ನಿನ್ನ ಸಿಟ್ಟಿನ ಸುನಾಮಿಯೆದುರಿಗೆ
ನಡುಗಿ ಕೊಚ್ಚಿ ಹೋಗುತ್ತೇನೆ.!
ನಿನ್ನ ಮುದ್ದಿನ ಮಾರುತದೆದುರು
ಅರಿವಿಲ್ಲದೆ ಕಳೆದು ಹೋಗುತ್ತೇನೆ.!
ನಿನ್ನ ಕಂಬನಿಯ ಅಲೆಯೆದುರು
ಅಕ್ಷರಶಃ ಆದ್ರನಾಗುತ್ತೇನೆ.!
ನಿನ್ನ ಕಂಗಳ ಕಾಂತಿಯೆದುರು
ಭೋರ್ಗರೆವ ಕಡಲಾಗುತ್ತೇನೆ.!
ನಿನ್ನ ತುಂಟನಗುವಿಗೆ ಮೇಘದೆದುರು
ಗರಿಬಿಚ್ಚಿದ ನವಿಲಾಗುತ್ತೇನೆ.!
ನಿನ್ನ ಹುಸಿಮುನಿಸ ಲಾಸ್ಯದೆದುರು
ಇಂಗುತಿಂದ ಮಂಗನಾಗುತ್ತೇನೆ.!
ನಿನ್ನ ಅಕ್ಕರಾಸ್ಥೆ ಸಮ್ಮೋಹನದೆದುರು
ಮಡಿಲ ಮಗುವಾಗುತ್ತೇನೆ.!
ನಿನ್ನ ಒಲವ ಗಾರುಡಿಯೆದುರು ಜಗಮರೆತು ನಲಿಯುತ್ತೇನೆ.!
🔆🔆🔆
✍️ ಶ್ರೀ ಎ.ಎನ್.ರಮೇಶ್ , ಗುಬ್ಬಿ.