ಪ್ರತಿ ಮಾತಿಗೂ ಇಲ್ಲಿ ಸುಳ್ಳು ಮತ್ತು ಸುಳ್ಳಿನದೇ ಲೇಪನ
ಪ್ರತಿ ನಡತೆಗೂ ಇಲ್ಲಿ ಸುಳ್ಳು ಮತ್ತು ಸುಳ್ಳಿನದೇ ಲೇಪನ
ಸುಳ್ಳು ಸಕ್ಕರೆ ಆರಂಭದಲ್ಲಿ ಸತ್ಯವೂ ಸಕ್ಕರೆ ಅಂತ್ಯದಲ್ಲಿ
ಮನುಜ ನೀತಿಗೂ ಇಲ್ಲಿ ಸುಳ್ಳು ಮತ್ತು ಸುಳ್ಳಿನದೇ ಲೇಪನ
ಹುಟ್ಟು ನಿಜವೆಂದು ನಂಬುವರು ಸಾವೂ ನಿಜವೆನ್ನುವರು
ಮಧ್ಯದಲಿ ನಡೆವ ಹೆಜ್ಜೆಗೂ ಇಲ್ಲಿ ಸುಳ್ಳು ಮತ್ತು ಸುಳ್ಳಿನದೇ ಲೇಪನ
ಕಾಣದ ಬೆನ್ನಿಗೆ ಅಂಟಿವೆ ಸಾವಿರ ಸವಾಲುಗಳು ಮರೆಯುವುದುಂಟೆ
ಬಿಡದ ಹುಚ್ಚು ಕೆಂಡಕೂ ಬೂದಿಗೂ ಇಲ್ಲಿ ಸುಳ್ಳು ಮತ್ತು ಸುಳ್ಳಿನದೇ ಲೇಪನ
ಬರೆಯುವ ಕೈಗೆ ಬೇಸರವಾದರೂ ಮನಕಿಲ್ಲ ಯಾವುದೇ ಬೇಜಾರು
“ಜಾಲಿ” ನೋಡುವ ಕಣ್ಣಿಗೂ ಇಲ್ಲಿ ಸುಳ್ಳು ಮತ್ತು ಸುಳ್ಳಿನದೇ ಲೇಪನ
🔆🔆🔆
✍️ವೇಣು ಜಾಲಿಬೆಂಚಿ,ರಾಯಚೂರು.