವಿಡಂಬನೆ, ಹಾಸ್ಯವನ್ನು ಒಳಗೊಂಡಿದೆ. ಉತ್ತಮ ಸಂದೇಶವನ್ನು ಒಳಗೊಂಡಿದ್ದು ಇವು ಬಾಳಿಗೆ ದಿಕ್ಸೂಚಿ ಯಂತೆ ಗೋಚರಿಸುತ್ತವೆ. ಸಮಾಜಕ್ಕೂ ಉತ್ತಮ ಸಂದೇಶವನ್ನು ನೀಡುತ್ತವೆ. ನನ್ನ ಒಂದು ಚುಟುಕು ಉದಾಹರಣೆಗೆ..

ಮೊದಲ ರಾತ್ರಿ ಕೊಡುತ್ತಾಳೆ ಹಾಲು
ನಂತರ ಮಾಡುತ್ತಾಳೆ ಆಸ್ತಿ ಪಾಲು
ನಾದಿನಿಯರು ಒಳಗೆ ಹಾಕದಂತೆ ಕಾಲು
ಅತ್ತೆ ಮಾವನನ್ನು ಮಾಡುತ್ತಾಳೆ ಬೀದಿ ಪಾಲು

         🔆🔆🔆

✍️ಶ್ರೀಮತಿ. ಗಿರಿಜಾಮಾಲಿಪಾಟೀಲ ವಿಜಯಪೂರ